ನಿಜ ಜೀವನಕ್ಕಿಂತ ಸಿನಿಮಾ ಹಾಗೂ ಟಿವಿ ರಿಯಾಲಿಟೀ ಷೋಗಳಲ್ಲೇ ಹೆಚ್ಚಾಗಿ ಕಾಣಸಿಗುವ ಒಂದು ವಿಚಾರವಿದೆ.
ಅದುವೇ ಈ ಅನುಬಂಧ.
ಹಾಗಂತ ನಿತ್ಯ ಜೀವನದಲ್ಲಿ ಇದರ ಬಗ್ಗೆ ಚರ್ಚೆ, ಸಲಹೆಗಳಿಗೇನೂ ಕಮ್ಮಿ ಇಲ್ಲ. ಆದರೆ ಅವುಗಳಲ್ಲಿ ಸಂಗಾತಿಗಳ ನಡುವೆ ಅನುಬಂಧ ಮರಳಿಸುವ ಕುರಿತ ಹಿಂದೂಸ್ಥಾನ್ ಟೈಮ್ಸ್ ಅವರ ಕನ್ನಡ ಲೇಖನದಂತೆ ಹೆಚ್ಚಿನವು ಕೇವಲ ದಾಂಪತ್ಯಕ್ಕೆ ಮೀಸಲು.
ಹಾಗಾದರೆ ಉಳಿದ ಮುಖ್ಯ ಸಂಬಂಧಗಳ ಗತಿಯೇನು? ಅವುಗಳಿಗೂ ಅನ್ವಯಿಸುವ, ಸಂಬಂಧಗಳನ್ನು ಬಲಿಷ್ಠಗೊಳಿಸುವ ಸರಳ ಉಪಾಯಗಳಿವೆಯೇ?
ಇವೆ. ಅವುಗಳನ್ನೇ ನಾವು ಇಂದು ನೋಡ ಹೊರಟಿರುವುದು.
( ಗಮನಿಸಿ: ಈ ಲೇಖನದಲ್ಲಿ “ನೀವು” ಅಥವಾ “ನಿಮ್ಮ ಕಡೆಯಿಂದ” ಎಂಬ ಅರ್ಥದಲ್ಲಿ ವಿವರಣೆ ಇದ್ದರೂ ಎಲ್ಲಾ ಸಂದರ್ಭಗಳಲ್ಲಿ ಅದು ಅನ್ವಯಿಸದಿರಬಹುದು. ಹಾಗಾಗಿ ನಿಮ್ಮ ಸಂಬಂಧಗಳ ಗುಣಮಟ್ಟಕ್ಕೆ ತಕ್ಕಂತೆ “ಅವರು” ಅಥವಾ “ಅವರ ಕಡೆಯಿಂದ” ಎಂದು ದೃಷ್ಟಿಕೋನಗಳನ್ನು ಬದಲಾಯಿಸಿಕೊಳ್ಳಿ.)
ಸಂಬಂಧಗಳಲ್ಲಿ ಅನುಬಂಧದ ಕೊರತೆಯ ಲಕ್ಷಣಗಳು
ಬದಲಾಗುತ್ತಿರುವ ಕೂಡು ಕುಟುಂಬದ ಲಕ್ಷಣಗಳು ಮತ್ತು ಚಿಕ್ಕ ಕುಟುಂಬದ ಲಕ್ಷಣಗಳನ್ನು ಪರಿಗಣಿಸಿದರೆ ಈ ವಿಷಯ ವಿಪರೀತ ಆಳಕ್ಕಿಳಿವ ಸಂಭವವಿರುವುದರಿಂದ ಅವುಗಳನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಿಲ್ಲ.
ಹಾಗಾಗಿ ಈಗಿನ ಅಗತ್ಯಕ್ಕೆ ತಕ್ಕಂತೆ ವಿಷಯಗಳ ಕಡೆ ಗಮನ ಕೊಡೋಣ.
ಏನಂತೀರಿ?
1. ಅಭಿನಂದನೆಗಳಿಗಾಗಿ ಚಡಪಡಿಕೆ
ಆತ್ಮೀಯರಿಂದ ಅಭಿನಂದನೆ ಅಥವಾ ಪ್ರಶಂಸೆಯನ್ನು ಬಯಸುವುದರಲ್ಲಿ ದೊಡ್ಡ ತಪ್ಪೇನಿಲ್ಲ.
ಉದಾಹರಣೆಗೆ ಹಸಿವನ್ನು ನೀಗಿಸುವ ರುಚಿಕರ ಆಹಾರ ತಯಾರಿಸಿದ್ದಕ್ಕಾಗಿ ಧನ್ಯವಾದದ ಜೊತೆ “ಆಹಾರ ರುಚಿಯಾಗಿತ್ತು” ಎಂಬ ಅಭಿನಂದನೆಯ ಮಾತು ಆತ್ಮೀಯರಿಗೆ ಹಿತ ಎನಿಸುತ್ತದೆ.
ಆದರೆ ಪ್ರತೀ ದಿನ ಹಲವು ಬಾರಿ ಕೂಗಾಡುವ ಅಲಾರಾಂ ನಂತೆ ಪ್ರಶಂಸೆಯ ನಿರಂತರ ಗುಣಗಾನವನ್ನೇ ಬಯಸಿದರೆ… ! ಅದು ಬಂಧನವಾಗುತ್ತದೆ.
2. ಗಮನ ಬೇಡುವ ವರ್ತನೆ
- ನಿರ್ಧಿಷ್ಟ ಸಂಬಂಧಿಯ ಹೆಸರು, ಸಾಧನೆಗಳು ಮತ್ತು ಸ್ಥಾನಗಳನ್ನು ಅತಿಯಾಗಿ ಅಥವಾ ಅನಗತ್ಯವಾಗಿ ಬಳಸುವುದು.
- ನಿಮ್ಮವರು 24/7 ನಿಮ್ಮದೇ ಧ್ಯಾನದಲ್ಲಿ ಮುಳುಗಿರಬೇಕೆಂಬ ಬಯಕೆ.
- ನಿರಂತರವಾಗಿ ಆತ್ಮೀಯರ ಅಥವಾ ಇತರರ ಗಮನ ಸೆಳೆವ ಭರಾಟೆಯಲ್ಲಿ ನಿಖಟ ಸ್ನೇಹ-ಸಂಬಂಧಿಗಳಿಗೆ ಅಗತ್ಯ ಗಮನ ನೀಡುವುದನ್ನೇ ಮರೆತಿರುವುದು.
3. ದಿಕ್ಕು ತಪ್ಪುವ ಪರಿಪೂರ್ಣತೆ
ಇನ್ನೊಬ್ಬ ವ್ಯಕ್ತಿಯನ್ನು ತಾನು ಬಯಸಿದ ರೀತಿಯಲ್ಲಿ ಸರಿಪಡಿಸಲು ಜೀವನವಿಡೀ ಪ್ರಯತ್ನಿಸುವುದು.
ಅದೂ ವಿಷಯ, ಪರಿಸ್ಥಿತಿ, ವ್ಯಕ್ತಿಯ ಹಿನ್ನಲೆ, ಉದ್ದೇಶ -ಹೀಗೆ ಏನನ್ನೂ ಲೆಕ್ಕಿಸದೆ ಒಟ್ಟಾರೆ ಬದಲಾಗಬೇಕೆಂಬ ಹಠ.
ಇವಿಷ್ಟು ಸುಲಭವಾಗಿ ಗುರುತಿಸಬಹುದಾದ ಲಕ್ಷಣಗಳು.
ಹಾಗಾದರೆ ಕಾರಣಗಳು ಏನಿರಬಹುದು?
ಕೊರತೆಗೆ ಕಾರಣಗಳು
ಅನುಬಂಧದ ಕೊರತೆಯ ಕಾರಣಗಳನ್ನು ತಿಳಿಯುವುದರಿಂದ ಅದನ್ನು ಮರಳಿ ಬೆಳೆಸುವುದರ ಜೊತೆಗೆ ಸಂಬಂಧಗಳ ಸಮಸ್ಯೆಗಳಿಂದ ಸುಲಭವಾಗಿ ಹೊರಬರಲು ಸಾಧ್ಯವಾಗಬಹುದು.
1. ಒಂಟಿತನದ ಭಾವನೆ ಮತ್ತು ಭಾವುಕತೆ
ನಿಮ್ಮ ಪ್ರೀತಿಪಾತ್ರರೊಂದಿಗೆ ಇರಲು ಬಯಸಿದಾಗ ಅವನು/ಅವಳು ನಿಮ್ಮ ಬಗ್ಗೆ ಅಥವಾ ನಿಮ್ಮ ವಿಷಯಗಳ ಬಗ್ಗೆ ಆಸಕ್ತಿ ಹೊಂದಿಲ್ಲದಿದ್ದರೆ, ಇನ್ನೇನೂ ಉಳಿದಿಲ್ಲ ಎನಿಸಿ ಒಂಟಿತನದ ಭಾವನೆ ಕೆಣಕಲಾರಂಭಿಸುತ್ತದೆ.
ಪ್ರೀತಿಯ ಭಾವನೆಗಳ ಏರುಪೇರಿನ ಕುರಿತ ನಿರ್ಲಕ್ಷವೂ ಒಂಟಿತನ ಎಂಬ ಬೆಂಕಿಗೆ ತುಪ್ಪ ಸುರಿದಂತೆ.
2. ಭಯ
ಭಯವು ಯಾವಾಗಲೂ ಭವಿಷ್ಯಕ್ಕೆ ಸಂಬಂಧಿಸಿದೆ. ಪ್ರತ್ಯೇಕತೆಯ ಭಯ, ನಂಬಿಕೆಯನ್ನು ಮುರಿಯುವ ಭಯ, ಸಾವಿನ ಭಯ, ಇತ್ಯಾದಿ.
ಸಂಬಂಧಗಳ ಕುರಿತ ನಿರ್ಧಿಷ್ಟ ವಿಷಯಗಳಲ್ಲಿ “ಮುಂದೇನು”, “ಈ ರೀತಿಯಾದರೆ”, “ಆ ರೀತಿಯಾದರೆ”, ಅಥವಾ ಇನ್ನಿತರ ಸಮಾನ ಆಲೋಚನೆಗಳು ಭಯವನ್ನು ಹುಟ್ಟುಹಾಕುತ್ತದೆ.
ಇಂತಹಾ ಮನಸ್ಥಿತಿಯಲ್ಲಿರುವಾಗ ಬಾಯಲ್ಲಿ ಎಷ್ಟೇ ಅನುಬಂಧ, ಆತ್ಮೀಯತೆ ಎಂದರೂ ಸಂಬಂಧಗಳ ಗುಣಮಟ್ಟ ಮಾತ್ರ ಗಡ ಗಡ ಎನ್ನುತ್ತಿರುತ್ತದೆ.
ಸಾವಿನ ಭಯಕ್ಕೆ ಸಂಬಂಧಿಸಿದ ವಿಜಯ ಕರ್ನಾಟಕದ ಒಂದು ಲೇಖನದಲ್ಲಿ ಈ ರೀತಿ ಹೇಳಿದೆ
“ಸಂಬಂಧಗಳಲ್ಲಿ ತಮ್ಮ ಭಾವನೆಗಳು, ಅಗತ್ಯಗಳು ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸದ ಅನೇಕರು ಇತರರಿಗೆ ಮೊಗೆಮೊಗೆದು ಕೊಡುವುದರಲ್ಲೇ ಕಳೆದು ಹೋಗುತ್ತಾರೆ. ಇದು ಕೋಪ ಮತ್ತು ಹತಾಶೆಗೆ ಕಾರಣವಾಗುತ್ತದೆ.”
ಹಾಗಾಗಿ ಭಯವನ್ನು ನಿರ್ಲಕ್ಷಿಸುವಂತಿಲ್ಲ ಎಂದಾಯಿತು.
3. ಪೂರೈಸದ ಅಗತ್ಯಗಳು
- ದೈಹಿಕ ಮತ್ತು ಮಾನಸಿಕ ಅಗತ್ಯಗಳು ಬಲವಾದ ಸಂಬಂಧದಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ.
- ಭಾವನಾತ್ಮಕ ಬೆಂಬಲದ ಕೊರತೆ, ಆರ್ಥಿಕ ಅಸ್ಥಿರತೆ ಮತ್ತು ದೈಹಿಕ ರಕ್ಷಣೆ ಅವುಗಳಲ್ಲಿ ಕೆಲವು.
ಈಗ ಕೊರತೆಗೆ ಕಾರಣಗಳನ್ನು ನೋಡಿದ್ದಾಯಿತು. ಇನ್ನು ಸರಳ ಪರಿಹಾರಗಳೆಡೆಗೆ ಸಾಗೋಣವೇ?
ಬಲಿಷ್ಠ ಸಂಬಂಧಕ್ಕಾಗಿ ಆತ್ಮೀಯ ಬಂಧವನ್ನು ಉಳಿಸಿ ಬೆಳೆಸುವ ತಂತ್ರಗಳು
ಸರಳ ಅಥವಾ ಸುಲಭ ಪರಿಹಾರಗಳೆಂದು ಸಲೀಸಾಗಿ ಹೇಳಬಹುದು. ಆದರೆ ಅದು ಎಷ್ಟು ಸರಳ ಅಥವಾ ಸುಲಭ ಎಂಬುದು ಅವರವರ ಆಸಕ್ತಿ, ಸಾಮರ್ಥ್ಯ, ಮತ್ತು ಸಮಸ್ಯೆಯ ಆಳಕ್ಕಿಳಿಯುವ ಅಭ್ಯಾಸವನ್ನು ಒಳಗೊಂಡಿದೆ.
ಹಾಗಂತ ಅತಿಯಾದ ಗಂಭೀರತೆಯ ಅಗತ್ಯವೂ ಇಲ್ಲ.
ಚಿಂತಿಸಬೇಡಿ, ಸರೀನಾ.
1. ಸಮಸ್ಯೆಗಳ ಮೂಲ ಅರಿಯುವ ಅಭ್ಯಾಸ
ಮನಸ್ಸಿನ ಈ ಆಟವನ್ನು ನೀವು ಗಮನಿಸಿದ್ದೀರಾ?
- ಎಲ್ಲಾ ಮನೆಗಳಲ್ಲೂ, ಎಲ್ಲಾ ಸಂಬಂಧಗಳಲ್ಲೂ ಇವೆಲ್ಲಾ ಇದ್ದಿದ್ದೇ. ಸುಮ್ಮನೆ ತಲೆಕೆಡಿಸಿಕೊಳ್ಳುವುದೇಕೆ ಎಂಬ ಧೋರಣೆ!
- ಟಿವಿ, ಮೊಬೈಲ್, ಸೋಶಿಯಲ್ ಮೀಡಿಯಾ ಮೂಲಕ ಮನರಂಜನೆಯಲ್ಲಿ ತೊಡಗುವುದು, ಇತರರೊಂದಿಗೆ ಕಾಲ ಕಳೆಯುವುದು – ಇತ್ಯಾದಿಗಳಿಂದ ಸ್ವಲ್ಪ ಸಮಯವಾದರೂ ಈ ಸಂಬಂಧಗಳ ಜಂಜಾಟಗಳಿಂದ ದೂರವಿರೋಣ ಎನ್ನುವುದು.
ಅಲ್ಪಾವಧಿಗೆ ಆ ದಾರಿಗಳು ಸೂಕ್ತವಾದರೂ ದೀರ್ಘಾವಧಿಯಲ್ಲಿ ಸಂಬಂಧಗಳ ಸಮಸ್ಯೆಗಳನ್ನು ಪರಿಹರಿಸಲು ಅವು ಹೆಚ್ಚು ಸಹಾಯಕವಲ್ಲ.
ಮೂಲಕ್ಕೆ ಹೋಗುವುದು ಎಂದರೆ ಸಮಸ್ಯೆಯ ಲಕ್ಷಣಗಳನ್ನು ಸರಿಪಡಿಸುವ ಯತ್ನವಲ್ಲ. ಬದಲಾಗಿ ಮೂಲ ಕಾರಣಗಳನ್ನು ಸರಿಪಟಿಸಲು ಪ್ರಯತ್ನಿಸುವುದಾಗಿದೆ.
ಈ ಬ್ಲಾಗ್ ಪೋಸ್ಟ್ ಅನ್ನು ಇನ್ನೂ ಓದುತ್ತಿದ್ದೀರಿ ಎಂದರೆ ನೀವು ಸಮಸ್ಯೆಗಳ ಆಳಕ್ಕಿಳಿಯಲು ಪ್ರಾರಂಬಿಸಿದ್ದೀರಿ ಎಂದಾಯಿತು.
ಇದೆಂತಹಾ ಸಂತಸದ ಸಂಗತಿಯಲ್ಲವೇ!
2. ಅಪೂರ್ಣತೆಗಳನ್ನು ಒಪ್ಪಿಕೊಳ್ಳುವ ಕ್ಷಮತೆ
ನಿಮ್ಮ ಪ್ರಕಾರ ಸಮಬಂಧಗಳಲ್ಲಿ ‘ಪರಿಪೂರ್ಣ ವ್ಯಕ್ತಿ”ಯ ಗುಣಲಕ್ಷಣಗಳೇನು?
ಓದುವುದನ್ನು ಒಂದು ಕ್ಷಣ ನಿಲ್ಲಿಸಿ ಯೋಚಿಸಿ. ಏನೆಲ್ಲಾ ಅಂಶಗಳು ತಲೆಯಲ್ಲಿ ಸುಳಿದಾಡುತ್ತವೆ ಎಂದು ಗಮನಿಸಿ.
ಸಾಮಾನ್ಯವಾಗಿ ಇವುಗಳನ್ನು ಅಪೂರ್ಣತೆಯ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಎಂಬ ಎರಡೂ ಅಂಶಗಳನ್ನು ಒಳಗೊಳ್ಳುತ್ತದೆ.
- ದೇಹದ ಬಣ್ಣದಲ್ಲಿನ ವೆತ್ಯಾಸ, ಅಧಿಕ ಅಥವಾ ಕಡಿಮೆ ತೂಕ, ಅಸಾಮಾನ್ಯ ದೇಹ ಭಾಷೆ (body language), ದೈಹಿಕ ಆರೋಗ್ಯ ಸಮಸ್ಯೆಗಳು, ಇತ್ಯಾದಿ.
- ದೊಡ್ಡ ದೊಡ್ಡ ಡಿಗ್ರಿ ಹೆಸರನ್ನು ಒಳಗೊಂಡ ವಿದ್ಯಾಭ್ಯಾಸ ಇಲ್ಲವೆಂಬ ಕೊರತೆ.
- ಕಳಪೆ ಸಂವಹನ ಕೌಶಲ್ಯಗಳು.
- ನಾನು ‘ಅವರಂತೆ’ ಅಥವಾ ‘ಇತರರಂತೆ’ ಬುದ್ಧಿವಂತನಲ್ಲ.
ಹೀಗೆ ಪಟ್ಟಿ ಮುಂದುವರಿಯುತ್ತದೆ. ಇದಕ್ಕೆ ಕೊನೆ ಇದೆಯೋ, ಇಲ್ಲವೋ ಎಂದು ನನಗಂತೂ ತಿಳಿಯದು.
ಹಾಗಾದರೆ ಏನು ಮಾಡಬಹುದು?
ಅಪೂರ್ಣತೆ ಎಂಬ ಕೊರತೆಯ ಸಮಸ್ಯೆಯನ್ನು ಸರಳಗೊಳಿಸಲು ಅವುಗಳನ್ನು ನಮ್ಮ ಹಿಡಿತದಲ್ಲಿರುವ ಮತ್ತು ಹಿಡಿತದಲ್ಲಿರದ ವಿಷಯಗಳೆಂದು ವಿಂಗಡಿಸುವುದು ಸೂಕ್ತ. ಇದರಿಂದ ಸಮಸ್ಯೆಗಳನ್ನು ಸರಿಪಡಿಸುವ ಸಾಧ್ಯತೆಗೆ ಹೆಚ್ಚು ಗಮನ ಕೊಟ್ಟು, ಸರಿಪಡಿಸಲಾಗದ ವಿಷಯಕ್ಕೆ ತಲೆಕೆಡಿಸಿಕೊಳ್ಳುವ ಪ್ರಮೇಯ ತಪ್ಪುತ್ತದೆ.
ಉದಾಹರಣೆಗೆ – ಕೆಟ್ಟ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದ ತಾನೂ ಅನಾರೋಗ್ಯಕ್ಕೆ ತುತ್ತಾಗಿ ಜೊತೆಗಿರುವವರಿಗೂ ನರಕ ದರ್ಶನ ಮಾಡಬೇಕೆ ಬೇಡವೇ ಎಂಬ ವಿಷಯವು ಒಬ್ಬ ವ್ಯಕ್ತಿಯ ಹಿಡಿತಕ್ಕೆ ಒಳಪಟ್ಟಿದೆ. ಮತ್ತೊಂದೆಡೆ, ದೇಹದ ಬಣ್ಣ ಅಥವಾ ಆಕಾರ ಸಮಾಜ ನಿಗದಿಪಡಿಸಿದಂತೆ ಪರಿಪೂರ್ಣತೆಯ ರೀತಿಯಲ್ಲಿ ಇರರದಿದ್ದರೆ, ಚಿಂತಿಸಿ ಏನು ಪ್ರಯೋಜನ. ಅದು ತಮ್ಮ ಹಿಡಿತದಲ್ಲಿಲ್ಲ ಎಂಬ ಅರಿವೇ ಸಮಾಜದ ಈ ಕಾಯಿಲೆಗೆ ಔಷಧ.
ಇನ್ನು ಮನಸ್ಸಿನ ವಿಚಾರದಲ್ಲೂ ಹೀಗೆಯೇ. ಹತ್ತು ಹಲವು ಗುರುತಿನ ಚೀಟಿ ಅಥವಾ ಕಾರ್ಡ್ ಗಳಂತೆ ಬಹಳಷ್ಟು ಪದವಿ ಪ್ರಮಾಣಪತ್ರಗಳನ್ನು ಹೊಂದಿರುವುದು ಮುಖ್ಯವಲ್ಲ. ಅವುಗಳು ಇಲ್ಲ ಎಂಬ ಕಾರಣಕ್ಕೆ ಇತರರು ಒಬ್ಬ ವ್ಯಕ್ತಿಯ ಬೆಲೆಯನ್ನು ಕಡಿಮೆ ಮಾಡಲು ಯತ್ನಿಸಿದರೆ ಅದಕ್ಕೇನು ಪರಿಹಾರ?
ಮೊದಲು ಹೇಳಿದ ಅದೇ ಔಷಧ.
ನೆನಪಿದೆ ತಾನೇ?
3. ಸಂಬಂಧಗಳ ಅಗತ್ಯಗಳನ್ನು ಪೂರೈಸುವುದು
ಪರಸ್ಪರ ವ್ಯಕ್ತಿಗಳ ಅಗತ್ಯಗಳನ್ನು ಪೂರೈಸದ ಸಂಬಂಧಗಳು ಅನುಬಂಧವಿಲ್ಲದೆ ದುರ್ಬಲವಾಗುತ್ತವೆ.
ಸಂಬಂಧಗಳ ಮೇಲೆ ಪೂರೈಸದ ಅಗತ್ಯಗಳ ಪರಿಣಾಮಗಳನ್ನು ಕುರಿತ Psychology Today ಯ ಲೇಖನವೊಂದರಲ್ಲಿ ಈ ರೀತಿ ಹೇಳಿದೆ – ಆಘಾತಕಾರಿ ಅನುಭವಗಳು ಸಾಮಾನ್ಯವಾಗಿ ಮಕ್ಕಳ ಭಾವನಾತ್ಮಕ ಬೆಳವಣಿಗೆಯಲ್ಲಿ “ರಂಧ್ರಗಳಂತೆ” ಉಳಿದು ಮುಂದಿನ ಸಂಬಂಧಗಳ ಬೆಳವಣಿಗೆಯಲ್ಲೂ ಅದು ಹಾಗೆಯೇ ಉಳಿದುಬಿಡುತ್ತವೆ.
ಹಾಗಾದರೆ ಸಂಬಂಧದ ಅಗತ್ಯತೆಗಳೇನು?
- ದೈಹಿಕ ಮತ್ತು ಭಾವನಾತ್ಮಕ ಸುರಕ್ಷತೆ.
- ಹಣಕಾಸಿನ ಸ್ವಾತಂತ್ರ್ಯ ಮತ್ತು ಹಣಕಾಸಿನ ಚಟುವಟಿಕೆಯ ಸರಿಯಾದ ನಿರ್ವಹಣೆ.
- ಸಂಬಂಧದಲ್ಲಿ ಆದ್ಯತೆಯನ್ನು ಸರಿಯಾಗಿ ನಿರ್ಣಯಿಸಿ ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು. ಇದು ನಂಬಿಕೆ, ಗೌರವ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ.
- ದೈಹಿಕ ಬೇಡಿಕೆಗಳು – ಇದು ಜೊತೆಯಾಗಿ ಗುಣಮಟ್ಟದ ಸಮಯವನ್ನು ಕಳೆಯುವುದು ಎಂಬ ಸಣ್ಣ ವಿಚಾರವನ್ನೂ ಒಳಗೊಂಡಿದೆ.
ಇವುಗಳನ್ನು ಗಮನಿಸಿದಾಗ ನಿಮಗೆ ಏನನ್ನಿಸುತ್ತದೆ?
ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ವಿವಿಧ ರೀತಿಯ ಸಂಬಂಧಗಳು ವಿಭಿನ್ನ ಅಗತ್ಯಗಳನ್ನು ಹೊಂದಿರುತ್ತವೆ. ಆದ್ದರಿಂದ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಅಗತ್ಯಗಳು ಮತ್ತು ಬಯಕೆಗಳ ನಡುವಿನ ವೆತ್ಯಾಸವನ್ನು ಪರಿಗಣಿಸಿ ಜಾಣ್ಮೆಯಿಂದ ಸಂಬಂಧಗಳನ್ನು ನಿರ್ವಹಿಸುವುದು ಅನಿವಾರ್ಯವಾಗುತ್ತದೆ.
4. ಇತರ (ಬೋನಸ್) ಅಂಶಗಳು
ನಿಮಗಾಗಿ ಕೆಲವು ಬೋನಸ್ ಪಾಯಿಂಟ್ಸ್ ಗಳೂ ಇವೆ, ನೋಡಿ.
- ಒಂಟಿತನ ಮತ್ತು ಏಕಾಂತದ ವೆತ್ಯಾಸ ಅರಿಯುವುದು: ಆತ್ಮೀಯ ಸಂಬಂಧಿಕರು ಜೊತೆಗಿರಬೇಕೆಂದು ಬಯಸಿದರೂ ಅದು ಸಾಧ್ಯವಾಗದಿರುವ ಮನಸ್ಥಿತಿಯನ್ನು ಒಂಟಿತನ ಎನ್ನಬಹುದು. ಮತ್ತೊಂದೆಡೆ, ಅಸ್ತಿತ್ವದ ಹಂತದಲ್ಲಿ ತನಗೂ ತನ್ನವರಿಗೂ ಯಾವುದೇ ವೆತ್ಯಾಸವಿಲ್ಲ ಎಂದು ಅರಿತ ಮನಸ್ಸು ಏಕಾಂತದಲ್ಲಿರುತ್ತದೆ. ಏಕಾಂತ ಮನಸ್ಸಿನಿಂದಲೇ ಸಂಬಂಧಗಳಲ್ಲಿ ಅನುಬಂಧವನ್ನು ಅರಿಯಲು ಮತ್ತು ಅನುಭವಿಸಲು ಸಾಧ್ಯ.
- ಸ್ನೇಹದಿಂದ ಮಾತುಕತೆ: ವ್ಯಕ್ತಿಗಳ ನಡುವೆ ಪರಸ್ಪರ ಊಹೆಗಿಂತ ಸ್ನೇಹಪೂರ್ವಕ ಮಾತುಕತೆಯಿದ್ದರೆ ಸಂಬಂಧಗಳು ಬಲಿಷ್ಠವಾಗಿರುತ್ತವೆ. ಇಲ್ಲಿ ಮೂರನೆಯವರಿಗೆ ಮೂಗು ತೂರಿಸಲು ಅವಕಾಶಗಳು ಕಡಿಮೆ ಇದ್ದಷ್ಟೂ ಒಳ್ಳೆಯದು.
- ಅನಾವಶ್ಯಕ ಹೋಲಿಕೆಗಳಿಗೆ ಬ್ರೇಕ್ ಹಾಕುವುದು: ಗಂಟೆಗೆ 4-5 ಸಲ WhatsApp ಸ್ಟೇಟಸ್, Facebook ಅಥವಾ Instagram ಸ್ಟೋರಿ ನೋಡುವ ಈ ಕಾಲದಲ್ಲಿ ಇದು ಎಷ್ಟು ಸ್ಸಾಧ್ಯ ತಿಳಿಯದು. ಆದರೆ ಅನವಶ್ಯಕ ಹೋಲಿಕೆಗಳನ್ನು ದೂರವಿಟ್ಟಷ್ಟೂ ಸಂಬಂಧಗಳಲ್ಲಿ ಅನುಬಂಧ ಹತ್ತಿರವಿರುತ್ತದೆ.
ಇವು ಸಂಬಂಧಗಳಲ್ಲಿ ಆತ್ಮೀಯತೆಯನ್ನು ವೃದ್ಧಿಸಿ ಅವುಗಳನ್ನು ಬಲಷ್ಠಗೊಳಿಸಲು ಸಹಕರಿಸುವ ಮುಖ್ಯ ಅಂಶಗಳು.
ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಉದ್ದನೆಯ ಲೇಖನವನ್ನು ನಾನು ಬರೆಯಲೂ ಬಹುದು, ನೀವು ಓದಲೂ ಬಹುದು. ಆದರೆ ಎಲ್ಲವನ್ನು ಒಮ್ಮೆಲೇ ಕಾರ್ಯರೂಪಕ್ಕೆ ತರಲಾದೀತೇ!
ಆಮೇಲೆ ಚುನಾವಣಾ ಆಶ್ವಾಸನೆಯಂತಾದರೆ ಕಷ್ಟ ಅಲ್ಲವೇ!
ಅಲ್ಲಂತೂ ಸರಿಯಾದ ಪ್ರಶ್ನೆಗಳಿಲ್ಲ, ಇದ್ದರೂ ಸರಿಯಾದ ಪ್ರಾಮಾಣಿಕ ಉತ್ತರವಿಲ್ಲ.
ಇಲ್ಲಾದರೂ ಸಿಗುತ್ತಾ ನೋಡೋಣ ಬನ್ನಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
ತೀರ್ಮಾನ
ಕೊನೆಯದಾಗಿ ಹೇಳುವುದಾದರೆ, ವ್ಯಕ್ತಿಗಳ ನಡುವಿನ ಅತ್ಯುತ್ತಮ ಗುಣಮಟ್ಟದ ಸಂಬಂಧ ಮತ್ತು ಅದರ ಸಾರ್ಥಕತೆಯನ್ನು ಅನುಬಂಧ ಎನ್ನಬಹುದು.
ಕೊರತೆಯ ಲಕ್ಷಣಗಳು ಮತ್ತು ಕಾರಣಗಳ ಜೊತೆಗೆ ಸಮಸ್ಯೆಗಳನ್ನು ಮೂಲದಿಂದಲೇ ಬಗೆಹರಿಸಲು ಯತ್ನಿಸುವುದು, ಅಪೂರ್ಣತೆ ಹಾಗೂ ಅಗತ್ಯಗಳನ್ನು ಅರಿತು ಸಂಬಂಧಗಳಲ್ಲಿ ಅನುಬಂಧವನ್ನು ಹೇಗೆ ಉಳಿಸಿ ಬೆಳೆಸಬಹುದು ಎಂಬುದನ್ನು ವಿವರವಾಗಿ ನೋಡಿದೆವು.
ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳೇನು?
ಮರೆಯದೆ ಕಾಮೆಂಟ್ ಮಾಡಿ.
ಮುಂದಿನ ಪೋಸ್ಟ್ ನಲ್ಲಿ ಮತ್ತೆ ಭೇಟಿಯಾಗೋಣ.
Share ಮಾಡಿ!
ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.
ಲೇಖಕರು ಹಾಗೂ ಪ್ರಕಾಶಕರು
ಶ್ರೀನಿಧಿ. ಕೆ (Shreenidhi K)
ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.