ವಿವಿಧ-ಭಾವನೆಗಳನ್ನು-ತೋರುವ-ಮಾನವ-ಪಾತ್ರಗಳು-ಮತ್ತು-ಸಂಬಂಧಗಳ-ಸಹವಾಸ-ಸಾಕಾಯ್ತೆ?-ಎಂಬ ಪ್ರಶ್ನೆಯನ್ನು- ಒಳಗೊಂಡ-ಚಿತ್ರ.

ಸಂಬಂಧಗಳಲ್ಲಿ ಒಂದರ ಹಿಂದೊಂದು ಸಮಸ್ಯೆಗಳೇಕೆ ಎದುರಾಗುತ್ತವೆ? | ಈ 7 ಅಂಶಗಳು ಕಾರಣಗಳೇ?

English version is available:

ಈ ಲೇಖನದ ಇಂಗ್ಲೀಷ್ ಆವೃತ್ತಿ sharingshree.com ನಲ್ಲಿ ಲಭ್ಯವಿದೆ

ಇತ್ತೀಚಿನ ಹವಾಮಾನದಲ್ಲಿ ಹಾಗೂ ಸಂಬಂಧಗಳಲ್ಲಿ ಕಾಣುವ ಬದಲಾವಣೆಗಳಿಗೆ ಇರುವ ಹೋಲಿಕೆಯನ್ನು ಗಮನಿಸಿದ್ಧೀರಾ?

ಬಹುಷಃ ಅಂತಹಾ ಬದಲಾವಣೆಗಳು, ಶೀರ್ಷಿಕೆಯಲ್ಲಿನ “ಸಂಬಂಧಗಳಲ್ಲಿ ಒಂದರ ಹಿಂದೊಂದು ಸಮಸ್ಯೆಗಳೇಕೆ ಎದುರಾಗುತ್ತವೆ?” ಎಂಬ ಪ್ರಶ್ನೆಯನ್ನು ನಿಮ್ಮಲ್ಲೂ ಮೂಡಿಸಿರಬಹುದು!

ನಿಖಟ ಸಂಬಂಧಗಳಲ್ಲಿನ ಸಮಸ್ಯೆಗಳು ಖಿನ್ನತೆಗೂ ಕಾರಣವಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ.

ಅದೇನೇ ಇರಲಿ. ಮನುಷ್ಯರಾದ ನಾವೆಲ್ಲಾ ವಿವಿಧ ರೀತಿಯಲ್ಲಿ ಎದುರಿಸುವ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗುವ ಮುಖ್ಯ ಅಂಶಗಳ ಕುರಿತು ಈ ಲೇಖನದಲ್ಲಿ ಮಾತನಾಡೋಣ.

ಸಂಬಂಧಗಳಲ್ಲಿ ಸಮಸ್ಯೆಗಳು ಮತ್ತು ಸಂಭವನೀಯ ಪರಿಹಾರಗಳು:

ಸಂಬಂಧಗಳಲ್ಲಿ ಕೆಲವು ಸಮಸ್ಯೆಗಳು ತಕ್ಷಣದ ಸಹಜ ಕಾರಣಗಳಿಂದ ಎದುರಾದರೆ ಇನ್ನು ಕೆಲವು ‘ಪರಿಪೂರ್ಣ ಸಂಬಂಧ’ದ ನಿಮ್ಮ ಕನಸಿನಿಂದ ಹುಟ್ಟಿವೆ. ನಿಖರವಾದ ಪರಿಹಾರ ಹುಡುಕಬೇಕಾದರೆ ಈ ತರಹದ ವ್ಯತ್ಯಾಸಗಳನ್ನು ಗುರುತಿಸುವುದು ಮತ್ತು ಪ್ರತ್ಯೇಕಿಸುವುದು ಮುಖ್ಯವಾಗಿದೆ.

ತಪ್ಪು ತಿಳುವಳಿಕೆಯೇ ಸಂಬಂಧಗಳ ಸಮಸ್ಯೆಗಳಿಗೆ ಮುಖ್ಯ ಕಾರಣ ಎಂದು ಸುಲಭವಾಗಿ ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದು. ಆದರೆ ಅದು ಹೇಗೆ ಎಂದು ಗೊತ್ತಾಗಬೇಕಾದರೆ ಕೆಲವು ಮುಖ್ಯ ಅಂಶಗಳ ಕುರಿತು ಚಿಂತನ-ಮಂಥನ (ಸಮುದ್ರ ಮಥನ) ಎಲ್ಲಾ ಮಾಡಬೇಕಾಗಿದೆ.

ಈ ಲೇಖನದ ಹೆಚ್ಚಿನ ಲಾಭಕ್ಕಾಗಿ ಸುರರು ಹಾಗೂ ಅಸುರರು (ಗುಣಗಳು) ನಮ್ಮೊಳಗೇ ಇದ್ದಾರೆ ಎಂಬ ಅರಿವು ಸಹಾಯಕ.

ಹಾಗಿದ್ರೆ ಪ್ರಾರಂಭಿಸೋಣವೇ!

1. ನಂಬಿಕೆ:

ವಿವಿಧ-ಸಂಬಂಧಗಳಲ್ಲಿ-ಸಮಸ್ಯೆಗಳಿಗೆ-ಕಾರಣವಾಗುವ-ನಂಬಿಕೆಯನ್ನು-ಉಲ್ಲೇಖದೊಂದಿಗೆ-ಸೂಚಿಸುವ-ಚಿತ್ರ.

ನಂಬಿಕೆಯ ಕೊರತೆ ಅಥವಾ ನಂಬಿಕೆ ಇಲ್ಲದಿರುವುದು ನಿಕಟ ಸಂಬಂಧಗಳಲ್ಲಿ ನರಕವನ್ನು ಸೃಷ್ಟಿಸುವ ಪ್ರಮುಖ ಅಂಶವಾಗಿದೆ.

ನೀವು ಇನ್ನೊಬ್ಬ ವ್ಯಕ್ತಿಯನ್ನು ನಂಬುತ್ತೀರಿ ಎಂದರೆ, ಆ ವ್ಯಕ್ತಿಗೆ ಹಾಗೂ ನಿಮಗೆ ಸಂಬಂಧಿಸಿದ ಕೆಲವು ಮುಖ್ಯ ವಿಷಯಗಳ ಬಗ್ಗೆ ಚಿಂತಿಸುವ ಅಥವಾ ಅತಿಯಾಗಿ ಯೋಚಿಸುವ ಅಗತ್ಯವಿಲ್ಲ ಎಂದರ್ಥ.

ವಿವಾಹೇತರ ಸಂಬಂಧಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ನೀವು ಅದನ್ನು ಒಪ್ಪದವರಾಗಿದ್ದರೆ, ಅದರ ಕಾರಣ ಪರಿಣಾಮಗಳ ಕುರಿತು ಸ್ಪಷ್ಟ ಮಾತುಕತೆಯ ಮೂಲಕ ಪರಸ್ಪರ ತಿಳುವಳಿಕೆಯನ್ನು ಹೊಂದುವುದು ಮುಖ್ಯ.

ಉದ್ಯೋಗ, ವ್ಯಾಪಾರ-ವ್ಯವಹಾರ, ಸ್ನೇಹ ಸೇರಿದಂತೆ ಜೀವನದ ಎಲ್ಲಾ ಮುಖ್ಯ ವಿಷಯಗಳಲ್ಲಿ ನಂಬಿಕೆಯ ಉಪಸ್ಥಿತಿ ಎಷ್ಟು ಸಾಮಾನ್ಯವೋ, ಊಹೆ, ಅಸಡ್ಡೆ, ದುರುದ್ದೇಶದಿಂದ ನಂಬಿಕೆ ಎನ್ನುವ ಪದ ಬಳಸಿ ಮೋಸ ಮಾಡೋರು ಹಾಗೂ ಮೋಸ ಹೋಗೋರು ಇರೋದು ಅಷ್ಟೇ ಸಾಮಾನ್ಯ.

  • ನಂಬಿಕೆಯನ್ನು, ಕಾರ್ಯ ಅಥವಾ ಕೆಲಸಗಳನ್ನೂ ಸೇರಿಸಿ ಅಳೆಯಲಾಗುತ್ತದೆಯೇ ಹೊರತು ಕೇವಲ ಮಾತಿನಿಂದಲ್ಲ.
  • ನಂಬಿಕೆ ಉಳಿಸುವ ಅಥವಾ ಅಳಿಸುವ ನಿರ್ಧಾರಗಳು ನಿರ್ಧಿಷ್ಟ ಕಾರ್ಯದ ಹಿಂದಿನ ಉದ್ದೇಶ ಅಥವಾ ನಿಖರ ಕಾರಣಗಳನ್ನು ಅವಲಂಬಿಸಿದೆ.

2. ನಿರೀಕ್ಷೆಗಳು- ಅಗತ್ಯವೋ, ಅನಗತ್ಯವೋ?:

ನಿರೀಕ್ಷೆಯು ನಿರಾಶೆಯನ್ನು ತರುತ್ತದೆ, ಆದ್ಧರಿಂದ ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ, ಎಂಬ ಸಲಹೆಯನ್ನು ನೀವು ಖಂಡಿತಾ ಕೇಳಿರುತ್ತೀರಿ, ಅಲ್ಲವೇ?

ನಿರೀಕ್ಷೆಗಳು ಬೇಕೋ, ಬೇಡವೋ” ಎಂಬ ಆಲೋಚನೆಗಿಂತ, “ಅಗತ್ಯ ಹಾಗೂ ಅನಗತ್ಯ ನಿರೀಕ್ಷೆಗಳು” ಎಂಬ ಆಲೋಚನೆ ಹೆಚ್ಚು ಸೂಕ್ತ ಅನಿಸುತ್ತದೆ.

ಉದಾಹರಣೆಗೆ– ಒಬ್ಬ ಗೃಹಿಣಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕಾರಣಕ್ಕಾಗಿ, ತನ್ನ ಪತಿ ಮದ್ಯಪಾನ ಮತ್ತು ಧೂಮಪಾನದ ಚಟವನ್ನು ಬಿಡಬೇಕೆಂದು ನಿರೀಕ್ಷಿಸುತ್ತಾಳೆ. ಮೇಲ್ನೋಟಕ್ಕೆ ಇದು ಸಹಜ ಎಂದು ತೋರುತ್ತದೆ. ಆದರೆ ಅವನ ಮನವೊಲಿಸಲು ಅವಳ ಹಲವಾರು ಪ್ರಯತ್ನಗಳ ನಂತರವೂ, ಆತ ಆಕೆಯ ಮಾತನ್ನು ಕೇಳುವ ಸ್ಥಿತಿಯಲ್ಲೇ ಇಲ್ಲದೆ ಆಕೆಗೆ ಕನಿಷ್ಠ ಗೌರವವನ್ನೂ ತೋರುವುದಿಲ್ಲ.

ಈಗ ಆ ಗೃಹಿಣಿ ತನ್ನ ಪತಿ ಮುಂದೊಂದು ದಿನ ತನ್ನ ಮಾತಿಗೆ ಬೆಲೆ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡರೆ ಅದರ ಬಗ್ಗೆ ನೀವು ಏನಂತೀರಿ?

ಮತ್ತೊಂದೆಡೆ, ಪತಿ ತನ್ನ ದುರಭ್ಯಾಸವನ್ನು ಡ್ರಗ್ಸ್‌ ಸೇವನೆಗೆ ವಿಸ್ತರಿಸುತ್ತಾನೆ ಮತ್ತು ಅವನು ಅವರ ಮಕ್ಕಳ ಮೇಲೆ ಕೆಟ್ಟದಾಗಿ ಪ್ರಭಾವ ಬೀರುತ್ತಾನೆ ಎನ್ನೋಣ. ಈಗ, ಅವನು ತನ್ನ ಮಿತಿಯನ್ನು ಮೀರಬಾರದು ಎಂದು ಪತ್ನಿ ನಿರೀಕ್ಷಿಸಿದರೆ, ಇದು ಆಕೆಯ ಸರಿಯಾದ ಮತ್ತು ಅಗತ್ಯ ನಿರೀಕ್ಷೆಯಾಗಿದೆ. ಅಂತಹಾ ಪರಿಸ್ಥಿತಿಯಲ್ಲಿ ಅವಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸರಿ! ನಿಮ್ಮ ಸ್ವಂತ ನಿರೀಕ್ಷೆಗಳನ್ನು ಶಾಂತವಾಗಿ ನೋಡುವ ಸಮಯ ಇದು. ಅವು ಯಾವುವು? ನೀವು ಯಾರಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ?

ಒಂದು ವೇಳೆ ನೀವು ಪೂರೈಸಲು ಸಾಧ್ಯವಾಗದ ಏನನ್ನಾದರೂ ನಿಮ್ಮ ಸಂಬಂಧಿಗಳಾದ ಇತರರು ಬಲವಾಗಿ ನಿರೀಕ್ಷಿಸುತ್ತಿದ್ದರೆ, ಸಾಧ್ಯವಾದಷ್ಟು ಬೇಗ ಅದನ್ನು ಸ್ಪಷ್ಟಪಡಿಸುವುದು ಸೂಕ್ತವಲ್ಲವೇ!.

3. ಸಂಬಂಧಗಳಲ್ಲಿ ಗೌರವದ ಪಾತ್ರ:

ಪ್ರತಿಯೊಬ್ಬ ವ್ಯಕ್ತಿಯೂ ಮೂಲಭೂತ ಗೌರವಕ್ಕೆ ಅರ್ಹರು. ಹಾಗಂತ ಅವರು ಎಷ್ಟು ಒಳ್ಳೆಯವರು ಅಥವಾ ಸಕಾರಾತ್ಮಕರು ಎಂದು ಪ್ರಶಂಸಿಸುವ ಮೂಲಕ ನೀವು ಅವರ ಸುತ್ತಲೂ ಸುತ್ತುತ್ತಿರಬೇಕು ಎಂದರ್ಥವಲ್ಲ.

ನಾವು ಸಂಬಂಧ ಹೊಂದಿರುವ ಯಾರನ್ನಾದರೂ ಗೌರವಿಸುತ್ತೇವೆ ಎಂದರೆ ಅವರ ನಕಾರಾತ್ಮಕ ಅಂಶಗಳನ್ನೂ ಸಹ ಅರಿತುಕೊಳ್ಳಲು ಮತ್ತು ಸೂಚಿಸಲು ನಮಗೆ ಹಕ್ಕಿದೆ. ಆದರೆ ಈ ರೀತಿಯ ವಿಷಯಗಳನ್ನು ನಾವು ಯಾವಾಗ, ಎಲ್ಲಿ ಮತ್ತು ಹೇಗೆ ಪರಸ್ಪರ ಸಂವಹನ ನಡೆಸುತ್ತೇವೆ ಎಂಬುದರ ಬಗ್ಗೆ ಬಹಳ ಜಾಗರೂಕರಾಗಿರಬೇಕು.

ನಿಮ್ಮ ಪ್ರೀತಿಪಾತ್ರರನ್ನು ಅನೇಕರ ಮುಂದೆ ಅಥವಾ ನಿಮ್ಮಿಬ್ಬರ ಜೀವನದಲ್ಲಿ ಯಾವುದೇ ಮಹತ್ವದ ಪಾತ್ರವನ್ನು ವಹಿಸದ ಒಬ್ಬ ವ್ಯಕ್ತಿಯ ಮುಂದೆ ಅವಮಾನಿಸುವುದು ದೊಡ್ಡ ಕೆಟ್ಟ ಅಭ್ಯಾಸವಾಗಿದೆ.

ಪಾರ್ಟಿ, ಆಚರಣೆಗಳು ಅಥವಾ ತಮಾಷೆಗೆ ಅವಕಾಶವಿರುವ ಪರಿಸರದಲ್ಲಿ. ಪದಗಳ ತಪ್ಪಾದ ಬಳಕೆಯಿಂದ ಅಥವಾ ದುರುದ್ದೇಶವಿಲ್ಲದೆಯೂ ಇತರರಿಗೆ ಅಗೌರವ ತೋರಿದಂತಾದರೆ ಕೂಡಲೇ ಪ್ರಾಮಾಣಿಕ ಕ್ಷಮೆ ಯಾಚಿಸಿ ಆ ವಿಷಯಕ್ಕೆ ಅಲ್ಲೇ ಬೈ ಬೈ ಹೇಳೋದು ಒಳ್ಳೆಯದಲ್ವೆ.

ನಾವು ಹಿಂದೆ ಚರ್ಚಿಸಿದಂತೆ, ಕೆಲವು ಅಗತ್ಯವಾದ ನಿರೀಕ್ಷೆಗಳಲ್ಲಿ ಮೂಲಭೂತ ಗೌರವವೂ ಒಂದು ಎಂದರೆ ತಪ್ಪಲ್ಲ.

4. ಸರಿಯಾದ ಸಂವಹನ:

ಇಬ್ಬರು-ಮಾತನಾಡುವ-ಕಾರ್ಟೂನ್-ವ್ಯಕ್ತಿಗಳು-ಮತ್ತು-ಮಾತಿನ-ಜೊತೆ-ಮೌನವನ್ನೂ-ಆಲಿಸಬಹುದೇ-ಎಂಬ-ಪ್ರಶ್ನೆಯನ್ನು-ಒಳಗೊಂಡ-ಚಿತ್ರ.

ಸಂವಹನವು ವಿಶಾಲವಾದ ಅರ್ಥವುಳ್ಳ ಪದವಾಗಿದೆ ಮತ್ತು ಹಲವಾರು ಆಯಾಮಗಳನ್ನು ಹೊಂದಿದೆ. ಆದ್ಧರಿಂದ ನಾನು ಅದನ್ನು ಸರಳವಾಗಿ ಮತ್ತು ಈ ಲೇಖನಕ್ಕೆ ತಕ್ಕಂತೆ ಇರಿಸಲು ಪ್ರಯತ್ನಿಸುತ್ತೇನೆ.

ಎ. ಸಕ್ರಿಯವಾಗಿ ಆಲಿಸುವಿಕೆ:

ಒಂದು ತಮಾಷೆಯ ವಿಷಯವನ್ನು ಗಮನಿಸಿದ್ಧೀರಾ? ಎರಡೆರಡು ಕಣ್ಣುಗಳು ಹಾಗೂ ಕಿವಿಗಳಿದ್ಧರೂ, ಹಲವರಲ್ಲಿ ಹೆಚ್ಚಾಗಿ ಬಳಕೆಯಾಗೋದು ಇರುವ ಒಂದೇ ಬಾಯಿ. ಸಕ್ರಿಯವಾದ ಆಲಿಸುವಿಕೆಯ ಕೊರತೆಯು ಇನ್ನೊಬ್ಬರ ದೃಷ್ಟಿಕೋನವನ್ನು ಅರಿಯದೆ ಕೇವಲ ನಮ್ಮ ಅನಿಸಿಕೆಗಳನ್ನು ಹೇರುವಂತೆ ಮಾಡುತ್ತದೆ.

ಬಿ. ಪ್ರತಿಕ್ರಿಯೆಯ ರೀತಿ:

ಸಂಬಂಧಗಳಲ್ಲಿ ಪ್ರತಿಕ್ರಿಯೆಗಳು ನಿಮ್ಮ ಸ್ವಭಾವದ ಜೊತೆಗೆ ಇತರ ವ್ಯಕ್ತಿಗಳ ಮಾತು, ಕ್ರಿಯೆ, ಮತ್ತು ಆ ಸಂಧರ್ಭವನ್ನೂ ಒಳಗೊಂಡರೆ ಸಮಸ್ಯೆಗಳ ನಿರ್ವಹಣೆ ಸ್ವಲ್ಪ ಸುಲಭವಾಗಬಹುದು.

ಅಭ್ಯಾಸದ ಆಧಾರದ ಮೇಲೆ ಅಥವಾ ಕೇವಲ ಸ್ವಭಾವದ ಹೆಸರಿನಲ್ಲಿ ನೀಡುವ ಪ್ರತಿಕ್ರಿಯೆಗಳು ಸಂಬಂಧಗಳಿಗೆ ಮುಳ್ಳಾಗಬಹುದು.

ಸಿ. ಆರೋಗ್ಯಕರ ವಾದಗಳು:

“ನನ್ ಜೊತೇನೇ ವಾದ ಮಾಡೋವಷ್ಟು ಬೆಳೆದ್ಬಿಟ್ಯಾ!” ಅನ್ನೋ ಹಿರಿಯರ ಮಾತು ಬಹುಷಃ ವಾದ ಮಾಡೋದೇ ತಪ್ಪು ಎನಿಸಿ ಎಲ್ಲವನ್ನೂ ಬಲವಂತದಿಂದ ಸಹಿಸುವ ಮನಸ್ಥಿತಿಗೆ ಕಾರಣವಾಗುತ್ತಾ!

ಮೂಲಭೂತ ಹಕ್ಕುಗಳ ರಕ್ಷಣೆಗಾಗಿ, ಅನಗತ್ಯ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ತಡೆಯಲು, ದುರುದ್ದೇಶ ಪ್ರೇರಿತ ದೌರ್ಜನ್ಯದ ವಿರುದ್ಧ ವಾದ ಮಾಡಲೇಬೇಕಾದ ಪರಿಸ್ಥಿತಿಗಳಲ್ಲಿ ಸುಮ್ಮನಿರುವುದು ತಕ್ಷಣದ ಅಥವಾ ಭವಿಷ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಾಗೆಯೇ, ಇತರ ವ್ಯಕ್ತಿಯ ವಾದಗಳು ಆಧಾರರಹಿತ ಅಥವಾ ಕೇವಲ ನಿಲುವು ಎಂದು ನೀವು ಅರಿತರೆ, ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವ ಬದಲು ಕಾರ್ಯ ರೂಪದಲ್ಲಿ ಪರಸ್ಪರ ಒಳಿತಾಗುವ ಪರಿಹಾರಕ್ಕೆ ಪ್ರಯತ್ನಿಸೋದು ಒಳಿತು.

ನೀವು ಆ ರೀತಿ ವಾದ ಮಾಡೋರಲ್ಲ ತಾನೇ?

ಡಿ. ಸಂಬಂಧಗಳ ಸಂವಹನದಲ್ಲಿ ಏನೆಲ್ಲಾ ಹಂಚಿಕೊಳ್ಳಬೇಕು?

ಇದು ವ್ಯಕ್ತಿನಿಷ್ಠವಾಗಿದೆ. ಅದನ್ನ ಹೇಳಿ, ಇದನ್ನ ಹೇಳಿ ಎಂದು ನಾನು ನಿಮಗೆ ನಿರ್ದಿಷ್ಟವಾಗಿ ಸೂಚಿಸಲು ಸಾಧ್ಯವಿಲ್ಲ.

ಪಾರದರ್ಶಕತೆ ಅಗತ್ಯ ಎಂಬುವುದೇನೋ ನಿಜ. ಆದರೆ ಕೆಲವು ಸಂದರ್ಭಗಳಲ್ಲಿ ನಿರ್ಧಿಷ್ಟ ವ್ಯಕ್ತಿಗಳ ಜೊತೆ ಸಂಹನದ ಮೂಲಕ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗದಿರಬಹುದು. ಇದು ನೀವು ಹೊಂದಿರುವ ಸಂಬಂಧದ ವಿಧ, ರೀತಿ, ವಿಷಯ, ಹಾಗೂ ವೈಯಕ್ತಿಗಳ ಅಗತ್ಯತೆಯನ್ನು ಅವಲಂಬಿಸಿದೆ.

ನೀವು ಓದುವುದನ್ನು ಆನಂದಿಸುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ.

ಹೌದು ತಾನೇ?

5. ಅಂತರದ ನಿರ್ಲಕ್ಪ:

ನಾವು ಏನನ್ನು ನೋಡುತ್ತೇವೆ ಎಂಬುದರ ಜೊತೆಗೆ ಅದನ್ನು ಹೇಗೆ ನೋಡುತ್ತೇವೆ ಮತ್ತು ಅರ್ಥೈಸುತ್ತೇವೆ ಎಂಬುದೂ ಮುಖ್ಯ ಎಂಬುದರ ಅರಿವು ನಿಮಗಿದೆ ಎಂದು ನಾನು ಭಾವಿಸುತ್ತೇನೆ.

ಈ ಅಂಶದ ಉಲ್ಲೇಖಕ್ಕೆ ಕಾರಣ ಸಂಬಂಧಗಳಲ್ಲಿ ಅಂತರದ ಅಥವಾ ಅವಕಾಶದ ಮಹತ್ವ:

ಎ. ಭೌತಿಕ:

ನಿಸ್ಸಂದೇಹವಾಗಿ, ನಿಖಟ ಸಂಬಂಧಿಗಳ ಜೊತೆ ಗುಣಮಟ್ಟದ ಸಮಯವನ್ನು ಕಳೆಯುವುದು ಬಹಳ ಮುಖ್ಯ. ಇದು 5 ನಿಮಿಷಗಳು, ಒಂದು ಗಂಟೆ ಅಥವಾ ಒಂದು ದಿನವೇ ಇರಬಹುದು.

ಆದರೆ, ಸಂಬಂಧವು ಹಳೆಯದಾಗುತ್ತಿದ್ದಂತೆ, ಎಲ್ಲವನ್ನೂ ಊಹಿಸುವ ಅಭ್ಯಾಸವಾಗುತ್ತವೆ. ಮಾತುಗಳು, ಕ್ರಿಯೆಗಳು ಅಥವಾ ನಡವಳಿಕೆಯ ರೀತಿ ಸಾಮಾನ್ಯವಾಗಿ ತೋರುತ್ತದೆ. ಇವೆಲ್ಲವೂ ಬೇಸರ ಮತ್ತು ನಿರ್ಲಕ್ಷ್ಯಕ್ಕೆ ಕಾರಣವಾಗಬಹುದು.

ಹಾಗಿದ್ದಲ್ಲಿ, ಹೊಸ ಅಥವಾ ಪ್ರೇಕ್ಷಣೀಯ ಸ್ಥಳಕ್ಕೆ ಇತರರೊಂದಿಗೆ ಭೇಟಿ ನೀಡುವುದು ಸ್ವಲ್ಪ ಮಟ್ಟಿನ ತಾತ್ಕಾಲಿಕ ಪರಿಹಾರವನ್ನು ನೀಡಬಹುದು.

ಬಿ. ಮಾನಸಿಕ:

ನಾನು ಖಂಡಿತಾ ಮನಶ್ಶಾಸ್ತ್ರಜ್ಞನಲ್ಲ. ನಾನು ನನ್ನಲ್ಲಿ ಗಮನಿಸಿದ, ಸುತ್ತು-ಮುತ್ತಲಿನ ಜನರು, ಯಶಸ್ವಿ ಹಾಗೂ ಸೋತ ಸಂಬಂಧದಲ್ಲಿದ್ದ ಮತ್ತು ಇರುವವರ ಮಾತುಗಳ ಬಗ್ಗೆ ನನ್ನ ವೀಕ್ಷಣೆಯನ್ನು ಹಂಚಿಕೊಳ್ಳುತ್ತಿದ್ದೇನೆ

ನಮಗೆ ನಾವೇ ಮಾತನಾಡಿಕೊಳ್ಳುವ ಪ್ರಕ್ರಿಯೆಯೇ ಆಲೋಚನೆಗಳು. ಈ ಆಲೋಚನೆಗಳ ನಡುವಿನ ಬಿಡುವನ್ನು ಮಾನಸಿಕ ಅಂತರ ಎನ್ನಬಹುದು.

ಅನಗತ್ಯ ಭಯ ಮತ್ತು ವಿಪರೀತ ಬಯಕೆಯಿಂದ ಉದ್ಭವಿಸುವ ಆಲೋಚನೆಗಳು ಸಂಬಂಧಗಳಲ್ಲಿ ಪರಿಹರಿಸಲು ಕಷ್ಟಕರವಾದ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ನೇರವಾಗಿ ಆಲೋಚನೆಗಳನ್ನು ಗಮನಿಸಿದರೆ ಅವುಗಳು ಸರಿಯಾದ ದಿಕ್ಕಿಗೆ ಕ್ರಮಬದ್ಧವಾಗಿ ಹರಿದು ಸಮಸ್ಯೆಗಳಿಗೆ ಪರಿಹಾರ ತೋರುವಲ್ಲಿ ಸಹಾಯಕವಾಗುತ್ತವೆ. ಈ ಪ್ರಕ್ರಿಯೆಗೆ ಮಾನಸಿಕ ಅಂತರ ಅತ್ಯಗತ್ಯ.

6. ಸಂಬಂಧಗಳಲ್ಲಿಅಭದ್ರತೆಯ ಸಮಸ್ಯೆ:

ನೀವು ಈಗಾಗಲೇ ವೈಯಕ್ತಿಕ ಭದ್ರತೆಯ ಬಗ್ಗೆ ಕಾಳಜಿ ಹೊಂದಿದ್ದೀರಿ ಎಂದು ನನಗೆ ಖಾತ್ರಿಯಿದೆ. ಆದರೆ ನೀವು ಸಂಬಂಧದಲ್ಲಿ ಭದ್ರತೆಯ ಬಗ್ಗೆ ಎಷ್ಟು ಯೋಚಿಸಿದ್ದೀರಿ ಎಂದು ನನಗೆ ತಿಳಿದಿಲ್ಲ.

ಸಂಬಂಧದಲ್ಲಿ ಪ್ರತ್ಯೇಕತೆಯು ಪ್ರಾಬಲ್ಯವಾದಾಗ ನೀವು ಅಸುರಕ್ಷಿತರಾಗುತ್ತೀರಿ. ಅದು ನಿಮ್ಮ ಕಡೆಯಿಂದ ಮಾತ್ರ ಆಗಬೇಕಿಲ್ಲ. ನಿಮ್ಮ ‘ಸಂಬಂಧಿಕರೂ’ ಸಮಸ್ಯೆಗಳಿಗೆ ಕೊಡುಗೆ ನೀಡುತ್ತಿರಬಹುದು.

ಯಾವಾಗಲೂ ಗಮನ ಸೆಳೆಯಲು ಪ್ರಯತ್ನಿಸುವುದು, ಅಭಿನಂದನೆಗಳನ್ನು ಹುಡುಕುವುದು, ಅಸೂಯೆ, ಇಂತವುಗಳು ಅಸುರಕ್ಷಿತ ಭಾವನೆಯ ಕೆಲವು ಲಕ್ಷಣಗಳಾಗಿವೆ. ಅಂತೆಯೇ, ಒಂಟಿತನದಂತಹ ಅಭದ್ರತೆಗೂ ಹಲವು ಕಾರಣಗಳಿರಬಹುದು.

ಸಂಬಂಧಗಳ ಭದ್ರತಾ ಸ್ಥಿತಿಯನ್ನು ಪರಿಶೀಲಿಸಲು ಕೆಲವು ಮುಖ್ಯ ಅಂಶಗಳು ಇಲ್ಲಿದೆ;

  • ಸಂಬಂಧದ ಅಗತ್ಯಗಳನ್ನು ಪೂರೈಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು.
  • ಸಂಬಂಧ ಕೆಡಿಸಬಹುದಾದ ಹಣಕಾಸಿನ ಸಮಸ್ಯೆ,ಗಳು.
  • ಅನಗತ್ಯ ಹೋಲಿಕೆಯ ಚಟ.

ಅವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಪಟ್ಟಿ ಮಾಡಿದಲ್ಲಿ, ಸಂಬಂಧಗಳ ಅಭದ್ರಂತೆ ನೀಗಿಸಲು ಅವಿಭಕ್ತ ಕುಟುಂಬ ಕೆಲವರಿಗಂತೂ ಬಲು ಸಹಕಾರಿ ಎನ್ನಬಹುದು.

7. ಆದ್ಯತೆಯ ಕೊರತೆ:

ಸಂಬಂಧಗಳಲ್ಲಿ-ವಿಷಯಗಳ-ಪ್ರಾಮುಖ್ಯತೆ-ಮತ್ತು-ಆದ್ಯತೆಗಳ-ಮಹತ್ವದ-ಲುರಿತ-ಪ್ರಶ್ನೆಗೆ-ಉತ್ತರದ-ಜೊತೆಗೆ-ಎರಡು-ಸುಂದರ-ಎಮೋಜಿಗಳನ್ನು-ಒಳಗೊಂಡ-ಚಿತ್ರ.

ಉತ್ತಮವಾಗಿ ಹೊಂದಿಸಲಾದ ಆದ್ಯತೆಯು ನಮ್ಮ ಕಾರ್ಯಗಳಿಗೆ ಸ್ಪಷ್ಟತೆಯನ್ನು ತರುವುದರ ಜೊತೆಗೆ ಸಂಬಂಧಗಳ ನಿರ್ವಹಣೆಗೆ ಬಲು ಸಹಕಾರಿ.

ನಿಮ್ಮ ಸಂಬಂಧದಲ್ಲಿ ಟಾಪ್ 5 ವಿಷಯಗಳು ಯಾವುವು?

ಅದನ್ನು ನಿರ್ಲಕ್ಷಿಸಬೇಡಿ. ಮನಸ್ಸು ಗೊಂದಲದಲ್ಲಿದ್ದರೆ, ಪೆನ್ನು ಮತ್ತು ಕಾಗದವನ್ನು ತೆಗೆದುಕೊಂಡು ಅವುಗಳನ್ನು ಬರೆಯಿರಿ.

ಮಾದರಿ ಪಟ್ಟಿಯು ನಿಮಗೆ ಸಹಾಯಕವಾಗಬಹುದು;

  • ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ತೃಪ್ತಿಯಿಲ್ಲ, ಹಾಗಾಗಿ ಆತ/ಆಕೆಯೂ ಇನ್ನಷ್ಟು ದುಡಿಯಲೇಬೇಕು.
  • ಆರಾಮದಾಯಕ ಜೀವನಶೈಲಿಯ ಜೊತೆಗೆ, ನಾನು ಸಾಧ್ಯವಾದಷ್ಟು ಗುಣಮಟ್ಟದ ಸಮಯವನ್ನು ಕಳೆಯಬಯಸುವೆ.
  • ಎಲ್ಲೇ ಇದ್ದರೂ ಅವನು/ಅವಳು ನನಗೆ ಶುಭ ಹಾರೈಸಬೇಕೆಂದು ನಾನು ಬಯಸುತ್ತೇನೆ. (ಶುಭೋದಯ, ಶುಭ ಸಂಜೆ, ಹೀಗೆ)
  • ನಂಬಿಕೆ
  • ಗೌರವ
  • ಅವನು, ಅವಳು, ಅಥವಾ ಅವರು ನನ್ನ ನಿರೀಕ್ಷೆಗಳನ್ನೆಲ್ಲಾ ಈಡೇರಿಸಬೇಕು

ಈ ರೀತಿ, ಮೊದಲು, 10 ವಿಷಯಗಳನ್ನು ಬರೆಯಿರಿ. ನಂತರ, ನಿಮ್ಮ ಸಂಬಂಧದಲ್ಲಿ ಅವರ ಪ್ರಾಮುಖ್ಯತೆಯನ್ನು ಆಧರಿಸಿ ಅವುಗಳಿಗೆ 1 ರಿಂದ 10 ರವರೆಗಿನ ಸಂಖ್ಯೆಗಳನ್ನು ನೀಡಿ. ನಂತರ ಮನಸ್ಸಿನ ಸ್ಪಷ್ಟತೆಯ ಮಟ್ಟವನ್ನು ಗಮನಿಸಿ.

ಹಾಗೆಯೇ, ಯಾವ ವ್ಯಕ್ತಿ ಮತ್ತು ಯಾವ ಸಂಬಂಧಗಳು ಎಷ್ಟು ಮುಖ್ಯ ಎಂಬುದನ್ನು ನಿರಂತರ ಗಮನಿಸುವುದು ಮುಖ್ಯ ಅನಿಸುತ್ತದೆ.

ಉದಾಹರಣೆಗೆ ಈ ಸನ್ನಿವೇಶಗಳನ್ನು ಪರಿಗಣಿಸಿ-

ಒಬ್ಬ ಪತಿ ತನ್ನ ಮಗುವಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿಯೊಂದಿಗೆ ಜಗಳವಾಡುವುದಕ್ಕೂ, ಅವರ ಮನೆಗೆ ಅಪರೂಪವಾಗಿ ಭೇಟಿ ನೀಡುವ ‘ದೂರದ‘ ಸಂಬಂಧಿಯ ಮುಂದೆ ತನ್ನ ಪತ್ನಿಯದೇ ತಪ್ಪು ಎಂದು ಸಾಬೀತುಪಡಿಸಲು ಪತಿ ಜಗಳವಾಡುವುದಕ್ಕೊ ಏನು ವೆತ್ಯಾಸ?

(ಇಲ್ಲಿ ಜಗಳ ಯಾರ ಕಡೆಯಿಂದ ಎಂಬುದಕ್ಕಿಂತ ಯಾವ ಕಾರಣಕ್ಕೆ, ಹಾಗೂ ಯಾವ ಸಂದರ್ಭದಲ್ಲಿ ಎಂಬುದು ಮುಖ್ಯ)

ಈಗ ನೀವು ಆದ್ಯತೆಯ ಬಗ್ಗೆ ಸ್ಪಷ್ಟವಾಗಿದ್ದೀರಿ, ಅಲ್ಲವೇ?

ತೀರ್ಮಾನ:

ಸಂಘರ್ಷಕ್ಕೆ ಕೆಲವು ಮುಖ್ಯ ಕಾರಣಗಳ ಕುರಿತು ನಾನು ನಿಮ್ಮೊಂದಿಗೆ ಈ ಲೇಖನದ ಮೂಲಕ ಚರ್ಚಿಸಿದ್ದೇನೆ. ಸಂಬಂಧಗಳಲ್ಲಿ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ದೊರೆತಿದೆ ಎಂದು ಭಾವಿಸುತ್ತೇನೆ.

ನಂಬಿಕೆ, ಸರಿಯಾದ ನಿರೀಕ್ಷೆ, ಸಾಮರಸ್ಯದ ಸಂವಹನಗಳಂತಹ ಮುಖ್ಯ ವಿಷಯಗಳನ್ನು ಗಂಭೇರವಾಗಿ ಪರಿಗಣಿಸುವುದರ ಜೊತೆಗೆ ವಿಷಯಗಳ ಆದ್ಯತ್ಯತೆಯನ್ನು ಸ್ಪಷ್ಟವಾಗಿಸುವುದು ಅನಿವಾರ್ಯ.

ನೀವು ಓದಿದ ಪ್ರತೀ ವಾಕ್ಯವನ್ನೂ ನೆನಪಿಡುವ ಅಗತ್ಯವಿಲ್ಲ. ಬದಲಾಗಿ, ಸಾರವನ್ನು ಗ್ರಹಿಸಿ ವಿಚಾರ ಮಾಡಿದರೆ ಹೆಚ್ಚು ಉಪಯುಕ್ತ. “ಪ್ರೀತಿಪಾತ್ರರೊಂದಿಗೆ ಸಂತೋಷದಿಂದ ಬದುಕಲು ಸ್ಪಷ್ಟತೆ ಮತ್ತು ಸರಿಯಾದ ತಿಳುವಳಿಕೆ ಮುಖ್ಯ” -ಎಂಬುದೇ ಇದರ ಸಾರ.

ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಲು ಮರೆಯದಿರಿ ಮತ್ತು ನಾನು ಯಾವ ರೀತಿಯ ವಿಷಯಗಳನ್ನು ಬರೆಯಬೇಕೆಂದು ನೀವು ಬಯಸುತ್ತೀರಿ ಎಂದು ನನಗೆ ತಿಳಿಸಿ

ಈ ಲೇಖನ ನಿಮಗೆ ಸಹಾಯಕವಾಗಿದ್ದರೆ, ಸಮಸ್ಯೆಗಳನ್ನು ತೊಡೆದುಹಾಕಲು ಮಾರ್ಗಗಳನ್ನು ಹುಡುಕುತ್ತಿರುವವರೊಂದಿಗೆ ಇದನ್ನು ಶೇರ್ ಮಾಡಿ.

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Comment

Your email address will not be published. Required fields are marked *

Scroll to Top