ಮದುವೆಗೆ ಮನಸ್ಸಿಲ್ಲ ಎಂದರೂ ಪೋಷಕರು ಬೆನ್ನು ಬಿಡುತ್ತಿಲ್ಲ ಅನ್ನುವವರಲ್ಲಿ ನೀವೊಬ್ಬರೇ ಅಂದುಕೊಂಡಿರಾ! ಖಂಡಿತಾ ಅಲ್ಲ.
Forced Brides ಅಂಕಿಅಂಶ ಹೇಳುತ್ತದೆ, “ಭಾರತದಲ್ಲಿ ಪ್ರತೀ ದಿನ 78 ಮಹಿಳೆಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುವಂತೆ ಒತ್ತಾಯಿಸಲಾಗುತ್ತದೆ”. Forced Marriage Unit statistics ಪ್ರಕಾರ, “ಭಾರತವು 2022 ರಲ್ಲಿ 20 ಪ್ರಕರಣಗಳಿಗೆ (7%) ಸಾಕ್ಷಿಯಾಗಿದೆ. ಈ ಪೈಕಿ 75% ಮಹಿಳೆಯರು ಹಾಗೂ 25% ಪುರುಷರು. ರೆಫರಲ್ ಮಾಡಿದಾಗ 18 ಬಲಿಪಶುಗಳು (90%) ಯುಕೆಯಲ್ಲಿದ್ದರು.”
ಅಂದರೆ ಇದು ಹೆಣ್ಣು ಹಾಗೂ ಗಂಡುಮಕ್ಕಳಿಬ್ಬರಿಗೂ ಸಂಬಂಧಿಸಿದುದು.
ಬನ್ನಿ. ಈ ಸವಾಲಿಗೆ ಕಾರಣಗಳ ಜೊತೆಗೆ ಪರಿಹಾರಗಳನ್ನೂ ತಿಳಿಯೋಣ.
ನೀವು ಮದುವೆಗೆ ಮನಸ್ಸಿಲ್ಲ ಎಂದರೂ ಪೋಷಕರು ಏಕೆ ಒತ್ತಾಯಿಸುತ್ತಾರೆ?
“ಓಹ್! ಈ ಹೆತ್ತವರು ಯಾವಾಗಲೂ ಹೀಗೆಯೇ ” ಎಂದು ನೀವು ಗೊಣಗಿರಬಹುದು. ಅದರಲ್ಲಿ ತಪ್ಪೇನಿಲ್ಲ ಬಿಡಿ. ಅದೇ ಡೈಲಾಗ್ ಅಪರೂಪಕ್ಕೆ ನನ್ನ ಬಾಯಲ್ಲೂ ಬಂದಿದೆ.
ಚಿಕ್ಕ-ಪುಟ್ಟ ವಿಚಾರಗಳಲ್ಲಿ ಇವೆಲ್ಲಾ ಪರವಾಗಿಲ್ಲ ಎನ್ನಬಹುದು. ಆದರೆ ವಿವಾಹ ಎಂಬುದು ಹಗುರ ವಿಚಾರವಲ್ಲ ತಾನೇ. ಹಾಗಾಗಿ ಪೋಷಕರು ಯಾಕಾಗಿ ಮದುವೆಗೆ ಒತ್ತಾಯಿಸುತ್ತಾರೆ ಎಂಬುದನ್ನು ತಿಳಿಯಬೇಕಾಗುತ್ತದೆ.
1. ಅಧಿಕಾರದ ಪ್ರಾಬಲ್ಯ:
ಮಗುವು ಹುಟ್ಟಿದ ದಿನದಿಂದ ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುವ ಹಂತದವರೆಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸುತ್ತಾರೆ. ತಮಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಅವರು ಮಕ್ಕಳನ್ನು ರಕ್ಷಿಸುತ್ತಾರೆ.
ಈ ರೀತಿ ಹಲವು ವರ್ಷಗಳ ಬೆಳೆಸುವಿಕೆಯ ನಂತರ ಪೋಷಕರು ತಿಳಿದೋ, ತಿಳಿಯದೆಯೋ, “ಎಲ್ಲಾ ವಿಷಯಗಳಲ್ಲಿ ತಮ್ಮ ಮಕ್ಕಳ ಒಳಿತು-ಕೆಡುಕುಗಳ ಬಗ್ಗೆ ತಮಗೆ ಪೂರ್ಣ ಅರಿವಿದೆ” ಎಂಬ ಭಾವನೆಯನ್ನು ಬೆಳೆಸಿಕೊಂಡಿರುತ್ತಾರೆ.
ಉದಾಹರಣೆಗೆ- ಪೋಷಕರು ತಮ್ಮ ಮಕ್ಕಳಿಗೆ ಆರೋಗ್ಯಕರ ಆಹಾರ, ಅತ್ಯುತ್ತಮ ಉಡುಗೆ, ಸೂಕ್ತವಾದ ಶಾಲೆ ಸೇರಿದಂತೆ ಹತ್ತು-ಹಲವು ವಿಚಾರಗಳನ್ನು ನಿಭಾಯಿಸಿರುತ್ತಾರೆ. ಮಕ್ಕಳು ಬೆಳೆದು ಮದುವೆ ವಿಚಾರಕ್ಕೆ ಬಂದಾಗಲೂ ಅದೇ ಅಧಿಕಾರದ ಪ್ರಜ್ಞೆಯು ನಿಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತದೆ.
ಅಧಿಕಾರ ಆಧಾರಿತ ಮದುವೆಗೆ ಒತ್ತಡ ಎಂಬುದು ಎಲ್ಲಾ ವಿಧದ ಕುಟುಂಬದಲ್ಲೂ ಕಾಣಬಹುದು. ಇದು ಹಿರಿಯರಿಂದ ಬಳುವಳಿಯಾಗಿ ಬಂದ ಅವಿಭಕ್ತ ಕುಟುಂಬದ ಲಕ್ಷಣವಾಗಿರಬಹುದು ಅಥವಾ ಸ್ವತಂತ್ರ ನಿರ್ವಹಣೆಯ ವಿಭಕ್ತ ಕುಟುಂಬದ ಲಕ್ಷಣವೂ ಆಗಿರಬಹುದು.
ವೃತ್ತಿ ಸೇರಿದಂತೆ ಜೀವನದ ಹಲವು ಆಯಾಮಗಳಲ್ಲಿ ಇದೇ ರೀತಿಯ ಅಧಿಕಾರಗಳ ಇರುವಿಕೆಯನ್ನು ಕಾಣುತ್ತೇವೆ. ಹಾಗಾಗಿ ಸದ್ಯಕ್ಕೆ ಅದು ಸರಿ ಅಥವಾ ತಪ್ಪು ಎಂಬ ತ್ವರಿತ ನಿರ್ಧಾರಕ್ಕೆ ಬರಬೇಡಿ.
ಮೊದಲು ಇತರ ಕಾರಣಗಳನ್ನು ಗಮನಿಸಿ, ನಂತರ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಂತೆ.
2. ಪೋಷಕರು ಬೆಳೆದು ಬಂದ ರೀತಿ:
ಮದುವೆಗೆ ಮನಸ್ಸಿಲ್ಲ ಎಂಬ ನಿಮ್ಮ ವಿಚಾರವನ್ನು ಪೋಷಕರ ಬಳಿ ಚರ್ಚಿಸುವಾಗ ನೀವು ಕೇವಲ ದೇಹ ಹೊಂದಿರುವ ವ್ಯಕ್ತಿಗಳೊಡನೆ ವಾದಿಸುತ್ತಿಲ್ಲ. ಬದಲಾಗಿ ಅನೇಕ ಭಾವನೆಗಳನ್ನು ಒಳಗೊಂಡ ಹಲವು ವಿಷಯಗಳೂ ಇವೆ.
- ನಂಬಿಕೆ – ವಿಶ್ವಾಸಗಳು.
- ಸಂಪ್ರದಾಯ ಮತ್ತು ಸಂಸ್ಕೃತಿ.
- ಧಾರ್ಮಿಕ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುವ ಒತ್ತಡ.
- ಅವರು ತಮ್ಮ ಜೀವನದಲ್ಲಿ ಎದುರಿಸಿದ ಕಷ್ಟಗಳು.
ಹೀಗೆ ಪೋಷಕರು ವಿವಿಧ ಅನುಭವ ಹಾಗೂ ಜ್ಞಾನದ ಮೂಟೆಯನ್ನೇ ಹೊತ್ತಿರುತ್ತಾರೆ. 99.99% ಪೋಷಕರು, ಹಿಂದಿನ ತಲೆಮಾರಿನವರು ಯೋಚಿಸಿ ತೋರಿದ ದಾರಿಯನ್ನೇ ಅನುಸರಿಸುತ್ತಾರೆ. ಅದು ವಾಸ್ತವ ಆಧಾರಿತ ಅನುಸರಿಸಲು ಯೋಗ್ಯವಾದ ವಿಷಯಗಳು ಇರಬಹುದು ಅಥವಾ ಪ್ರಸ್ತುತ ಜೀವನಕ್ಕೆ ಅನ್ವಯಿಸದ ಚೌಕಟ್ಟುಗಳೂ ಆಗಿರಬಹುದು.
ತಲ ತಲಾಂತರಗಳಿಂದ ಪಾಲಿಸುತ್ತಾ ಬರುತ್ತಿರುವ ಈ ರೀತಿಯ ಜ್ಞಾನವು ಅದರ ಪ್ರಸ್ತುತ ಒಳಿತು-ಕೆಡುಕುಗಳ ಬಗ್ಗೆ ಪ್ರಶ್ನಿಸಲು ಪೋಷಕರನ್ನು ಬಿಡುತ್ತಿಲ್ಲ. ಒಂದುವೇಳೆ ಪ್ರಶ್ನಿಸುವ ಇಚ್ಛೆ ಇದ್ದರೂ, ಸಂಬಂಧಿಕರು, ಸ್ನೇಹಿತರು, ಮತ್ತು ಒಟ್ಟಾಗಿ ಸಮಾಜವನ್ನೇ ಎದುರಿಸುವ ಸಮಸ್ಯೆ ಎದುರಾಗುತ್ತದೆ.
ಇದರಿಂದ ತಮ್ಮ ಬಲಿಷ್ಠ ಸಂಬಂಧ ಹಾಗೂ ಅನುಬಂಧಗಳನ್ನು ಕಾಪಾಡಿಕೊಳ್ಳಲು ಕಷ್ಟವಾಗಬಹುದು ಎಂಬ ಆಲೋಚನೆಗಳೂ ಇರಬಹುದು.
ಆದ್ದರಿಂದಲೇ ಮನೆಯಲ್ಲಿ ಮದುವೆ ವಿಷಯ ಬಂದಾಗ ಈ ಎಲ್ಲಾ ಸಮಸ್ಯೆಗಳು ಘರ್ಷಣೆಯನ್ನು ಉಂಟುಮಾಡುತ್ತವೆ.
3. ಸರಿಯಾದ ಶಿಕ್ಷಣದ ಕೊರತೆ:
ಯಾವುದಿದು ಸರಿಯಾದ ಶಿಕ್ಷಣ?
ಖಂಡಿತವಾಗಿಯೂ ನಾವಿಲ್ಲಿ ಶಾಲಾ ಕಾಲೇಜುಗಳ ಸರ್ಟಿಫಿಕೇಟ್ ಗಳು ಎಷ್ಟಿವೆ ಎಂದಾಗಲೀ, ಅವುಗಳಲ್ಲಿ ಎಷ್ಟು ದೊಡ್ಡ ಮಾರ್ಕ್ಸ್ ಇವೆ ಎಂಬುದರ ಮೇಲೆಯಾಗಲೀ ಪೋಷಕರ ವಿಧ್ಯೆಯನ್ನು ಅಳೆಯುತ್ತಿಲ್ಲ.
ಜೀವನಾನುಭವ ಮತ್ತು ಜ್ಞಾನದ ಜೊತೆಗೆ, ತಮ್ಮನ್ನೂ ಒಳಗೊಂಡಂತೆ ಸುತ್ತುಮುತ್ತಲಿನ ಆಗು-ಹೋಗುಗಳನ್ನು ನಿರಂತರವಾಗಿ ಗಮನಿಸಿ ಕಲಿಕೆಯನ್ನು ಜೀವಂತವಾಗಿರಿಸುವುದನ್ನೇ ನಾವಿಲ್ಲಿ ಸರಿಯಾದ ಶಿಕ್ಷಣ ಮತ್ತು ವಿದ್ಯೆ ಎನ್ನುತ್ತಿರುವುದು. ಇದು ಪ್ರಶ್ನಿಸುವ ಮುಖ್ಯ ಕಲೆಯನ್ನೂ ಒಳಗೊಂಡಿದೆ.
ಹಾಗಾಗಿ, ಸರಿಯಾದ ಶಿಕ್ಷಣವು ಮದುವೆ ವಿಚಾರಗಳನ್ನೂ ತನ್ನ ವ್ಯಾಖ್ಯೆಯಲ್ಲಿ ಸೇರಿಸಿಕೊಳ್ಳುತ್ತದೆ.
ಈಗ ಹೇಳಿ, ಮದುವೆ ವಿಚಾರದಲ್ಲಿ ಕೇವಲ ಪೋಷಕರ ಶಿಕ್ಷಣವನ್ನು ಪ್ರಶ್ನಿಸಿದರೆ ಸಾಕೆ?
4. ಜವಾಬ್ದಾರಿಯನ್ನು ಪೂರೈಸುವ ತವಕ:
ತಮ್ಮ ಮಗ/ಮಗಳಿಗೆ ಸರಿಯಾದ ವ್ಯಕ್ತಿಯನ್ನು ಹುಡುಕುವುದು ಮತ್ತು ಯಾವುದೇ ಸಮಸ್ಯೆಗಳಿಲ್ಲದೆ ಅವರ ಮದುವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ಭಾರತೀಯ ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ.
ಯಾಕೆ ಹೀಗೆ? ಒಂದೇ ವಾಕ್ಯದಲ್ಲಿ ಹೇಳುವುದಾದರೆ “ಭಾರತದ ಜೀವನ ಪದ್ಧತಿ”. ಇದು ಮನುಕುಲದ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ರಚಿಸಲಾದ ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆಯಾಗಿದೆ. ಅದು ಪ್ರತ್ಯೇಕ ವಿಷಯವಾಗಿದ್ದು ಅದನ್ನು ಬೇರೊಂದು ದಿನ ವಿವರವಾಗಿ ನೋಡೋಣ.
ಒಂದೇ ಮಗುವನ್ನು ಹೊಂದಿರುವ ಪೋಷಕರು ಮತ್ತು ಒಂದಕ್ಕಿಂತ ಹೆಚ್ಚಿನ ಮಕ್ಕಳುಳ್ಳ ಪೋಷಕರು ಬೇರೆ ಬೇರೆ ರೀತಿಯಲ್ಲಿ ಅವರ ಮದುವೆಯ ಜವಾಬ್ಧಾರಿಯನ್ನು ನಿಭಾಯಿಸಬೇಕಾಗುತ್ತದೆ.
ತಂದೆ-ತಾಯಿಯರು ತಮ್ಮ ಮಕ್ಕಳ ಮದುವೆಯ ನಂತರ ಸಿಗಬಹುದಾದ ತೃಪ್ತಿ ಮತ್ತು ಸ್ವಾತಂತ್ರ್ಯದ ಭಾವನೆಯನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ಅವರು ಮಕ್ಕಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾರೆ.
5. ಇತರರನ್ನು ಎದುರಿಸುವ ತಲೆನೋವನ್ನು ತಪ್ಪಿಸಲು:
ಇತರರು ಎಂದರೆ ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಅಥವಾ ದೊಡ್ಡ ಸಮಾಜವಾಗಿರಬಹುದು.
ಸಣ್ಣ ಕುಟುಂಬದಲ್ಲಾದರೆ ಈ ವಿಚಾರದಿಂದಾಗುವ ಗಲಾಟೆ ಗದ್ದಲಗಳನ್ನು ಸುಲಭದಲ್ಲಿ ನಿರ್ವಹಿಸಬಹುದಾದರೂ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅವಿಭಕ್ತ ಕುಟುಂಬದಲ್ಲಿ ನಿರ್ವಹಿಸುವುದು ಪೋಷಕರಿಗೆ ಮತ್ತಷ್ಟು ಇಕ್ಕಟ್ಟಿನ ಪರಿಸ್ಥಿತಿ ಉಂಟುಮಾಡುತ್ತದೆ.
ಮಕ್ಕಳು “ಮದುವೆಯ ವಯಸ್ಸು” ತಲುಪಿದ್ದಾರೆ ಎಂದು ತಿಳಿದಿರುವ ಜನರ ಪ್ರಶ್ನೆಗಳಿಗೆ ಉತ್ತರಿಸಲು ಪೋಷಕರು ಕಷ್ಟಪಡುತ್ತಾರೆ. ಆ ಪ್ರಶ್ನೆಗಳಲ್ಲಿ ಹೆಚ್ಚಿನವು ಆಧಾರರಹಿತವಾಗಿದ್ದರೆ ಮತ್ತೆ ಕೆಲವು ವಾಸ್ತವವನ್ನು ಆಧರಿಸಿರುತ್ತವೆ. ವಿವಾಹ ಪ್ರಸ್ತಾಪಗಳೊಂದಿಗೆ ಯಾವಾಗಲೂ ಸಿದ್ಧರಾಗಿರುವ ಜನರು ನಿರಂತರವಾಗಿ ಪೋಷಕರನ್ನು ಸಂಪರ್ಕಿಸುವಾಗ ಅವರನ್ನು ಎದುರಿಸುವುದೇ ಪೋಷಕರಿಗೆ ಹಿಂಸೆ ಎನಿಸುತ್ತದೆ.
ಯಾರಾದರೂ ಮದುವೆಯನ್ನು ಮುಂದೂಡುತ್ತಾರೆ ಎಂದು ಕೇಳಿದಾಗ ಜನರು ಮಾಡುವ ಕೊಳಕು ಕೆಲಸವೆಂದರೆ, ಅಂತಹ ಕುಟುಂಬ, ಹುಡುಗ ಅಥವಾ ಹುಡುಗಿಯ ಮೇಲೆ ಕೆಲವು ಅನಾರೋಗ್ಯವನ್ನೋ, ಸಮಸ್ಯೆಗಳನ್ನೋ ಊಹಿಸಲು ಮತ್ತು ಹೇರಲು ಪ್ರಾರಂಭಿಸುತ್ತಾರೆ. ಇದು ನಿಮ್ಮ ಪೋಷಕರಲ್ಲಿ ಭಯವನ್ನು ಉಂಟುಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೇಗ ಮದುವೆಯಾಗಲು ನಿಮ್ಮನ್ನು ಒತ್ತಾಯಿಸುತ್ತಾರೆ.
ಈ ಓದನ್ನು ನೀವು ಇಷ್ಟಪಡುತ್ತಿದ್ದೀರೇ?
ಹೌದು ಎಂದು ಭಾವಿಸುತ್ತೇನೆ.
6. ಕೆಟ್ಟ ಆರೋಗ್ಯ ಪರಿಸ್ಥಿತಿಗಳಿಂದಾಗಿ:
ಮದುವೆಯಂತಹಾ ಸಂತಸದ ಕುಟುಂಬ ಕಾರ್ಯಗಳಲ್ಲಿ ಉತ್ತಮ ಆರೋಗ್ಯದೊಂದಿಗೆ ಸಂತೋಷದಿಂದ ಪಾಲ್ಗೊಳ್ಳಬೇಕೆಂಬ ಆಶಯ ಮತ್ತು ಕನಸು ಯಾರಿಗಿಲ್ಲ ಹೇಳಿ!
ಸ್ವತಹಾ ಪಾಲಕರು ಅಥವಾ ಮದುವೆ ಕಾರ್ಯಗಳಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುವ ಕುಟುಂಬ ಸದಸ್ಯರಿಗೆ ಅರೋಗ್ಯ ಸಮಸ್ಯೆಗಳಿದ್ದು ಭವಿಷ್ಯದಲ್ಲಿ ಅದು ಹೆಚ್ಚಾಗುವ ಸಾಧ್ಯತೆ ಇದ್ದಲ್ಲಿ ಮದುವೆಗೆ ಮನಸ್ಸಿಲ್ಲ ಎಂದರೂ ಪೋಷಕರು ತಮ್ಮ ಮಕ್ಕಳನ್ನು ಒತ್ತಾಯಿಸುತ್ತಾರೆ.
7. ತಮ್ಮ ಮಕ್ಕಳನ್ನು ಹೆಚ್ಚು ಜವಾಬ್ಧಾರರನ್ನಾಗಿ ಮಾಡಲು:
ಈ ವಿಚಾರವನ್ನು ಬರೆಯುತ್ತಿರುವಾಗ ನಿಜವಾಗಿಯೂ ನನಗೆ ನಗು ಬರುತ್ತಿದೆ. ಏಕೆಂದರೆ ಈ ಪಾಯಿಂಟ್ ಎಲ್ಲರಿಗೂ ಅನ್ವಯಿಸದಿದ್ದರೂ ಇಲ್ಲಿ ಹೇಳುವುದು ಅನಿವಾರ್ಯವಾಗಿದೆ. ಹಾಗಾಗಿ ನಿಮಗೆ ಅನ್ವಯಿಸದಿದ್ದಲ್ಲಿ ದಯವಿಟ್ಟು ಈ ವಿಚಾರವನ್ನು ಬಿಟ್ಟುಬಿಡಿ.
ಇದು ತಮಾಷೆಯಾಗಿ ಕಂಡರೂ, ಭಾರತೀಯ ಪೋಷಕರು ತಮ್ಮ ಮಕ್ಕಳು ಮದುವೆಯಾದರೆ ಇನ್ನಷ್ಟು ಜವಾಬ್ದಾರರಾಗುತ್ತಾರೆ ಮತ್ತು ಜೀವನವನ್ನು ನಿಭಾಯಿಸುವ ಸಾಮರ್ಥ್ಯವು ಹೆಚ್ಚಾಗುತ್ತದೆ ಎಂಬ ಚಿಂತನೆಯನ್ನು ಹೊಂದಿದ್ದಾರೆ. ಇದು ಸ್ವಲ್ಪ ಸೋಮಾರಿತನದ ಜೀವನ’ ನಡೆಸುವ ಮಕ್ಕಳೊಂದಿಗೆ ಹೆಚ್ಚಾಗಿ ಸಂಭವಿಸುತ್ತದೆ.
ಏನಂತೀರಿ?
8. ಆರ್ಥಿಕ ಸಮಸ್ಯೆ ಅಥವಾ ಪ್ರಯೋಜನಗಳಿಂದಾಗಿ:
ಭಾರತದಲ್ಲಾಗುವ ಮದುವೆಗಳ ಖರ್ಚು-ವೆಚ್ಚಗಳನ್ನು ಒಳಗೊಂಡ ವರದಿಯೊಂದರಲ್ಲಿ ಈ ರೀತಿ ಹೇಳಿದೆ – “ಸರಾಸರಿ ಭಾರತೀಯ ವಿವಾಹದ ವೆಚ್ಚ ಸುಮಾರು $15,000 (ಅಂದಾಜು ರೂ 12.5 ಲಕ್ಷ). ಇದು ಸ್ಕೂಲ್‌ನಿಂದ ಪದವಿಯವರೆಗಿನ ಶಿಕ್ಷಣಕ್ಕಾಗಿ ಖರ್ಚು ಮಾಡುವ ಮೊತ್ತದ ಸುಮಾರು ಎರಡರಷ್ಟಾಗಬಹುದು”.
ಹಾಗಾಗಿ ಇಲ್ಲಿನ ಮದುವೆಗಳಲ್ಲಿ ಸಂಪತ್ತು ಒಂದು ಕೇಂದ್ರ ಬಿಂದುವಿನಂತೆ ಕಾರ್ಯನಿರ್ವಹಿಸುತ್ತದೆ. ಈ ವಿಚಾರವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು;
- ಸಮಸ್ಯೆಗಳು: ಆರ್ಥಿಕ ಸಮಸ್ಯೆಗಳಿರುವ ಪಾಲಕರು ತಮ್ಮ ಮಕ್ಕಳ ಮದುವೆ ಅಥವಾ ಇತರ ಸಂಬಂಧಿತ ವೆಚ್ಚಗಳನ್ನು ಭರಿಸಲು ಯಾರಾದರೂ ಸಿದ್ಧರಿದ್ದರೆ ತಮ್ಮ ಮಕ್ಕಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾರೆ.
- ಪ್ರಯೋಜನಗಳು: ಮದುವೆಗಳು ಅನೇಕ ಕುಟುಂಬಗಳಲ್ಲಿ ಸಂತೋಷದ ಸಂಬಂಧವನ್ನು ಬೆಸೆಯುವ ಕಾರ್ಯಕ್ಕಿಂತ ಸಂಪತ್ತಿನ ವಿನಿಮಯಕ್ಕೆ ವೇದಿಕೆಯಾಗುತ್ತವೆ. ಅಂತಹ ಕುಟುಂಬಗಳಲ್ಲಿ, ಹಿರಿಯ ಸದಸ್ಯರು ತಮ್ಮ ಮಕ್ಕಳಿಗೆ ‘ಆ ರೀತಿಯಲ್ಲಿ ಸೂಕ್ತವಾದ’ ಕೆಲವು “ಶ್ರೀಮಂತ ಅಭ್ಯರ್ಥಿಗಳನ್ನು” ಕಂಡುಕೊಂಡಾಗ ಬಲವಂತದ ಮದುವೆಯನ್ನು ಕಾಣಬಹುದು.
9. ಇದೇ ವಯಸ್ಸಿನ ಮಕ್ಕಳು ಈಗಾಗಲೇ ಮದುವೆಯಾಗಿದ್ದಾರೆ:
ಮಕ್ಕಳು ವಿವಾಹದ ವಯಸ್ಸನ್ನು ತಲುಪಿದಾಗ, ಪೋಷಕರು ಹೆಚ್ಚುತ್ತಿರುವ ವಯಸ್ಸಿನ ಬಗ್ಗೆ ಚಿಂತಿಸುತ್ತಾರೆ.
ಏಕೆ?
- ಉದಾಹರಣೆಗೆ- ನಿಮ್ಮ ಸ್ನೇಹಿತರು, ಸೋದರ ಸಂಬಂಧಿಗಳು, ಸಹಪಾಠಿಗಳು ಅಥವಾ ಪೋಷಕರ ಸ್ನೇಹಿತರ ಮಕ್ಕಳಂತಹ ಒಂದೇ ವಯಸ್ಸಿನ ಮಕ್ಕಳು ಈಗಾಗಲೇ ಮದುವೆಯಾಗಿದ್ದಾರೆ ಎಂದು ಹೇಳೋಣ. ನೀವು ಇನ್ನೂ ಮದುವೆಯಾಗದಿದ್ದರೆ, ಇದು ಪೋಷಕರಲ್ಲಿ ಸೋಲೀನ ಭಾವನೆಯನ್ನು ಮೂಡಿಸುತ್ತದೆ.
- ಜೈವಿಕ ಅಂಶಗಳು: ಬೆಳೆಯುತ್ತಿರುವ ವಯಸ್ಸಿನ ಜೊತೆಗೆ, ನಮಗೆ ತಿಳಿದಿರುವಂತೆ ದೇಹವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತದೆ. ಆರೋಗ್ಯಕರ ಮೊಮ್ಮಕ್ಕಳನ್ನು ಹೊಂದಲು ಕಷ್ಟಕರವಾದ ಜೈವಿಕ ಅಂಶಗಳ ಬಗ್ಗೆ ಪೋಷಕರು ಉದ್ವಿಗ್ನರಾಗಿರುತ್ತಾರೆ.
ತಡವಾಗಿ ಆಗುವ ಮದುವೆಯ ಒಳಿತು-ಕೆಡುಕುಗಳ ಕುರಿತ ಅಧ್ಯಯನಗಳು ಹೇಳುವ ಪ್ರಕಾರ “ವಯಸ್ಸು ಹೆಚ್ಚಾದಂತೆ ಮಹಿಳೆಯರಲ್ಲಿ ಫಲವತ್ತತೆಯ ಗುಣಮಟ್ಟದಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುವ ಅಂಡಾಣುಗಳ ಕುಸಿತ ಉಂಟಾಗುತ್ತದೆ. 30 ವರ್ಷದೊಳಗಿನ ಪುರುಷರ ಮಕ್ಕಳಿಗಿಂತ 40 ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಪುರುಷರ ಮಕ್ಕಳು ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಯನ್ನು ಹೊಂದುವ ಸಾಧ್ಯತೆ 5.75 ಪಟ್ಟು ಹೆಚ್ಚು ಎಂದು ಸಂಶೋಧನೆ ಸೂಚಿಸುತ್ತದೆ”.
ಪೋಷಕರು ನಿಮ್ಮನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿರುವುದಕ್ಕೆ ಇದೂ ಒಂದು ಕಾರಣವೇ?
10. ಪೋಷಕರು ನಿಜವಾದ ಕಾಳಜಿಯಿಂದ ಮದುವೆಯಾಗಲು ಒತ್ತಾಯಿಸುತ್ತಾರೆ:
ಪೋಷಕರ ಒತ್ತಡದ ಚಟುವಟಿಕೆಯನ್ನು ಸಮರ್ಥಿಸುವ ಮೇಲಿನ 9 ಅಂಶಗಳಲ್ಲಿ ಉತ್ತಮ ಕಾರಣಗಳನ್ನು ಆಯ್ಕೆ ಮಾಡೋದು ಬಹುಷಃ ಕಷ್ಟ.
ಆದರೆ ತಮ್ಮ ಮಕ್ಕಳ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವ ಪೋಷಕರೂ ಇದ್ದಾರೆ ಎಂಬ ಅಂಶವನ್ನು ನಾವು ಅಲ್ಲಗಳೆಯುವಂತಿಲ್ಲ.
ನಾವು ಅದನ್ನು ಹೇಗೆ ತಿಳಿಯಬಹುದು?
- ತಮ್ಮ ಮಕ್ಕಳ ಬಗ್ಗೆ ಅವರ ಆಲೋಚನೆ ಮತ್ತು ಕಾರ್ಯಗಳು ಸಮತೋಲನದಿಂದ ಕೂಡಿರುತ್ತದೆ.
- ಒಳ್ಳೆಯ ಕಾರ್ಯಗಳಿಗೆ ಬೆಂಬಲಿಸುತ್ತಾರೆ. ಆದರೆ ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ತಮ್ಮ ಮೇಲೆ ಅವಲಂಬಿತರಾಗುವುದನ್ನು ಇಷ್ಟಪಡುವುದಿಲ್ಲ.
- ಸೌಹಾರ್ದ ಸ್ವಭಾವ, ಅಗತ್ಯವಿರುವಲ್ಲಿ ಕಟ್ಟುನಿಟ್ಟು, ಅವರ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ತಮ್ಮ ಅನುಭವ ಹಾಗೂ ಜ್ಞಾನದ ಮಿತಿಗಳ ಬಗ್ಗೆ ತಿಳಿದಿರುವುದು ಒಳ್ಳೆಯ ಪೋಷಕರ ಕೆಲವು ಗುಣಲಕ್ಷಣಗಳಾಗಿವೆ.
- ಬದಲಾಗುವ ಪ್ರೀತಿಯ ಭಾವನೆಗಳು ಮತ್ತು ಅದರ ಪರಿಣಾಮಗಳನ್ನು ನಿರ್ವಹಿಸಲು ತಾವೂ ಪ್ರಯತ್ನಿಸುವುದರ ಜೊತೆಗೆ ಮಕ್ಕಳಲ್ಲೂ ಅದರ ಅರಿವು ಮೂಡಿಸುತ್ತಾರೆ.
ಮೇಲೆ ತಿಳಿಸಿದಂತೆ ಸಮತೋಲನ ಸ್ವಭಾವದ ಪೋಷಕರು ತಮ್ಮ ಮಕ್ಕಳನ್ನು ಮದುವೆಯಾಗಲು ಪ್ರೇರೇಪಿಸಿದರೆ, ವಾಸ್ತವ ಆಧಾರಿತ (ಜೈವಿಕ ಅಂಶಗಳಂತೆ) ಕೆಲವು ಕಾರಣಗಳು ಇರಬಹುದು ಎಂದರ್ಥ.
ಇವಿಷ್ಟು ಮದುವೆಗೆ ಮನಸ್ಸಿಲ್ಲ ಎಂದರೂ ಪೋಷಕರು ತಮ್ಮ ಮಕ್ಕಳನ್ನು ಒತ್ತಾಯಿಸಲು ಪ್ರಮುಖ ಕಾರಣಗಳು.
ಇವುಗಳಲ್ಲಿ ನಿಮಗೆ ಅನ್ವಯಿಸುವ ಪಾಯಿಂಟ್ ಎಷ್ಟಿವೆ?
ಸರಿ. ಇನ್ನು ಈ ಒತ್ತಡವನ್ನು ಎದುರಿಸುವ ರೀತಿಯ ಕಡೆಗೆ ಗಮನ ಹರಿಸೋಣ, ಬನ್ನಿ.
ಮದುವೆಯ ಒತ್ತಡವನ್ನು ಹೇಗೆ ಎದುರಿಸಬಹುದು?
ಮದುವೆಯಂತಹಾ ವಿಚಾರಗಳ ಮಾತುಕತೆಯಲ್ಲಿ ನೀವು ಏನು ಹೇಳುತ್ತೀರಿ, ಯಾಕೆ ಹೇಳುತ್ತೀರಿ, ಮತ್ತು ಅದರ ಪರಿಣಾಮಗಳು ಹೇಗಿರುತ್ತವೆ ಎಂಬುದು ನಿಮ್ಮಲ್ಲಿರುವ ಸ್ಪಷ್ಟತೆಯನ್ನು ಅವಲಂಬಿಸಿದೆ.
ಹಾಗಾಗಿ ಮೊದಲು ಸ್ಪಷ್ಟತೆಯನ್ನು ತಂದುಕೊಳ್ಳುವ ಕೆಲಸವಾಗಬೇಕು.
1. ಜೀವನದಲ್ಲಿ ಸಂಬಂಧಗಳು ಮತ್ತು ಮದುವೆಯ ಪಾತ್ರವನ್ನು ತಿಳಿದುಕೊಳ್ಳುವುದು:
ಸರಳವಾಗಿ ಹೇಳುವುದಾದರೆ, ವಿವಾಹವು ಸಂಬಂಧಗಳನ್ನು ಬಲಪಡಿಸಲು, ಸಮಾಜದಲ್ಲಿ ಸಾಮರಸ್ಯದಿಂದ ಕೂಡಿದ ಕ್ರಮಬದ್ಧ ಜೀವನ ನಡೆಸಲು ಮನುಷ್ಯರು ಕಂಡುಕೊಂಡ ಒಂದು ವ್ಯವಸ್ಥೆ ಎನ್ನಬಹುದಲ್ಲವೇ!
ಪ್ರಾಚೀನ ಭಾರತೀಯರು ಮಾನವ ಮನಸ್ಸಿನ ರಚನೆ ಮತ್ತು ಸ್ವಭಾವವನ್ನು ಆಳವಾಗಿ ಗಮನಿಸಿ ಅನೇಕ ವಿಷಯಗಳನ್ನು ಕಂಡುಹಿಡಿದಿದ್ದಾರೆ. ಆಸೆಗಳು, ನೋವು ಮತ್ತು ಸುಖ ಮನಸ್ಸು ಕಾರ್ಯನಿರ್ವಹಿಸುವ ಕಾರಣಗಳು ಎಂಬುದು ಇಲ್ಲಿನ ಪ್ರಮುಖ ಅಂಶಗಳಾಗಿವೆ.
ಸಂಬಂಧಗಳು ಮತ್ತು ಮದುವೆ ಇದಕ್ಕೆ ಹೊರತಾಗಿಲ್ಲ ಎಂಬುದನ್ನು ನಾವು ಗಮನಿಸಬೇಕಾಗಿದೆ.
ಇತ್ತೀಚಿನ ಹಲವು ಹುಡುಗ – ಹುಡುಗಿಯರು ಮದುವೆಯಾಗಬೇಕೋ, ಬೇಡವೋ ಎಂಬ ಗೊಂದಲದಲ್ಲಿರುತ್ತಾರೆ. ಇದರ ಬಗ್ಗೆ ಸ್ಪಷ್ಟತೆ ಸಿಗಬೇಕಾದರೆ ಮದುವೆಯ ನಂತರದ ಜೀವನ ಮತ್ತು ಮದುವೆಯಾಗದ ಜೀವನದ ಒಳಿತು-ಕೆಡುಕುಗಳೆರಡನ್ನೂ ವಾಸ್ತವಿಕವಾಗಿ ಗಮನಿಸಿ ಅರ್ಥೈಸಬೇಕು.
ಉದಾಹರಣೆಗೆ- ಅರ್ಧಾಂಗಿಯಿಲ್ಲದೆ ಏಕಾಂಗಿಯಾಗಿ ಜೀವಿಸುವಾಗ ಒಂಟಿತನವನ್ನು ಎದುರಿಸುವ ಹೆಚ್ಚಿನ ಸಾಧ್ಯತೆಗಳಿವೆ. ಮತ್ತೊಂದೆಡೆ, ಮದುವೆಯ ನಂತರದ ಸಂಬಂಧಗಳನ್ನು ನಿಭಾಯಿಸುವುದು ಮತ್ತು ವಿವಿಧ ಆಯಾಮಗಳುಳ್ಳ ಸಂಬಂಧಗಳ ಸಮಸ್ಯೆಗಳನ್ನು ಪರಿಹರಿಸುವ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
2. ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವುದು:
ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವುದು ಮನದಲ್ಲಿ ಸ್ಪಷ್ಟತೆ ತರುವ ಪ್ರಮುಖ ಹೆಜ್ಜೆ ಎನ್ನಬಹುದು. ಪ್ರಾರಂಭದಲ್ಲಿ ಇದು ಬಹಳ ಕಷ್ಟ ಅಥವಾ ಹಿಂಸೆ ಎಂದು ತೋರಬಹುದು. ಏಕೆಂದರೆ ಸಾಮಾನ್ಯವಾಗಿ ಮನಸ್ಸು ತಾನು ಅಂದುಕೊಂಡಿದ್ದೇ ಸರಿ ಎಂಬ ಧೋರಣೆ ಹೊಂದಿರುತ್ತದೆ.
ಇಲ್ಲಿ ಕೆಲವು ಮೂಲಭೂತ ಪ್ರಶ್ನೆಗಳಿವೆ, ಗಮನಿಸಿ;
- ನನ್ನ ಪ್ರಸ್ತುತ ಸಂಬಂಧಗಳ ಗುಣಮಟ್ಟ ಹೇಗಿದೆ?
- ನಾನು ಮದುವೆಯಾಗಬೇಕೇ?
- ನಾನು ಯಾವಾಗ ಮದುವೆಯಾಗಬೇಕು?
- ಯಶಸ್ವಿ ಮದುವೆಯ ಸಂಬಂಧದ ಅವಶ್ಯಕತೆಗಳು ಯಾವುವು?
- ನನ್ನ ಸ್ವಭಾವ ಏನು ಮತ್ತು ನನಗೆ ಯಾವ ರೀತಿಯ ವ್ಯಕ್ತಿ ಸೂಕ್ತ?
ಈ ಪ್ರಶ್ನೆಗಳಿಗೆ ಉತ್ತರಗಳು ಹೌದು ಅಥವಾ ಇಲ್ಲ ಎಂಬ ಒಂದು ಪದದಲ್ಲಿ ಕೊನೆಗೊಳ್ಳಬಾರದು. ಅದು ಏಕೆ ಹೌದು ಅಥವಾ ಏಕೆ ಇಲ್ಲ ಎಂಬ ವಿವರಣೆಯೂ ನಿಮ್ಮಲ್ಲಿರಬೇಕು.
ಈ ಕೆಲಸವನ್ನು ನೀವು ಮನಸ್ಸಿನಲ್ಲೇ ಮಾಡಹೊರಟರೆ ಎರಡನೇ ಅಥವಾ ಮೂರನೇ ಪ್ರಶ್ನೆಯ ನಂತರ ನೀವು ಗೊಂದಲಕ್ಕೊಳಗಾಗುವ ಸಾಧ್ಯತೆಯೇ ಹೆಚ್ಚು. ಈ ಸವಾಲು ವೃತ್ತಿಜೀವನದಷ್ಟೇ ಮುಖ್ಯವಾದುದರಿಂದ ಮೇಲಿನ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಲು ಒಂದು ಪೆನ್ನು ಹಾಗೂ ಕಾಗದ ಬಳಸೋದು ಸೂಕ್ತ.
3. ಒಮ್ಮತಕ್ಕಾಗಿ ವಿಚಾರವಿನಿಮಯದ ಕಲೆಯನ್ನು (Negotiation) ಕಲಿಯುವುದು:
ಒಮ್ಮೆ ನೀವು ಸಂಬಂಧಗಳು ಹಾಗೂ ಮದುವೆಯ ಪಾತ್ರದ ಸ್ಪಷ್ಟತೆಯನ್ನು ಹೊಂದಿದ್ದರೆ, ಅವುಗಳನ್ನು ಪೋಷಕರು, ಸ್ನೇಹಿತರು (ಅಥವಾ ಇನ್ನಿತರ ಒತ್ತಾಯಿಸುವ ಜನರೊಂದಿಗೆ) ಸಮಾಲೋಚಿಸಿ ಒಮ್ಮತದ ನಿರ್ಧಾರಕ್ಕೆ ಬರುವ ಕೆಲಸ ಮಾಡಬೇಕಾಗುತ್ತದೆ.
ಇತರರು ಏನಾಗಬೇಕೆಂದು ಬಯಸುತ್ತಾರೋ ಅದರೊಂದಿಗೆ ನಿಮ್ಮ ಬಯಕೆಯನ್ನು ಹೊಂದಿಸಿ ಪರಸ್ಪರ ಒಮ್ಮತದ ನಿರ್ಧಾರಕ್ಕೆ ಬರುವಂತೆ ಮಾಡುವ ಕಲೆ ಅಥವಾ ಕೌಶಲ್ಯವೇ ನೆಗೋಷಿಯೇಷನ್ (Negotiation).
ನೆನಪಿಡಿ. ಇದು ಒಬ್ಬರನ್ನು ಉದ್ದೇಶಪೂರ್ವಕವಾಗಿ ಮೋಸಗೊಳಿಸುವ ಪ್ರಕ್ರಿಯೆಯಲ್ಲ. ಬದಲಾಗಿ, ಪರಸ್ಪರ ಪ್ರಯೋಜನಕಾರೀ ಪರಿಸ್ಥಿತಿಗಳನ್ನು ನಿರ್ಮಿಸುವ ಪ್ರಯತ್ನವಾಗಿರಬೇಕು.
ಪರಸ್ಪರ ಪ್ರಯೋಜನಕಾರೀ ಪರಿಸ್ಥಿತಿಗಳನ್ನು ಸೃಷ್ಟಿಸಲು ಪ್ರತಿಯೊಂದು ಸನ್ನಿವೇಶವೂ ಅನುಕೂಲಕರವಾಗಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳುವ ಅಗತ್ಯವಿರಬಹುದು. ದೈಹಿಕ ಚಿತ್ರಹಿಂಸೆ ಅಥವಾ ಸಾಂದರ್ಭಿಕ ಆರೈಕೆ/ಸ್ನೇಹವನ್ನು ಮೀರಿ ಹುಡುಗಿಯನ್ನು ಮದುವೆಯಾಗುವಂತೆ ಒತ್ತಾಯಿಸುವುದು ಕಾನೂನಿಗೆ ವಿರುದ್ಧವಾಗಿದೆ. ಈ ಕುರಿತ ಇನ್ನಷ್ಟು ಮಾಹಿತಿ legalserviceindia.com ನ Family pressure of marriage on daughter and Indian laws ಎಂಬ ಲೇಖನದಲ್ಲಿದೆ.
ನೀವು ಇಲ್ಲಿಯವರೆಗೆ ತಾಳ್ಮೆಯಿಂದ ಈ ಪೋಸ್ಟ್ ಅನ್ನು ಓದಿದ್ದೀರಿ. ನನಗಂತೂ ಬಹಳ ಸಂತೋಷವಾಗಿದೆ ಕಣ್ರೀ. ಅದಕ್ಕಾಗಿಯೇ ನಾನು ನಿಮ್ಮೊಂದಿಗೆ ಮಾರ್ಕೆಟಿಂಗ್ ನಲ್ಲಿ ಬಳಸಲಾಗುವ ಒಂದು ರಹಸ್ಯ ಟೆಕ್ನಿಕ್ ಅನ್ನು ಹಂಚಿಕೊಳ್ಳಲು ಬಯಸುತ್ತೇನೆ.
ಅದುವೇ – “ನೀವು ಇತರ ವ್ಯಕ್ತಿಯಿಂದ ಮೂರು ಬಾರಿ ಹೌದು ಎಂಬ ಉತ್ತರವನ್ನು ತರಲು ಸಾಧ್ಯವಾದರೆ, ನಿಮ್ಮ ನಾಲ್ಕನೇ ಪ್ರಶ್ನೆಗೆ ಉತ್ತರವು ಹೌದು ಎನ್ನುವ ಸಾಧ್ಯತೆಯೇ ಹೆಚ್ಚು.”
ನಿಮಗೆ ಆಸಕ್ತಿ ಇದ್ದರೆ, ನೆಗೋಷಿಯೇಶನ್ ಮಾಸ್ಟರ್ ಕ್ರಿಸ್ ವೋಸ್ ಅವರ “Never Split The Difference– -negotiating as if Your Life Is Depended on It” ಪುಸ್ತಕವನ್ನು ಅಥವಾ ಅದರ ಕನ್ನಡ ಅನುವಾದ ದೊರೆತರೆ ಅದನ್ನು ಓದಬಹುದು. ಅದು ನಿಮಗೆ ಸಹಾಯ ಮಾಡಬಹುದು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):
ತೀರ್ಮಾನ:
ಇಲ್ಲಿಯವರೆಗೆ ಮದುವೆಗೆ ಮನಸ್ಸಿಲ್ಲದಿದ್ದರೂ ಭಾರತದಲ್ಲಿ ಪೋಷಕರು ಮಕ್ಕಳನ್ನು ಒತ್ತಾಯಿಸುವ ಕಾರಣಗಳು ಮತ್ತು ಅವರನ್ನು ಎದುರಿಸಬಹುದಾದ ರೀತಿಯ ಬಗ್ಗೆ ವಿವರವಾಗಿ ನೋಡಿದೆವು.
ಒಟ್ಟಾರೆಯಾಗಿ ಹೇಳುವುದಾದರೆ, ಪೋಷಕರು ಬೆಳೆದ ರೀತಿ, ಅಧಿಕಾರದ ಪ್ರಜ್ಞೆ, ಜವಾಬ್ದಾರಿ ಅಥವಾ ನಿಜವಾದ ಕಾಳಜಿಯಿಂದ ಅವರು ನಿಗದಿತ ವಯಸ್ಸನ್ನು ತಲುಪಿದ ತಕ್ಷಣ ಮದುವೆಯಾಗಲು ಮಕ್ಕಳನ್ನು ಒತ್ತಾಯಿಸುತ್ತಾರೆ. ಹಾಗೆ ಮಾಡುವುದರಿಂದ ತೃಪ್ತರಾಗಬಹುದು ಮತ್ತು ಸ್ವಾತಂತ್ರ್ಯದ ಭಾವವನ್ನು ಆನಂದಿಸಬಹುದು ಎಂದು ಪೋಷಕರು ಭಾವಿಸುತ್ತಾರೆ.
ವಿವಾಹ ವಿಚಾರದಲ್ಲಿ ಪೋಷಕರೊಂದಿಗೆ ನೇರವಾಗಿ ಮಾತನಾಡುವುದು ಅಥವಾ ಅವರ ಮನವೊಲಿಸುವ ಪ್ರಯತ್ನ ವ್ಯರ್ಥವಾಗಲೂಬಹುದು. ಆದ್ದರಿಂದ ಮೊದಲು ತನ್ನಲ್ಲಿ ಸ್ಪಷ್ಟತೆಯನ್ನು ತರುವುದು, ಸಂಬಂಧಗಳು ಹಾಗೂ ಮದುವೆಯ ಪಾತ್ರವನ್ನು ಅರ್ಥಮಾಡಿಕೊಂಡ ನಂತರ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾತುಕತೆ ನಡೆಸಿದರೆ ಒಂದು ಒಮ್ಮತದ ನಿರ್ಧಾರಕ್ಕೆ ಬರಲು ಸುಲಭವಾಗುತ್ತದೆ.
ಈ ಮದುವೆ ಒತ್ತಡದ ವಿಚಾರದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳೇನು?
ಕಾಮೆಂಟ್ ಮಾಡಿ.
ನಿಮ್ಮ ವಿವಾಹ ಸ್ಪರ್ಧಿಗಳೊಂದಿಗೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಿ. ಹಾ ಹಾ ಹಾ…
ಮತ್ತೊಂದು ಪೋಸ್ಟ್ ನಲ್ಲಿ ಮತ್ತೆ ಸಿಗೋಣ.
Share ಮಾಡಿ!
ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.
ಲೇಖಕರು ಹಾಗೂ ಪ್ರಕಾಶಕರು
ಶ್ರೀನಿಧಿ. ಕೆ (Shreenidhi K)
ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.