ಪ್ರೀತಿಯ ಭಾವನೆಗಳು ವೇದನೆಗಳೇ ಎಂಬ ಚಿಂತನೆಯನ್ನು ಬಿಂಬಿಸುವ ಎಮಿಜಿಗಳನ್ನು ಹೊಂದಿರುವ ಚಿತ್ರ.

ಪ್ರೀತಿಯ ಭಾವನೆಗಳು ಏರುಪೇರಾಗುತ್ತಿವೆಯೇ? ಇಲ್ಲಿದೆ 6 ಪರ್ಯಾಯ ಹಾಗೂ 1 ನೇರ ದಾರಿ!

ನಾವಿಲ್ಲಿ ಪ್ರೀತಿಯ ಭಾವನೆಗಳು ಎನ್ನುತ್ತಿರುವುದರಲ್ಲಿ ಪ್ರೀತಿ ಎಂದರೆ ಒಬ್ಬಳು ಹುಡುಗಿಯ ಹೆಸರಲ್ಲ ಕಣ್ರೀ. ಹ ಹ ಹಾ…

ನಿರಂತರವಾಗಿ ಮೇಲೆ-ಕೆಳಗಾಗುವ ಪ್ರೀತಿಯ ಭಾವನೆಗಳು ಎಲ್ಲಾ ವಿಧದ ಸಂಬಂಧಗಳಲ್ಲಿ ಮಾಮೂಲು. ಅಂದರೆ, ಅದು ಕೇವಲ ಮೋಡಿ ಮಾಡುವ ಜೋಡಿ ಸಂಬಂಧಗಳಿಗೆ (Couple Relationship) ಸೀಮಿತವಲ್ಲ ತಾನೇ!.

ಸುಲಭ ಅನಿಸದಿದ್ದರೂ, ಸಂಬಂಧಗಳಲ್ಲಿ ಭಾವನೆಗಳ ಸಮತೋಲನ ಕಾಪಾಡಿಕೊಳ್ಳುವುದಂತೂ ಅನಿವಾರ್ಯ. ಸಂಶೋಧನೆಯ ಪ್ರಕಾರ ನಿಕಟ ಸಂಬಂಧಗಳಲ್ಲಿ ವ್ಯಕ್ತಿಗಳ ಅನ್ಯೂನ್ಯತೆಯ ವರ್ತನೆಗೂ ಭಾವನಾತ್ಮಕ ಬುದ್ದಿವಂತಿಕೆಗೂ ಸಂಬಂಧವಿದೆ.

ಹಾಗಾಗಿ, ಉಗುಳೋದೂ ಅಲ್ಲ, ನುಂಗೋದೂ ಅಲ್ಲ ಎಂಬ ಪರಿಸ್ಥಿತಿ ತರುವ ಬಿಸಿ ತುಪ್ಪದಂತಹಾ ಭಾವನೆಗಳ ಏರುಪೇರಿಗೆ ಮುಖ್ಯ ಕಾರಣಗಳ ಜೊತೆಗೆ ಪರಿಹಾರದ ದಾರಿಗಳನ್ನೂ ನೋಡೋಣ.

ರೆಡಿನಾ?

ವಿಷಯಗಳ ಅವಲೋಕನ:

ಪ್ರೀತಿಯ ಭಾವನೆಗಳು ಮುಳುವಾಗಲು ಕಾರಣಗಳೇನು?

ಪ್ರೀತಿಯ ಭಾವನೆಗಳು ಏರುಪೇರಾಗುವ 
ಮುಖಭಾವಗಳನ್ನು ಹೊಂದಿರುವ ಎಮೋಜಿಗಳ ಚಿತ್ರ ಕನ್ನಡ ವಾಕ್ಯವನ್ನೂ ಒಳಗೊಂಡಿದೆ.

ಕಾರಣ-ಪರಿಣಾಮಗಳ ಆಧಾರದಲ್ಲಿ ಎಲ್ಲಾ ರೀತಿಯ ಭಾವನೆಗಳು ಕೆಲಸ ನಿರ್ವಹಿಸುತ್ತವೆ. ಇದು ಪ್ರೀತಿ, ದ್ವೇಷ, ಅಸೂಯೆಗಳೆಂಬ ಭಾವನೆಯ ಎಲ್ಲಾ ವಿಧಗಳಿಗೂ ಅನ್ವಯಿಸುತ್ತದೆ.

ವೈಯಕ್ತಿಕವಾಗಿ ಒಬ್ಬ ವ್ಯಕ್ತಿಯ ಭಾವನೆಗಳು ಏರು-ಪೇರಾಗಲು ಅಸಂಖ್ಯಾತ ಕಾರಣಗಳಿರಬಹುದು. ಸಂಬಂಧಗಳ ದೃಷ್ಟಿಯಿಂದ ನೋಡುವುದಾದರೆ, ಕೆಲವು ಸಾಮಾನ್ಯ ಕಾರಣಗಳನ್ನು ಗುರುತಿಸಬಹುದು;

  • ಪರಿಮಿತ ಮತ್ತು ಅಪೂರ್ಣ ಮಾಹಿತಿಯ ಆಧಾರದಲ್ಲಿ ತಪ್ಪಾದ ಸಂಬಂಧಗಳನ್ನು ಯಶಸ್ವೀ ಸಂಬಂಧಗಳ ಉದಾಹರಣೆಯಾಗಿ ಪರಿಗಣಿಸಿ ಅವರಂತೆ ಬದುಕಲು ಯತ್ನಿಸುವುದು.
  • ಸಂಬಂಧದಲ್ಲಿ ಅಗತ್ಯ-ಅನಗತ್ಯಗಳ ನಡುವೆ ಅಂತರವಿಲ್ಲದೆ ವಿಷಯ, ವಸ್ತುಗಳು, ಅಥವಾ ಇನ್ನಿತರ ವಿಚಾರಗಳಲ್ಲಿ ಆದ್ಯತೆಯ ಕೊರತೆ.
  • ಸಂಬಂಧಿಕರಿಂದ ತಮ್ಮ ನಿರೀಕ್ಷೆ ಅಥವಾ ತಮ್ಮಿಂದ ಸಂಬಂಧಿಕರ ನಿರೀಕ್ಷೆ ಈಡೇರದಿರುವುದು.
  • ಬದಲಾಗುತ್ತಿರುವ ದೊಡ್ಡ ಕುಟುಂಬದ ಲಕ್ಷಣಗಳು ಮತ್ತು ಚಿಕ್ಕ ಕುಟುಂಬದ ಲಕ್ಷಣಗಳು.
  • ಮದುವೆಗೆ ಮನಸ್ಸಿಲ್ಲದ ಮಕ್ಕಳು ಹಾಗೂ ಪೋಷಕರ ಒತ್ತಾಯದ ಹಗ್ಗ-ಜಗ್ಗಾಟ.
  • ಪ್ರೀತಿ, ಭಾವನೆಗಳು ಎಂಬ ಪದಗಳನ್ನು ಪದೇ ಪದೇ ಬಳಸಿದರೂ ಅವುಗಳ ನಿಜಾರ್ಥವನ್ನು ಅರಿಯಲು ಸಾಧ್ಯವಾಗದಿರುವುದು.

ಈ ರೀತಿ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಬಹುಷಃ ಒಂದು ಲೇಖನ ಸಾಲದು ಅನಿಸುತ್ತೆ. ಅದೂ ಅಲ್ಲದೆ ಕೇವಲ ಕಾರಣಗಳ ಪಟ್ಟಿಯನ್ನು ತಯಾರಿಸುವ ಉದ್ದೇಶ ನಮ್ಮದಲ್ಲದ ಕಾರಣ ಪರಿಹಾರಗಳ ಕಡೆಗೂ ಗಮನ ಹರಿಸಬೇಕಾಗಿದೆ.

ಪ್ರೀತಿಯಲ್ಲಿ ಭಾವನೆಗಳನ್ನು ನಿಯಂತ್ರಿಸುವ ಪರ್ಯಾಯ ಮಾರ್ಗಗಳು (ಭಾಗ – 1):

ಸಂಬಂಧಗಳಲ್ಲಿ ಭಾವನಾತ್ಮಕ ಅಸಮತೋಲನವು ಸಾಮಾನ್ಯವಾಗಿದ್ದು ಪ್ರತಿಯೊಬ್ಬರೂ ಅದನ್ನು ಎದುರಿಸುತ್ತಾರೆ. ತಮ್ಮ ಭಾವನೆಗಳನ್ನು ನಿಯಂತ್ರಿಸಲು ಜನರು ವಿವಿಧ ವಿಧಾನಗಳು ಮತ್ತು ತಂತ್ರಗಳನ್ನು ಬಳಸುತ್ತಾರೆ. ಹಾಗಾಗಿ ಅವುಗಳನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು, ಪರಿಹಾರಗಳ ಸ್ವರೂಪ, ನಿಖರತೆ ಮತ್ತು ಶಾಶ್ವತತೆಯ ಆಧಾರದ ಮೇಲೆ ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸೋಣ.

ಭಾಗ 1 ರಲ್ಲಿ, ಸುಲಭವಾದ, ತಾತ್ಕಾಲಿಕ ಪ್ರಭಾವಗಳ ಒಂದು ರೀತಿಯ ಶಾರ್ಟ್‌ಕಟ್‌ ವಿಧಾನಗಳನ್ನು ನಾನು ನಿಮ್ಮೊಂದಿಗೆ ಚರ್ಚಿಸುತ್ತಿದ್ದೇನೆ.

ಎಲ್ಲಾ ವಿಧಾನಗಳನ್ನು ಎಚ್ಚರಿಕೆಯಿಂದ ಓದಿ. ಇದರಿಂದ ನಿಮಗೆ ಸೂಕ್ತವಾದದನ್ನು ಆಯ್ಕೆ ಮಾಡಬಹುದು.

ಪ್ರಾರಂಭಿಸೋಣವೇ;

1. ಭಾವನೆಗಳನ್ನು ಬದಲಾಯಿಸಲು ಯತ್ನಿಸುವುದು:

ಕೈಯಲ್ಲಿರುವ ಮೊಬೈಲ್ ನಲ್ಲಿ SharingShree ಕನ್ನಡದ ಲೋಗೋ ಜೊತೆಗೆ ಭಾವನೆಯ ಕುರಿತ ವ್ಯಾಖ್ಯೆ ಇರುವ ಚಿತ್ರ.

ಸಾಮಾನ್ಯವಾಗಿ, ಆತ್ಮೀಯತೆಗೆ ವಿರುದ್ಧವಾದ ಭಾವನೆಗಳು ಮೇಲೆದ್ದಾಗ ಅವುಗಳನ್ನು ತಡೆಯಲು ಅಥವಾ ಬಲಾತ್ಕಾರದಿಂದ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತದೆ.

ಇದಕ್ಕಾಗಿ “ನಾನು ಬಲಶಾಲಿ”, “ನಾನು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ”, ಇತ್ಯಾದಿ ಕೆಲವು ಸಕಾರಾತ್ಮಕ ಪದಗಳನ್ನು ತನ್ನ ಮನದಲ್ಲೇ ಹೇಳಿಕೊಳ್ಳಲಾಗುತ್ತದೆ.

ಪ್ರೇರಕ ಉಲ್ಲೇಖಗಳನ್ನು (Motivational Quotes) ಓದುವುದು ಮತ್ತು ಅದೇ ರೀತಿಯ ಜನರ ನೈಜ ಕಥೆಗಳನ್ನು ತಿಳಿದು ಅದರಂತೆ ಬದುಕಲು ಯತ್ನಿಸುವುದು, ಜನರು ತಮ್ಮ ಭಾವನೆಗಳನ್ನು ನಿರ್ವಹಿಸಲು ಮಾಡುವ ಕೆಲವು ಕೆಲಸಗಳಾಗಿವೆ.

ಗೌತಮ ಬುದ್ಧರ ಈ ಮಾತನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ –

“ಕೋಪವನ್ನು ಹಿಡಿದಿಟ್ಟುಕೊಳ್ಳುವುದು ವಿಷವನ್ನು ಕುಡಿದು ಇನ್ನೊಬ್ಬ ವ್ಯಕ್ತಿ ಸಾಯುವುದನ್ನು ನಿರೀಕ್ಷಿಸಿದಂತೆ”. –

ಸ್ನೇಹ-ಸೌಹಾರ್ದಗಳನ್ನು ಒಳಗೊಂಡ ಪ್ರೀತಿಯ ಭಾವನೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಭಾವನೆಗಳು ಸಂಬಂಧಗಳನ್ನು ಕಟ್ಟುವ ಬದಲು ಕೆಡಹುವ ಕಾರ್ಯ ಮಾಡುತ್ತವೆ.

Share 

2. ಆದ್ಯತೆಯ ಪ್ರಕಾರ ವಿಷಯಗಳನ್ನು ಬದಲಿಸುವುದು:

ಈ ಟ್ರಿಕ್ ಅನ್ನು ಸಾಕಷ್ಟು ಚೆನ್ನಾಗಿ ಬಳಸುವ ಜನರನ್ನು ನಾನು ಗಮನಿಸಿದ್ದೇನೆ.

ಸಂಬಂಧದಲ್ಲಿ ಅನೇಕ ಬಾರಿ ಭಾವನಾತ್ಮಕ ಏರಿಳಿತಗಳನ್ನು ಅನುಭವಿಸಿದ ನಂತರ ಪದೇ ಪದೇ ನಿಮ್ಮನ್ನು ತೊಂದರೆಗೊಳಗಾಗೀಸುವ ವಿಷಯಗಳನ್ನು ಸುಲಭವಾಗಿ ಗುರುತಿಸಬಹುದು. ನಂತರ ಪ್ರಾಮುಖ್ಯತೆ ಮತ್ತು ಗಂಭೀರತೆಯ ಆಧಾರದ ಮೇಲೆ ವಿಷಯಗಳಿಗೆ ಆದ್ಯತೆ ನೀಡಬಹುದು.

ನಿರ್ದಿಷ್ಟ ಸಮಸ್ಯೆಯ ಕಡೆಗಿರುವ ನಿಮ್ಮ ಭಾವನೆ ಯೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಇತರ ವ್ಯಕ್ತಿಯೊಂದಿಗೆ ವಾದದಲ್ಲಿ ಸಿಲುಕಿಕೊಂಡಿದ್ದೀರಿ ಎನ್ನೋಣ. ಅವನು/ಅವಳು ನೀವು ನೋಡಲು ಬಯಸುವ ರೀತಿಯ ಬಟ್ಟೆಗಳನ್ನು ಧರಿಸುವುದಿಲ್ಲ ಎಂಬುದು ವಾದದ ವಿಷಯ ಎನ್ನೋಣ. ಈಗ ಈ ವಿಷಯ ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಎಷ್ಟು ಮಹತ್ವದ್ದು ಎಂಬುದರ ಮೇಲೆ ನಿಮ್ಮ ಪ್ರೀತಿಯ ಭಾವನೆಗಳು ಎಷ್ಟು ಏರು-ಪೇರಾಗುತ್ತದೆ ಅಥವಾ ಬದಲಾಗೇ ಬಿಡುತ್ತದೆಯೇ ಎಂಬುದು ನಿರ್ಧರಿಸಲ್ಪಡುತ್ತದೆ.

SharingShree ಕನ್ನಡವು ಸಂಬಂಧದಲ್ಲಿ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು ಎಂಬ ಕುರಿತು ಲೇಖನವನ್ನು ಪೋಸ್ಟ್ ಮಾಡಿದೆ. ಅಲ್ಲಿ ನೀವು ಆದ್ಯತೆಗಳನ್ನು ಹೇಗೆ ಹೊಂದಿಸಬಹುದು ಎಂಬುದರ ಜೊತೆಗೆ ನಂಬಿಕೆ, ನಿರೀಕ್ಷೆಗಳು ಮತ್ತು ಇತರ ಭಾವನಾತ್ಮಕವಾಗಿ ಗೊಂದಲ ಸೃಷ್ಟಿಸುವ ಅಂಶಗಳನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಕಂಡುಕೊಳ್ಳಬಹುದು.

3. ಚಿಕ್ಕ ವಿರಾಮ ತೆಗೆದುಕೊಳ್ಳುವುದು:

ಮಾತುಕತೆಯಿಂದಾದ ಪ್ರೀತಿಯ ಭಾವನೆಗಳ ಏರಿತವನ್ನು ಸರಿಪಡಿಸಲು ವಿರಾಮಿಸುತ್ತಿರುವ ಮೂರು ವ್ಯಕ್ತಿಗಳ ಚಿತ್ರ.

ಕೆಲವೊಮ್ಮೆ ವಿಷಯಗಳನ್ನು ಬದಲಾಯಿಸಿದ ನಂತರವೂ ಭಾವನೆಗಳು ಮತ್ತು ಅವುಗಳಿಂದಾಗುವ ಸಮಸ್ಯೆಗಳು ಉಳಿಯುತ್ತವೆ. ಕಾರಣ ಪ್ರತಿಯೊಂದು ಸನ್ನಿವೇಶವನ್ನು ಒಂದೇ ರೀತಿಯ “ಸಮಸ್ಯೆ-ಹೊತ್ತ ಮನಸ್ಥಿತಿ” ಯಿಂದ ನೋಡುವ ಅಭ್ಯಾಸ. ತಿಳಿದೋ ತಿಳಿಯದೆಯೋ ನಾವು ಹಳೆಯ ಸಮಸ್ಯೆಗಳನ್ನು ಹೊಸ ಮತ್ತು ತಾಜಾ ಸಮಸ್ಯೆಗಳೊಂದಿಗೆ ಜೋಡಿಸಿ ಅವುಗಳ ದುಷ್ಪರಿಣಾಮಗಳನ್ನು ಇನ್ನಷ್ಟು ಹೆಚ್ಚಿಸುತ್ತೇವೆ.

ಅಂತಹ ಸಂದರ್ಭಗಳಲ್ಲಿ, ಅನಗತ್ಯ ಪದಗಳು ಅಥವಾ ಕ್ರಿಯೆಗಳ ಮೂಲಕ ಸಮಸ್ಯೆಗಳನ್ನು ಸಂಕೀರ್ಣಗೊಳಿಸುವುದಕ್ಕಿಂತ ಅವುಗಳ ಜಂಜಾಟದಿಂದ ಚಿಕ್ಕ ಹಾಗೂ ತಾತ್ಕಾಲಿಕ ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ.

ಇದು ಸಮಸ್ಯೆಗಳಿಗೆ ಹಿಂತಿರುಗಿದ ನಂತರ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಈ ರೀತಿಯ ವಿರಾಮವನ್ನು ಜಾಗ ಅಥವಾ ಅಂತರವೆಂದೂ ಕರೆಯಬಹುದು. ಇದರ ಪ್ರಾಮುಖ್ಯತೆಯನ್ನು ಇನ್ನೂ ಸರಳವಾಗಿ ಅರ್ಥಮಾಡಿಕೊಳ್ಳಲು ನೀವು ಈ ಲೇಖನವನ್ನೇ ಗಮನಿಸಬಹುದು. ಇಲ್ಲಿ ಪದಗಳ, ವಾಕ್ಯಗಳ ಹಾಗೂ ಪ್ಯಾರಾಗ್ರಾಫ್ ಗಳ ನಡುವಿನ ಅಂತರದ ಮಹತ್ವವೇನು?

ಗಮನಿಸಿದಿರಾ?

ಏನಂತೀರಿ?

4. ಆಪ್ತ ಸ್ನೇಹಿತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದು:

ಸ್ವಾಭಾವಿಕ ಮತ್ತು ಪ್ರಾಮಾಣಿಕ ಸ್ನೇಹದ ಕೊರತೆಯು ಅನೇಕ ಸಂಬಂಧಗಳಲ್ಲಿ ಪ್ರೀತಿಯ ಭಾವನೆಗಳ ಏರು-ಪೇರಿಗೆ ಅಥವಾ ಮಾಯವಾಗುವಿಕೆಗೆ ನೇರ ಕಾರಣ ಎನ್ನಬಹುದು.

ಆದ್ದರಿಂದ ಸಂಬಂಧಗಳಲ್ಲಿ ಸ್ನೇಹದ ಕೊರತೆಯಿದ್ದರೆ ಮೊದಲು ಅದನ್ನು ಭರಿಸಲು ಸಾಧ್ಯವೇ ಎಂಬುದಕ್ಕೆ ಪ್ರಯತ್ನಿಸಬೇಕು. ಇದಕ್ಕಾಗಿ ಇತರ ಆಪ್ತ ಸ್ನೇಹಿತರ ಸಹಾಯವನ್ನು ಪಡೆಯಬಹುದು.

ಇದನ್ನು ನಾವು ಈಗಾಗಲೇ ಮಾಡುತ್ತಿದ್ದೆವಲ್ಲಾ… ಸ್ನೇಹಿತರ ಜೊತೆ ಗಂಟೆಗಟ್ಟಲೆ ಮಾತನಾಡುತ್ತೇವೆ, ಚಾಟ್ ಮಾಡುತ್ತೇವೆ – ಎನ್ನುತ್ತೀರಾ? ಹೌದು ಎಂದಾದರೆ ಅಂತಹಾ ಮಾತುಕತೆಗಳಿಂದ ಅಥವಾ ಮೆಸೇಜ್ ವಿನಿಮಯಗಳಿಂದಾದ ಸಹಾಯವೆಷ್ಟು?

ಆಪ್ತ ಸ್ನೇಹಿತರಿಂದ ಭಾವನಾತ್ಮಕ ಸಹಾಯ ಪಡೆಯುವಾಗ ಇಂತಹಾ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಂಡಿದ್ದೀರಾ?;

  • ನಿಮ್ಮ ಸ್ನೇಹ ಹೆಸರಿಗಷ್ಟೇ ಆಪ್ತವೋ ಅಥವಾ ನಿಜವಾಗಿಯೂ ನೀವು ಪರಸ್ಪರರಿಗೆ ನೆರವಾಗುವ ಆಪ್ತ ಸ್ನೇಹಿತರೋ?
  • ಪರಸ್ಪರರಲ್ಲಿ ಗೌರವ ಮತ್ತು ಗೌಪ್ಯತೆಯ ಪ್ರಾಮುಖ್ಯತೆ ಎಷ್ಟಿದೆ?
  • ನಿಮ್ಮ ಸಮಸ್ಯೆಯಲ್ಲಿ ಮತ್ತು ಅದರಿಂದ ನಿಮ್ಮನ್ನು ಹೊರತರುವ ಆಸಕ್ತಿ ಅವರಿಗಿದೆಯೇ?
  • ಈ ವಿಚಾರದಲ್ಲಿ ನೀವು ಸಹಾಯ ಪಡೆವ ಸ್ನೇಹಿತರು ನಿಮ್ಮ ದೃಷ್ಟಿಕೋನದ ಜೊತೆಗೆ ಸಮಸ್ಯೆಯನ್ನು ಬೇರೆ ಬೇರೆ ದೃಷ್ಟಿಕೋನದಿಂದಲೂ ಗಮನಿಸಲು ಸಮರ್ಥರೇ?
  • ನಿಮ್ಮ ಸ್ನೇಹಿತರು ನಿಮ್ಮ ತಪ್ಪನ್ನು ಗುರುತಿಸಿ ಹೇಳಬಲ್ಲರೇ? ಅದನ್ನು ನೀವು ಒಪ್ಪಲು ತಯಾರಿರುವಿರೆ?
  • ಭಾವನೆಗಳಿಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳು ಅವರ ಗಮನಕ್ಕೆ ಬರುವುದರಿಂದ ಅವರ ಜೀವನದ ಮೇಲಾಗಬಹುದಾದ ಪರಿಣಾಮಗಳೇನು?

ಇಂತಹಾ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳುವುದರ ಬಹುದೊಡ್ಡ ಉಪಯೋಗ ಎಂದರೆ ಅದು ನಮ್ಮ ಸಂವಹನ ಕೌಶಲ್ಯವನ್ನು (Communication Skill) ಮತ್ತಷ್ಟು ಉತ್ತಮಗೊಳಿಸುತ್ತದೆ.

ಜೊತೆಗೆ, ಅನುಬಂಧವನ್ನು ಹೊಂದಿದ ಬಲಿಷ್ಠ ಸಂಬಂಧಗಳನ್ನು ಉಳಿಸಿ ಬೆಳೆಸುವಲ್ಲಿ ಒಳ್ಳೆಯ ಆಪ್ತ ಸ್ನೇಹಿತರು ಸಹಕರಿಸಬಲ್ಲರು.

5. ವಿಹಾರಕ್ಕೆ ಹೋಗಿ ಆರಾಮವಾಗಿ:

SharingShree ಕನ್ನಡದ ಸಂಸ್ಥಾಪಕರಾದ ಶ್ರೀನಿಧಿ ಕೆ ವಿಹಾರದ ಸಮಯದಲ್ಲಿ ಸಮುದ್ರವನ್ನು ವೀಕ್ಷಿಸುತ್ತಿರುವ ಫೋಟೋ.

ವಿಶಾಲವಾದ ಜಾಗವಿರುವ ಸ್ಥಳಕ್ಕೆ ನೀವು ಎಂದಾದರೂ ಹೋಗಿದ್ದೀರಾ?

ಗಿರಿಧಾಮ ಅಥವಾ ಕಡಲತೀರದಂತಹಾ ಸ್ಥಳಗಳ ವಿಶಾಲತೆಯ ಮುಂದೆ ನಮ್ಮ ಸಮಸ್ಯೆಗಳು ತುಂಬಾ ಚಿಕ್ಕದು ಎಂದು ಅನಿಸುತ್ತದೆ. ಆ ಕ್ಷಣದಲ್ಲಿ ಭಾವನೆಗಳು ಸ್ಥಿರವಾಗಿರುತ್ತವೆ ಅಥವಾ ಸ್ವಯಂ ನಿಯಂತ್ರಿಸಲ್ಪಡುತ್ತವೆ.

ನಾವು ಯಾವಾಗಲೂ ಬಹುತೇಕ ಒಂದೇ ರೀತಿಯ ಸಂದರ್ಭಗಳು ಮತ್ತು ಸಮಸ್ಯೆಗಳಿಂದ ಸುತ್ತುವರೆದಿದ್ದೇವೆ. ಆದ್ದರಿಂದ ಯಾವುದಾದರೂ ವಿಶಾಲ ಪ್ರದೇಶ – ಎಂದರೆ ತೆರೆದ ಆಕಾಶ ಲಭ್ಯವಿರುವ ಜಾಗದಲ್ಲಿ ಮನದ ಆಲೋಚನೆಗಳ ಓಡಾಟ ಕಡಿಮೆಯಾಗುತ್ತದೆ.

ಒಂದು ವೇಳೆ ಅಂತಹಾ ವಿಶಾಲವಾದ (ಪ್ರವಾಸೀ ತಾಣಗಳಂತಹಾ) ಪ್ರದೇಶಗಳಿಗೆ ಹೋಗಲು ಸಾಧ್ಯವಾಗದಿದ್ದಲ್ಲಿ, ಮನೆಯ ಮಹಡಿಯಂತಹಾ ಸುತ್ತುಮುತ್ತಲಿನ ಅವಕಾಶಗಳನ್ನೂ ಬಳಸಬಹುದು.

6. ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು:

ಗೊಂದಲದ ಭಾವನೆಗಳೊಂದಿಗೆ ಏನು ಮಾಡಬೇಕೆಂದು ತೋಚದಾಗ ಜನರ ಉಗುರು ಕಚ್ಚುವ ಅಭ್ಯಾಸ ಪ್ರದರ್ಶಿಸುವುದನ್ನು ನೀವೂ ನೋಡಿರಬಹುದು.

ಆ ಅಭ್ಯಾಸ ಉಗುರಿನ ತುದಿಯ ಧೂಳು ಅಥವಾ ಇನ್ನಾವುದೋ ಗಲೀಜನ್ನು ಹೊಟ್ಟೆಗೆ ಸಾಗಿಸುತ್ತದೆ. ಆದರೆ ಸಂಬಂಧಗಳಲ್ಲಿ ಭಾವನೆಗಳ ನಿರ್ವಹಣೆಗೆ ಎಷ್ಟು ಸಹಾಯಕ ಎಂಬುದಂತೂ ನನಗೆ ತಿಳಿದಿಲ್ಲ.

ನಿಮಗೆ?

ಉತ್ತಮ ಅಭ್ಯಾಸಗಳು ಭಾವನೆಗಳನ್ನು ನಿಯಂತ್ರಿಸುವಲ್ಲಿ ಅಥವಾ ನಿರ್ವಹಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಉದಾಹರಣೆಗೆ- ಭಾವನಾತ್ಮಕ ಸಮತೋಲನದಲ್ಲಿ ದೈಹಿಕ ಚಟುವಟಿಕೆಗಳ ಪಾತ್ರ ಮಹತ್ವದ್ದು. ಆದ್ದರಿಂದ, ಎಸ್ಕಲೇಟರ್‌ಗಳು ಅಥವಾ ಲಿಫ್ಟ್‌ಗಳ ಬದಲಿಗೆ ಸಾಧ್ಯವಾದಾಗಲೆಲ್ಲಾ ಮೆಟ್ಟಿಳುಗಳನ್ನು ಬಳಸುವುದು ಸರಳ ಮತ್ತು ಉತ್ತಮ ಅಭ್ಯಾಸವಾಗಿದೆ.

ದೈನಂದಿನ ಜೀವನದಲ್ಲಿ ಹೊಸ ಅಭ್ಯಾಸವನ್ನು ಸೇರಿಸುವುದು ಕಷ್ಟಕರವೆಂದೂ, ಅದಕ್ಕೆ ಸಾಕಷ್ಟು ಸ್ವಯಂ ನಿಯಂತ್ರಣದ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಆದರೆ, frontiersin.org ವೆಬ್ಸೈಟ್ “How to Form Good Habits? A Longitudinal Field Study on the Role of Self-Control in Habit Formionat“ ಎಂಬ ಸಂಶೋಧನಾ ವರದಿಯಲ್ಲಿ ಅಭ್ಯಾಸ ಬೆಳೆಸುವ ಪ್ರಕ್ರಿಯೆಯಲ್ಲಿ ಸ್ವಯಂ ನಿಯಂತ್ರಣ ಸಾಮರ್ಥ್ಯದ ನೇರ ಪಾತ್ರವನ್ನು ನಾವು ಕಂಡುಕೊಂಡಿಲ್ಲ ಎಂದು ಹೇಳಿದೆ.

ಇವಿಷ್ಟು ಪ್ರೀತಿಯ ಭಾವನೆಗಳು ಏರುಪೇರಾದರೆ ಅನುಸರಿಸಬಹುದಾದ ಸರಳ ಹಾಗೂ ತ್ವರಿತ ಉಪಾಯಗಳು.

ಭಾವನೆಗಳ ಸಮತೋಲನ ಕಾಯ್ದುಕೊಳ್ಳುವ ನೇರ ದಾರಿ (ಭಾಗ – 2):

ಇಲ್ಲಿಯವರೆಗೆ ನೀವು ಮತ್ತು ನಾನು ಆತ್ಮೀಯ ಸಂಬಂಧದಗಳಲ್ಲಿ ಭಾವನೆಗಳನ್ನು ನಿಭಾಯಿಸುವ ಕೆಲವು ಸಾಮಾನ್ಯ ವಿಧಾನಗಳನ್ನು ಗಮನಿಸಿದೆವು.

ಭಾಗ – 2 ರಲ್ಲಿ, ನಾವು ಭಾವನಾತ್ಮಕ ಅಡಚಣೆಯ ಮೂಲಕ್ಕೆ ಇಳಿಯಲಿದ್ದೇವೆ. ಇದು ದೀರ್ಘಾವಧಿಯ ವಿಧಾನವಾಗಿದೆ. ಹಾಗಾಗಿ ಈ ಹಂತದಲ್ಲಿ ಆಸಕ್ತಿ, ವಿಚಾರಣಾ ಮನೋಭಾವ, ಪರಿಹಾರಗಳನ್ನು ಕಂಡುಕೊಳ್ಳುವ ಕುತೂಹಲ ಮತ್ತು ಸ್ವಲ್ಪ ತಾಳ್ಮೆಯ ಅಗತ್ಯವಿರುತ್ತದೆ.

ಇಲ್ಲಿ ಭಾವನೆಗಳನ್ನು ತ್ವರಿತವಾಗಿ ನಿಯಂತ್ರಿಸುವ ತಾತ್ಕಾಲಿಕ ತಂತ್ರಗಳನ್ನು ಹುಡುಕುವ ಬದಲು, ನಾವು ಭಾವನೆಯನ್ನೇ ಪ್ರಶ್ನಿಸಲಿದ್ದೇವೆ. ಅದು ಏನು ಮತ್ತು ಏಕೆ ಉದ್ಭವಿಸುತ್ತದೆ? ಎಂಬ ಮೂಲಭೂತ ಪ್ರಶ್ನೆಗೆ ಉತ್ತರವನ್ನೂ ಹುಡುಕಲಿದ್ದೇವೆ.

ನೀವು ಉತ್ಸುಕರಾಗಿದ್ದೀರಾ?

ಭಾವನೆ ಮತ್ತು ಭಾವುಕತೆ ಎಂದರೇನು? ಅವು ಹೇಗೆ ಉದ್ಭವಿಸುತ್ತವೆ?

ಹಂತ- 1: ಗ್ರಹಿಕೆ (Perception)

ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮದ (ಪಂಚೇಂದ್ರಿಯಗಳು) ಮೂಲಕ ಹೊರ ಜಗತ್ತನ್ನು ಅಥವಾ ದೇಹವನ್ನು ಗ್ರಹಿಸುವುದು.

ಹಂತ- 2: ಆಲೋಚನೆ ಮತ್ತು ಚಿಂತನೆ (Thought and Thinking)

ಇಂದ್ರಿಯಗಳ ಅಥವಾ ದೇಹದ ಮೂಲಕ ಗ್ರಹಿಸಲ್ಪಟ್ಟ ವಿಷಯಕ್ಕೆ ಮೆದುಳಿನಿಂದಾಗುವ ನೆನಪಿನ ಪ್ರತಿಕ್ರಿಯೆಯನ್ನು ಆಲೋಚನೆ ಎನ್ನುತ್ತೇವೆ.

ಹಂತ- 3: ಭಾವನೆ (Feeling)

ಭಾವನೆಯು ಆಲೋಚನೆಗಳನ್ನು ಅನುಸರಿಸುವ ದೇಹದ ಸೂಕ್ಷ್ಮ ಸಂವೇದನೆಯಾಗಿದೆ.

ಹಂತ- 4: ಭಾವುಕತೆ (Emotion)

ಭಾವುಕತೆ ಎಂದರೆ ಭಾವನೆಗಳನ್ನು ಅನುಸರಿಸುವ ಜೀವ ಶಕ್ತಿಯ ಚಲನೆಯಾಗಿದೆ.

ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆಯೇ?

ಚಿಂತೆಯಿಲ್ಲ. ಭಾವನೆ ಮತ್ತು ಭಾವುಕತೆಯನ್ನು ಸುಲಭವಾಗಿ ಅರ್ಥೈಸಲು ಒಂದು ಉದಾಹರಣೆಯ ಸಹಾಯ ಪಡೆಯೋಣ.

ಭಾವುಕ ಉದಾಹರಣೆ:

"ನಲಿವಾ ಗುಲಾಬಿ ಹೂವೆ" ಎಂಬ ಕನ್ನಡ ಹಾಡಿನ ಮೊದಲ ಸಾಲು ಹಾಗೂ ಗುಲಾಬಿ ಹೂಗುಚ್ಛವನ್ನು ಹಿಡಿದು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತಿರುವ ಮಹಿಳೆಯ ಚಿತ್ರ.

ಈಗ ಉದಾಹರಣೆಗಾಗಿ ಗುಲಾಬಿ ಹೂವನ್ನು ಆಯ್ದುಕೊಳ್ಳೋಣ. ಏಕೆಂದರೆ ಇದು ಪ್ರೀತಿಯ ಭಾವನೆಗಳು ಮತ್ತು ಸಂಬಂಧಗಳ ವಿಚಾರದಲ್ಲಿ ಪದೇ ಪದೇ ಪ್ರತ್ಯಕ್ಷವಾಗುವ ಮಧ್ಯವರ್ತಿಯಲ್ಲವೇ!

ನೀವು ಬೇಕಿದ್ದರೆ ಉದಾಹರಣೆಯ ವಸ್ತುವನ್ನು ಬದಲಾಯಿಸಬಹುದು. ಇಲ್ಲಿ ಪ್ರಕ್ರಿಯೆಯನ್ನು ಗಮನಿಸುವುದು ಮುಖ್ಯವಾಗಿದೆ.

ಅ. ಗ್ರಹಿಕೆ (Perception):

ಗುಲಾಬಿಯ ಗ್ರಹಿಕೆಯಲ್ಲಿ ಮೂರು ಇಂದ್ರಿಯಗಳ ಪಾತ್ರವಿದೆ. ಅದರ ರೂಪ ಮತ್ತು ಬಣ್ಣಗಳನ್ನು ಒಳಗೊಂಡ ದೃಶ್ಯ ಸೌನ್ದರ್ಯವನ್ನು ಕಣ್ಣು ನೋಡುತ್ತದೆ. ಸುವಾಸನೆಯನ್ನು ಮೂಗು ಸ್ವಾದಿಸುತ್ತದೆ. ಸ್ಪರ್ಶದ ಮೂಲಕ ಗುಲಾಬಿಯ ಮೃದುತ್ವವನ್ನೂ ನಾವು ಗ್ರಹಿಸಬಹುದು.

ಆ. ಆಲೋಚನೆ ಮತ್ತು ಚಿಂತನೆ (Thought and Thinking):

ನಾವು ಸಂವೇದನೆಯ ಮೂಲಕ ಗ್ರಹಿಸುವ ವಿಷಯಗಳಿಗೆ ಶೇಖರಿಸಿಟ್ಟ ನೆನಪಿನಿಂದ ಮೆದುಳು ನೀಡುವ ಪ್ರತಿಕ್ರಿಯೆಯನ್ನೇ ಆಲೋಚನೆ ಎನ್ನಾಲಾಯಾಗುತ್ತದೆ.

ನಮ್ಮ ಗುಲಾಬಿಯ ಉದಾಹರಣೆಯನ್ನು ಗಮನಿಸಿ. ನೀವು ಗುಲಾಬಿಯನ್ನು ಗ್ರಹಿಸಿದ ನಂತರ ಏನಾಗುತ್ತದೆ? “ವಾವ್” ಎಂಬ ಪ್ರತಿಕ್ರಿಯೆ ಮೊದಲು ಮನದಲ್ಲಿ ಮೂಡುತ್ತದೆ (ನಂತರ ಬಾಯಲ್ಲಿ ಹೇಳುವಿರಿ). ಮನಸ್ಸಿನ (ಮೆದುಳಿನ) ಅಂತಹಾ ಒಂದು ಪದದ ಪ್ರತಿಕ್ರಿಯನ್ನು ಆಲೋಚನೆ (Thought) ಎನ್ನುತ್ತೇವೆ.

ಮುಂದುವರಿದು, ನೀವು ಗುಲಾಬಿಯನ್ನು “ಅದು ಎಷ್ಟು ಸುಂದರವಾಗಿದೆ!”, “ಅಯ್ಯೋ… ಎಷ್ಟು ಆಕರ್ಷಕ, ನನ್ನಿಷ್ಟದ ಬಣ್ಣ”, ಅಥವಾ “ಆ ಬಣ್ಣ ನಂಗಿಷ್ಟ ಇಲ್ಲ”, “ಇನ್ನೂ ಸ್ವಲ್ಪ ದೊಡ್ಡದಾಗಿರಬೇಕಿತ್ತು” ಎಂದೆಲ್ಲಾ ಮನದಲ್ಲಿ ಹೇಳಿಕೊಂಡರೆ ಆ ಪದಗಳ ಸರಣಿಯನ್ನು ಚಿಂತನೆ (Thinking) ಎನ್ನುತ್ತೇವೆ..

ಇ. ಭಾವನೆ (Feeling):

ಭಾವನೆ ಎಂದರೇನು ಎಂದು Google Search ಅಥವಾ ಬೇರೆ ಇಂಟರ್ನೆಟ್ ಮಾಧ್ಯಮಗಳ ಮೂಲಕ ಹುಡುಕಿದರೆ ಸ್ಪಷ್ಟ ಉತ್ತರ ಸಿಗುತ್ತಾ?

ಚೆಕ್ ಮಾಡಿ ನೋಡಿ ನಿಮ್ಮ ಉತ್ತರವನ್ನು ನಂತರ ಕಾಮೆಂಟ್ ಮಾಡಿ.

ನಮ್ಮ ಗುಲಾಬಿಯ ಉದಾಹರಣೆಗೆ ಹಿಂತಿರುಗಿ. “ಇದು ಎಷ್ಟು ಸುಂದರವಾಗಿದೆ!” ಎಂದು ನೀವು ಹೇಳಿದರೆ ನಂತರ ಏನಾಗುತ್ತದೆ?

ಗುಲಾಬಿಯನ್ನು ವಿವರಿಸಲು ನೀವು ಬಳಸುವ (ಚಿಂತನೆ) ಪದಗಳನ್ನು ಅನುಸರಿಸುವ ಹಿತವಾದ ಅಥವಾ ಅಹಿತವಾದ ಸೂಕ್ಷ್ಮ ಸಂವೇದನೆಗಳು ದೇಹದಲ್ಲಿ ಗ್ರಹಿಸಲ್ಪಡುತ್ತದೆ. ಅಂತಹಾ ಸೂಕ್ಷ್ಮ ಸಂವೇದನೆಗಳನ್ನೇ ನಾವು ಭಾವನೆಗಳು ಎನ್ನುತ್ತೇವೆ.

ಈ. ಭಾವುಕತೆ (Emotion):

ಇಂಗ್ಲಿಷ್ ನಲ್ಲಿ ಬಳಸುವ Emotion ಪದವು Energy in motion ಎಂಬ ಅರ್ಥವನ್ನು ಸೂಚಿಸುತ್ತದೆ. ಅಂದರೆ ಚಲನೆಯಲ್ಲಿರುವ ಶಕ್ತಿ ಎಂದು ಅರ್ಥೈಸಬಹುದು.

ಭಾವುಕತೆಯ ತೀವ್ರತೆ ಗ್ರಹಿಕೆ, ಆಲೋಚನೆ, ಮತ್ತು ಭಾವನೆಯ ತೀವ್ರತೆಗಳನ್ನೂ ಅವಲಂಬಿಸಿರುತ್ತದೆ. ಒಂದುವೇಳೆ ಮೊದಲ 3 ಹಂತಗಳು ಇಲ್ಲವಾದರೆ ಭಾವುಕತೆ ಎಂಬುದೂ ಇಲ್ಲ. ಇದನ್ನು ಪರೀಕ್ಷಿಸಲು ಗಾಢ ನಿದ್ದೆಯ ಸ್ಥಿತಿಯನ್ನು ನೆನೆಯಬಹುದು.

ಪುನಹಾ ನಮ್ಮ ಗುಲಾಬಿಯ ವಿಚಾರಕ್ಕೆ ಬರೋಣ.

  • ನೀವು ಹೂವುಗಳ ಬಗೆಗೆ ವಿಶೇಷ ಆಸಕ್ತಿ ಹೊಂದಿದ್ದಲ್ಲಿ ಗುಲಾಬಿಯ ಗ್ರಹಿಕೆಯ ನಂತರ “ಆಹಾ”, “ಒಹೋ” ಎಂಬ ಹಿತಕರ ಆಲೋಚನೆ ಹಾಗೂ ಭಾವನೆಯ ಪ್ರತಿಕ್ರಿಯೆಯನ್ನು ಹಿಂಬಾಲಿಸುವ ಜೀವಶಕ್ತಿಯು ಭಾವುಕತೆ ಎನಿಸುತ್ತದೆ. ಇದು ಮುಖದಲ್ಲಿ ಮಂದಹಾಸವನ್ನೂ ತರಬಲ್ಲದು.
  • ಮತ್ತೊಂದೆಡೆ ಗುಲಾಬಿಯಲ್ಲಿ ಮುಳ್ಳಿರುವಂತೆ, ಗುಲಾಬಿಯ ಜೊತೆ ಸಂಬಂಧಗಳ ಯಾವುದಾದರೂ ಕಹಿ ಘಟನೆಯ ನೆನಪು ಮೆದುಳಿನಲ್ಲಿ ಆಳವಾಗಿ ಬೀರೂರಿದ್ದರೆ, ಆಲೋಚನೆ ಹಾಗೂ ಭಾವನೆಯನ್ನು ಹಿಂಬಾಲಿಸುವ ಶಕ್ತಿಯ ಚಲನೆ ಅಹಿತ ಅನಿಸುತ್ತದೆ. ಕೆಲವರಿಗೆ ಅಳುವೂ ಬರಬಹುದು.
  • ಇನ್ನು ಗುಲಾಬಿ ಬೆಳೆಗಾರರಲ್ಲಿ, ಮಾರಾಟಗಾರರಲ್ಲಿ, ಮತ್ತು ಖರೀದಿಸುವವರಲ್ಲಿ ಭಾವುಕತೆಯು ಭಿನ್ನವಾಗಿ ವ್ಯಕ್ತವಾಗುತ್ತದೆ.

ಹೀಗೆ ಸಂದರ್ಭಗಳಿಗೆ ತಕ್ಕಂತೆ ಭಾವುಕತೆ ವ್ಯಕ್ತವಾಗುವ ರೀತಿಯಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಸ್ವತಹಾ ಭಾವುಕತೆಯಲ್ಲಿ ಪಾಸಿಟಿವ್ ಅಥವಾ ನೆಗೆಟಿವ್ ಎಂಬ ಭಿನ್ನತೆಯಿಲ್ಲ. ಅದೇನಿದ್ದರೂ ಗುರುತಿಸುವ ಆಲೋಚನೆಗಳ ಕುತಂತ್ರ ಎನ್ನಬಹುದು.

ಭಾವನೆಗಳೊಂದಿಗೆ ವ್ಯವಹರಿಸುವ ನೇರ ಮಾರ್ಗ:

ಮೇಲಿನ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದರೆ, ನೀವು ಈಗಾಗಲೇ ಭಾವನೆಗಳನ್ನು ಮತ್ತು ಭಾವುಕತೆಯನ್ನು ನೇರವಾಗಿ ಎದುರಿಸಲು ಪ್ರಾರಂಭಿಸಿದ್ದೀರಿ ಎಂದರ್ಥ.

ಇನ್ನು ನಿತ್ಯ ಜೀವನದಲ್ಲಿ ಇದನ್ನು ಪ್ರಾಕ್ಟಿಕಲ್ ಆಗಿ ಹೇಗೆ ಅಳವಡಿಸಿಕೊಳ್ಳಬಹುದೆಂದು ನೋಡೋಣ.

ಗಮನಿಸುವಿಕೆ:

ರಸ್ತೆಯಲ್ಲಿ ವಾಹನ ಮತ್ತು ಜನರನ್ನೊಳಗೊಂಡ ಪರಿಸರವನ್ನು ವೀಕ್ಷಿಸುವುದರ ಜೊತೆಗೆ ತನ್ನ ಭಾವನೆಗಳ ಚಲನೆಯನ್ನೂ ಗಮನಿಸುತ್ತಿರುವ ವ್ಯಕ್ತಿಯ ಚಿತ್ರ.

ಸಂಬಂಧಗಳಲ್ಲಿ ಇಂದ್ರಿಯಗಳ ಮೂಲಕ ವಿಷಯ ಗ್ರಹಿಕೆ ಅನಿವಾರ್ಯ ಮತ್ತು ಅದು ಸಾಮಾನ್ಯ ಸಂಗತಿ. ಆದ್ದರಿಂದ ಭಾವನೆಗಳ ಗುಣಮಟ್ಟವು ನೀವು ಪರಿಸ್ಥಿತಿಯನ್ನು ಹೇಗೆ ಗುರುತಿಸುತ್ತೀರಿ ಮತ್ತು ಅರ್ಥೈಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ನಿತ್ಯಜೀವನದ ಜಂಜಾಟದಲ್ಲಿ ಭಾವನೆ ಮತ್ತು ಭಾವುಕತೆಯ ಚಲನೆಯನ್ನು ನೇರವಾಗಿ ಗಮನಿಸಿ ಗುರುತಿಸುವುದು ಎಲ್ಲರಿಗೂ ಸುಲಭವಾಗದಿರಬಹುದು. ಏಕೆಂದರೆ ಮನಸ್ಸು ಈಗಾಗಲೇ ಸರಿ ಮತ್ತು ತಪ್ಪುಗಳ ಪರಿಕಲ್ಪನೆಗಳಿಂದ ತುಂಬಿದೆ. ಅಂತಹ ಮನಸ್ಥಿತಿಯಲ್ಲಿ, ನೀವು ಸ್ಪಷ್ಟವಾಗಿ ಏನನ್ನೂ ಗಮನಿಸಲು ಸಾಧ್ಯವಿಲ್ಲ.

ಹೇ… ಮುಂದಿನ ಬಾರಿ ನೀವು ಮಧುರ ಸಂಗೀತ/ಹಾಡುಗಳನ್ನು ಕೇಳುವಾಗ ನಿಮ್ಮ ಮನಸ್ಸನ್ನು ಗಮನಿಸಿ. ನೀವು ಹಾಡುಗಳನ್ನು ಹೇಗೆ ಗ್ರಹಿಸುತ್ತೀರಿ? ಮೌನ ಮನಸ್ಸಿನಿಂದಲೇ ಅಥವಾ ಅಲ್ಲಿ ವರ್ಣರಂಜಿತ ಕಲ್ಪನೆಗಳ ಚಲನಚಿತ್ರ ನಡೆಯುತ್ತಿದೆಯೇ? ಜೊತೆಗೆ ಆ ಸಮಯದಲ್ಲಿ ನಿಮ್ಮ ಭಾವನೆಗಳು ಹೇಗಿವೆ ಎಂಬುದನ್ನೂ ಗಮನಿಸಲು ಯತ್ನಿಸಬಹುದು.

ವ್ಯಾಖ್ಯಾನ ಮತ್ತು ಕ್ರಿಯೆ:

ಬಣ್ಣಗಳ ಹೆಸರನ್ನು ಹೇಳುವ ಕನ್ನಡ ಪದಗಳು ಸ್ವತಹಾ ಬೇರೆ ಬಣ್ಣಗಳಲ್ಲಿರುವ ಚಿತ್ರ ಗ್ರಹಿಕೆ, ಆಲೋಚನೆ, ಭಾವನೆ, ಮತ್ತು ಭಾವುಕತೆಯ ಚಲನೆಯನ್ನು ಗಮನಿಸಲು ಸಹಕರಿಸುತ್ತದೆ.

ಅಡಚಣೆಯಿಲ್ಲದ ಗಮನದಿಂದ ನಮಗೆ ಭಾವನೆಯ ಚಲನೆ ಮತ್ತು ಪುನರಾವರ್ತನೆಯ ಅರಿವಾಗುತ್ತಾ ಹೋಗುತ್ತದೆ. ನಂತರ ಆಲೋಚನೆ ಮತ್ತು ಚಿಂತನಗಳು ಅನಾವಶ್ಯಕವಾಗಿ ಭಾವನೆಗಳ ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ.

ಹಾಗಾಗಿ ಇಲ್ಲಿ ಆಲೋಚನೆಯ ಹಂತ ಮುಖ್ಯ.

ಮೇಲಿನ ಚಿತ್ರದಲ್ಲಿ ಬಣ್ಣಗಳ ಹೆಸರನ್ನು ಓದಿದಿರಾ? ಗ್ರಹಿಕೆ ಮತ್ತು ಗುರುತಿಸುವಿಕೆಯ ಹಂತದ ಪ್ರಭಾವವನ್ನು ಅರಿಯಲು ಅದು ಸಹಕಾರಿ.

ಮುಂದಿನ ಹಂತವಾಗಿ, ಕೆಲಸ ಕಾರ್ಯಗಳು ಚಿಂತನೆಯ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಮೊದಲು ಬೇಕಾಬಿಟ್ಟಿಯಾಗಿ ಹರಿಯುತ್ತಿದ್ದ ಭಾವನೆಗಳು ಈ ಪ್ರಕ್ರಿಯೆಯನ್ನು ನೇರವಾಗಿ ಗಮನಿಸುವವರಲ್ಲಿ ಹೆಚ್ಚು ಅಡ್ಡ ಪರಿಣಾಮಗಳಿಲ್ಲದಂತೆ ವರ್ತಿಸುತ್ತದೆ.

ಉದಾಹರಣೆಗೆ;

ಪ್ರೀತಿಯ ಭಾವನೆ ಹಾಳಾಗಬಾರದು ಎಂದು ಎಲ್ಲಾ ಸಂಧರ್ಭಗಳಲ್ಲಿ ಪೋಷಕರು ಮಕ್ಕಳು ಹೇಳಿದಂತೆ ಕೇಳಿ ಅವರ ತಾಳಕ್ಕೆ ತಕ್ಕಂತೆ ಕುಣಿದರೆ ಏನಾದೀತು?

Share 

ವೃತ್ತಿಪರ ಪರಿಣಿತರ ಸಹಾಯ ಪಡೆಯುವುದು:

ಈ ಬ್ಲಾಗ್ ಪೋಸ್ಟ್ ಓದುಗರಿಗೆ ಸಹಾಯ ಮಾಡುವ ಉತ್ತಮ ಉದ್ದೇಶದಿಂದ ಬರೆಯಲ್ಪಟ್ಟಿದೆಯಾದರೂ, ಇದು ವೈದ್ಯಕೀಯ ಸಲಹೆಯಲ್ಲ.

ನೀವು ಯಾವುದೇ ಗಂಭೀರ ಭಾವನಾತ್ಮಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದರೆ, ನಿಮ್ಮ ನಿರ್ದಿಷ್ಟ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಗದರ್ಶನ ನೀಡಲು ವೈದ್ಯಕೀಯವಾಗಿ ಮತ್ತು ಕಾನೂನುಬದ್ಧವಾಗಿ ಅರ್ಹ ವೃತ್ತಿಪರರ ಸಹಾಯವನ್ನು ಪಡೆದುಕೊಳ್ಳಿ.

ಭಾಗ- 1 ಮತ್ತು ಭಾಗ- 2 ರಲ್ಲಿ ಯಾವುದು ಸೂಕ್ತ?

ಇದು ಅವರವರ ವೈಯಕ್ತಿಕ ಅಗತ್ಯ, ಆಸಕ್ತಿ, ಅರ್ಥೈಸುವ ಸಾಮರ್ಥ್ಯ, ಜೀವನ ಘಟ್ಟ – ಹೀಗೆ ಅನೇಕ ವಿಚಾರಗಳಿಗೆ ಒಳಪಟ್ಟಿದೆ. ಇಲ್ಲಿ ಗಮನಿಸಬೇಕಾದ ಕೆಲವು ಪ್ರಮುಖ ವಿಷಯಗಳಿವೆ;

  • ಭಾಗ 2 ದೀರ್ಘಾವಧಿಯ ವಿಧಾನವಾಗಿದೆ. ರೆಂಬೆ-ಕೊಂಬೆಗಳಂತ ಲಕ್ಷಣಗಳನ್ನು ಬದಲಾಯಿಸುವ ಬದಲು ಇದು ಭಾವನೆಗಳ ಕಾರಣ – ಎಂದರೆ ಬೇರುಗಳ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ.
  • ಇಲ್ಲಿ ತಮ್ಮನ್ನು ತಾವು ಅರಿಯುವುದರ ಜೊತೆಗೆ ಇತರರನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಪ್ರತಿಯೊಬ್ಬರಲ್ಲೂ ಭಾವನೆಗಳ ತೊಳಲಾಟಕ್ಕೆ ಕಾರಣಗಳು ಬೇರೆಯಾದರೂ ಪ್ರಕ್ರಿಯೆ ಒಂದೇ ಆಗಿದೆ.
  • ಭಾವನೆಗಳನ್ನು ಸರಿದೂಗಿಸುವ ನೇರ ಮಾರ್ಗವು ಅನೇಕ ವಿಧದ ನೆಂಟರನ್ನು ಹಾಗೂ ಸಂಬಂಧಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಸಂಬಂಧಗಳಲ್ಲಿ ಕ್ಷುಲ್ಲಕ ಮತ್ತು ಗಂಭೀರ ವಿಷಯಗಳನ್ನು ಪ್ರತ್ಯೇಕಿಸುವುದು ಸುಲಭವಾಗುತ್ತದೆ. ಉದಾಹರಣೆಗೆ – ನಮ್ಮನ್ನೂ ಸೇರಿದಂತೆ ಇತರರನ್ನು ಕ್ಷಮಿಸುವುದು ಸರಳ ಎನಿಸುತ್ತದೆ.

ಗಮನಿಸಿ: ಇಲ್ಲಿ ಚರ್ಚಿಸಿದ ವಿಧಾನಗಳಲ್ಲಿ ಭಾವನೆಗಳನ್ನು ನಿರ್ವಹಿಸಲು ಯಾವುದು ಸೂಕ್ತ ಎಂಬ ಪ್ರಶ್ನೆ ಮುಖ್ಯವೇ. ಆದರೆ ಶ್ರೇಷ್ಠತೆಯ ಆಧಾರದಲ್ಲಿ ಅವುಗಳನ್ನು ಅಳೆದು ತೂಗುವ ಅಗತ್ಯವಿಲ್ಲ.

ಪ್ರತಿಯೊಬ್ಬರೂ ಅವರದೇ ಆದ ರೀತಿಯಲ್ಲಿ ಈ ವಿಚಾರಗಳನ್ನು ಗಮನಿಸಿ ಆಲೋಚಿಸುತ್ತಾರೆ. ನಾನು ಈ ರೀತಿ ವಿವರವಾಗಿ ಚರ್ಚಿಸಿ ವಿಷಯದ ಆಳಕ್ಕೆ ಇಳಿಯಲು 2 ಮುಖ್ಯ ಕಾರಣಗಳಿವೆ. ಒಂದು, ನನ್ನ ಚರ್ಮದ ಬಣ್ಣ ಹಾಗೂ ಸಮಾಜದ ಕಣ್ಣಿನ ಸಂಬಂಧ, ಇನ್ನೊಂದು ನನ್ನ ವೃತ್ತಿಯ ಭಾಗವಾದ ಬಿಸಿನೆಸ್ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಭಾವನೆಗಳಿಗಿರುವ ಮಹತ್ವ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):

ತೀರ್ಮಾನ:

ಇಲ್ಲಿಯವರೆಗೆ ತಾಳ್ಮೆಯಿಂದ ಓದಿದ ನಿಮಗೆ, ಪ್ರೀತಿಯ ಭಾವನೆಗಳು ಏರುಪೇರಾದರೆ ಏನು ಮಾಡಬಹುದು ಮತ್ತು ಮುಂದೆ ಆಗದಂತೆ ಹೇಗೆ ಎಚ್ಚರಿಕೆ ವಹಿಸಬಹುದು ಎಂಬುದರ ಪೂರ್ಣ ಚಿತ್ರಣ ದೊರಿತಿದೆಯಲ್ಲವೇ?.

ವಿಷಯವನ್ನು ಸರಳವಾಗಿಸಲು ಅದನ್ನು ಎರಡು ಭಾಗಗಳಾಗಿ ವಿಂಗಡಿಸಿದೇವು. ಭಾಗ- 1 ರಲ್ಲಿ, ವಿಷಯಗಳನ್ನು ಬದಲಾಯಿಸುವುದು, ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತಹಾ ಭಾವನೆಗಳನ್ನು ನಿಯಂತ್ರಿಸುವ ಸಾಮಾನ್ಯ ವಿಧಾನಗಳನ್ನು ಚರ್ಚಿಸಿದ್ದೇವೆ. ಭಾಗ-2 ರಲ್ಲಿ, ನಾವು ಭಾವನೆಗಳ ಮೂಲಕ್ಕೆ ಇಳಿದೆವು. ಅವು ಏನು, ಹೇಗೆ ಉದ್ಭವಿಸುತ್ತವೆ, ಮತ್ತು ಅವುಗಳನ್ನು ನಿರ್ವಹಿಸುವ ನೇರ ವಿಧಾನವನ್ನು ಉದಾಹರಣೆಯೊಂದಿಗೆ ವಿವರವಾಗಿ ನೋಡಿದೆವು.

ಇಲ್ಲಿ ವಿಧಾನಗಳ ನಡುವೆ ಶ್ರೇಷ್ಠ ಹಾಗೂ ಕನಿಷ್ಠ ಎಂಬ ಕಿತ್ತಾಟವಿಲ್ಲ. ಇದು ವ್ಯಕ್ತಿಯ ಪರಿಸ್ಥಿತಿ, ಅಗತ್ಯ, ಆಸಕ್ತಿ, ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಎಂಬ ಅಂಶಗಳನ್ನು ಒಳಗೊಂಡಿದೆ.

ಹೇಗನ್ನಿಸಿತು ಈ ಬ್ಲಾಗ್ ಪೋಸ್ಟ್?

ನಿಮಗೆ ಇದು ಪ್ರಸ್ತುತ ಮತ್ತು ಸಹಾಯಕವಾಗಿದೆಯೆ? ಕೆಳಗೆ ಕಾಮೆಂಟ್ ಮಾಡಿ.

ತಮ್ಮ ಭಾವನೆಗಳನ್ನು ನಿಯಂತ್ರಿಸುವ ಮಾರ್ಗಗಳನ್ನು ಹುಡುಕುತ್ತಿರುವ ನಿಮ್ಮ ಸ್ನೇಹಿತರೊಂದಿಗೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಿ.

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Comment

Your email address will not be published. Required fields are marked *

Scroll to Top