ವಿಭಕ್ತ ಕುಟುಂಬದ ಲಕ್ಷಣಗಳು ಎಂಬ ವಿಷಯವನ್ನು ನೆನಪಿಸುವ ಚಿಕ್ಕ ಕುಟುಂಬದ ಚಿತ್ರದ ಜೊತೆಗೆ ಕನ್ನಡ ಪದಗಳೂ ಇವೆ.

ಈಗಿನ ವಿಭಕ್ತ ಕುಟುಂಬದ ಲಕ್ಷಣಗಳು ಹೇಗಿವೆ? | 7+ ಪಾಯಿಂಟ್ ಗಳು!

ವಿಭಕ್ತ ಕುಟುಂಬದ ಲಕ್ಷಣಗಳು ಎಂಬುದು ಕೇವಲ ಪ್ರಬಂಧ ಅಥವಾ ಭಾಷಣದ ವಿಷಯವಾಗಿ ಉಳಿದಿಲ್ಲ.

ಕಾರಣ – ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ ಮತ್ತು ಜೀವನ ಶೈಲಿ.

ಅಂಕಿಅಂಶಗಳ ಪ್ರಕಾರ 2008ರಲ್ಲಿ 37% ಇದ್ದ ವಿಭಕ್ತ ಕುಟುಂಬಗಳ ಪ್ರಮಾಣವು 2022ರ ವೇಳೆಗೆ 50% ತಲುಪಿದೆ.

ಇದು ನಿತ್ಯ ಜೀವನಕ್ಕೆ ನೇರ ಪ್ರಭಾವ ಬೀರುವುದರಿಂದ, ಚಿಕ್ಕ ಕುಟುಂಬದ ಲಕ್ಷಣಗಳು ಚೊಕ್ಕವಾಗಿವೆಯೇ ಎಂದು ತಿಳಿಯಬೇಕಲ್ಲವೇ!

1. ಮೊದಲ, ವಿಭಕ್ತ ಕುಟುಂಬದ ಲಕ್ಷಣಗಳು:

ಅವಿಭಕ್ತ ಕುಟುಂಬದ ಲಕ್ಷಣಗಳಂತೆ ಇಲ್ಲಿಯೂ ಕುಟುಂಬ ಸದಸ್ಯರ ಸಂಖ್ಯೆಯು ವಿಭಕ್ತ ಕುಟುಂಬದ ಇತರೆ ಲಕ್ಷಣಗಳಿಗೆ ಅಡಿಪಾಯದಂತೆ.

ಅ. ಸದಸ್ಯರ ಸಂಖ್ಯೆ:

“ಒಂದು ಅಥವಾ ಎರಡು ತಲೆಮಾರಿನ, ಎಂದರೆ ಕೇವಲ ಪತಿ-ಪತ್ನಿ ಅಥವಾ ಪತಿ-ಪತ್ನಿ ಮತ್ತು ಅವರ ಮಕ್ಕಳು ಜೊತೆಗೆ ವಾಸಿಸುತ್ತಿದ್ದರೆ ಅಂತಹಾ ಕುಟುಂಬವನ್ನು ವಿಭಕ್ತ ಕುಟುಂಬ ಎನ್ನುತ್ತಾರೆ.”

ಪತಿ-ಪತ್ನಿಯನ್ನು ಒಳಗೊಂಡ ಕನಿಷ್ಠ 2 ಮತ್ತು 1, 2, ಅಥವಾ 3 – ಹೀಗೆ ಮಕ್ಕಳ ಸಂಖ್ಯೆಯನ್ನು ಆಧರಿಸಿದ ಗಾತ್ರ ವಿಭಕ್ತ ಕುಟುಂಬದ್ದಾಗಿರುತ್ತದೆ.

ಆ. ಮನೆ ಮತ್ತು ಮನೆತನ:

ವಾಸಿಸುವ ಮನೆಯ ನಿರ್ಧಿಷ್ಟ ಗಾತ್ರವನ್ನು ವಿಭಕ್ತ ಕುಟುಂಬದ ಲಕ್ಷಣವೆಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ, ಅವಿಭಕ್ತ ಕುಟುಂಬ ವಾಸಿಸಬಹುದಾದ ಬಂಗಲೆಗಳಲ್ಲಿಯೂ ಕೆಲವೊಮ್ಮೆ ಇಬ್ಬರೇ ಸದಸ್ಯರುಳ್ಳ ಪುಟ್ಟ ಕುಟುಂಬ ವಾಸಿಸುತ್ತಿರುತ್ತದೆ.

ಇನ್ನು, ಕೆಲವು ಸಣ್ಣ ಫ್ಯಾಮಿಲಿಗಳು ಅಪರೂಪಕ್ಕೆ ತಮ್ಮ ಪೂರ್ವಜರ ಮನೆತನದ ಹೆಸರನ್ನು ಬಳಸಿದರೂ, ವಿಭಕ್ತ ಕುಟುಂಬಗಳು “ಮನೆತನ” ಎನ್ನಬಹುದಾದ ಹೆಸರುಗಳನ್ನು ಹೊಂದಿರುವುದಿಲ್ಲ.

ಇ. ವಾಸ ಸ್ಥಳ:

ಬೌಗೋಳಿಕವಾಗಿ ಪರಿಗಣಿಸುವುದಾದರೆ ಸಣ್ಣ ಕುಟುಂಬಗಳ ಸಂಖ್ಯೆ ಹಳ್ಳಿಗಳಿಗಿಂತ ಪಟ್ಟಣ ಪ್ರದೇಶಗಳಲ್ಲಿ ಅಧಿಕ ಎನ್ನಬಹುದು.ಇದಕ್ಕೆ ಉದ್ಯೋಗ, ಆಧುನಿಕತೆ, ನವನವೀನ ಸೌಲಭ್ಯಗಳು ಎಂಬ ಹಲವಾರು ಕಾರಣಗಳನ್ನೂ ಕೊಡಬಹುದು.

2. ಮಿಶ್ರ ವಾತಾವರಣ:

ಸುಖ-ದುಃಖಗಳನ್ನು ಒಳಗೊಂಡ ಮಿಶ್ರ ವಿಭಕ್ತ ಕುಟುಂಬದ ಲಕ್ಷಣಗಳು ಹೇಗಿರಬಹುದು ಎಂದು ಬಿಂಬಿಸುವ ಚಿತ್ರ.

ಬೆರಳೆಣಿಕೆಯಷ್ಟೇ ಸದಸ್ಯರಿದ್ದಾರೆ ಎಂದಾಕ್ಷಣ ಎಲ್ಲಾ ವಿಭಕ್ತ ಕುಟುಂಬಗಳು ಆನಂದದ ತಾಣಗಳೇನಲ್ಲ. ವಿವಿಧ ಅನುಭವಗಳು, ಜ್ಞಾನ, ಬಯಕೆಗಳು, ಮತ್ತು ಅಗತ್ಯಗಳನ್ನೊಳಗೊಂಡ ಸದಸ್ಯರು ಜೊತೆ ಸೇರಿದಾಗ ಅನಿಸಿಕೆ-ಅಭಿಪ್ರಾಯಗಳಲ್ಲಿ ವ್ಯತ್ಯಾಸ ಹಾಗೂ ಮನಸ್ತಾಪಗಳು ಸಾಮಾನ್ಯವಾಗಿ ಕಂಡುಬರುತ್ತದೆ.

ಹಿರಿಯರ ಉಪಸ್ಥಿತಿಯಿಂದಾಗಿ ಅವಿಭಕ್ತ ಕುಟುಂಬಗಳಲ್ಲಿ ಕಂಡುಬರುವ ಮೌನದ ಸನ್ನಿವೇಶಗಳು ಇಲ್ಲಿ ಇಲ್ಲ ಎನ್ನಬಹುದು.

ಆದಾಗ್ಯೂ, ಸಣ್ಣ ಕುಟುಂಬಗಳಲ್ಲಿ ಅನಗತ್ಯ ವಾದ-ವಿವಾದಗಳನ್ನು ನಿರ್ಲಕ್ಷಿಸಿ ನೆಮ್ಮದಿಯ ವಾತಾವರಣವನ್ನು ಕಾಯ್ದುಕೊಳ್ಳುವ ಅವಕಾಶ ಹೆಚ್ಚಿರುತ್ತದೆ. ಅನೇಕ ಪುಟ್ಟ ಕುಟುಂಬಗಳು ಈ ಲಾಭವನ್ನು ಪೂರ್ಣವಾಗಿ ಉಪಯೋಗಿಸುವುದನ್ನೂ ನೀವು ಗುರುತಿಸಿರಬಹುದು.

ಸಂಬಂಧಗಳಲ್ಲಿ ತಲೆಕೆಳಗಾಗುವ ಪ್ರೀತಿಯ ಭಾವನೆಗಳನ್ನು ನಿಭಾಯಿಸಲು ಚಿಕ್ಕ ಕುಟುಂಬದ ಈ ಮಿಶ್ರ ವಾತಾವರಣ ವಿಶ್ರ ಅವಕಾಶವನ್ನೇ ನೀಡುತ್ತದೆ ಎಂಬುದು ಗಮನಾರ್ಹ ಲಕ್ಷಣ.

3. ಸ್ವಾತಂತ್ರ್ಯದ ಸಾಧ್ಯತೆ ಮತ್ತು ಲಭ್ಯತೆ:

“ವೈಯಕ್ತಿಕ ಸ್ವಾತಂತ್ರ್ಯವು ಯೋಗಕ್ಷೇಮದ ಅತ್ಯಂತ ಸ್ಥಿರವಾದ ಮುನ್ಸೂಚಕವಾಗಿದೆ” ಎಂದು ಕುಟುಂಬಕ್ಕೆ ಅನ್ವಯಿಸುವಂತೆ ಸ್ವಾತಂತ್ರ್ಯದ ಕುರಿತು ನಡೆಸಿದ ಅಧ್ಯಯನ ಹೇಳುತ್ತದೆ.

ಸ್ವಾತಂತ್ರ್ಯ ಎಂದಾಕ್ಷಣ ತನ್ನಿಚ್ಚೆಯಂತೆ ಬದುಕುವುದು ಎಂಬ ಮೇಲುನೋಟದ ಅರ್ಥ ನೆನಪಾಗುತ್ತದೆ.

ಅಲ್ಲವೇ?

ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವವರು ಬಹುಷಃ ಹೌದು ಎಂದೇ ಉತ್ತರಿಸಬಹುದು. ಏಕೆಂದರೆ ಅಲ್ಲಿರುವ ಅನೇಕ (ಪ್ರಸ್ತುತ ಅಥವಾ ಅಪ್ರಸ್ತುತ) ನಿಯಮಗಳು ಹಾಗೂ ಕಟ್ಟುಪಾಡುಗಳು ಬಂಧನದ ಮನೋಭಾವವನ್ನು ಉಂಟುಮಾಡಿರುತ್ತವೆ.

ಆದರೆ ಚಿಕ್ಕ ಕುಟುಂಬಗಳಲ್ಲಿ ಇಂತಹಾ ಬಂಧನ ತುಲನಾತ್ಮಕವಾಗಿ ಕಡಿಮೆ ಎನ್ನಬಹುದು. ಇದಕ್ಕೆ ಪೂರಕವಾದ ಈ ಕೆಳಗಿನ ಅಂಶಗಳಲ್ಲಿ ಸದಸ್ಯರು ಹೊಂದಿರಬಹುದಾದ ಸ್ವಾತಂತ್ರ್ಯದ ಸಾಧ್ಯತೆಗಳನ್ನು ಗಮನಿಸಿ;

  • ಮನೆಯ ಸ್ಥಳಾವಕಾಶಗಳನ್ನು ಅಥವಾ ವಸ್ತುಗಳನ್ನು ಬಳಸುವುದು.
  • ವಸ್ತ್ರಾಭರಣಗಳ ಆಯ್ಕೆ ಮತ್ತು ಧರಿಸುವಿಕೆ.
  • ಆಹಾರದ ವಿಧಗಳು ಮತ್ತು ಸೇವನೆಯ ಸಮಯ.
  • ಪ್ರವಾಸ ಹೋಗುವುದು ಮತ್ತು ಅದಕ್ಕೆ ಸಂಬಂಧಿತ ನಿರ್ಧಾರಗಳಲ್ಲಿನ ಸ್ವಾತಂತ್ರ್ಯ.
  • ಇಷ್ಟದ ಹವ್ಯಾಸಗಳನ್ನು ಕಾರ್ಯಗತಗೊಳಿಸುವುದು.

ಹೀಗೆ ಹಲವಾರು ವಿಷಯಗಳಲ್ಲಿ ಸ್ವಾತಂತ್ರ್ಯದ ಇರುವಿಕೆಯನ್ನು ಗುರುತಿಸಬಹುದು.

ಇವುಗಳು ಸರಿ ಅಥವಾ ತಪ್ಪು ಎಂಬ ವಾದಕ್ಕೆ ಗುರಿಯಾಗಬಹುದಾದ ವಿಚಾರಗಳಾದರೂ, ಇಲ್ಲಿ ನಾವು ವಿಭಕ್ತ ಕುಟುಂಬದ ಲಕ್ಷಣಗಳು ಎಂಬ ವಿಷಯದ ಚೌಕಟ್ಟನ್ನು ಮೀರುವುದು ಸೂಕ್ತವಲ್ಲ ತಾನೇ.

4. ಅಧಿಕಾರದಲ್ಲಿ ಸಮಾನತೆಗೆ ಆಧ್ಯತೆ:

ವಿಭಕ್ತ ಕುಟುಂಬದಲ್ಲಿ ಅಧಿಕಾರದ ಸಮಾನತೆಯ ಸಾಧ್ಯತೆಯನ್ನು ತೋರಿಸುವ SharingShree ಕನ್ನಡದ ಚಿತ್ರ.

ನಾವು ಈಗಷ್ಟೇ ನೋಡಿದ ಸ್ವಾತಂತ್ರ್ಯದ ವಿಷಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಕುರಿತಾಗಿತ್ತು. ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬುದು ಅಧಿಕಾರ ಯಾರ ಕೈಯಲ್ಲಿದೆ ಮತ್ತು ಯಾವ ರೀತಿಯಲ್ಲಿದೆ ಎಂಬ ವಿಚಾರಗಳನ್ನೂ ಒಳಗೊಂಡಿದೆ.

ನಾನು ಗಮನಿಸಿದಂತೆ ಮತ್ತು ವಿಭಕ್ತ ಕುಟುಂಬದಲ್ಲಿ ವಾಸಿಸುವ ಹಲವರಿಂದ ಪಡೆದ ಮಾಹಿತಿಯ ಪ್ರಕಾರ ಇಲ್ಲಿ ದಬ್ಬಾಳಿಕೆ ಎಂಬ ಅರ್ಥದಲ್ಲಿ ಅಧಿಕಾರದ ಬಳಕೆ ವಿರಳ ಎನ್ನಬಹುದು.

ತಮ್ಮ ಪುಟ್ಟ ಕುಟುಂಬಕ್ಕೆ ಸಂಬಂಧಿಸಿದ ಅನೇಕ ವಿಚಾರಗಳಲ್ಲಿ ಅನುಭವ, ಆಸಕ್ತಿ, ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಕೌಶಲ್ಯಗಳನ್ನು ಕುಟುಂಬದ ಹಿರಿಯರಾದ ಪತಿ-ಪತ್ನಿಯು ಬಹುತೇಕ ಸಮಾನ ರೀತಿಯಲ್ಲಿ ಹಂಚಿಕೊಂಡಿರುತ್ತಾರೆ.

ಇದು ಅನುಬಂಧವನ್ನೊಳಗೊಂಡ ಬಲಿಷ್ಠ ಸಂಬಂಧವನ್ನು ಹೊಂದಲು ಬಲು ಸಹಕಾರಿ ಎಂದರೆ ತಪ್ಪಲ್ಲ ಅನಿಸುತ್ತದೆ.

ಇಲ್ಲಿ ಸಮಾನತೆ ಅಂದರೆ ಗಣಿತ ಚಿಹ್ನೆಯಂತೆ ಸುಲಭದಲ್ಲಿ ಗುರುತಿಸಲು ಸಾಧ್ಯವಾಗದಿರಬಹುದು. ಆದರೆ, ಈಗಿನ ವಿಭಕ್ತ ಕುಟುಂಬಗಳನ್ನು ಚೊಕ್ಕದಾಗಿ ನಡೆಸಲು ಅಸಮಾಧಾನ ತರಿಸುವ ಅಧಿಕಾರದ ಅಸಮಾನತೆ ಇರಬಾರದು ಎಂದು ಎಲ್ಲರೂ ಬಯಸುತ್ತಾರೆ.

ಅಲ್ಲವೇ?

5. ತೆರೆಮರೆಯ ಸಹಕಾರ ಮತ್ತು ಸ್ವಾವಲಂಬನೆಗೆ ಅವಕಾಶ:

ಮಂಗನಿಂದ ಮಾನವ ಎನ್ನುತ್ತದೆ ಇತಿಹಾಸ. ಮಾನವನು ಸಂಘಜೀವಿ ಎನ್ನುತ್ತದೆ ಸಮಾಜ. ಸಂಘಜೀವಿ ಎಂದರೆ ಪರಸ್ಪರ ಸಹಕಾರದ ಮಾತು ಬಂದೇ ಬರುತ್ತದೆಯಲ್ಲವೇ! ಇದು ವೃತ್ತಿ, ಪ್ರವೃತ್ತಿ, ಸಂಘ-ಸಂಸ್ಥೆಗಳು, ಹಾಗೂ ಕುಟುಂಬಗಳನ್ನೂ ಒಳಗೊಳ್ಳುತ್ತದೆ.

ಅ. ಸಹಕಾರದ ಲಕ್ಷಣ:

ಕುಟುಂಬ ದೊಡ್ಡದಿರಲಿ ಅಥವಾ ಸಣ್ಣದಿರಲಿ, ಹಲವು ಕೆಲಸ-ಕಾರ್ಯಗಳಂತೂ ಸರ್ವೇಸಾಮಾನ್ಯ.

  • ಮನೆಯ ಶುಚಿತ್ವ.
  • ಅಡುಗೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳು.
  • ಮನೆಗೂ ಸಮಾಜಕ್ಕೂ ನಡುವಿನ ವ್ಯಾವಹಾರಿಕ ಕೆಲಸಗಳು – ಉದಾಹರಣೆಗೆ ಬೇರೆ ಬೇರೆ ರೀತಿಯ ಬಿಲ್ ಪಾವತಿಗಳು, ಮನೆಗೆ ಸಂಬಂಧಿಸಿದ ವಸ್ತುಗಳು ಹಾಗೂ ಸೇವೆಗಳ ಖರೀದಿ, ಇತ್ಯಾದಿ.

ಒಂದೆಡೆ, ಇಡೀ ಕುಟುಂಬಕ್ಕೆ ಸಂಬಂಧಿಸಿದ ಇಂತಹಾ ಕೆಲಸ ಕಾರ್ಯಗಳಲ್ಲಿ ಪರಸ್ಪರ ಸಹಕರಿಸುವ ಲಕ್ಷಣ ಬಹುತೇಕ ವಿಭಕ್ತ ಕುಟುಂಬಗಳಲ್ಲಿ ಕಂಡುಬರುತ್ತದೆ. ಮತ್ತೊಂದೆಡೆ, “ಈ ಚಿಕ್ಕ ಕುಟುಂಬದಲ್ಲಿ ಆಷ್ಟೇನೂ ಕೆಲಸವಿಲ್ಲವಲ್ಲಾ. ಅವನು/ಅವಳಿಗೆ ಸಹಕರಿಸದಿದ್ದರೂ ಪರವಾಗಿಲ್ಲ” ಎಂದು ಭಾವಿಸಿ ಮನೆಕೆಲಸಗಳಿಗೆ ಸ್ವಲ್ಪವೂ ಸಹಕರಿಸದ ಲಕ್ಷಣಗಳನ್ನೂ ಸಣ್ಣ ಕುಟುಂಬಗಳಲ್ಲಿ ಕಾಣಬಹುದು.

ಆ. ಸ್ವಾವಲಂಬನೆಯ ಲಕ್ಷಣ:

ದೊಡ್ಡ ಕುಟುಂಬದಂತೆ ಜನರ ಲಭ್ಯತೆ ಇಲ್ಲದ ಕಾರಣ ವಿಭಕ್ತ ಕುಟುಂಬಗಳಲ್ಲಿ ಕೆಲವು ಕೆಲಸಗಳಿಗೆ ಇತರರನ್ನು ಅವಲಂಬಿಸಲು ಸಾಧ್ಯವಿಲ್ಲದಿರಬಹುದು.

ಉದಾಹರಣೆಗೆ – ಕೆಲವು ಸಂಧರ್ಭಗಳಲ್ಲಿ ತಮ್ಮ ಬಟ್ಟೆಗಳನ್ನು ತಾವೇ ತೊಳೆಯುವುದಿರಬಹುದು, ಸ್ವಲ್ಪ ಮಟ್ಟಿನ ಆರೋಗ್ಯದ ಏರು-ಪೇರಾದಾಗ ಅದರ ಪೂರ್ಣ ಜವಾಬ್ಧಾರಿಯನ್ನು ತಾವೇ ನಿಭಾಯಿಸುವುದಿರಬಹುದು, ಮಕ್ಕಳು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದಿರಬಹುದು – ಹೀಗೆ ಅನೇಕ ರೀತಿಯ ಸ್ವಾವಲಂಬೀ ಜೀವನಕ್ಕೆ ಸಣ್ಣ ಕುಟುಂಬಗಳು ಸಾಕ್ಷಿಯಾಗುತ್ತವೆ.

6. ಸಂಸ್ಕೃತಿ ಹಾಗೂ ಆಚರಣೆಗಳ ಇರುವಿಕೆ:

ಚಿಭಕ್ತ ಕುಟುಂಬದ ಇಬ್ಬರು ಸದಸ್ಯರಿ ನಮಸ್ಕರಿಸುತ್ತಿರುವ ಚಿತ್ರ ಸಂಸ್ಕೃತಿ ಮತ್ತು ಆಚರಣೆಗಳ ಲಕ್ಷಣಗಳನ್ನು ತಿಳಿಸುತ್ತಿದೆ.

ಪ್ರಾಚೀನ ಸಂಸ್ಕೃತಿಗಳು ಹಾಗೂ ಆಚರಣೆಗಳು ನಶಿಸಿ ಹೋಗುತ್ತಿವೆ ಎಂಬುದು ಹಲವರ ದೂರು. ಇನ್ನು ಕೆಲವರು ಈ ವಿಚಾರ ಬಂದಾಗ ಬೊಟ್ಟು ಮಾಡಿ ತೋರಿಸುವುದು ವಿಭಕ್ತ ಕುಟುಂಬಗಳನ್ನೇ.

ಹೌದೇ? ನೀವು ಗಮನಿಸಿದ್ದೀರಾ? ಆಮೇಲೆ ಕಾಮೆಂಟ್ ಮೂಲಕ ತಿಳಿಸಿ.

ನಾನು ಗಮನಿಸಿ, ವಿಭಕ್ತ ಕುಟುಂಬಗಳಲ್ಲಿ ವಾಸಿಸುವವರಿಂದ ತಿಳಿದಂತೆ, ಸಂಸ್ಕೃತಿಯ ಮತ್ತು ಆಚರಣೆಗಳ ವೈಜ್ಞಾನಿಕ ಹಿನ್ನಲೆ ತಿಳಿದು ಅವುಗಳನ್ನು ಪಾಲಿಸುವ ಸಣ್ಣ ಕುಟುಂಬಗಳು ಬಹಳಷ್ಟಿವೆ.

ಅದೇ ರೀತಿ, ಏನನ್ನೂ ಆಚರಿಸದ ಅಥವಾ ಪಾಲಿಸದ ಕುಟುಂಬಗಳೂ ಸಮಾಜದಲ್ಲಿವೆ. ಇದಕ್ಕೆ ಬಹುಷಃ ಈ ಕೆಳಗಿನ ಕಾರಣಗಳನ್ನು ಗುರುತಿಸಬಹುದು.

  • ಅವಿಭಕ್ತ ಕುಟುಂಬಗಳಲ್ಲಿರುವಂತೆ, ಸಂಸ್ಕೃತಿ ಮತ್ತು ಆಚರಣೆಗಳನ್ನು ಪಾಲಿಸುವಂತೆ ಗದರಲು, ಹೆದರಿಸಲು, ಅಥವಾ ಒತ್ತಾಯಿಸಲು ವಿಭಕ್ತ ಕುಟುಂಬಗಳಲ್ಲಿ ಹಿರಿಯರಿಲ್ಲದಿರುವುದು.
  • ಆಧುನಿಕತೆಗೆ ಅಥವಾ ತಮ್ಮ ಜೀವನ ಶೈಲಿಗೆ ಸರಿ ಹೊಂದುವುದಿಲ್ಲ ಎಂಬ ಭಾವನೆಯಿರಬಹುದು.
  • ತಮ್ಮ ಮನಸ್ಸು ತಾರ್ಖಿಕ ಸ್ವಭಾವದ್ದಾಗಿದ್ದು, ಪ್ರಾಮಾಣಿಕ ಪ್ರಯತ್ನದ ನಂತರವೂ ಆಚಾರ-ವಿಚಾರಗಳ ಹಿಂದಿನ ವೈಜ್ಞಾನಿಕ ಕಾರಣ ತಿಳಿಯದೆ ಮನಸ್ಸು ಅವುಗಳನ್ನು ಒಪ್ಪಲು ಸಿದ್ಧವಿಲ್ಲದಿರಬಹುದು.
  • ಈ ವಿಚಾರಗಳನ್ನು ಮುಂದಿಟ್ಟು ಇತರರು ಮಾಡಿದ ಮೋಸ ಅಥವಾ ವಂಚನೆಯ ಅನುಭವವಾಗಿರಬಹುದು.

ಹೀಗೆ ಅನೇಕ ಕಾರಣಗಳಿಂದಾಗಿ ಸಂಸ್ಕೃತಿಗಳು ಮತ್ತು ಆಚರಣೆಗಳು ಕೆಲವು ಪುಟ್ಟ ಕುಟುಂಬಗಳಲ್ಲಿ ಮಾಯವಾಗಿರುತ್ತವೆ.

7. ಮುಖ್ಯ ವಿಷಯಗಳ ಸರಳ ನಿರ್ವಹಣೆ:

ಆರೋಗ್ಯ, ಸಂಪತ್ತು, ಮತ್ತು, ಸಂಬಂಧಗಳ ಕುರಿತ ವಿಭಕ್ತ ಕುಟುಂಬಗಳ ಲಕ್ಷಣಗಳನ್ನು ನೋಡೋಣ ಬನ್ನಿ.

ಆ. ಆರೋಗ್ಯ ನಿರ್ವಹಣೆ:

ಚಿಕ್ಕ ಕುಟುಂಬದ ಹಿರಿಯ ಸದಸ್ಯರಾದ ಪತಿ ಮತ್ತು ಪತ್ನಿಗೆ ಮಕ್ಕಳನ್ನೊಳಗೊಂಡ ಸದಸ್ಯರ ಆರೋಗ್ಯದ ಕಾಳಜಿ ಇದ್ದರೂ, ಅವಿಭಕ್ತ ಕುಟುಂಬದ ಹಿರಿಯರಾದ ಅಜ್ಜ-ಅಜ್ಜಿಯರಂತೆ ಹಳೆಯ ಕಾಲದ ಆರೋಗ್ಯ ಸಂರಕ್ಷಣಾ ನೀತಿ-ನಿಯಮಗಳು, ವೈಜ್ಞಾನಿಕ ಹಿನ್ನಲೆಯುಳ್ಳ ಮನೆ ಔಷಧಗಳ ಬಗೆಗಿನ ಅನುಭವ ಹಾಗೂ ಜ್ಞಾನ ತುಲನಾತ್ಮಕವಾಗಿ ಕಡಿಮೆ ಎನ್ನಬಹುದು.

ಆ. ಸಂಪತ್ತಿನ ನಿರ್ವಹಣೆ:

ಸಂಪತ್ತಿನ ನಿರ್ವಹಣೆಯ ಬಗ್ಗೆ ಸಣ್ಣ-ಪುಟ್ಟ ಗೊಂದಲ ಅಥವಾ ಭಿನ್ನಾಭಿಪ್ರಾಯಗಳಿದ್ದರೂ ದೊಡ್ಡ ಕುಟುಂಬಗಳಲ್ಲಾಗುವಂತೆ ಯುದ್ಧಗಳಾಗುವ ಸಂಭವ ಇಲ್ಲಿ ವಿರಳ. ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಆದಾಯ, ಖರ್ಚು, ಉಳಿಕೆ, ಹೂಡಿಕೆ, ಇನ್ಶೂರೆನ್ಸ್, ತೆರಿಗೆ, -ಹೀಗೆ ಆರ್ಥಿಕತೆಯ ವಿವಿಧ ಆಯಾಮಗಳನ್ನು ನಿಭಾಯಿಸುವುದು ದೊಡ್ಡ ಕುಟುಂಬಗಳಿಗೆ ಹೋಲಿಸಿದರೆ ಇಲ್ಲಿ ಸ್ವಲ್ಪ ಸುಲಭ ಎನ್ನಬಹುದು.

ಇ. ಸಂಬಂಧಗಳ ನಿರ್ವಹಣೆ:

ಇಂದಿನ ಸೋಶಿಯಲ್ ಮೀಡಿಯಾ ರೀಲ್ಸ್ ಅಥವಾ ಶಾರ್ಟ್ ವಿಡಿಯೋಗಳನ್ನು ನೋಡುವಾಗ ಸಮಬಂಧಗಳಲ್ಲಿನ ಸಮಸ್ಯೆಗಳ ಬಗ್ಗೆ ಸ್ಪಷ್ಟತೆಯೇ ಇಲ್ಲದಂತಾಗಿದೆ, ಅಲ್ಲವೇ? ಕೆಲವರು ಕಿಲ ಕಿಲನೆ ಸಂತೋಷದಿಂದಿರುವ ವಿಡಿಯೋಗಳನ್ನೇ ತೋರಿಸಿದರೆ, ಇನ್ನು ಕೆಲವರ ದುಃಖ-ಗೋಳು ನೋಡಲಾಗುವುದಿಲ್ಲ.

ಅದೇನೇ ಇರಲಿ. ಹೆಚ್ಚು ವಿಧಗಳ ಜಂಜಾಟವಿಲ್ಲದ ಕಾರಣ ಚಿಕ್ಕ ಕುಟುಂಬಗಳ ಸಂಬಂಧಗಳನ್ನು ನಿರ್ವಹಿಸುವುದು ಕೊಂಚ ಸುಲಭ ಎನ್ನಬಹುದು. ಸಂಬಂಧಗಳ ಆದ್ಯತೆ, ಸಮಯದ ವಿನಿಯೋಗ, ವಿಭಿನ್ನ ಸ್ವಭಾವದ ಸದಸ್ಯರ ಸಂಖ್ಯೆ ಕಡಿಮೆ ಇರುವುದು, ಇವುಗಳಿಂದ ಉಂಟಾಗುವ ಕಡಿಮೆ ಒತ್ತಡ – ಇವು ಗುರುತಿಸಬಹುದಾದ ಲಕ್ಷಣಗಳಾಗಿವೆ.

8. ಲಕ್ಷಣಗಳ ಬದಲಾವಣೆ ಮತ್ತು ಕಲಿಕೆಯ ಅವಕಾಶಗಳು:

ಟಿವಿ ವೀಕ್ಷಣೆಯ ಜೊತೆಗೆ ಮಾತುಕತೆಯನ್ನು ನಡೆಸುತ್ತಿರುವ ವಿಭಕ್ತ ಕುಟುಂಬದ ಚಿತ್ರ ಬದಲಾಗುತ್ತಿರುವ ಲಕ್ಷಣಗಳನ್ನು ಬಿಂಬಿಸುತ್ತಿದೆ.

ನನ್ನ ವೈಯಕ್ತಿಕ ಹಾಗೂ ವೃತ್ತಿಪರ ಅನುಭವ ಮತ್ತು ಗಮನಿಸಿದ ಅಂಶಗಳ ಆಧಾರದಲ್ಲಿ ಹೇಳುವುದಾದರೆ, ಕೇವಲ ಅವಿಭಕ್ತ ಕುಟುಂಬಗಳು ವಿಭಕ್ತವಾಗಿ ಬದಲಾಗುತ್ತಿರುವುದಲ್ಲದೆ ಅವುಗಳ ಲಕ್ಷಣಗಳೂ ಬದಲಾಗುತ್ತಿವೆ.

ಇಂಟರ್ನೆಟ್ ನಿಂದಾಗಿ ಪ್ರಪಂಚವೇ ಅಂಗೈಯಲ್ಲಿದೆ, ಎನ್ನುವ ಕಾಲದಲ್ಲಿ ನಾವಿರುವುದರಿಂದ ಅದರ ಪ್ರಭಾವ ಸಣ್ಣ ಕುಟುಂಬಗಳಲ್ಲಿ ಬೇಗನೆ ತೋರಿ ಬರುತ್ತಿದೆ.

ಒಂದೆಡೆ, ಹಲವಾರು ಸಣ್ಣ ಕುಟುಂಬಗಳು ಇಂಟರ್ನೆಟ್ ಸಂಬಂಧಿತ ಕೆಲಸದ ಆದಾಯದಿಂದ ಹಾಯಾಗಿ ಬದುಕುತ್ತಿದ್ದಾರೆ, ಮತ್ತೊಂದೆಡೆ, ಅಗತ್ಯ-ಅನಗತ್ಯದ ನಡುವಿನ ರೇಖೆಯನ್ನೂ ಮೀರಿದ ಹೋಲಿಕೆ, ಬಯಕೆ, ಚಡಪಡಿಕೆಗಳಿಂದಾಗಿ ಚಿಕ್ಕ ಕುಟುಂಬದ ಲಕ್ಷಣಗಳು ಚೊಕ್ಕವಾಗಿದೆ ಎಂದು ಹೆಮ್ಮೆಯಿಂದ ಹೇಳುವಂತಿಲ್ಲ, ಅದು ಬದಲಾಗುತ್ತಿದೆ ಮತ್ತು ಆ ಬದಲಾವಣೆಗಳು ನಿರಂತರವಾಗಿದೆ.

ಇನ್ನು ಕಲಿಕೆಯ ವಿಚಾರಕ್ಕೆ ಬಂದರೆ, ಇಲ್ಲಿ ಕೆಲವು ಅವಕಾಶಗಳ ಅಲಭ್ಯತೆ ಕಾಣುತ್ತದೆ. ಉದಾಹರಣೆಗೆ, ಅವಿಭಕ್ತ ಕುಟುಂಬಗಳಲ್ಲಾದರೆ ಕನಿಷ್ಠ 3 ತಲೆಮಾರುಗಳ ಜನರಿರುವುದರಿಂದ ಅಲ್ಲಿ ಬೆಳೆವ ಮಗುವಿಗೆ ಸಮಾಜದ ಒಡನಾಟ ಬೇಗನೆ ಅರ್ಥವಾಗುವ ಸಾಧ್ಯತೆ ಹೆಚ್ಚು ಎನ್ನಬಹುದು. ಕಲಿಯಲು ಇಚ್ಚಿಸುವ ವ್ಯಕ್ತಿಗೆ ಅಲ್ಲಿ ಜನರ ಭಾವನೆಗಳ ಏರು-ಪೆರು, ಸುಖ-ದುಃಖಗಳನ್ನು ಗಮನಿಸಿ ಅರ್ಥಮಾಡಿಕೊಳ್ಳುವ ಅವಕಾಶ ಹೆಚ್ಚು.

ಇಂತಹಾ ಅವಕಾಶ ಚಿಕ್ಕ ಕುಟುಂಬದ ಮನೆಗಳಲ್ಲಿ ಕಡಿಮೆಯಾಗಿದ್ದು, ಸದಸ್ಯರು ಪ್ರಾರಂಭದಿಂದಲೇ ಸಮಾಜದಲ್ಲಿ ಬೆರೆತು ಆ ರೀತಿಯ ಕಲಿಕೆಯನ್ನು ಪಡೆಯಬೇಕಾಗುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):

ತೀರ್ಮಾನ:

ಇವಿಷ್ಟು ವಿಭಕ್ತ ಕುಟುಂಬದ ಲಕ್ಷಣಗಳು.

ಇತ್ತೀಚಿನ ವರ್ಷಗಳಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವ ಅಂಕಿಅಂಶಗಳಿಂದ ತೊಡಗಿ, ಸದಸ್ಯರ ಸಂಖ್ಯೆ, ಸ್ವಾತಂತ್ರ್ಯದ ರೀತಿ, ಸಹಕಾರ ಲಭ್ಯತೆಯಲ್ಲಿನ ವ್ಯತ್ಯಾಸ – ಹೀಗೆ ಅನೇಕ ಲಕ್ಷಣಗಳನ್ನು ಸಾಕಷ್ಟು ವಿವರವಾಗಿ ನೋಡಿದೆವು.

“ಆಧುನಿಕ ಜೀವನ ಶೈಲಿ, ದಿನೇ ದಿನೇ ಬದಲಾಗುತ್ತಿರುವ ಇಂಟರ್ನೆಟ್ ಬಳಕೆಯ ರೀತಿ ಮತ್ತು ತಾಂತ್ರಿಕತೆಯ ಬೆಳವಣೆಗಳು” ಚಿಕ್ಕ ಕುಟುಂಬಗಳ ಮೇಲೆ ತ್ವರಿತ ಪ್ರಭಾವ ಬೀರುತ್ತಿವೆ. ಇದು ಲಕ್ಷಣಗಳನ್ನೂ “ಹೀಗೆಯೇ” ಎಂದು ಸ್ಪಷ್ಟವಾಗಿ ಗುರುತಿಸಲು ಇನ್ನಷ್ಟು ಸವಾಲುಗಳನ್ನು ಒಡ್ಡುತ್ತಿವೆ.

ನಿಮಗೇನನ್ನಿಸುತ್ತಿದೆ?

ಈ ಕುರಿತು ನೀವು ಸೇರಿಸಲು ಬಯಸುವ ಅಂಶಗಳಿವೆಯೇ?

ಕಾಮೆಂಟ್ ಮೂಲಕ ತಿಳಿಸಿ. ಇದರಿಂದ ಇತರರಿಗೂ ಸಹಾಯವಾಗುತ್ತದೆ.

ಹಾಗೆಯೇ ಈ ಪೋಸ್ಟ್ ಅನ್ನು ವಿಭಕ್ತ ಕುಟುಂಬದ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಮರೆಯದಿರಿ.

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Comment

Your email address will not be published. Required fields are marked *

Scroll to Top