ಕಾರ್ಟೂನ್-ರೀತಿಯ-ಮಾನವ-ಗುಂಪು-ತಕ್ಕಡಿ-ಹಾಗೂ-ಕೂಡಿಸುವ-ಹಾಗೂ-ಕಳೆಯುವ-ಚಿಹ್ನೆಗಳ-ಚಿತ್ರ-ಅವಿಭಕ್ತ-ಕುಟುಂಬದ-ಅನುಕೂಲಗಳು-ಮತ್ತು-ಅನಾನುಕೂಲಗಳು-ಎಂಬ-ವಿಷಯವನ್ನು-ಒಳಗೊಂಡಿದೆ.

ಅವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು । 10 ಮುಖ್ಯ ಅಂಶಗಳೊಂದಿಗೆ!

ಹೇ ನನ್ನ ಓದುಗ ಮಿತ್ರನೇ, ಅವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು ಎಂಬ ವಿಷಯವನ್ನು ನೀವು ಏಕೆ ತಿಳಿದುಕೊಳ್ಳಲು ಬಯಸುತ್ತೀರಿ?

90% ಸಾಧ್ಯತೆ ಏನೆಂದರೆ, ಬಹುಷಃ ನೀವು ಈ ವಿಷಯದ ಕುರಿತು ಪ್ರಬಂಧವನ್ನೋ ಅಥವಾ ಲೇಖನವನ್ನೋ ಬರೆಯ ಹೊರಟಿರುವಿರಿ, ಇಲ್ಲವಾದರೆ ಅವಿಭಕ್ತ ಕುಟುಂಬವನ್ನು ತೊರೆಯಲು ಅಥವಾ ಸೇರಲು ಬಯಸಿದ್ದೀರಿ ಎನಿಸುತ್ತಿದೆ.

ಅದೇನೇ ಇರಲಿ. ನಿತ್ಯ ಜೀವನದಲ್ಲಿ ಅವಿಭಕ್ತ ಕುಟುಂಬದ ಒಳಿತು ಕೆಡುಕುಗಳು ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಗಮನಿಸುವ ಪ್ರಯತ್ನ ಇದಾಗಿದೆ. ಕೊನೆಯಲ್ಲಿ ಅನಾನುಕೂಲಗಳನ್ನು ಇಲ್ಲವಾಗಿಸಲು ಸಾಧ್ಯವೇ ಎಂಬುದನ್ನೂ ನೋಡೋಣ.

ಹಾಗಾದರೆ ನೀವು ರೆಡಿ ತಾನೇ?

ವಿಷಯಗಳ ಅವಲೋಕನ:

ಅವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು – ವಿಷಯಕ್ಕೆ ಮುನ್ನ;

ಕಾರ್ಟೂನ್-ರೀತಿಯ-ಮಾನವ-ಗುಂಪು-ತಕ್ಕಡಿ-ಹಾಗೂ-ಕನ್ನಡ-ಪದಗಳನ್ನು-ಒಳಗೊಂಡ-ಚಿತ್ರ-ಅವಿಭಕ್ತ-ಕುಟುಂಬದ-ಅನುಕೂಲಗಳು -ಮತ್ತು-ಅನಾನುಕೂಲಗಳು-ಎಂಬ-ವಿಷಯವನ್ನು-ಒಳಗೊಂಡಿದೆ.

ನಾವು ನೇರವಾಗಿ ದೊಡ್ಡ ಕುಟುಂಬಗಳ ಸಾಧಕ-ಬಾಧಕಗಳಿಗೆ ಜಿಗಿಯುವ ಮೊದಲು, ಅವುಗಳ ಹಿಂದಿನ ಸಂದರ್ಭಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಸ್ವಭಾವತಃ ಕೊರಗುತ್ತಿರುವ ವ್ಯಕ್ತಿ, ಸಾಂದರ್ಭಿಕವಾಗಿ ಬೇಸರಗೊಂಡ ವ್ಯಕ್ತಿ, ತನ್ನ ಆರಾಮ ವಲಯವನ್ನು (comfort zone) ಬಿಡಲು ಇಷ್ಟಪಡದ ವ್ಯಕ್ತಿ ಮತ್ತು ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಬಯಸುವ ವ್ಯಕ್ತಿ, ಹೀಗೆ ಪ್ರತಿಯೊಬ್ಬರೂ ಒಂದು ಪರಿಸ್ಥಿತಿಯನ್ನು ಅರ್ಥೈಸುವಲ್ಲಿ ವ್ಯತ್ಯಾಸಗಳಿವೆ.

ಆದ್ದರಿಂದ, ವೈಯಕ್ತಿಕ ಮತ್ತು ಕೌಟುಂಬಿಕ ದೃಷ್ಟಿಕೋನಗಳೆರಡನ್ನೂ ಪರಿಗಣಿಸುವುದು ಅವಿಭಕ್ತ ಕುಟುಂಬಗಳ ಒಳಿತು ಮತ್ತು ಕೆಡುಕುಗಳನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಅನುಕೂಲಗಳು

1. ಭದ್ರತೆಯ ಭಾವನೆ:

“ಸುರಕ್ಷಿತರಾಗಿದ್ದೇವೆ” ಎಬ ಭಾವನೆಯು ಜೀವನದ ಮುಖ್ಯ ಅಡಿಪಾಯದ ಅಂಶಗಳಲ್ಲೊಂದಾಗಿದೆ. ದೇಶ ಮಟ್ಟದಲ್ಲಿ ಸೈನಿಕರು ಹಾಗೂ ಕುಟುಂಬ ವ್ಯವಸ್ಥೆಯಲ್ಲಿ ಸದಸ್ಯರು ಈ ಜವಾಬ್ಧಾರಿಯನ್ನು ನಿರ್ವಹಿಸುವುದು ಉತ್ತಮ ಉದಾಹರಣೆಯಾಗಿದೆ.

ಮುಖ್ಯವಾಗಿ, ಮಕ್ಕಳಿಗೆ ತಮ್ಮ ಜೀವನದ ಆರಂಭಿಕ ಹಂತದಲ್ಲಿ ವಿಶೇಷವಾದ ಭದ್ರತೆಯ ಅಗತ್ಯವಿರುತ್ತದೆ.

ಇದಕ್ಕೆ ಪೂರಕ ಎಂಬಂತೆ, “Children’s Security in the Context of Family Instability and Maternal Communications” ಎಂಬ ಅಧ್ಯಯನವು ಈ ರೀತಿ ವರದಿ ಮಾಡಿದೆ;

” ಮಕ್ಕಳಿಗೆ, ಕುಟುಂಬವು ರಕ್ಷಣೆ ಮತ್ತು ಸ್ಥಿರತೆಯ ಪ್ರಾಥಮಿಕ ಮೂಲವಾಗಿದೆ. ಕೌಟುಂಬಿಕ ಅವ್ಯವಸ್ಥೆ ಮತ್ತು ಅನಿರೀಕ್ಷಿತತೆಗಳು ಮಕ್ಕಳ ಆತ್ಮವಿಶ್ವಾಸದ ಕೊರತೆಗೆ ಕಾರಣವಾಗಬಹುದು.”

ಅವಿಭಕ್ತ ಕುಟುಂಬದಲ್ಲಿ ಹೆಚ್ಚು ಸದಸ್ಯರಿರುವುದರಿಂದ ಸುಭದ್ರ ವಾತಾವರಣದಲ್ಲಿ ಇರುವ ಸಾಧ್ಯತೆ ಹೆಚ್ಚುತ್ತದೆ. ಆಗಾಗ್ಗೆ ಒಂಟಿತನ ಅನುಭವಿಸುವವರಿಗಂತೂ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

2. ಸಹಾಯ ಹಸ್ತಗಳ ಲಭ್ಯತೆ:

ಒಬ್ಬ-ವ್ಯಕ್ತಿಯ-ಕೈ-ಇನ್ನೊಬ್ಬ-ಮಲಗಿರುವ-ವೃದ್ಧರ-ಕೈ-ಹಿಡಿದಿರುವ-ಫೋಟೋ-ಪ್ರೇರಿತ-ಚಿತ್ತ-ಸಹಾಯಕ-ಹಸ್ತ-ಎಂಬ-ಕನ್ನಡ-ವಾಕ್ಯವನ್ನು-ಒಳಗೊಂಡಿದೆ.

ಸ್ನೇಹಪರ ಮತ್ತು ಆರೋಗ್ಯಕರ ಸಂಬಂಧದಲ್ಲಿ ಪರಸ್ಪರ ಸಹಾಯ ಮಾಡುವುದು ಸಾಮಾನ್ಯ ಚಟುವಟಿಕೆಯಾಗಿದೆ.

ಸಹಾಯ ಹಸ್ತಗಳ ಲಭ್ಯತೆಯ ದೃಷ್ಟಿಯಿಂದ ಅವಿಭಕ್ತ ಕುಟುಂಬವು ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದರ ಕುರಿತು ಕೆಲವು ಅಂಶಗಳು ಇಲ್ಲಿವೆ.

  • ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಹಾಯ: ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಕೆಲವು ಆರೋಗ್ಯ ಸಮಸ್ಯೆಗಳಿದ್ದರೆ, ಸಹಾಯಕ್ಕಾಗಿ ಮತ್ತು ಕಾಳಜಿಯನ್ನು ತೋರಿಸಲು ಸಾಮಾನ್ಯವಾಗಿ ಒಬ್ಬರಾದರೂ ಇರುತ್ತಾರೆ. ಉದಾಹರಣೆಗೆ- ಹಾಸಿಗೆ ಹಿಡಿದಿರುವ ಕುಟುಂಬದ ಹಿರಿಯ ಸದಸ್ಯರಿಗೆ ಔಷಧಿ ನೆನಪಿಸುವ ಅಥವಾ ನೀಡುವ ಸಹಾಯ.
  • ಅಡುಗೆ ಕೆಲಸಗಳಲ್ಲಿ ಸಹಾಯ: ದೊಡ್ಡ ಕುಟುಂಬಗಳಲ್ಲಿ ಅಡುಗೆಗೆ ಸಂಬಂಧಿಸಿದ ಕೆಲಸಗಳು ಹೆಚ್ಚು. ಆದ್ದರಿಂದ ಸಾಮಾನ್ಯವಾಗಿ ಮಹಿಳೆಯರು ಕುಟುಂಬದ ಇತರ ಸದಸ್ಯರಿಂದ ಸಹಾಯ ಪಡೆಯುತ್ತಾರೆ. ಸಹಜವಾಗಿ, ಎಲ್ಲಾ ಅವಿಭಕ್ತ ಕುಟುಂಬಗಳಲ್ಲಿ ನಾವು ಈ ರೀತಿಯ ಪ್ರಯೋಜನವನ್ನು ಕಾಣುವುದಿಲ್ಲ ಎಂಬ ಅಂಶವನ್ನು ನಿರ್ಲಕ್ಷಿಸುವಂತಿಲ್ಲ.
  • ಶಿಶುಗಳನ್ನು ನೋಡಿಕೊಳ್ಳುವುದು: ಸ್ನೇಹಪರ ಅವಿಭಕ್ತ ಕುಟುಂಬದಲ್ಲಿ ವಾಸಿಸುವುದು ಚಿಕ್ಕ ಮಗುವನ್ನು ಹೊಂದಿರುವ ಪೋಷಕರಿಗೆ ಗಮನಾರ್ಹ ಪ್ರಯೋಜನಗಳಲ್ಲಿ ಒಂದಾಗಿದೆ. ಕುಟುಂಬದ ಇತರ ಅನುಭವಿ ಪೋಷಕರು ಮಗುವನ್ನು ಅಳುತ್ತಿರುವಾಗ ಶಾಂತಗೊಳಿಸಲು ಅಥವಾ ಅಗತ್ಯವಿದ್ದಾಗ ಅದನ್ನು ನೋಡಿಕೊಳ್ಳಲು ಸಹಾಯ ಮಾಡುತ್ತಾರೆ.

3. ಅವಿಭಕ್ತ ಕುಟುಂಬವು ಹಂಚಿಕೆಯ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ:

ನಿಜವಾದ ಹಂಚಿಕೆಯು ಸಂತೋಷವನ್ನು ಅನುಭವಿಸುವ ಒಂದು ಮಾರ್ಗವಾಗಿದೆ. ಏಕೆಂದರೆ ಅದು ನಮ್ಮನ್ನು ಅನಗತ್ಯವಾಗಿ ಸ್ವಾರ್ಥಿಗಳಾಗದಂತೆ ತಡೆಯುತ್ತದೆ.

ಹೆಚ್ಚಿನ ಸಂಖ್ಯೆಯ ಸದಸ್ಯರು ಮತ್ತು ವಿವಿಧ ಸನ್ನಿವೇಶಗಳು ಅವಿಭಕ್ತ ಕುಟುಂಬದಲ್ಲಿ ಹಂಚಿಕೊಳ್ಳಲು ಅವಕಾಶಗಳನ್ನು ಒದಗಿಸುತ್ತವೆ. ಹಾಗಾದರೆ ಆ ಹಂಚಿಕೊಳ್ಳುವ ವಸ್ತುಗಳು ಅಥವಾ ಅವಕಾಶಗಳು ಯಾವುವು?

  • ಆಹಾರ
  • ಮನೆ/ ಜಾಗ
  • ಸಂಪತ್ತು ಅಥವಾ ಸಮಾನ ವಿಷಯಗಳು
  • ಸಮಯ ಮತ್ತು ಶಕ್ತಿ
  • ಸುಖ-ದುಃಖ

ಅವಿಭಕ್ತ ಕುಟುಂಬವು ತ್ಯಾಗದ ಕಲೆಯನ್ನು ಕಲಿಯಲು ಸಹಾಯ ಮಾಡುತ್ತದೆ” ಎಂದೂ ಹೇಳಬಹುದು. ವಿಷಯ, ಸಂದರ್ಭಗಳ ಜೊತೆಗೆ ಅಗತ್ಯ ಮತ್ತು ಅನಗತ್ಯ ತ್ಯಾಗದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಇಲ್ಲಿನ ಕಲೆ.

4. ಉತ್ತಮ ಭಾವನಾತ್ಮಕ ಬೆಂಬಲ:

ಬೇರೆ-ಬೇರೆ-ಬಣ್ಣಗಳಿಂದ-ಕೂಡಿದ-ಎಮೋಜಿಗಳು-ವಿವಿಧ-ಭಾವನೆಗಳನ್ನು-ಬಿಂಬಿಸುವ-ಚಿತ್ರ- ಬಗಲಲ್ಲಿ-ಭಾವನಾತ್ಮಕ-ಬಲವಿದೇಯೇ-ಎಂಬ-ಕನ್ನಡ-ವಾಕ್ಯವನ್ನು-ಒಳಗೊಂಡಿದೆ.

ಸಂಬಂಧಗಳು ಮತ್ತು ಕುಟುಂಬದ ವಿಷಯಗಳಲ್ಲಿ ಭಾವನೆಗಳನ್ನು ಹೇಗೆ ನಿಯಂತ್ರಿಸುವುದು ಎಂಬುದು ಬಹುತೇಕ ಎಲ್ಲರಿಗೂ ಸವಾಲಿನ ಪ್ರಶ್ನೆಯಾಗಿದೆ.

ಅತಿಯಾದ ಭಾವನೆಗಳ ಸುಳಿಯಲ್ಲಿ ಸಿಲುಕಿ ಪ್ರಸ್ತುತ ವಿಚಾರಗಳನ್ನು ಸಮರ್ಥವಾಗಿ ಎದುರಿಸಲು ವಿಫಲರಾಗಿ ಸಮಸ್ಯೆಗಳಿಂದ ಹೊರಬರಲಾಗದೆ ನರಳುವ ಸಂದರ್ಭಗಳು ಎಲ್ಲಾ ಕುಟುಂಬಗಳಲ್ಲಿ ಬಂದೇ ಬರುತ್ತವೆ. ಅಂತಹಾ ಸಮಯದಲ್ಲಿ ವಾಸ್ತವಿಕವಾಗಿ ಪರಿಸ್ಥಿತಿಯನ್ನು ಅರಿತು ಮುನ್ನಡೆಯುವ ಸದಸ್ಯರ ಅಗತ್ಯ ಎದುರಾಗುತ್ತದೆ.

ವಿಭಕ್ತ ಕುಟುಂಬಗಳ ಅನಾನುಕೂಲವಾಗಿರುವ ಈ ವಿಚಾರದಲ್ಲಿ ಅವಿಭಕ್ತ ಕುಟುಂಬವು ಒಂದು ವರದಾನದಂತೆ. ಹೆಚ್ಚಿನ ಸದಸ್ಯ ಸಂಖ್ಯೆಯ ಕುಟುಂಬದಲ್ಲಿ ಕನಿಷ್ಠ ಒಬ್ಬ ಅಥವಾ ಇಬ್ಬರು ಭಾವನಾತ್ಮಕವಾಗಿ ಬಲಿಷ್ಠರಾಗಿರುತ್ತಾರೆ.

ಆರೋಗ್ಯ, ವೃತ್ತಿಯ ಸಲುವಾಗಿ ಎದುರಾಗುವ ಕಷ್ಟಗಳನ್ನು ಎದುರಿಸುವಲ್ಲಿ ಇದು ಸಹಕಾರಿ.

5. ಕೂಡು ಕುಟುಂಬ ಉತ್ತಮ ಕಲಿಕೆಯ ಅವಕಾಶಗಳನ್ನು ಒದಗಿಸುತ್ತದೆ:

ಅವಿಭಕ್ತ ಕುಟುಂಬವು ದೊಡ್ಡ ಸಮಾಜದೊಳಗಿನ ಚಿಕ್ಕ ಸಮಾಜವಾಗಿದೆ. ಆದ್ದರಿಂದ ಇದು ಒಂದೇ ಸೂರಿನಡಿ ಉತ್ತಮ ಕಲಿಕೆಯ ಅವಕಾಶಗಳನ್ನು ಒದಗಿಸುತ್ತದೆ.

ಅವುಗಳಲ್ಲಿ ಕೆಲವನ್ನು ಪರಿಗಣಿಸೋಣ;

ಎ. ಸಂಬಂಧಗಳ ನಿರ್ವಹಣೆ:

ಸಾಮಾನ್ಯವಾಗಿ, ಜನರು ಮತ್ತು ಸಂಘರ್ಷಗಳು ಒಟ್ಟಿಗೆ ಸಾಗುತ್ತವೆ. ಕೂಡು ಕುಟುಂಬದಲ್ಲಿ ವಿವಿಧ ರೀತಿಯ ಸಂಬಂಧಗಳು ಮತ್ತು ಹೆಚ್ಚಿನ ಸದಸ್ಯರು ಇರುವುದರಿಂದ ಅವರ ಪಾತ್ರಗಳು, ಜವಾಬ್ದಾರಿಗಳು, ಬೇಕು-ಬೇಡಗಳಲ್ಲಿ ತುಂಬಾ ವ್ಯತ್ಯಾಸಗಳಿರುತ್ತವೆ. ಇಡೀ ಕುಟುಂಬವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಸಂವಹನದಂತಹಾ ಕೌಶಲ್ಯಗಳಿಂದ ಕೂಡಿದ ಉತ್ತಮ “ಸಂಬಂಧಗಳ ನಿರ್ವಹಣೆಯನ್ನು” ಇದು ಬಯಸುತ್ತದ.

ಬಿ. ಆರ್ಥಿಕ ನಿರ್ವಹಣೆ:

ದೊಡ್ಡ ಕುಟುಂಬಗಳಲ್ಲಿ ಅಗತ್ಯಗಳು ಮತ್ತು ಹಣದ ಚಲನೆ ಹೆಚ್ಚು. ಇಲ್ಲಿ ಹಿರಿಯ ಸದಸ್ಯರು ಅಗತ್ಯತೆಗಳು ಮತ್ತು ಬಯಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ಜಾಗೃತರಾಗಿರುತ್ತಾರೆ. ಸಂಪತ್ತು ಗಳಿಕೆಯ ಮಾರ್ಗಗಳನ್ನು ಗುರುತಿಸುವುದು, ಆದ್ಯತೆಯ ಆಧಾರದಲ್ಲಿ ವೆಚ್ಚಗಳ ನಿರ್ಧಾರ, ಉಳಿಕೆ, ಹೂಡಿಕೆ ಮತ್ತು ಇತರ ಹಲವು ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದ ಕೌಶಲ್ಯಗಳನ್ನು ಅವಿಭಕ್ತ ಕುಟುಂಬದಲ್ಲಿ ಕಲಿಯಬಹುದು.

ಸಿ. ನಾಯಕ vs ಕಾರ್ಮಿಕ:

ಆದೇಶ/ಸೂಚನೆಗಳನ್ನು ನೀಡುವುದು ಮತ್ತು ಸ್ವೀಕರಿಸುವುದು ಪ್ರತಿ ಕುಟುಂಬದಲ್ಲಿ ಸಾಮಾನ್ಯ ಸಂಗತಿ. ದೊಡ್ಡ ಕುಟುಂಬಗಳಲ್ಲಿ ಸೂಚನೆಗಳ ಆವರ್ತನ ಮತ್ತು ಸಂಖ್ಯೆ ಸ್ವಾಭಾವಿಕವಾಗಿ ಹೆಚ್ಚಾಗಿರುತ್ತದೆ. ಒಳ್ಳೆಯ ಹಾಗೂ ಕೆಟ್ಟ ಎನ್ನಲಾಗುವ ಎರಡೂ ಬಗೆಯ ನಾಯಕತ್ವ ಗುಣಗಳನ್ನು ಗಮನಿಸುವುದರ ಜೊತೆಗೆ ಸ್ವ ನಾಯಕತ್ವದ ಹಾದಿಯ ಪರೀಕ್ಷೆಗೂ ಇಲ್ಲಿ ಅವಕಾಶಗಳಿರುತ್ತವೆ.

ಡಿ. ಬ್ರ್ಯಾಂಡಿಂಗ್ ನ ಮೌಲ್ಯ:

ಕುಟುಂಬದ ಪ್ರಚಾರದ ಪ್ರಮಾಣವನ್ನು ಲೆಕ್ಕಿಸದೆ, ಅವಿಭಕ್ತ ಕುಟುಂಬದ ಮೌಲ್ಯಗಳು, ಉತ್ತಮ ಗುಣಗಳು, ಹೆಸರು, ಮತ್ತು ನೈತಿಕತೆಯನ್ನು ಬೆಳೆಸಲು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ನಿರ್ವಹಿಸುವುದಂತೂ ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿದೆ. ಹಿರಿಯ ಸದಸ್ಯರು ಕುಟುಂಬದ ಬ್ರ್ಯಾಂಡ್ (ಮೇಲೆ ಹೇಳಿದ ಅಂಶಗಳ ಮೊತ್ತ)-ಸಂಬಂಧಿತ ವಿಷಯಗಳನ್ನು ಕಾರ್ಯಗತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಪರಿಣತಿ ಹೊಂದಿರುತ್ತಾರೆ.

ಈಗ ನೀವು “ಇವು ಕೇವಲ ವಾಣಿಜ್ಯ ವಿಷಯಗಳು, ಬೇರೆ ಏನನ್ನೂ ಕಲಿಯಲು ಸಾಧ್ಯವಿಲ್ಲವೇ?” ಎಂದು ಹೇಳುವ ಮೂಲಕ ನನ್ನನ್ನು ತಪ್ಪಾಗಿ ಗ್ರಹಿಸಬೇಡಿ.

ಅಡುಗೆ-ಸಂಬಂಧಿತ ರಹಸ್ಯಗಳು, ಮೂಲಭೂತ ಪ್ರಥಮ ಚಿಕಿತ್ಸಾ ಕೌಶಲ್ಯಗಳು, ಸಂವಹನ ತಂತ್ರಗಳಂತೆ ಹಲವಾರು ವಿಷಯಗಳನ್ನು ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವಾಗ ಕಲಿಯಬಹುದು. ವಿಭಕ್ತ/ ಸಣ್ಣ ಕುಟುಂಬಗಳಲ್ಲಿಯೂ ಈ ಅವಕಾಶಗಳು ಇರಬಹುದಾದರೂ, ದೊಡ್ಡ ಕುಟುಂಬಗಳಲ್ಲಿ ಪರಿಸ್ಥಿತಿ ಮತ್ತು ಅದರ ಪುನರಾವರ್ತನೆ ವಿಭಿನ್ನವಾಗಿರುತ್ತದೆ.

ನಾವು ಮುಂದುವರಿಯುವ ಮೊದಲು ದಿ ಹಿಂದೂ (thehindu.com) ಪ್ರಕಟಿಸಿದ “Famous Quotes on Education” ದಿಂದ ಒಂದು ಉಲ್ಲೇಖವನ್ನು ನೋಡೋಣ;

“ಕಲಿಕೆಯಿಲ್ಲದ ಸ್ವಾತಂತ್ರ್ಯ ಯಾವಾಗಲೂ ಅಪಾಯಕಾರಿ ಮತ್ತು ಸ್ವಾತಂತ್ರ್ಯವಿಲ್ಲದೆ ಕಲಿಯುವುದು ಯಾವಾಗಲೂ ವ್ಯರ್ಥ.”

-ಜಾನ್ ಎಫ್ ಕೆನಡಿ

ಇವು ಕೂಡು ಕುಟುಂಬದಲ್ಲಿ ಬಾಳುವಾಗ ದೊರೆಯಬಹುದಾದ ಒಂದಿಷ್ಟು ಮುಖ್ಯ ಪ್ರಯೋಜನಗಳು.

ನಾಣ್ಯಕ್ಕೆ ಎರಡು ಮುಖಗಳಿರುವಂತೆ ದೊಡ್ಡ ಕುಟುಂಬಗಳಲ್ಲಿ ಅನುಕೂಲಗಳ ಜೊತೆಗೆ ಅನಾನುಕೂಲಗಳೂ ಸರ್ವೇ ಸಾಮಾನ್ಯ.

ಬನ್ನಿ, ಅವುಗಳನ್ನೂ ಗಮನಿಸೋಣ.

ಅವಿಭಕ್ತ ಕುಟುಂಬದ ಅನಾನುಕೂಲಗಳು:

1. ಗದ್ದಲದ ಕುಟುಂಬ ಪರಿಸರ:

ಕೋಪ-ಹಾಗೂ-ಹತಾಶೆಯನ್ನು-ಬಿಂಬಿಸುವ-ಎಮೋಜಿಯನ್ನು-ಬಳಸಿ-ಕನ್ನಡದ-ಆ-ಅಕ್ಷರವನ್ನು-ರಚಿಸಿದ-SharingShree-ಕನ್ನಡದ-ಚಿತ್ರ.

ನೀವು ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆಯಲು ಇಷ್ಟಪಡುವ ವ್ಯಕ್ತಿಯಾಗಿದ್ದರೆ, ಅವಿಭಕ್ತ ಕುಟುಂಬವು ನಿಮಗೆ ಅನನುಕೂಲಕರವಾಗಿರುತ್ತದೆ. ಸದಸ್ಯರ ಸಂಖ್ಯೆ ಹೆಚ್ಚಿರುವ ಕಾರಣ ಒಂದಲ್ಲಾ ಒಂದು ವಿಷಯ ಹರಿದಾಡುತ್ತಲೇ ಇರುತ್ತದೆ.

ಸದಸ್ಯರುಗಳ ಸ್ವಭಾವ, ಸಂಬಂಧಗಳ ಗೋಜಲು, ಮಕ್ಕಳ ಗೋಳು ಸೇರಿದಂತೆ ಕೂಡು ಕುಟುಂಬದಲ್ಲಿ ಅಗತ್ಯ ಮತ್ತು ಅನಗತ್ಯ ವಿಷಯಗಳನ್ನು ಪ್ರತ್ಯೇಕಿಸಲು ಕಷ್ಟವಾಗುತ್ತದೆ.

ಈ ಗದ್ದಲದ ವಾತಾವರಣವು ಅನಗತ್ಯ ಸಲಹೆಗಳನ್ನು ನೀಡಲು ಮತ್ತು ಪ್ರತಿಯೊಬ್ಬರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಕೆಲವು ಸದಸ್ಯರನ್ನು ಪ್ರೇರೇಪಿಸಬಹುದು. ಇದು ಹಲವರ ಖಾಸಗೀತನಕ್ಕೆ ಭಂಗವನ್ನೂ ತರಬಹುದು.

2. ಅಧಿಕಾರದ ಪ್ರಾಬಲ್ಯ:

ಅಧಿಕಾರದಲ್ಲಿ ಸಮಾನತೆ ಬೇಕೆಂದು ಬಹುತೇಕ ಎಲ್ಲರೂ ಬಯಸುತ್ತಾರೆ. ಇದು ವಿಭಕ್ತ ಕುಟುಂಬದ ಲಕ್ಷಣವೂ ಆಗಿದೆ.

ಹೌದು! ಒಂದು ಕುಟುಂಬದಲ್ಲಿ ಜನರ ದೊಡ್ಡ ಗುಂಪನ್ನು ನಿರ್ವಹಿಸುವುದು ಸವಾಲಿನ ಸಂಗತಿ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಆದರೆ ಕುಟುಂಬದ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುವ ಹಿರಿಯ ಸದಸ್ಯರು ಅಧಿಕಾರವನ್ನು ದುರ್ಬಳಕೆ ಮಾಡಿದರೆ, ಅಂತಹ ಕುಟುಂಬದಲ್ಲಿ ವಾಸಿಸಲು ಇತರರಿಗೆ ಅನಾನುಕೂಲವಾಗುತ್ತದೆ.

ಅಧಿಕಾರವು ದುರ್ಬಳಕೆ ಆಗಬಹುದಾದ ಕೆಲವು ಸನ್ನಿವೇಶಗಳು;

  • ಕುಟುಂಬದ ಸಂಸ್ಕೃತಿ, ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಯಾವುದೇ ಸ್ವಾತಂತ್ರ್ಯವಿಲ್ಲ. ಅವುಗಳ ಪ್ರಸ್ತುತತೆಯನ್ನು ಲೆಕ್ಕಿಸದೆ, ಹಿರಿಯರು ಅಥವಾ ಹಿಂದಿನ ತಲೆಮಾರಿನವರು ನಿಗದಿಪಡಿಸಿದ ಯಾವುದೇ ನಿಯಮಗಳನ್ನು ಸದಸ್ಯರು ಅನುಸರಿಸಬೇಕು.
  • ನಿರ್ದಿಷ್ಟ ಡ್ರೆಸ್ ಕೋಡ್ ಅಥವಾ ವಸ್ತ್ರ ಧಾರಣೆಯ ಪದ್ಧತಿಯನ್ನು ಅನುಸರಿಸಲು ಒತ್ತಡ.
  • ನಿರ್ದಿಷ್ಟ ಆಹಾರ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ನಿರ್ಬಂಧಗಳು.
  • ಯುವ ಸದಸ್ಯರಿಗೆ ತಮ್ಮ ಸ್ವಂತ ವ್ಯಕ್ತಿತ್ವವನ್ನು ರಚಿಸಲು ಮತ್ತು ನಿರ್ಮಿಸಲು ಸ್ವಾತಂತ್ರ್ಯದ ಕೊರತೆ.
  • ಸ್ವ ಇಚ್ಛೆಯಿಂದ ಅಥವಾ ಹಿರಿಯರ ಅಧಿಕಾರಕ್ಕೆ ಮಣಿದು, ಮದುವೆಗೆ ಮನಸ್ಸಿಲ್ಲದಿದ್ದರೂ ಪೋಷಕರು ಮಕ್ಕಳನ್ನು ಒತ್ತಾಯಿಸುವುದು.

3. ಸಂಘರ್ಷಗಳನ್ನು ಪರಿಹರಿಸುವಲ್ಲಿನ ತೊಂದರೆ:

ಪ್ರತಿಯೊಬ್ಬ ಮನುಷ್ಯನೂ ಸಂಘರ್ಷ ಮುಕ್ತ ಮನಸ್ಥಿತಿಯಲ್ಲಿರಲು ಬಯಸುತ್ತಾನೆ. ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವಾಗ ಇದನ್ನು ಸಾಧಿಸುವುದು ದೊಡ್ಡ ಸವಾಲಾಗಿದೆ.

ಏಕೆ?

ವಿಭಿನ್ನ ಅಗತ್ಯಗಳು, ಅವಶ್ಯಕತೆಗಳು, ವಿರುದ್ಧ ಅಭಿಪ್ರಾಯಗಳು ಮತ್ತು ಸದಸ್ಯರ ಹೊಂದಿಕೊಳ್ಳುವ ಮನಸ್ಥಿತಿಯ ಕೊರತೆಯು ಕುಟುಂಬದ ಏಕಾಮುಖ ಚಲನೆಗೆ ಹಾನಿ ಉಂಟುಮಾಡುತ್ತದೆ. ಇದು ಕೇವಲ ಇಬ್ಬರು ವ್ಯಕ್ತಿಗಳ ಸಣ್ಣ ಕುಟುಂಬದಲ್ಲಿಯೂ ಸಂಭವಿಸುತ್ತದೆ. ಆದರೆ ಹೆಚ್ಚಿನ ಸದಸ್ಯರನ್ನು ಒಳಗೊಂಡ ಕುಟುಂಬಗಳಲ್ಲಿ ಸಂಕೀರ್ಣತೆ ಹೆಚ್ಚಾಗಿರುತ್ತದೆ.

ಉದಾಹರಣೆಗೆ, ಆಹಾರ, ರುಚಿಗಳಲ್ಲಿನ ಭಿನ್ನತೆ, ಸಂಪತ್ತಿನ ಹಂಚುವಿಕೆ, ಮಕ್ಕಳ ಸಣ್ಣ ಪುಟ್ಟ ಜಗಳಗಳಿಂದ ತೊಡಗಿ ಹಿರಿಯರ ವೈಮನಸ್ಸಿನ ವರೆಗೂ ಸಂಘರ್ಷಗಳು ಕೆಲವೊಮ್ಮೆ ದುರಾಂತ್ಯವನ್ನೂ ಕಾಣುವ ಅಪಾಯವಿದೆ. ಇವು ಸಂಬಂಧಗಳ ಸಮಸ್ಯೆಗಳನ್ನು ಪರಿಹರಿಸುವ ಸಾಧ್ಯತೆಗಳನ್ನು ಕುಂಠಿತಗೊಳಿಸುತ್ತದೆ.

4. ಅಸಮಾನತೆಯ ಸಮಸ್ಯೆ:

ಕಪ್ಪು-ಬಣ್ಣದ-ಮಾನವ-ಆಕಾರದಲ್ಲಿ-ಹಳದಿ-ಕಣ್ಣುಗಳು-ಬಾಯಿಯಾಗಿ-ಬೇಧ-ಎಂಬ-ಪದ-ಹೃದಯದ-ಆಕೃತಿಯೊಂದಿಗೆ-ಭಾವ-ಎಂಬ-ಪದವನ್ನು-ಹೊಂದಿದ-SharingShree-ಕನ್ನಡದ-ಚಿತ್ರ

ಸಮಸ್ಯೆಗಳ ಗಾತ್ರ ಮತ್ತು ಅದರ ಸಂಕೀರ್ಣತೆಯು ದೊಡ್ಡ ಕುಟುಂಬಗಳ ವಿವಿಧ ವಿಚಾರಗಳಲ್ಲಿ ಸಮಾನತೆಯನ್ನು ತರಲು ಅಡ್ಡಿಯಾಗುತ್ತವೆ.

ನೀವು ಅಸಮಾನತೆಯನ್ನು ಗುರುತಿಸಬಹುದಾದ ಸಂದರ್ಭಗಳ ಕೆಲವು ಉದಾಹರಣೆಗಳು ಇಲ್ಲಿವೆ;

  • ಕುಟುಂಬದ ಮಕ್ಕಳನ್ನು ಅಸಮಾನವಾಗಿ ನಡೆಸಿಕೊಳ್ಳುವುದು.
  • ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿಯನ್ನು ಸ್ವೀಕರಿಸಲು ಮತ್ತು ನಿರ್ವಹಿಸಲು ಸಿದ್ಧರಿಲ್ಲದಿರುವುದು.
  • ಲಿಂಗ ತಾರತಮ್ಯವನ್ನು ಕೇಂದ್ರವಾಗಿಟ್ಟು ಕೆಲಸಗಳ ಹೊರೆಯನ್ನು ಹೊರಿಸುವುದು.

ಸಹಜವಾಗಿ, ನಾನು ಇಲ್ಲಿ ಗಣಿತದ ಸಮಾನತೆಯ ಬಗ್ಗೆ ಹೇಳುತ್ತಿಲ್ಲ. ಯಾವುದೇ ಕುಟುಂಬದಲ್ಲಿ ಗಣಿತದ ಸಮ ಚಿಹ್ನೆಯಂತೆ ಸಮಾನತೆಯನ್ನು ಸಾಧಿಸುವುದು ಬಹುತೇಕ ಅಸಾಧ್ಯ. ಆದಾಗ್ಯೂ, ಪ್ರಾಬಲ್ಯ ಮತ್ತು ಅಜ್ಞಾನದಿಂದ ಹೊರ ಬರುವ ಅಸಮಾನತೆಯು ಕುಟುಂಬದ ಬೆಳೆಯುತ್ತಿರುವ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರುವುದು ದೊಡ್ಡ ಕುಟುಂಬದ ಅತಿದೊಡ್ಡ ಅನಾನುಕೂಲವೇ ಸರಿ.

5. ದೊಡ್ಡ ಕುಟುಂಬದ ದೊಡ್ಡ ಹೆಸರು:

ಸುಪ್ರಸಿದ್ಧ ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವುದೇ ಒಂದು ದೊಡ್ಡ ಸವಾಲು. ಇಲ್ಲಿ ಕೆಲವು ಸದಸ್ಯರಿಗೆ ತಾವು ಬಯಸಿದಂತೆ ಬದುಕಲು ಕುಟುಂಬದ ಹೆಸರು ಹೊರೆಯೆನಿಸುತ್ತದೆ. ಇದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸಲು ಒತ್ತಡವನ್ನು ಸೃಷ್ಟಿಸುತ್ತದೆ ಮತ್ತು ಸೃಜನಶೀಲತೆಯನ್ನು ಕುಗ್ಗಿಸುತ್ತದೆ.

ಮತ್ತೊಂದೆಡೆ, ಅತಿಯಾದ ತಿಳುವಳಿಕೆ ಹೊಂದಿದ ಅವಿಭಕ್ತ ಕುಟುಂಬದ ಸದಸ್ಯರು ತಮ್ಮ ಕುಟುಂಬದ ಹೆಸರನ್ನು ಬಣ್ಣ ಬಣ್ಣದ ಆಟಗಳನ್ನು ಆಡಲು ಬಳಸುತ್ತಾರೆ. ಇದು ಸುತ್ತಮುತ್ತಲಿನ ಜನರನ್ನು ತಪ್ಪು ರೀತಿಯಲ್ಲಿ ಪ್ರಭಾವಿಸುವುದು ಅಥವಾ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯುವುದನ್ನು ಒಳಗೊಳ್ಳುತ್ತದೆ.

ಹಾಗೆಯೇ, ಈ ಸಮಸ್ಯೆಯನ್ನು ಚಿಕ್ಕ ಕುಟುಂಬದಲ್ಲಿಯೂ ನೋಡಬಹುದಾದರೂ, ದೊಡ್ಡ ಕುಟುಂಬಗಳಲ್ಲಿ ಪರಿಣಾಮ ಮತ್ತು ತೀವ್ರತೆ ಹೆಚ್ಚು.

ಇವಿಷ್ಟು ಮುಖ್ಯವಾಗಿ ಗುರುತಿಸಬಹುದಾದ ಅವಿಭಕ್ತ ಕುಟುಂಬಗಳ ಅನಾನುಕೂಲಗಳು.

ಇನ್ನು ನಾನು ಪ್ರಾರಂಭದಲ್ಲಿ ಹೇಳಿದಂತೆ, ಒಂದು ಕುತೂಹಲಕಾರಿ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.

ನೆನಪಿದೆಯೇ?

ಅವಿಭಕ್ತ ಕುಟುಂಬದ ಅನಾನುಕೂಲಗಳನ್ನು ನಿವಾರಿಸಲು ಸಾಧ್ಯವೇ?

ಇದಕ್ಕೆ ನೇರವಾಗಿ ಹೌದು ಅಥವಾ ಇಲ್ಲ ಎಂದು ಉತ್ತರಿಸಲಾಗುವುದಿಲ್ಲ. ಏಕೆಂದರೆ ಪ್ರಶ್ನೆಯು ಈ ಕೆಳಗಿನ ಅಂಶಗಳಿಗೆ ಒಳಪಟ್ಟಿರುತ್ತದೆ;

  • ಅನಾನುಕೂಲಗಳನ್ನು ಯಾರು ತೊಡೆದುಹಾಕಲು ಬಯಸುತ್ತಾರೆ?– ಅವಿಭಕ್ತ ಕುಟುಂಬದ ಯುವ ಸದಸ್ಯರು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಶಕ್ತಿಯ ಕೊರತೆಯಿಂದಾಗಿ ಇದು ಸಾಧ್ಯವಾಗದಿರಬಹುದು.
  • ಅನಾನುಕೂಲಗಳ ಅವಲಂಬಿತ ಸ್ವರೂಪಉದಾಹರಣೆಗೆ, ಅಸಮಾನತೆಯ ಸಮಸ್ಯೆಗೂ ಅಧಿಕಾರ ಪ್ರಾಬಲ್ಯದ ಅನಾನುಕೂಲಕ್ಕೂ ಸಂಬಂಧಿಸಿದೆ.
  • ದೀರ್ಘಾವಧಿಯ ಪರಿಹಾರಗಳಿಗಾಗಿ ಕೆಲಸ ಮಾಡುವ ತಾಳ್ಮೆ– ಅನಾನುಕೂಲಗಳನ್ನು ತೊಡೆದುಹಾಕುವ ಮಾರ್ಗಗಳನ್ನು ಕಂಡುಕೊಳ್ಳಲು, ಹೆಚ್ಚಿನ ತಾಳ್ಮೆ, ಆಸಕ್ತಿ ಮತ್ತು ತೀವ್ರತೆಯ ಅಗತ್ಯವಿರುತ್ತದೆ.

ಖಂಡಿತವಾಗಿಯೂ, ಇದನ್ನು ಮಾಡುವುದಕ್ಕಿಂತ ಹೇಳುವುದು ಸುಲಭ. ಆದರೂ, ಸ್ವಯಂ ಪ್ರೇರಿತ ವ್ಯಕ್ತಿಯು ಅನಾನುಕೂಲಗಳನ್ನು ದೊಡ್ಡ ಪ್ರಮಾಣದಲ್ಲಿ ಅಥವಾ ಸಂಪೂರ್ಣವಾಗಿ ತೊಡೆದುಹಾಕಲು ವಿಫಲವಾದರೂ, ಅವುಗಳನ್ನು ಸಮರ್ಥವಾಗಿ ಮತ್ತು ಸಲೀಸಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗುತ್ತಾರೆ.

ಏಕೆಂದರೆ ಅವಿಭಕ್ತ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುವ ಸೂತ್ರಗಳನ್ನೂ ಅವರು ತಿಳಿದಿರುತ್ತಾರೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ತೀರ್ಮಾನ:

ಹೆಚ್ಚಿನ ಸದಸ್ಯರ ಸಂಖ್ಯೆಯು ಅವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು ಎಂಬ ವಿಚಾರದ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ. ಸರಳವಾಗಿ ಮತ್ತು ಉಪಯುಕ್ತವಾಗಿರಿಸಲು, ನಾನು ಈ ಬ್ಲಾಗ್ ಪೋಸ್ಟ್‌ನಲ್ಲಿ ಮುಖ್ಯ ಅಂಶಗಳನ್ನು ಮಾತ್ರ ಪರಿಗಣಿಸಿದ್ದೇನೆ.

ಸಹಾಯ ಹಸ್ತಗಳ ಲಭ್ಯತೆ, ಹಂಚಿಕೆಯ ಮೌಲ್ಯವನ್ನು ತಿಳಿದುಕೊಳ್ಳುವುದು ಮತ್ತು ಕಲಿಕೆಯ ಅವಕಾಶಗಳಂತಹ ಮೇಲೆ ತಿಳಿಸಿದ ಪ್ರಯೋಜನಗಳು ತಮ್ಮಲ್ಲಿಯೇ ಅನನ್ಯವಾಗಿವೆ. ಅಂತೆಯೇ, ಗದ್ದಲದ ವಾತಾವರಣ, ಅಸಮಾನತೆಯ ಸಮಸ್ಯೆ ಮತ್ತು ಸಂಘರ್ಷಗಳನ್ನು ಪರಿಹರಿಸುವಲ್ಲಿನ ತೊಂದರೆಗಳು ದೊಡ್ಡ ಕುಟುಂಬದ ಪ್ರಮುಖ ಅನಾನುಕೂಲಗಳಾಗಿವೆ.

ಹಾಗೆಯೇ, ನೀವು ಮತ್ತು ನಾನು, ಅನಾನುಕೂಲಗಳನ್ನು ತೆಗೆದುಹಾಕುವ ಸಾಧ್ಯತೆಯನ್ನು ಕುರಿತು ಪರೀಕ್ಷಿಸಲು ಪ್ರಯತ್ನಿಸಿದ್ದೇವೆ.

ನೀವು ಸೇರಿಸಲು ಬಯಸುವ ಬೇರೆ ಸಂಬಂಧಿತ ವಿಚಾರಗಳಿವೆಯೇ? ನಿಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ಮಾಡಿ.

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Comment

Your email address will not be published. Required fields are marked *

Scroll to Top