ಪದೇ ಪದೇ ಹಲವಾರು ರೀತಿಯಲ್ಲಿ ಪ್ರಯತ್ನಿಸಿದ ನಂತರವೂ ಅವಿಭಕ್ತ ಕುಟುಂಬದ ಸಮಸ್ಯೆಗಳು ಬಗೆಹರಿಯದಿದ್ದಾಗ ಅವುಗಳು ಶಾಶ್ವತವೇ ಎಂಬ ಅನುಮಾನ ಉಂಟಾಗುತ್ತದೆ.
ಸಮಸ್ಯೆಗಳನ್ನು ಬಿಡುವುದೋ, ಕುಟುಂಬವನ್ನೇ ಬಿಡುವುದೋ, ಅಥವಾ ದೊಡ್ಡ ಕುಟುಂಬದ ಅನುಕೂಲಗಳನ್ನು ತ್ಯಾಗ ಮಾಡುವುದೋ ಎಂಬ ಹತ್ತು ಹಲವು ಪ್ರಶ್ನೆಗಳೂ ಕಾಡಲಾರಂಭಿಸುತ್ತವೆ.
“ಈ ವ್ಯವಸ್ಥೆಯು ಉತ್ತೇಜಿಸುವ ಭಾವನಾತ್ಮಕ ಬೆಂಬಲ, ಹಂಚಿಕೆಯ ಜವಾಬ್ದಾರಿಗಳು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಸಂರಕ್ಷಣೆಯನ್ನು ಗುರುತಿಸುವ ಮೂಲಕ ಜನಸಂಖ್ಯೆಯ ಗಮನಾರ್ಹ ಭಾಗವು ಜಂಟಿ ಕುಟುಂಬಗಳನ್ನು ಪ್ರಯೋಜನಕಾರಿ ಮತ್ತು ಸಂವೇದನಾಶೀಲ ರೀತಿಯ ಕುಟುಂಬ ರಚನೆಯಾಗಿ ನೋಡುವುದನ್ನು ಮುಂದುವರೆಸಿದೆ” ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ.
ಹಾಗಾಗಿ ಸಮಸ್ಯೆಗಳನ್ನು ಬಗೆಹರಿಸಿ, ಸಮಾಜದ ಕೂಡು ಕುಟುಂಬದ ವ್ಯವಸ್ಥೆಯ ಅನುಕೂಲಗಳನ್ನು ಅನುಭವಿಸುವ ದಾರಿಗಳನ್ನು ಗಮನಿಸೋಣ ಬನ್ನಿ.
1. ಎಲ್ಲಾ ಸದಸ್ಯರು ಗಮನಿಸಬೇಕಾದ ಅವಿಭಕ್ತ ಕುಟುಂಬದ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳು:
3 ತಲೆಮಾರು, ಅಂದರೆ ಅಜ್ಜ-ಅಜ್ಜಿ, ಅವರ ಮಕ್ಕಳು, ಹಾಗೂ ಮೊಮ್ಮಕ್ಕಳನ್ನೊಳಗೊಂಡ ಅವಿಭಕ್ತ ಕುಟುಂಬದಲ್ಲಿ ಹಲವು ವಿಧದ ಸಮಸ್ಯೆಗಳಿರುವುದಲ್ಲದೆ, ಕೆಲವೊಮ್ಮೆ ಒಂದೇ ಸಮಸ್ಯೆ ಒಬ್ಬೊಬ್ಬ ಸದಸ್ಯರಿಗೆ ಒಂದೊಂದು ರೀತಿ ಪ್ರಭಾವ ಬೀರುತ್ತವೆ.
ಹಾಗಾಗಿ, ಹಿರಿಯರು ಮತ್ತು ಕಿರಿಯರನ್ನೊಳಗೊಂಡ ಬೇರೆ ಬೇರೆ ದೃಷ್ಟಿಕೋನದಿಂದ ಪರಿಹಾರ ಮಾರ್ಗಗಳನ್ನು ನೋಡಬೇಕಾಗುತ್ತದೆ.
ಆದ್ದರಿಂದ ಈಗ ಎಲ್ಲಾ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಕೆಲವು ಮುಖ್ಯ ಅಂಶಗಳನ್ನು ಗಮನಿಸೋಣ.
ಅ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸುವ ಬಲವಾದ ಬಯಕೆಯನ್ನು ಹೊಂದುವುದು:
ನೆಪೋಲಿಯನ್ ಹಿಲ್ ಅವರು ತಮ್ಮ ಪುಸ್ತಕ “ಥಿಂಕ್ ಅಂಡ್ ಗ್ರೋ ರಿಚ್” ನಲ್ಲಿ ಹೇಳಿದರು, “ಎಲ್ಲಾ ಸಾಧನೆಗಳು, ಅದರ ಸ್ವರೂಪ ಅಥವಾ ಉದ್ದೇಶ ಏನೇ ಇರಲಿ, ನಿರ್ದಿಷ್ಟವಾದ ಯಾವುದನ್ನಾದರೂ ತೀವ್ರವಾದ ಉರಿಯುವ ಬಯಕೆಯಿಂದ ಪ್ರಾರಂಭಿಸಬೇಕು ಎಂಬ ಚಿಂತನೆಯನ್ನು ನಾನು ತಿಳಿಸಲು ಬಯಸುತ್ತೇನೆ”.
ಅದರ ಅರ್ಥವೇನು?
ಶ್ರೀಮಂತರಾಗಲು ಮಾತ್ರವಲ್ಲದೆ ಯಾವುದೇ ಸಮಸ್ಯೆಗೆ (ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ) ಪರಿಹಾರವನ್ನು ಕಂಡುಕೊಳ್ಳಲು ನಾವು ಮನಸ್ಪೂರ್ತಿಯಾಗಿ ಬಯಸುವುದು ಅಗತ್ಯ.
ನಾನು ನೆಪೋಲಿಯನ್ ಹಿಲ್ ಅವರ ಮಾತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿದ್ದೇನೆ. ಏಕೆಂದರೆ ಸಂಪತ್ತನ್ನು ಸಂಗ್ರಹಿಸಲು ಅಥವಾ ವೃತ್ತಿಜೀವನದ ಬೆಳವಣಿಗೆಯನ್ನು ಸಾಧಿಸಲು ಕೊಡುವಷ್ಟು ಗಮನ ಮತ್ತು ಹಾಕುವ ಶ್ರಮ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಇರುವುದಿಲ್ಲ ಎಂಬುದು ಸಾಮಾನ್ಯ ದೂರುಗಳಲ್ಲಿ ಒಂದಾಗಿದೆ.
ಒಂದು ದೊಡ್ಡ ಕುಟುಂಬದಲ್ಲಿ ಸಣ್ಣ ಸಮಸ್ಯೆ ಎದ್ದರೂ ಅದು ವೇಗವಾಗಿ ಇಡೀ ಕುಟುಂಬ ಸದಸ್ಯರ ಗಮನ ಸೆಳೆದು ಮನೆಯ ವಾರಾವರಣ ಕೆಡಿಸುತ್ತದೆ.
ಕೆಲವೊಮ್ಮೆ ಒಂದಾದ ಮೇಲೊಂದು ಸಮಸ್ಯೆಗಳನ್ನು ಎದುರಿಸಿ, ಅದರಿಂದಾಚೆಗೆ ಜೀವನವೇ ಇಲ್ಲ ಎಂಬ ಮನೋಭಾವ ಉಂಟಾಗುತ್ತದೆ.
ಹಾಗಾಗಿ ಮೊದಲು ಸಮಸ್ಯೆಗಳನ್ನು ವಾಸ್ತವತೆಯ ಆಧಾರದಲ್ಲಿ ಗುರುತಿಸಿ ಅವುಗಳ ಪರಿಹಾರಕ್ಕೆ ಬಲವಾದ ಬಯಕೆಯನ್ನು ಹೊಂದಿರುವುದು ಎಲ್ಲಕ್ಕಿಂತ ಮೊದಲ ಹೆಜ್ಜೆ.
ಆ. ಬದಲಾಗುತ್ತಿರುವ ಲಕ್ಷಣಗಳನ್ನು ನಿರಂತರವಾಗಿ ಗಮನಿಸುವುದು:
ದೊಡ್ಡ ಕುಟುಂಬಗಳಲ್ಲಿ ಬಹುಸಂಖ್ಯಾ ಸದಸ್ಯರು ಇರುವುದರಿದ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಮುಳುಗಿರುವ ಕಾರಣ ಇತರ ಯಶಸ್ವೀ ಕುಟುಂಬಗಳನ್ನಾಗಲೀ ಅಥವಾ ತಮ್ಮದೇ ಕುಟುಂಬವನ್ನು ಮೂರನೇ ವ್ಯಕ್ತಿಯ ದೃಷ್ಟಿಕೋನದಿಂದ ನೋಡಲು ಬಹುತೇಕರು ವಿಫಲರಾಗುತ್ತಾರೆ.
ಇದರಿಂದಾಗಿ, ಬದಲಾಗುತ್ತಿರುವ ಅವಿಭಕ್ತ ಕುಟುಂಬದ ಲಕ್ಷಣಗಳನ್ನು ಗಮನಿಸಲು ಮರೆಯುತ್ತಾರೆ.
- ಸದಸ್ಯರ ನಡವಳಿಕೆ
- ಆಚಾರ-ವಿಚಾರ
- ಸಂಸ್ಕೃತಿಗಳ ಪಾಲನೆ
ಹೀಗೆ ಅನೇಕ ವಿಚಾರಗಳನ್ನು ಒಳಗೊಂಡಂತೆ ಲಕ್ಷಣಗಳು ನಿರಂತರವಾಗಿ ಬದಲಾಗುವುದು ಮಾತ್ರವಲ್ಲದೆ ತಮ್ಮ ಪ್ರಭಾವಗಳನ್ನು ಆಳವಾಗಿಯೇ ಬೀರುತ್ತಿರುತ್ತವೆ.
ಹಾಗಾದರೆ ಇದರ ಹೊಣೆ ಯಾರು ಹೊರಬೇಕು?
ಒಂದಂತೂ ಸ್ಪಷ್ಟ. ಇದು ಕೇವಲ ಕುಟುಂಬವನ್ನು ಮುನ್ನಡೆಸುವ ಹಿರಿಯರ ಹೊಣೆಯಲ್ಲ. ಈಗಷ್ಟೇ ಪ್ರಪಂಚದ ಅರಿವನ್ನು ಗಳಿಸುತ್ತಿರುವ ಪುಟ್ಟ ಮಕ್ಕಳನ್ನು ಹೊರತು ಪಡಿಸಿ, ಇದು ಪ್ರತಿಯೊಬ್ಬ ಸದಸ್ಯರಿಗೂ ಅನ್ವಯಿಸುತ್ತದೆ.
ಏನಂತೀರಿ?
ಇ. ಅನುಕೂಲ ಮತ್ತು ಅನಾನುಕೂಲಗಳೆರಡನ್ನೂ ಪರಿಗಣಿಸುವುದು:
ಬಹುತೇಕ ಎಲ್ಲಾ ವಿಚಾರಗಳಲ್ಲಿ ಕೇವಲ ಪ್ರಯೋಜನಗಳನ್ನು ಅಥವಾ ಕೇವಲ ಅಪ್ರಯೋಜನಗಳನ್ನು ಬಲವಾಗಿ ಹಿಡಿಯುವುದು ಮಾನವ ಮನಸ್ಸಿನ ಪುರಾತನ ಸಂಪ್ರದಾಯ.
ದೊಡ್ಡ ಕುಟುಂಬವೂ ಇದಕ್ಕೆ ಹೊರತಲ್ಲದ ಕಾರಣ ಅದು ಇಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಉದಾಹರಣೆಗೆ – ಒಂದೆಡೆ ಸಹಾಯಕ್ಕೆ ಲಭ್ಯವಿರುವ ಸದಸ್ಯರ ಮೇಲೆ ಅನಗತ್ಯ ಅವಲಬಿತವಾಗಿ ಮತ್ತೊಂದೆಡೆ ಕುಟುಂಬದಲ್ಲಿರಬೇಕಾದ ಅಗತ್ಯ ಸ್ವಾತಂತ್ರ್ಯವನ್ನೂ ತ್ಯಾಗ ಮಾಡುವುದು. ಇದು ಕೆಲವೊಮ್ಮೆ ಮಾನವನಾಗಿ ಬದುಕುವ ತನ್ನ ‘ಹಕ್ಕಿಗೂ’ ಕುತ್ತು ತರಬಹುದು.
ಹಾಗಾಗಿ ಪ್ರತಿಯೊಬ್ಬ ಸದಸ್ಯರೂ ಅವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅರಿತು, ಅವುಗಳೆರಡನ್ನೂ ಪರಿಗಣಿಸಿ್ದರೆ ಸಮಸ್ಯೆಗಳನ್ನು ಎದುರಿಸುವ ಮತ್ತು ಪರಿಹರಿಸುವ ದಾರಿ ಸುಲಭವಾಗುತ್ತದೆ.
ಈ. ಕೌಟುಂಬಿಕವಾಗಿ ಸಮಯದ ವಿನಿಯೋಗ:
ಪ್ರತೀ ಸದಸ್ಯರಿಗೂ ಕುಟುಂಬದ ಸಮಯ ಮತ್ತು ವೈಯಕ್ತಿಕ ಸಮಯವನ್ನು ಸಮತೋಲನಗೊಳಿಸುವುದು ಒಂದು ಸವಾಲಾಗಿದೆ.
ನೀವು ಒಂದು ಕಡೆಯಿಂದ ನಿರ್ಲಕ್ಷ್ಯಕ್ಕೆ ಗುರಿಯಾಗಬಹುದು ಮತ್ತು ಇನ್ನೊಂದು ಬದಿಯಲ್ಲಿ ನಿಮ್ಮೊಂದಿಗೆ ಸಮಯ ಕಳೆಯಲು ಮತ್ತೆ ಕೆಲವು ಸದಸ್ಯರು ಹಾತೊರೆಯುತ್ತಿರಬಹುದು.
ನೀವು ಒಬ್ಬ ವ್ಯಕ್ತಿಗೆ ನಿಖರವಾದ ಸಮಯವನ್ನು ಹೊಂದಿಸಲು ಸಾಧ್ಯವಿಲ್ಲ ಅಥವಾ ಯಾರಿಗಾದರೂ ನಿಮ್ಮ ಗಮನವನ್ನು ನಿಖರವಾಗಿ ಅಳೆದು ತೂಗಿ ಕೊಡಲು ಬಹುಷಃ ಸಾಧ್ಯವಿಲ್ಲ. ಅದು ಸಹಜ ಮತ್ತು ಸ್ವಾಭಾವಿಕವಾಗಿರಬೇಕು.
ಸದಸ್ಯರನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾದರೆ, ವಿವಿಧ ಅವಿಭಕ್ತ ಕುಟುಮಗಳ ಸಮಸ್ಯೆಗಳು ಮತ್ತು ಅವುಗಳ ಪ್ರಭಾವಗಳನ್ನು ನಿವಾರಿಸಲು ಸರಳ ಉಪಾಯವಾಗಬಹುದು.
ಉದಾಹರಣೆಗೆ – ಒಟ್ಟಿಗೆ ಕುಳಿತು ಊಟ – ತಿಂಡಿ ಮಾಡುವುದಾಗಿರಬಹುದು, ಎಲ್ಲರಿಗೂ ಸೂಕ್ತವಾದ ಮನರಂಜನಾ ಕಾರ್ಯಕ್ರಮಗಳನ್ನು ಜೊತೆಯಾಗಿ ವೀಕ್ಷಿಸಿ ಸಂತಸಪಡುವುದು, ಇತ್ಯಾದಿ.
ಉ. ಚತುರತೆಯ ಮಾತುಕತೆ:
“ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು”ಎಂಬ ಮಾತು ಕೇಳಿರುವಿರಿ ತಾನೇ?
ಹೆಚ್ಚಿನ ಮನೆಗಳಲ್ಲಿ ನ್ಯೂಸ್ ಚಾನೆಲ್ ಗಳ ಚರ್ಚೆಗೂ ಕುಟುಂಬ ಸದಸ್ಯರುಗಳ ನಡುವಿನ ಚರ್ಚೆಗೂ ವೆತ್ಯಾಸವೇ ಇಲ್ಲ. ಏಕೆಂದರೆ ಎರಡರಲ್ಲೂ ಪ್ರಯೋಜನಕಾರೀ ಅಂಶಗಳು ಹೊರಬರುವುದು ಅಪರೂಪ.
ತಾವು ಎದುರಿಸುವ ಪ್ರತಿಯೊಂದು ವಿಷಯದ ಬಗ್ಗೆ ಕೊನೆಯಿಲ್ಲದೆ, ಅಗತ್ಯ-ಅನಗತ್ಯವನ್ನು ಮರೆತು ಮಾತನಾಡುವುದು ಮತ್ತು ಅವಶ್ಯಕತೆ ಇದ್ದಲ್ಲಿ ತೆಪ್ಪಗಿರುವುದು ವಿವಿಧ ರೀತಿಯ ಕುಟುಂಬಗಳನ್ನೊಳಗೊಂಡ ಸಮಾಜದ ಸಾಮಾನ್ಯ ಸಂಗತಿ. ಆದರೆ ಸದಸ್ಯರ ಸಂಖ್ಯೆ ಹೆಚ್ಚಿರುವ ದೊಡ್ಡ ಕುಟುಂಬದಲ್ಲಿ ಈ ಸಮಸ್ಯೆ ದೊಡ್ಡದೇ.
ಹಾಗಾದರೆ ಏನು ಮಾಡಬಹುದು.
ಸಂವಹನದ ಪ್ರಮುಖ ಅಂಶವೆಂದರೆ ಆಲಿಸುವಿಕೆ. ಯಾವುದೇ ವ್ಯಕ್ತಿಯ ಮಾತನ್ನು ಕೇಳಲು ಮನಸ್ಸು ಮೌನವಾಗಿರಬೇಕು. ಪ್ರತಿಕ್ರಿಯಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ನಿಜವಾದ ಆಲಿಸುವಿಕೆಯು ನಿಮಗೆ ಸಹಾಯ ಮಾಡುತ್ತದೆ. ನಂತರ ಮಾತನಾಡುವುದು ಅಗತ್ಯವೆಂದು ತೋರಿದರೆ, ನಿಮ್ಮ ಪದಗಳು ನಿಖರವಾದ ಶಕ್ತಿ ಮತ್ತು ತೀವ್ರತೆಯನ್ನು ಹೊಂದಿರುತ್ತವೆ.
ಪರಸ್ಪರ ಮಾತುಕತೆಯಲ್ಲಿ ದೇಹಗಳಿಗೆ ಎಷ್ಟು ವಯಸ್ಸಾಗಿದೆ ಎಂಬುದಕ್ಕಿಂತ ಮನಸ್ಸು ಎಷ್ಟು ಹೊಸತು ಎಂಬುದು ಬಹಳ ಮುಖ್ಯ.
ಜೊತೆಗೆ, ವಿಷಯಗಳ ಆದ್ಯತೆ ಮತ್ತು ಸಂವಹನ ನಡೆಸುತ್ತಿರುವ ವ್ಯಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ನೀವು ತೊಡಗಿಸಿಕೊಳ್ಳಲಿರುವ ವಿಷಯಗಳ ಅಗತ್ಯವನ್ನು ಪ್ರಶ್ನಿಸಿದರೆ ಹಲವು ಸಮಸ್ಯೆಗಳ ಹುಟ್ಟನ್ನೇ ತಡೆಯಬಹುದು.
ಇವಿಷ್ಟು ಎಲ್ಲಾ ಸದಸ್ಯರಿಗೂ ಸಂಬಂಧಿಸಿದ ಅವಿಭಕ್ತ ಕುಟುಂಬದ ಸಮಸ್ಯೆಗಳು ಮತ್ತು ಪರಿಹರಿಸಬಹುದಾದ ಸೂತ್ರಗಳು.
2. ಹಿರಿಯರು (ಅಜ್ಜ-ಅಜ್ಜಿ) ಗಮನಿಸಬೇಕಾದ ಅಂಶಗಳು:
ವಯಸ್ಸಾದ ಹಿರಿಯರಿಗೆ ಏನು ಮಾಡಬೇಕು, ಏನು ಮಾಡಬಾರದೆಂಬ ದುರಹಂಕಾರದ ಬುದ್ದಿವಾದ ಇದು ಎಂದು ದಯವಿಟ್ಟು ಅಂದುಕೊಳ್ಳಬೇಡಿ. ಕೂಡು ಕುಟುಂಬದ ಸಮಸ್ಯೆಗಳ ನಿರ್ಮೂಲನೆ ದೃಷ್ಟಿಯಿಂದ ಈ ವಿಷಯಗಳನ್ನು ಹೇಳಬೇಕಾಗಿದೆ.
ಅ. ಅಧಿಕಾರ ಮತ್ತು ಜವಾಬ್ಧಾರಿಗಳ ಹಂಚಿಕೆ:
ಇಂದಿಗೂ ಅವಿಭಕ್ತ ಕುಟುಂಬದ ಬಹುತೇಕ ಎಲ್ಲಾ ಅಧಿಕಾರ ಹಾಗೂ ಮುಖ್ಯ ಜವಾಬ್ಧಾರಿಗಳು ಹಿರಿಯರ ಕೈಯಲ್ಲೇ ಇರುತ್ತದೆ. ಇದರಿಂದಾಗಿ ಸಣ್ಣ-ಪುಟ್ಟ ವಿಚಾರಗಳಿಗೂ ಕುಟುಂಬದ ಕಿರಿಯರು ಅವರನ್ನೇ ಅವಲಂಬಿಸಬೇಕಾಗುತ್ತದೆ.
ಕೂಡು ಕುಟುಂಬದಲ್ಲಿ, “ಸ್ವಾತಂತ್ರ್ಯದ ಕೊರತೆ” ಎನ್ನುವ ದೊಡ್ಡ ಸಮಸ್ಯೆಗೆ ಹಿರಿಯರು ಎಲ್ಲಾ ಅಧಿಕಾರ ಹಾಗೂ ಜವಾಬ್ಧಾರಿಗಳನ್ನು ತಮ್ಮಲ್ಲೇ ಉಳಿಸಿಕೊಂಡಿರುವುದು ಕಾರಣವಾಗಿದೆ.
ಅಪಾಯದ ಅಂಚಿನಲ್ಲಿರುವ ಭಾರತದ ಅವಿಭಕ್ತ ಕುಟುಂಬಗಳ ಮೌಲ್ಯಗಳನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ವಿಚಾರವನ್ನು ವಿವರಿಸುವ ಇಂಗ್ಲಿಷ್ ಲೇಖನವೊಂದರಲ್ಲಿ ಭಸಂತ್ ಎಂಬ ಅವಿಭಕ್ತ ಕುಟುಂಬದ ಹಿರಿಯರೊಬ್ಬರು ಹೇಳಿದ ಮಾತನ್ನು ಉಲ್ಲೇಖಿಸಲಾಗಿದೆ. ಅದು ಹೀಗಿದೆ;
“ಇಂದಿನ ಯುಗದಲ್ಲಿ, ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ಅಸಾಂಪ್ರದಾಯಿಕವೆಂದು ಪರಿಗಣಿಸಬಹುದು ಮತ್ತು ಆಧುನಿಕ ಸಂಬಂಧಗಳು, ಹೆಚ್ಚುತ್ತಿರುವ ಉದ್ವಿಗ್ನತೆಗಳು, ಸಂಗಾತಿಗಳ ನಡುವೆ ಬೆಳೆಯುತ್ತಿರುವ ಅಂತರಗಳು ಮತ್ತು ವೈಶಿಷ್ಟ್ಯಪೂರ್ಣ ಸಂಬಂಧಗಳ ಸವಾಲುಗಳ ನಡುವೆ ಹೆಚ್ಚು ಮುಕ್ತ ಮತ್ತು ಉದಾರವಾದ ಮಾದರಿಯನ್ನು ಸಮರ್ಥವಾದ ಕುಟುಂಬ ಪರಿಹಾರವಾಗಿ ಅನ್ವೇಷಿಸಬೇಕು. “
ಹಾಗಂದ ಮಾತ್ರಕ್ಕೆ ಹಿರಿಯರು ತಮ್ಮ ಎಲ್ಲಾ ಅಧಿಕಾರ ಹಾಗೂ ಜವಾಬ್ಧಾರಿಗಳನ್ನು ತೊರೆದು ಮನೆಯ ಮೂಲೆಗೆ ಅಥವಾ ವೃದ್ದಾಶ್ರಮ ಸೇರಬೇಕು ಎಂದರ್ಥವೇ? ಖಂಡಿತಾ ಅಲ್ಲ. ಕೆಲವು ವಿಚಾರಗಳನ್ನು ಗಮನಿಸಿ ಕಾರ್ಯರೂಪಕ್ಕೆ ತರಬೇಕಷ್ಟೆ.
- ಆಡಳಿತಾತ್ಮಕವಾಗಿ ತಮ್ಮ ಸಾಮರ್ಥ್ಯ ಮತ್ತು ಚುರುಕುತನವನ್ನು ನಿರಂತರವಾಗಿ ಗಮನಿಸುವುದು.
- ತಮ್ಮ ದೌರ್ಬಲ್ಯಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ಮತ್ತು ಅದನ್ನು ಸರಿದೂಗಿಸಲು ಕಿರಿಯರ ಸಹಾಯ ಪಡೆಯುವುದು.
- ಅಧಿಕಾರ ಹಂಚಿಕೊಳ್ಳುವ ಮಾತ್ರಕ್ಕೆ ತಮ್ಮ ಸ್ವಾಭಿಮಾನ ಅಥವಾ ಮೂಲಭೂತ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು.
ಹೀಗೆ ಕುಟುಂಬದ ವರ್ತಮಾನ ಮತ್ತು ಭವಿಶ್ಜ್ಯದ ದೃಷ್ಟಿಯಿಂದ ತಮ್ಮಲ್ಲಿರುವ ಅಧಿಕಾರ ಮತ್ತು ಜವಾಬ್ಧಾರಿಗಳಲ್ಲಿ ಹೇಗೆ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬ ಆಲೋಚನೆಯನ್ನು ಮೊದಲು ಹಿರಿಯರು ಮಾಡಿದರೆ ಈ ಪ್ರಕ್ರಿಯೆಗಳು ಸುಸೂತ್ರವಾಗುತ್ತವೆ.
ಇಲ್ಲವಾದರೆ ಕಿರಿಯರು ನಾನಾ ರೀತಿಯ ಇಕ್ಕಟ್ಟಿನ ಪರಿಸ್ಥಿತಿಗೆ ಒಳಗಾಗಿ ಅನಾವಶ್ಯಕ ಮಾನಸಿಕ ಒತ್ತಡಗಳಿಗೆ ಒಳಪಡಬೇಕಾಗುತ್ತದೆ.
ಇನ್ನು ಮನೆಯೊಳಗಿನ ಪೂರ್ಣ ಚಿತ್ರಣ ಅರಿಯದ ಸಮಾಜ ಮೊದಲು ನಿಲ್ಲುವುದೇ ಹಿರಿಯರ ಪರವಾಗಿ. ಅಷ್ಟು ಸಾಲದು ಎಂಬಂತೆ, ನ್ಯಾಯಯುತವಾಗಿ, ನೈತಿಕವಾಗಿ, ಮತ್ತು ಪ್ರಾಮಾಣಿಕರಾಗಿದ್ದರೂ, ಕಿರಿಯರು ಸರಿಯಿಲ್ಲ ಎಂದು ಗುರುತಿಸಲ್ಪಟ್ಟು ಸಮಾಜದಿಂದ ಹಲವಾರು ರೀತಿಯ ಅನವಶ್ಯಕ ಬುದ್ಧಿಮಾತುಗಳನ್ನು ಕೇಳಬೇಕಾಗುತ್ತದೆ.
ಆ. ಮುಂದಿನ ನಾಯಕರ ತಯಾರಿ:
ಕಂಪೆನಿಗಳಲ್ಲಾಗಿರಲಿ ಅಥವಾ ಕುಟುಂಬಗಳಲ್ಲಾಗಿರಲಿ, ಅಧಿಕಾರ ಹಾಗೂ ಜವಾಬ್ಧಾರಿಗಳ ಹಂಚಿಕೆಯ ಹಿಂದಿನ ಮುಖ್ಯ ಉದ್ದೇಶವೇ ಭವಿಷ್ಯಕ್ಕೆ ಉತ್ತಮ ನಾಯಕರನ್ನು ಸಿದ್ದಪಡಿಸುವುದು.
ಮನೆ ಹೊರಗಿನ ವ್ಯಾವಹಾರಿಕ ವಿಷಯಗಳಲ್ಲಿರಬಹುದು ಅಥವಾ ಅಡುಗೆ ಮನೆಯೊಳಗಿನ ವಿಚಾರಗಳಾಗಿರಬಹುದು, ಹೇಳಿದ ಕೆಲಸ ಅಚ್ಚುಕಟ್ಟಾಗಿ, ತಾವು ಅಂದುಕೊಂಡಂತೆ ನಡೆದರೆ ಹಿರಿಯರಿಗೆ ಕಿರಿಯರು ಬಲು ಪ್ರಿಯರು. ಒಂದುವೇಳೆ ಎಡವಟ್ಟಾದರೆ ಕುಟುಂಬದಲ್ಲಿ ಕೋಲಾಹಲ ತಪ್ಪಿದ್ದಲ್ಲ.
ಏರುಪೇರಾಗುವ ಪ್ರೀತಿಯ ಭಾವನೆಗಳು ಮತ್ತು ಅವುಗಳ ಪ್ರಭಾವಗಳನ್ನು ಸರಿಪಡಿಸಿಕೊಳ್ಳುವುದೂ ಇಲ್ಲಿನ ಮತ್ತೊಂದು ಮುಖ್ಯ ಸವಾಲು.
ಇದರಿಂದಾಗಿಯೇ ಹೆಚ್ಚಿನ ಅವಿಭಕ್ತ ಕುಟುಂಬಗಳಲ್ಲಿ ಸಮಸ್ಯೆಗಳನ್ನು ಪೂರ್ಣವಾಗಿ ನಿರ್ಮೂಲನೆ ಮಾಡಲು ಜನ ಒದ್ದಾಡುವುದು. (ಎಂದ ಮಾತ್ರಕ್ಕೆ, ಕಿರಿಯರು ಯಾವಾಗಲೂ ಶುಭಗರೆಂದಲ್ಲ. ಈ ವಿಚಾರಕ್ಕೆ ಆಮೇಲೆ ಬರೋಣ)
ಯಶಸ್ವೀ ಕೂಡು ಕುಟುಂಬದಲ್ಲಿ ನಾಯಕತ್ವದ ಹಂಚಿಕೆ ಮತ್ತು ಅದಕ್ಕಾಗಿ ಸದಸ್ಯರನ್ನು ಪ್ರೋಸ್ತಾಹಿಸುವಾಗ ಹಿರಿಯರು ಅನೇಕ ಅಂಶಗಳನ್ನು ಪರಿಗಣಿಸುತ್ತಾರೆ.
- ನಾಯಕರನ್ನು ಸಿದ್ಧಪಡಿಸುವಲ್ಲಿ ಹಿರಿಯರು ಕೇವಲ ತಮ್ಮ ವೈಯಕಿಕ ಇಚ್ಚಿಯನ್ನೊಳಗೊಂಡ ಭೇದ-ಭಾವಗಳನ್ನು ತೋರದೆ ಕುಟುಂಬದ ಒಳಿತು-ಕೆಡುಕುಗಳನ್ನು ಮೊದಲು ಪರಿಗಣಿಸುವುದು.
- ಸದಸ್ಯರಲ್ಲಿ ನಾಯಕತ್ವದ ಅರ್ಹತೆ ಮತ್ತು ಆಸಕ್ತಿಯನ್ನು ಪರೀಕ್ಷಿಸುವುದು.
- ಸ್ವತಹಾ ಜವಾಬ್ಧಾರಿಗಳನ್ನು ನಿಭಾಯಿಸುವ ಪ್ರಾರಂಭ ಹಂತದಲ್ಲಿ ಕಿರಿಯರಿಂದಾಗುವ ತಪ್ಪುಗಳನ್ನು ಜಾಣ್ಮೆಯಿದೆ ನಿಭಾಯಿಸಿ ಅದು ಮರುಕಳಿಸದಂತೆ ಅವರಿಗೆ ಸಲಹೆ ನೀಡುವುದು.
ಹೀಗೆ ನಾಯಕತ್ವದ ಬದಲಾವಣೆಯಲ್ಲಿ ಹೆಚ್ಚು ಸಂಘರ್ಷಗಳಿಲ್ಲದೆ ಭವಿಷ್ಯದ ಸಮಸ್ಯೆಗಳನ್ನು ಮೊದಲೇ ಅಂದಾಜಿಸಿ ಮುನ್ನಡೆಯುವುದು ಉತ್ತಮ ನಾಯಕರಾದ ಹಿರಿಯರ ಪರಿಣತಿಗಳಲ್ಲೊಂದಾಗಿದೆ.
ಇ. ಸಂಸ್ಕೃತಿ ಮತ್ತು ಆಚರಣೆಗಳಿಗೆ ಸರಿಯಾದ ದಾರಿ ತೋರಿಸಿ:
ಗದರಿಸಿ ಅಥವಾ ಒತ್ತಾಯಪೂರ್ವಕವಾಗಿ ಹಿರಿಯರು ಕಿರಿಯರಿಂದ ಮಾಡಿಸುವ ಆಚರಣೆಗಳಿಂದ ಅಥವಾ ಪಾಲಿಸುವ ಸಂಸ್ಕೃತಿಗಳಿಂದ ಪ್ರಯೋಜನವೇನು?
ಹಿಂದಿನ ಕಾಲಕ್ಕೆ ಇದು ಸರಿಹೋಗುತ್ತಿತ್ತಾದರೂ, ಪ್ರಸ್ತುತ ಹಾಗೂ ಭವಿಷ್ಯದ ಅವಿಭಕ್ತ ಕುಟುಂಬದ ದೃಷ್ಟಿಯಿಂದ ಇದು ಸೂಕ್ತವಲ್ಲ. ಏಕೆಂದರೆ ಇದು ಕೇವಲ ಸಮಸ್ಯೆಗಳ ನಿರ್ಮೂಲನೆಗೆ ಅಡ್ಡಿಯಾಗುವುದು ಮಾತ್ರವಲ್ಲದೆ, ಕಿರಿಯರ ಮನದಲ್ಲಿ ದ್ವೇಷವನ್ನೂ ಹೆಚ್ಚಿಸಬಹುದು.
ಸೋಶಿಯಲ್ ಮೀಡಿಯಾ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಬಳಸುವ ಈ ಕಾಲದಲ್ಲಿ ಹೆಚ್ಚಿನ ಜನರ ಮನಸ್ಸು ತಾರ್ಕಿಕ ಉತ್ತರ ಅಥವಾ ವಿವರಣೆಯನ್ನು ಬಯಸುತ್ತದೆ.
ಹಾಗಾಗಿ, ಸಂಸ್ಕೃತಿ ಮತ್ತು ಆಚರಣೆಗಳ ವಿಷಯದಲ್ಲೂ ದೊಡ್ಡ ಕುಟುಂಬದ ಹಿರಿಯರು ಕಿರಿಯರಿಗೆ ವೈಜ್ಞಾನಿಕ ವಿವರಣೆ ಸಹಿತ ಪಾಲನೆಗೆ ಸಲಹೆ ನೀಡುವುದು ಸೂಕ್ತ. ಒಂದು ವೇಳೆ ತಮಗೆ ತಿಳಿಯದಿದ್ದ ಪಕ್ಷದಲ್ಲಿ, ಅದನ್ನು ಕಿರಿಯರೆದುರು ಪ್ರಾಮಾಣಿಕವಾಗಿ ಒಪ್ಪಿಕೊಂಡು, ಸರಿಯಾದ ಮೂಲಗಳಿಂದ ಪ್ರಯೋಜನ ಮತ್ತು ಅಪ್ರಯೋಜನಗಳ ಸಹಿತ ಈ ವಿಚಾರಗಳನ್ನು ಅರಿಯಲು ಪ್ರೋತ್ಸಾಹಿಸುವುದು ಉತ್ತಮ. ಆ ಕಲಿಕೆ ಅವರನ್ನು ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡುತ್ತದೆ.
ಇವಿಷ್ಟು ಅವಿಭಕ್ತ ಕುಟುಂಬದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಅಜ್ಜ-ಅಜ್ಜಿಯರ ಸ್ಥಾನದಲ್ಲಿರುವ ಹಿರಿಯರು ಗಮನಿಸಬೇಕಾದ ಅಂಶಗಳು.
ಈ ಕುರಿತು ನಿಮ್ಮ ಅಭಿಪ್ರಾಯವೇನು? ಪೂರ್ಣವಾಗಿ ಪೋಸ್ಟ್ ಓದಿದ ನಂತರ ಕಾಮೆಂಟ್ ಮಾಡಲು ಮರೆಯದಿರಿ.
3. ಕಿರಿಯರು (ಅಜ್ಜ-ಅಜ್ಜಿಯ ಮಕ್ಕಳು) ಗಮನಿಸಬೇಕಾದ ಅಂಶಗಳು:
ಅವಿಭಕ್ತ ಕುಟುಂಬದಲ್ಲಿ ಈ ಹಂತದ ಸ್ಥಾನಗಳು ಮಧ್ಯವರ್ತಿಗಳ ಪಾತ್ರಗಳಂತೆ ಎಂದರೆ ತಪ್ಪಾಗದು. ಕಾರಣ, ಇವರು ತಮ್ಮ ತಂದೆ-ತಾಯಿ (ಎಂದರೆ ಕುಟುಂಬದಲ್ಲಿ ಅಜ್ಜ-ಅಜ್ಜಿ) ಮತ್ತು ತಮ್ಮ ಮಕ್ಕಳ ನಡುವೆ ಅನೇಕ ವಿಚಾರಗಳನ್ನು ಸರಿದೂಗಿಸುವುದರ ಜೊತೆಗೆ ಅದೆಷ್ಟೋ ಜಂಜಾಟಗಳಲ್ಲೂ ಪಾಲ್ಗೊಳ್ಳಬೇಕಾಗುತ್ತದೆ.
ಅ. ಅಧಿಕಾರ ಮತ್ತು ಜವಾಬ್ಧಾರಿಗಳ ಸರಿಯಾದ ನಿರ್ವಹಣೆ:
ಅಧಿಕಾರವಿಲ್ಲ, ಸ್ವಾತಂತ್ರ್ಯವಿಲ್ಲ, ಅಥವಾ ತಮ್ಮ ಮೇಲೆ ನಂಬಿಕೆ ಇಲ್ಲ ಎಂಬ ಅಂಶಗಳನ್ನು ಮುಂದಿಟ್ಟು ಕಿರಿಯ ಸದಸ್ಯರು ದೊಡ್ಡ ಕುಟುಂಬದ ಸಮಸ್ಯೆಗಳನ್ನು ಗುರುತಿಸಿ ಹೇಳುವುದೇನೋ ಸರಿ. ಆದರೆ ಅದರ ಜೊತೆಗೆ ಈ ವಿಚಾರದಲ್ಲಿ ತಮ್ಮನ್ನು ತಾವು ಅವಲೋಕಿಸಿಕೊಳ್ಳುವ ಕೂಡು ಕುಟುಂಬದ ಕಿರಿಯ ಸದಸ್ಯರು ಎಷ್ಟಿರಬಹುದು?
ಹೇಳಿ. ಸಂಬಂಧದಲ್ಲಿ ಅಧಿಕಾರದ ಪರಿಕಲ್ಪನೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ಅಧಿಕಾರವು ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕುಟುಂಬದ ಹಿರಿಯ ಸದಸ್ಯರ ಸಲಹೆ-ಸೂಚನೆಗಳನ್ನು ನೀವು ಅನುಸರಿಸಬೇಕಾಗುವುದು ಮತ್ತು ಕೆಲವು ಸಂದರ್ಭಗಳಲ್ಲಿ, ನೀವು ನಿಮ್ಮ ಮಕ್ಕಳನ್ನು ಅಧಿಕೃತವಾಗಿ ಸರಿ ದಾರಿಯಲ್ಲಿ ಬೆಳೆಸುವುದು ಅಥವಾ ಅಪಾಯಗಳಿಂದ ರಕ್ಷಿಸುವುದು.
ಇನ್ನು, ನಿಮ್ಮ ಜೀವನದಲ್ಲಿ ಸ್ವಾತಂತ್ರ್ಯಕ್ಕೆ ಯಾವ ಸ್ಥಾನವಿದೆ? ಅವಿಭಕ್ತ ಕುಟುಂಬದಲ್ಲಿ ಸ್ವಾತಂತ್ರದ ನಿಮ್ಮ ವ್ಯಾಖ್ಯಾನವೇನು?
ಅದು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದೇ? ಅದು ಬಲವಂತದಿಂದ ಮಾಡಿಸಲ್ಪಡುವ ಕ್ರಿಯೆಗಳಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿದೆಯೇ?
ಬಹುಷಃ, ಪ್ರಾಮಾಣಿಕವಾಗಿ ತಮ್ಮನ್ನು ತಾವು ಹಾಗೂ ಅಗತ್ಯಕ್ಕೆ ತಕ್ಕಂತೆ ಇತರರನ್ನು ಪ್ರಶ್ನಿಸುವ ಕಲೆಯೇ ಸ್ವಾತಂತ್ರ್ಯದ ಆರಂಭವಿರಬಹುದು.
ಏನಂತೀರಿ?
ಆ. ಸಂಬಂಧಗಳನ್ನು ಸಮತೋಲನದಿಂದ ನಿಭಾಯಿಸುವುದು:
ಸದಸ್ಯ ಸಾಗರದಂತಿರುವ ದೊಡ್ಡ ಕುಟುಂಬದಲ್ಲಿ ಎಲ್ಲಾ ಸಂಬಂಧಗಳನ್ನು ಜಾಣ್ಮೆಯಿಂದ ನಿಭಾಯಿಸುವುದು ಒಂದು ಲೋಟ ನೀರು ಕುಡಿದಷ್ಟು ಸುಲಭವಲ್ಲ ಎಂಬುದನ್ನಂತೂ ಒಪ್ಪಬೇಕು.
ಆರೂ ಬದಿಗಳಲ್ಲಿ ಸರಿಯಾದ ಬಣ್ಣಗಳನ್ನು ಹೊಂದಿಸುವ ರೂಬಿಕ್ಸ್ ಕ್ಯೂಬ್, ಸರಿಯಾದ ಜಾಗದಲ್ಲಿ ಸರಿಯಾದ ಅಂಕೆಗಳನ್ನು ತುಂಬುವ ಸುಡೋಕು, ಅಥವಾ ಪದಬಂಧದ ಆಟಗಳನ್ನು ನೋಡಿರುವಿರಿ ತಾನೇ? ಕೂಡು ಕುಟುಂಬದಲ್ಲಿದ್ದುಕೊಂಡು ಸಂಬಂಧಗಳನ್ನು ನಿಭಾಯಿಸುವುದೂ ಹಾಗೆಯೇ ಕಷ್ಟಕರ ಸಂಗತಿ.
ದೊಡ್ಡ ಕುಟುಂಬದ ಈ ಸಮಸ್ಯೆಯ ನಿವಾರಣೆಗೆ ಸಂಬಂಧಗಳನ್ನು “ಮೊದಲ ವೃತ್ತ” ಮತ್ತು “ಎರಡನೇ ವೃತ್ತದ ಸಂಬಂಧಗಳು” ಎಂದು 2 ಭಾಗಗಳಾಗಿ ವಿಂಗಡಿಸಬಹುದು.
- ಮೊದಲ ವೃತ್ತದ ಸಂಬಂಧಗಳು: ಇದು ದೈಹಿಕ ಮಾತ್ರವಲ್ಲದೆ ಮಾನಸಿಕವಾಗಿ ಪರಸ್ಪರ ಆತ್ಮೀಯತೆ ತೋರುವ ಸಂಬಂಧಗಳ ವೃತ್ತ ಎನ್ನಬಹುದು. ಪದೇ ಪದೇ ಭೇಟಿಯಾಗುವುದು, ಅಗತ್ಯಗಳಿಗೆ ನೆರವಾಗುವುದು, ಗುಣಮಟ್ಟದ ಸಮಯ ವಿನಿಯೋಗ – ಇವುಗಳು ಈ ವೃತ್ತದ ಮಾನದಂಡಗಳು. ಹಾಗಾಗಿ ನಿಖಟ ಸ್ನೇಹಿತರನ್ನೂ ಈ ಮೊದಲ ಆಪ್ತ ವೃತ್ತದ ಸಂಬಂಧಗಳಿಗೆ ಸೇರಿಸಿಕೊಳ್ಳಬಹುದು.
- ಎರಡನೇ ವೃತ್ತದ ಸಂಬಂಧಗಳು: ಮೊದಲ ವೃತ್ತದೊಳಗೆ ಸೇರ್ಪಡೆಯಾಗದ ಸಂಬಂಧಗಳು ಇಲ್ಲಿರುತ್ತವೆ. ಅಪರೂಪಕ್ಕೆ ಭೇಟಿಯಾಗುವ ದೂರದ ನೆಂಟರಿಷ್ಟರು, ಹಿತೈಷಿಗಳು, ಇತ್ಯಾದಿ.
ಇನ್ನು ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಗಳ ಅಗತ್ಯವಿಲ್ಲದಿದ್ದರೂ ಹಾಲಿನಂತಾ ಸಂಸಾರಕ್ಕೆ ಹುಳಿ ಹಿಂಡಲು ಆಗೊಮ್ಮೆ-ಈಗೊಮ್ಮೆ ಪ್ರತ್ಯಕ್ಷವಾಗುವ ಸಂಬಂಧಿ ಮತ್ತು ಸ್ನೇಹಿತರನ್ನು ಯಾವ ವೃತ್ತದಲ್ಲಿ ಸೇರಿಸಿಕೊಳ್ಳಬೇಕು ಅಥವಾ ಹೊರಗಿಡಬೇಕು ಎಂಬುದು ನಿಮಗೆ ಬಿಟ್ಟಿದ್ದು
ನೆನಪಿಡಿ. ಈ ರೀತಿಯ ವಿಭಜನೆ ಕೇವಲ ನಿರ್ವಹಣೆ ಮತ್ತು ಸಂಬಂಧಗಳ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವುದಕ್ಕಾಗಿಯೇ ಹೊರತು, ದ್ವೇಷ, ಅಸೂಯೆ, ಅಥವಾ ಇನ್ನಿತರ ಕಾರಣಗಳಿಂದ ಸಂಬಂಧಗಳಲ್ಲಿ ಅನವಶ್ಯಕ ಬೇಧ-ಭಾವಗಳನ್ನು ಮೂಡಿಸಿ ಸಮಸ್ಯೆಗಳನ್ನು ಹೆಚ್ಚಿಸುವುದಕ್ಕಲ್ಲ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಎಲ್ಲರಿಗೂ ಎಲ್ಲಾ ಸಮಯದಲ್ಲಿ, ಎಲ್ಲಾ ಪರಿಸ್ಥಿತಿಗಳಲ್ಲಿ ಎಲ್ಲಾ ಸಂಬಂಧಿಗಳೊಡನೆ ಒಂದೇ ರೀತಿಯಾಗಿ ಬೆರೆಯಲು ಸಾಧ್ಯವಿಲ್ಲ.
ಇ. ಸ್ವಯಂ ಅಭಿವೃದ್ಧಿಯನ್ನು ಪರಿಗಣಿಸಿ:
ನಿಸ್ಸಂದೇಹವಾಗಿ, ನಿಮ್ಮ ಅಭಿವೃದ್ಧಿಯನ್ನು ವ್ಯಾಖ್ಯಾನಿಸಲು ಜನರು ಬಳಸುವ ಮಾನದಂಡಗಳೆಂದರೆ –
- ನೀವು ಹೇಗೆ ಕಾಣುತ್ತೀರಿ
- ನೀವು ಏನು ಧರಿಸುತ್ತೀರಿ
- ನೀವು ಏನು ಹೊಂದಿದ್ದೀರಿ
- ನೀವು ಎಲ್ಲಿಗೆ ಹೋಗುತ್ತೀರಿ, ಇತ್ಯಾದಿ.
99.99% ಜನರು ನೀವು ಯಾರೆಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಬಾಹ್ಯವಾಗಿ ನೀವು ಹೇಗಿರುವಿರಿ ಮತ್ತು ನಿಮ್ಮ ಜೀವನ ಶೈಲಿ ಹೇಗಿದೆ ಎಂಬುದಕ್ಕೇ ಹೆಚ್ಚಿನವರು ಪ್ರಾಮುಖ್ಯತೆ ನೀಡುತ್ತಾರೆ.
ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಕೂಡು ಕುಟುಂಬದ ಸಮಸ್ಯೆಗಳ ಜಂಜಾಟದಲ್ಲಿ ಸದಸ್ಯರು ಮರೆತು ಹೋಗುವ ಅಥವಾ ಕಡೆಗಣಿಸುವ “ಸ್ವಯಂ ಅಭಿವೃದ್ಧಿಯ” ಅಡಿಪಾಯದ ಬಗ್ಗೆ.
- ಆರೋಗ್ಯದ ಕಡೆ ಗಮನ: ಅವಿಭಕ್ತ ಕುಟುಂಬದ ಒತ್ತಡಗಳನ್ನು ನಿಭಾಯಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವೇನಲ್ಲ. ಆದರೂ, ನಿತ್ಯ ಜೀವನದಲ್ಲಿ ದೇಹ ಮತ್ತು ಮನಸ್ಸು ಒಂದು ಹೊರೆ ಅನಿಸದಷ್ಟರ ಮಟ್ಟಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ.
- ರಚನಾತ್ಮಕ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು: ಸಮಸ್ಯೆಗಳಿಂದ ತ್ವರಿತ ಮುಕ್ತಿಗಾಗಿ ಸೋಶಿಯಲ್ ಮೀಡಿಯಾ ಸ್ಕ್ರೋಲ್ ಮಾಡೋದು ಎಲ್ಲರ ಹವ್ಯಾಸವಾಗಿದೆ. ಇಲ್ಲಿ ನಕಲಿ ಪೋಸ್ಟ್ ಹಾಗೂ ಅನಗತ್ಯ ಹೋಲಿಕೆಗಳಿಗೆ ಬಲಿಯಾಗೋರು ಇದ್ದಾರೆ, ಸೋಶಿಯಲ್ ಮೀಡಿಯಾವನ್ನು ಸಂಬಂಧಗಳ ನಿರ್ವಹಣೆಗೆ, ವೃತ್ತಿಯ ಭಾಗವಾಗಿ ಜಾಣ್ಮೆಯಿಂದ ಬಳಸಿ ಸ್ವಯಂ ಅಭಿವೃದ್ಧಿ ಹೊಂದುವವರೂ ಇದ್ದಾರೆ.
ಸೋಶಿಯಲ್ ಮೀಡಿಯಾ ನನ್ನ ವೃತ್ತಿಯ ಭಾಗವಾದ್ದರಿಂದ ಮತ್ತು ಈ ಬಗ್ಗೆ ಒಬ್ಬ ಸಾಮಾನ್ಯ ಬಳಕೆದಾರರಿಂದ ಹೆಚ್ಚಿನ ವಿಚಾರ ತಿಳಿದುದರಿಂದ ಈ ಉದಾಹರಣೆ ತೆಗೆದುಕೊಂಡೆ. ಏಕೆಂದರೆ ಇದು ಹಲವರಿಗೆ ಬಿಸಿ ತುಪ್ಪದಂತಾಗಿದೆ. ಉಗುಳೋದೂ ಅಲ್ಲ, ನುಂಗೋದೂ ಅಲ್ಲ, ಎಂಬಂತೆ.
ನೀವು ಬೇಕಿದ್ದರೆ ಬೇರೆ ಹವ್ಯಾಸ, ಹಠ-ಚಟಗಳನ್ನು ಹಾಗೂ ಕುಟುಂಬದ ಮೇಲಿನ ಅವುಗಳ ಪರಿಣಾಮವನ್ನು ಗಮನಿಸಬಹುದು.
ಈ. ಮಕ್ಕಳ ಕಡೆಗೆ ವಿಶೇಷ ಗಮನ ಹರಿಸುವುದು:
ಮಕ್ಕಳ ವಿಚಾರದಲ್ಲಿ ಅದೆಷ್ಟೋ ಸಮಸ್ಯೆಗಳು ಅವಿಭಕ್ತ ಕುಟುಂಬಗಳಲ್ಲಿ ಕಂಡುಬರುತ್ತವೆ.
ಅಳುವ ಮಗುವಿನ ಧ್ವನಿಯಿಂದ ತೊಡಗಿ ಬೆಳೆವ ಮಕ್ಕಳ ತುಂಟತನದವರೆಗೂ ಸಹಜ ಮತ್ತು ಅಸಹಜ ಎಂಬ ವಿಷಯಗಳ ವ್ಯತ್ಯಾಸಗಳನ್ನು ಪರಿಗಣಿಸದೆ ಸದಸ್ಯರು ಕಿತ್ತಾಡುವುದನ್ನು ನೀವು ಕಂಡಿರಬಹುದು. ಕೆಲವೊಮ್ಮೆ ಬೆಳೆವ ಮಕ್ಕಳ ವಯಸ್ಸಿಗೂ ಮೀರಿದ ವರ್ತನೆಯಿಂದ ಸಮಸ್ಯೆಗಳು ಇನ್ನಷ್ಟು ಕೆಟ್ಟ ಪರಿಣಾಮಗಳಿಗೂ ಎಡೆಕೊಡಬಹುದು.
ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವ ಕುರಿತ ಇಂಗ್ಲಿಷ್ ಲೇಖನವೊಂದರಲ್ಲಿ ಈ ರೀತಿ ಉಲ್ಲೇಖಿಸಿದ್ದಾರೆ;
“ಅವಿಭಕ್ತ ಕುಟುಂಬಗಳಲ್ಲಿ ಸಾಮಾನ್ಯವಾಗಿ ಪೋಷಕರಿಗೆ ಕಡಿಮೆ ಕೆಲಸ ಎಂದರ್ಥ. ಆದರೆ ಅತಿಯಾದ ಟೀಕೆ, ಏಕಪಕ್ಷೀಯ ನಿರ್ಧಾರ, ಆಹಾರ ಮತ್ತು ದೈನಂದಿನ ಮಗುವಿನ ಪಾಲನೆ ಕಾರ್ಯಗಳ ಬಗ್ಗೆ ಒಮ್ಮತದ ಕೊರತೆಯು ಸಂಘರ್ಷ ಮತ್ತು ಉದ್ವೇಗವನ್ನು ಉಂಟುಮಾಡಬಹುದು. ಇದು ಮಗುವಿನ ಮೇಲೆ ಪ್ರತಿಕೂಲ ಪರಿಣಾಮವನ್ನೂ ಬೀರಬಹುದು.”
ಸಾಮಾನ್ಯವಾಗಿ ಅಜ್ಜ-ಅಜ್ಜಿ ಅಥವಾ ಕುಟುಂಬದ ಇತರ ಸದಸ್ಯರು ಮಕ್ಕಳ ಜೊತೆ ಒಡನಾಡಿದರೂ ಈ ವಿಚಾರಗಳಲ್ಲಿ ತಂದೆ-ತಾಯಿಯ ಪಾತ್ರ ಮಹತ್ವದ್ದು.
- ಕುಟುಂಬದ ಹಿನ್ನಲೆ.
- ಮೌಲ್ಯಗಳು.
- ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಆಚಾರ-ವಿಚಾರಗಳ ವಿವರಣೆ.
- ಸಮತೋಲನದ ವರ್ತನೆಗಳನ್ನು ಅಳವಡಿಸಿಕೊಳ್ಳುವುದು.
- ಜೀವನಾನುಭವ ಸಹಿತ ಕುಟುಂಬ ಸದಸ್ಯರ ವಿಧ್ಯೆ ಮತ್ತು ವಿವಿಧ ವರ್ತನೆಗಳ ಹಿನ್ನಲೆ.
ಹೀಗೆ ಹಲವು ವಿಚಾರಗಳ ಕುರಿತು ಮಕ್ಕಳ ಜೊತೆ ಮುಕ್ತವಾಗಿ ಮಾತನಾಡಿ ಅಗತ್ಯ ಅರಿವನ್ನು ಹೊಂದುವಲ್ಲಿ ಅವರಿಗೆ ಸಹಕರಿಸಬೇಕಾಗುತ್ತದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):
ತೀರ್ಮಾನ:
ಇಷ್ಟೆಲ್ಲಾ ಅವಿಭಕ್ತ ಕುಟುಂಬದ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ಸೂತ್ರಗಳನ್ನು ವಿವರವಾಗಿ ನೋಡಿದ ನಂತರ ಈ ವಿಚಾರದಲ್ಲಿ ನಿಮಗೆ ಸರಿಯಾದ ಸ್ಪಷ್ಟತೆ ದೊರೆತಿದೆ ಎಂದು ಭಾವಿಸುತ್ತೇನೆ.
ಸಮಸ್ಯೆಗಳು ಶಾಶ್ವತವೇ ಅಥವಾ ಕ್ಷಣಿಕವೇ ಎಂಬುದು ಅವುಗಳಿಂದ ಹೊರಬರಬೇಕೆಂಬ ಬಯಕೆ, ಬದಲಾಗುತ್ತಿರುವ ಅವಿಭಕ್ತ ಕುಟುಂಬದ ಲಕ್ಷಣಗಳು, ಅನುಕೂಲ ಮತ್ತು ಅನಾನುಕೂಲಗಳು, ಚುರುಕಾದ ಸಂಹನ ಹೀಗೆ ಅನೇಕ ಅಂಶಗಳನ್ನು ಒಳಪಟ್ಟಿದೆ ಎಂದು ನಾವು ನೋಡಿದೆವು.
ಅಜ್ಜ-ಅಜ್ಜಿಯನ್ನು ಒಳಗೊಂಡ ಹಿರಿಯರು ಮತ್ತು ಅವರ ಮಕ್ಕಳು, ಮೊಮ್ಮಕ್ಕಳನ್ನು ಒಳಗೊಂಡ ಕಿರಿಯರು ಒಟ್ಟಾಗಿ ಪ್ರಯತ್ನಿಸಿದರೆ ಕೂಡು ಕುಟುಂಬದ ಬಹುತೇಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು.
ಈ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ.
ನಿಮ್ಮ ಕುಟುಂಬದ ಇತರ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಈ ಪೋಸ್ಟ್ ಶೇರ್ ಮಾಡುವ ಮೂಲಕ ಅವರ ಅಭಿಪ್ರಾಯಗಳನ್ನೂ ತಿಳಿದುಕೊಳ್ಳಿ.
ಸಂಬಂಧಗಳ ಬಗೆಗಿನ ಇನ್ನಷ್ಟು ವಿಚಾರಗಳಿಗೆ SharingShree ಕನ್ನಡದ ಇತರ ಪೋಸ್ಟ್ ಗಳನ್ನೂ ಮಿಸ್ ಮಾಡದೆ ಓದಿ.
Share ಮಾಡಿ!
ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.
ಲೇಖಕರು ಹಾಗೂ ಪ್ರಕಾಶಕರು
ಶ್ರೀನಿಧಿ. ಕೆ (Shreenidhi K)
ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.