ಅವಿಭಕ್ತ ಕುಟುಂಬದ ಲಕ್ಷಣಗಳು ಬದಲಾಗುತ್ತಿವೆ ಎಂಬ ಅರ್ಥದ ಕನ್ನಡ ವಾಕ್ಯ ಹಾಗೂ ಕಾರ್ಟೂನ್ ಕುಟುಂಬ ಹೊಂದಿರುವ ಚಿತ್ರ.

ಅವಿಭಕ್ತ ಕುಟುಂಬದ ಲಕ್ಷಣಗಳು ಬದಲಾಗುತ್ತಿವೆಯೇ? 10 ರಲ್ಲಿದೆ ಉತ್ತರ!

ಅವಿಭಕ್ತ ಕುಟುಂಬದ ಲಕ್ಷಣಗಳು ಬದಲಾಗುತ್ತಿವೆಯೇ ಎಂದು ತಿಳಿಯುವ ಮೊದಲು ಅವುಗಳ ಕಿರುಪರಿಚಯ ಬೇಕಲ್ಲವೇ!

ಹಾಗಾಗಿ ನಾವಿವತ್ತು ದೊಡ್ಡ ಕುಟುಂಬದ 11 ಮುಖ್ಯ ಲಕ್ಷಣಗಳನ್ನು ಗಮನಿಸಲಿದ್ದೇವೆ.

ಅದಕ್ಕೂ ಮೊದಲು Times of India ದಲ್ಲಿ ಪ್ರಕಟವಾದ ಲೇಖನದ ತುಣುಕೊಂದನ್ನು ಓದಿ (ಇಂಗ್ಲಿಷ್ ನಿಂದ ಕನ್ನಡಕ್ಕೆ ಭಾಷಾಂತರಿಸಲಾಗಿದೆ);

“ಅವಿಭಕ್ತ ಕುಟುಂಬಗಳು ಚಿಕ್ಕ ಕುಟುಂಬಗಳಾಗಿ ಅಥವಾ ಘಟಕಗಳಾಗಿ ವಿಭಾಗಿಸಲ್ಪಡುತ್ತಿರುವುದು ಜನರು ಸಾಂಪ್ರದಾಯಿಕ ಕುಟುಂಬ ರಚನೆಯನ್ನು ತಿರಸ್ಕರಿಸುವ ಸಂಕೇತವಲ್ಲ. ಸಂದರ್ಭಗಳು ಮತ್ತು ಪರಿಸ್ಥಿತಿಗಳು ಜನರು ಕುಟುಂಬವನ್ನು ವಿಭಜಿಸುವ ಅಗತ್ಯವನ್ನು ಸೃಷ್ಟಿಸಿದೆ.”

ಹಾಗಾದರೆ ಲಕ್ಷಣಗಳನ್ನು ನೋಡೋಣವಲ್ಲವೇ!

1. ಪ್ರಾರಂಭದ, ಅವಿಭಕ್ತ ಕುಟುಂಬದ ಲಕ್ಷಣಗಳು

ಮೊದಲ, ಅವಿಭಕ್ತ ಕುಟುಂಬದ ಲಕ್ಷಣಗಳು ಎಂದು ಗುರುತಿಸಬಹುದಾದ ಸದಸ್ಯರ ಸಂಖ್ಯೆ ಮತ್ತು ಸಂಬಂಧದ ವಿಧಗಳನ್ನು ತೋರಿಸುವ ಕೂಡು ಕುಟುಂಬದ ಕಾರ್ಟೂನ್ ಚಿತ್ರ .

ಹೆಸರೇ ಹೇಳುವಂತೆ, ಅವಿಭಕ್ತ ಕುಟುಂಬ ಎಂದೊಡನೆ ಅದರ ಆಕಾರ ಅಥವಾ ಗಾತ್ರಕ್ಕೆ ಸಂಬಂಧಿಸಿದ ಲಕ್ಷಣಗಳು ಮೊದಲ ಸ್ಥಾನ ಪಡೆದುಕೊಳ್ಳುತ್ತವೆ.

ಆ. ಕುಟುಂಬ ಸದಸ್ಯರ ದೊಡ್ಡ ಸಂಖ್ಯೆ:

ಹಿಂದಿನ ಕಾಲದಂತೆ 25-50 ಸದಸ್ಯರನ್ನೊಳಗೊಂಡ ಕುಟುಂಬಗಳು ಮಾಯವಾಗುತ್ತಿದ್ದರೂ, ಅಜ್ಜ-ಅಜ್ಜಿ, ಅವರ ಮಕ್ಕಳು, ಹಾಗೂ ಮೊಮ್ಮಕ್ಕಳನ್ನೊಳಗೊಂಡ ಕನಿಷ್ಠ 10 ಸದಸ್ಯರನ್ನು ಇಂದಿನ ಅವಿಭಕ್ತ ಕುಟುಂಬ ಹೊಂದಿರುತ್ತದೆ ಎನ್ನಬಹುದು.

ಆ. ದೊಡ್ಡ ಮನೆ ಹಾಗೂ ಮನೆತನ:

ಸದಸ್ಯರ ಸಂಖ್ಯೆ ಹೆಚ್ಚಿರುವ ಕಾರಣ ಅವಿಭಕ್ತ ಕುಟುಂಬದ ಮನೆ ಸಾಮಾನ್ಯವಾಗಿ ದೊಡ್ಡದಿರುತ್ತದೆ.

ಕುಟುಂಬ ಬದುಕಿದ ರೀತಿಯನ್ನು ಒಳಗೊಂಡ ಇತಿಹಾಸ ಮತ್ತು ಒಳ್ಳೆಯ ಹಸರನ್ನು ಒಳಗೊಂಡಂತೆ “ಮನೆತನ” ಎಂಬ ಪದವನ್ನು ಬಳಸಲಾಗುತ್ತದೆ. ಹಾಗಾಗಿ, ಇಲ್ಲಿ ಮನೆತನವೂ ದೊಡ್ಡದೇ.

2. ಗದ್ದಲದ ವಾತಾವರಣ:

ಸದಸ್ಯರು ಹೆಚ್ಚಿರುವ ಮೂಲ ಕಾರಣದಿಂದಾಗಿ ದೊಡ್ಡ ಕುಟುಂಬಗಳಲ್ಲಿ ಸದ್ದು ಗದ್ದಲಗಳು ಹೆಚ್ಚಾಗೇ ಇರುತ್ತವೆ.

ಇದು ಕರೆಯುವಿಕೆ, ಓಗೊಡುವಿಕೆ, ಹೊಗಳಿಕೆ, ಬೈಗುಳ, ನಗು, ಅಳು, ಹರಟೆ, ಹೀಗೆ ಹತ್ತು ಹಲವು ರೂಪದಲ್ಲಿರಬಹುದು.

ಇದಕ್ಕೆ ಪ್ರತ್ಯೇಕವಾಗಿ ಉದಾಹರಣೆಗಳು ಬೇಕಿಲ್ಲ ಎನಿಸುತ್ತದೆ. ಮಕ್ಕಳಿದ್ದರಂತೂ ಕತೆ ಕೇಳೋದೇ ಬೇಡ.

3. ಹಿರಿಯರ ಆಳ್ವಿಕೆ ಅಥವಾ ಮ್ಯಾನೇಜ್ಮೆಂಟ್:

ಅವಿಭಕ್ತ ಕುಟುಂಬದ ನಿರ್ವಹಣೆಯ ರಚನೆಯನ್ನು ಬಿಂಬಿಸುವ ಚಿತ್ರ

ಅವಿಭಕ್ತ ಕುಟುಂಬದ ಲಕ್ಷಣಗಳು ಎಂದಾಗ ನೆನಪಾಗುವ ಮತ್ತೊಂದು ಮುಖ್ಯ ಲಕ್ಷಣವೇ ಕುಟುಂಬದ ಆಳ್ವಿಕೆ ಅಥವಾ ಮ್ಯಾನೇಜ್ಮೆಂಟ್.

ಇಲ್ಲಿ ಕುಟುಂಬದ ಕುರಿತ ಹೆಚ್ಚಿನ ಅಂದರೆ ಸುಮಾರು 99% ನಿರ್ಧಾರಗಳನ್ನೂ ಹಿರಿಯ ಸದಸ್ಯರೇ ತೆಗೆದುಕೊಳ್ಳುತ್ತಾರೆ.

ಇದರಿಂದಾಗಿ ಹಲವು ಕುಟುಂಬಗಳಲ್ಲಿ ಆಳ್ವಿಕೆಗೂ ದಬ್ಬಾಳಿಕೆಗೂ ವ್ಯತ್ಯಾಸ ಇಲ್ಲದಂತೆ ತೋರುತ್ತದೆ.

ಉದಾಹರಣೆ ಬೇಕೇ?

ಬನ್ನಿ ನೋಡೋಣ.

ತಮ್ಮಿಚ್ಛೆಯಿಂದ ಅಥವಾ ಹಿರಿಯರ ಒತ್ತಡಕ್ಕೆ ತಲೆಬಾಗಿ, ಮದುವೆಗೆ ಮನಸ್ಸಿಲ್ಲದಿದ್ದರೂ ಪೋಷಕರು ಮಕ್ಕಳನ್ನು ಒತ್ತಾಯಿಸುವುದನ್ನು ನೀವೂ ಗಮನಿಸಿರಬಹುದು.. ಇದು ಸಂಘರ್ಷಗಳನ್ನು ಸೃಷ್ಟಿಸುವುದಲ್ಲದೆ ಸುಲಭದಲ್ಲಿ ನಿರ್ವಹಿಸಲೂ ಅಸಾದ್ಯವಾಗುವ ಸನ್ನಿವೇಶ ಬಹಳಷ್ಟು ಕುಟುಂಬಗಳಲ್ಲಿವೆ.

4. ಸ್ವಾತಂತ್ರ್ಯದ ಕೊರತೆ:

ಬಹುಷಃ ನೀವು ಗಮನಿಸಿರಬಹುದು.

ಸ್ವಾತಂತ್ರದ ಲಭ್ಯತೆ ವಿಭಕ್ತ ಕುಟುಂಬದ ಲಕ್ಷಣಗಳಲ್ಲಿ ಪ್ರಮುಖವಾದದ್ದು. ಆದರೆ ದೊಡ್ಡ ಕುಟುಂಬದಲ್ಲಿ ಸದಸ್ಯರು ವೈಯಕ್ತಿಕವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗುವ ಸಂಭವವೇ ಹೆಚ್ಚು.

ಉದಾಹರಣೆಗೆ ಈ ಕೆಳಗಿನ ವಿಚಾರಗಳಿಗೆ ಸಂಬಂಧಿಸಿದ ಆಯ್ಕೆ ಹಾಗೂ ನಡೆಯುವ ಸನ್ನಿವೇಶಗಳನ್ನು ಗಮನಿಸಿ;

  • ವೃತ್ತಿ
  • ಆಹಾರ
  • ಹವ್ಯಾಸ
  • ವಸ್ತು ಅಥವಾ ಸೇವೆಗಳ ಖರೀದಿ

ಇಂತಹಾ ವಿಷಯಗಳಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಾಗ “ಒಳ್ಳೆಯದು – ಕೆಟ್ಟದ್ದು. ಸರಿ – ತಪ್ಪು’ ಎಂಬ ಅನೇಕ ಅಭಿಪ್ರಾಯ ಹಾಗೂ ಸಲಹೆಗಳು ಹರಿದು ಬರುತ್ತವೆ.

ಇದು ಅವಿಭಕ್ತ ಕುಟುಂಬದಲ್ಲಿ ಆರಿಸುವ ಅಧಿಕಾರ ಹೊಂದಿಲ್ಲದ ಸದಸ್ಯರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಳ್ಳುತ್ತದೆ.

5. ಪರಸ್ಪರ ಸಹಕಾರಾದ ಲಭ್ಯತೆ:

ಒಬ್ಬ-ವ್ಯಕ್ತಿಯ-ಕೈ-ಇನ್ನೊಬ್ಬ-ಮಲಗಿರುವ-ವೃದ್ಧರ-ಕೈ-ಹಿಡಿದಿರುವ-ಫೋಟೋ-ಪ್ರಚೋದಿತ-ಚಿತ್ತ-ಸಹಾಯಕ-ಹಸ್ತ-ಎಂಬ-ಕನ್ನಡ-ವಾಕ್ಯವನ್ನು-ಒಳಗೊಂಡಿದೆ.

ದೊಡ್ಡ ಕುಟುಂಬ ಎಂದೊಡನೆ ಕೆಲಸ ಕಾರ್ಯಗಳೂ ಬಹಳಷ್ಟಿರುತ್ತವೆ.

ಅಡುಗೆ, ಮನೆಯ ಶುಚಿತ್ವ, ಕ್ಟುಂಬವು ಕೃಷಿ ಆಧಾರಿತವಾಗಿದ್ದರೆ ಅದರ ಕೆಲಸಗಳಲ್ಲಿ, ಮತ್ತು ವಿಶೇಷವಾಗಿ ಹಬ್ಬ ಹಾಗೂ ಇತರ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸುವಲ್ಲಿ ಸದಸ್ಯರು ಪರಸ್ಪರ ಸಹಕರಿಸುತ್ತಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಸದಸ್ಯರಿಗೆ, ಸ್ನೇಹ ಭಾವ ಹೊಂದಿದ ಕೂಡು ಕುಟುಂಬ ಒಂದು ವರದಾನವೇ.

ಅಲ್ಲದೆ, ಬಹಳ ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬದಲ್ಲಿ ಭಾವನೆ ಮತ್ತು ಭಾವುಕತೆಗಳ ಏರಿಳಿತವನ್ನು ಕೊಂಚ ಆಳವಾಗಿ ಗಮನಿಸಿ ಮಾನಸಿಕ ಬಲಿಷ್ಠತೆ ಹೊಂದಿ ಇತರರಿಗೂ ನೆರವಾಗುವ ಕನಿಷ್ಠ ಒಬ್ಬ ಸದಸ್ಯರಂತೂ ಇದ್ದೇ ಇರುತ್ತಾರೆ ಎನ್ನಬಹುದು.

ಏನಂತೀರಿ?

6. ಅತಿರೇಕದ ಅವಲಂಬನೆ:

ಸಹಕಾರ ಲಭ್ಯತೆಯ ದುಷ್ಪರಿಣಾಮ “ಅತಿರೇಕದ ಅವಲಂಬನೆಗೆ” ಕಾರಣವಾಗಬಹುದು.

ನೀವು ಬಹುಷಃ ಈ ಸನ್ನಿವೇಶವನ್ನು ಗಮನಿಸಿರಬಹುದು.

ಕೆಲವು ಮಕ್ಕಳಿಗೆ ಇತರರು (ಮುಖ್ಯವಾಗಿ ಪೋಷಕರು) ಎಷ್ಟೇ ಬ್ಯುಸಿಯಾಗಿದ್ದರೂ ಕೂತಲ್ಲಿಗೆ ಕುಡಿಯಲು ನೀರು ತಂದುಕೊಡಬೇಕು.

“ಅಂದರೆ ಇದು ತಪ್ಪಾ, ಅಷ್ಟುದೊಡ್ಡ ವಿಷ್ಯಾನ ಗುರೂ” – ಅನ್ನುವಿರಾ?

ಖಂಡಿತಾ ತಪ್ಪು ಅನ್ನುವಂತಿಲ್ಲ. ಆದರೆ ಇಂತಹಾ ಸಣ್ಣ-ಪುಟ್ಟ ವಿಷಯಗಳು ಸಮಯ ಹಾಗೂ ಸಂಧರ್ಭಗಳನ್ನು ಅರ್ಥೈಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ಸಹಕರಿಸುತ್ತವೆ.

ಹಾಗಂತ ಇದು ಕೇವಲ ಕೂಡು ಕುಟುಂಬದ ಲಕ್ಷಣವಲ್ಲ. 3 ಜನರ ಸಣ್ಣ ಕುಟುಂಬದಲ್ಲೂ ಇವು ಸಾಮಾನ್ಯ ಸಂಗತಿ.

ಒಬ್ಬರು “ಆಗಲ್ಲ” ಅಂದರೆ ಇನ್ನೊಬ್ಬರು “ಸರಿ” ಎನ್ನುವ ಸಂಭವವೇ ಹೆಚ್ಚಿರುವ ಕಾರಣ ಅವಿಭಕ್ತ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಸದಸ್ಯರು ಕಷ್ಟಪಡುವಂತಾಗುತ್ತದೆ.

7. ಸಂಪತ್ತಿನ ನಿರ್ವಹಣೆಯ ಹೊಣೆ:

ಅವಿಭಕ್ತ ಕುಟುಂಬದ ಮುಖ ಲಕ್ಷಣವಾದ ಸಂಪತ್ತಿನ-ನಿರ್ವಹಣೆಯ ರಚನೆಯನ್ನು ಚಾರ್ಟ್ ಮೂಲಕ ತೋರಿಸುವ ಚಿತ್ರ.

ಮುಂದೆ ಓದುವ ಮುನ್ನ ಈ ಚಿಕ್ಕ ಪ್ರಯೋಗ ಮಾಡಿ.

ಕಣ್ಣು ಮುಚ್ಚಿ “ಸಂಪತ್ತು ಹೊಂದಿದ ಅವಿಭಕ್ತ ಕುಟುಂಬದ ಲಕ್ಷಣಗಳು” ಮತ್ತು “ಸಂಪತ್ತು ಹೊಂದಿರದ ಅವಿಭಕ್ತ ಕುಟುಂಬದ ಲಕ್ಷಣಗಳು” ಏನಿರಬಹುದು ಎಂದು ಯೋಚಿಸಿ.

ಯೋಚಿಸಿದಿರಾ? ಏನೆಲ್ಲಾ ಬಂತು ನಿಮ್ಮ ಮನದಲ್ಲಿ?

ಸಂಪತ್ತಿನ ಕುರಿತ ನೇರ ಲಕ್ಷಣಗಳನ್ನು ಗುರುತಿಸುವುದು ಸುಲಭ. ಉದಾಹರಣೆಗೆ, ಶ್ರೀಮಂತ ಕೂಡು ಕುಟುಂಬ “ಸಂಪತ್ತಿಗೆ ತಕ್ಕಂತೆ ಅಗತ್ಯಗಳನ್ನು ಬಳಸಿದರೆ”, ಬಡ ಕುಟುಂಬಗಳು “ಅಗತ್ಯಕ್ಕೆ ತಕ್ಕಂತೆ ಸಂಪತ್ತನ್ನು ಬಳಸಬಹುದು”.

ಹಾಗಾಗಿ, ಸಂಪತ್ತು ಎಷ್ಟಿದೆ ಎಂಬುದು ಅನುಕೂಲದ ಮಟ್ಟವನ್ನು ನಿರ್ಧರಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅನುಕೂಲಗಳು ಇದ್ದರೂ, ಇಲ್ಲದಿದ್ದರೂ ದೊಡ್ಡ ಕುಟುಂಬಗಳಲ್ಲಿ ಸಂಪತ್ತಿನ ನಿರ್ವಹಣೆಯು ದೊಡ್ಡ ಸವಾಲೇ ಸರಿ.

  • ಆದಾಯದ ಮೂಲ
  • ಗಳಿಕೆಯ ರೀತಿ
  • ಅಗತ್ಯ-ಅನಗತ್ಯಗಳ ಲೆಕ್ಕಾಚಾರ
  • ಮನೆ, ಆಹಾರ, ಬಟ್ಟೆ, ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳು ಹಾಗೂ ವಿಚಾರಗಳು
  • ಮಕ್ಕಳ ವಿದ್ಯಾಭ್ಯಾಸ

ಇಂತಹಾ ಅನೇಕ ವಿಷಯಗಳ ಜೊತೆಗೆ ಆಸ್ತಿ ಹಂಚಿಕೆಯೂ ಅವಿಭಕ್ತ ಕುಟುಂಬದ ಸಂಪತ್ತಿನ ನಿರ್ವಹಣೆಯನ್ನು ಇನ್ನಷ್ಟು ಹೊರೆಯಾಗಿ ಕಾಣುವಂತೆ ಮಾಡುತ್ತದೆ.

ಇವು ಮುಂದೆ ನಾವು ನೋಡಲಿರುವ ದೊಡ್ಡ ಕುಟುಂಬದ ಲಕ್ಷಣಗಳನ್ನೂ ಪ್ರಭಾವಿಸುತ್ತದೆ.

8. ಸಂಬಂಧಗಳ ನಿರ್ವಹಣೆ:

ನಿತ್ಯ ಜೀವನದಲ್ಲಿ ಸಂಬಂಧಗಳ ನಿರ್ವಹಣೆ ನಿಜಕ್ಕೂ ಸಾಧ್ಯವೇ? ಎಂಬ ಪ್ರಶ್ನೆ ಆಗಿಂದಾಗ್ಗೆ ಏಳುವುದು ಅವಿಭಕ್ತ ಕುಟುಂಬದ ಮತ್ತೊಂದು ಲಕ್ಷಣ ಎಂದರೆ ತಪ್ಪಲ್ಲ ಬಿಡಿ.

ಕನಿಷ್ಠ ಮೂರು ಭಿನ್ನ ತಲೆಮಾರಿನ ಜನರು ಒಂದೇ ಮನೆಯಲ್ಲಿ ವಾಸಿಸುವುದು ಎಂದೊಡನೆ ಸಂಬಂಧಗಳಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸುವುದೇ ಒಂದು ದೊಡ್ಡ ಸಮಸ್ಯೆ. ಇದನ್ನು ಬೇಕಾದರೆ ಅವಿಭಕ್ತ ಸಮಸ್ಯೆ ಎಂದೂ ಕರೆಯಿರಿ.

ಬೇರೆ ಬೇರೆ ಅನುಭವಗಳು, ಅಗತ್ಯಗಳು, ಹಾಗೂ ಬಯಕೆಗಳನ್ನು ಹೊಂದಿದ ಸದಸ್ಯರು ಕುಟುಂಬ ಎಂದೊಡನೆ ಅನೇಕ ರೀತಿಯ ಹೊಂದಾಣಿಕೆಗೆ ಸಿದ್ಧರಿರಬೇಕಾಗುತ್ತದೆ.

ಕೆಲವೊಮ್ಮೆ ಅಗತ್ಯ ಹಾಗೂ ಅನಗತ್ಯ ತ್ಯಾಗಗಳಿಗೆ ವ್ಯತ್ಯಾಸ ಮಾಡಲಾಗದ ಪರಿಸ್ಥಿತಿಗಳೂ ದೊಡ್ಡ ಕುಟುಂಬದ ಲಕ್ಷಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಸಿಗುತ್ತವೆ.

ಅಲ್ಲವೇ?

ಹೇಗನಿಸುತ್ತಿದೆ ನಿಮಗೆ ಈ ಬ್ಲಾಗ್ ಪೋಸ್ಟ್?

9. ಸಂಸ್ಕೃತಿ ಹಾಗೂ ಆಚರಣೆಗಳ ಜೀವಂತಿಕೆ:

ಮೂರು ವ್ಯಕ್ತಿಗಳು ನಮಸ್ಕರಿಸುತ್ತಿರುವ ಕಾರ್ಟೂನ್ ಚಿತ್ರ ಅವಿಭಕ್ತ ಕುಟುಂಬದ ಆಚರಣೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತಿದೆ.

ಕೂಡು ಕುಟುಂಬದಲ್ಲಿ ಹಿರಿಯರಿರುವುದರಿಂದ ಮತ್ತು ಅವರೇ ಕುಟುಂಬದ ಸಾರಥ್ಯ ವಹಿಸುವುದರಿಂದ ಹಲವು ಆಚರಣೆಗಳು ಹಾಗೂ ಸಂಸ್ಕೃತಿಗಳು ಇಂದಿಗೂ ಚಾಲ್ತಿಯಲ್ಲಿವೆ.

ಧಾರ್ಮಿಕ ಹಾಗೂ ಹಬ್ಬಗಳ ಆಚರಣೆಗಳು, ಆಹಾರ ಪದ್ಧತಿ ಹಾಗೂ ಒಟ್ಟಾಗಿ ಸೇವಿಸುವ ರೀತಿ, ವಸ್ತ್ರಾಭರಣಗಳ ಆಯ್ಕೆ ಹೀಗೆ ಹತ್ತು ಹಲವು ವಿಚಾರಗಳಲ್ಲಿ ಅವಿಭಕ್ತ ಕುಟುಂಬಗಳು ಭಿನ್ನವಾಗಿರುತ್ತವೆ.

ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಪ್ರಸ್ತುತ ಅವಿಭಕ್ತ ಕುಟುಂಬದ ಹಿರಿಯರು ಆಚರಣೆಗಳು ಮತ್ತು ಸಂಸ್ಕೃತಿಗಳನ್ನು ಉಳಿಸಲು ಪ್ರಯತ್ನಿಸುತ್ತಿರುವುದೇನೋ ನಿಜ ಎನ್ನಬಹುದು. ಆದರೆ, ತಂತ್ರಜ್ಞಾನದ ವೇಗವಾದ ಬೆಳವಣಿಗೆಯಿಂದ ಪ್ರಭಾವಿತರಾಗಿ ಎಲ್ಲವನ್ನೂ ಪ್ರಶ್ನಿಸುವ ಕುಟುಂಬದ ಕಿರಿಯ ಸದಸ್ಯರಿಗೆ ಆಚರಣೆಗಳ ಹಾಗೂ ಸಂಸ್ಕೃತಿಗಳ ಬಗೆಗೆ ವೈಜ್ಞಾನಿಕ ಹಿನ್ನಲೆಯುಳ್ಳ ಸಮಂಜಸ ಉತ್ತರ ನೀಡುವಲ್ಲಿ ವಿಫಲರಾಗುತ್ತಿದ್ದಾರೆಯೇ, ಎನಿಸುತ್ತದೆ.

ಅಂತೆಯೇ, ಸರಿಯಾದ ಪ್ರಶ್ನೆಗಳನ್ನು ಸರಿಯಾದ ರೀತಿಯಲ್ಲಿ (ತಂತ್ರಜ್ಞಾನ ಅಥವಾ ಇನ್ನಿತರ ವಿಶೇಷ ಜ್ಞಾನ / ವಿಜ್ಞಾನ ತಿಳಿದಿದೆ ಎಂಬ ಅಹಂ ರಹಿತ ಮನಸ್ಸಿನಿಂದ) ಹಿರಿಯರನ್ನು ಪ್ರಶ್ನಿಸುವ ಕಲೆಯನ್ನೂ ಕಿರಿಯರು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದೂ ಅನಿಸುವುದಿಲ್ಲವೇ?

ಇಲ್ಲವಾದರೆ ಈ ವಿಚಾರ ಈಗಾಗಲೇ ಹೆಚ್ಚುತ್ತಿರುವ ವಿಭಕ್ತ ಕುಟುಂಬದ ಅನಾನುಕೂಲಗಳಾಗಿ ಉತ್ತಮ ಮೌಲ್ಯಗಳು ಕಳೆದುಹೋಗುವ ಭೀತಿಯಿದೆ.

10. ಬದಲಾಗುತ್ತಿರುವ ಲಕ್ಷಣಗಳು:

“ಬದಲಾವಣೆ ಜಗದ ನಿಯಮ ” ಎಂಬ ಮಾತನ್ನು ನೀವು ಕೇಲಿದ್ದೀರಿ ತಾನೇ. ಅದು ದೊಡ್ಡ ಕುಟುಂಬಕ್ಕೂ ಅನ್ವಯಿಸಬೇಕಲ್ಲವೇ.

ಮೊದಲೇ ಹೇಳಿದಂತೆ, ಕನಿಷ್ಠ 25 – 50 ಸದಸ್ಯರನ್ನು ಹೊಂದಿರುತ್ತಿದ್ದ ಕುಟುಂಬವನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತಿತ್ತು. ಆದರೆ ಇಂದು ಕುಟುಂಬದ ಗಾತ್ರ 10 ಜನ ಸದಸ್ಯರ ಹಂತಕ್ಕೆ ತಲುಪುತ್ತಿದೆ.

ಹಲವು ವರ್ಷಗಳಿಂದೀಚೆಗೆ, ಕೂಡು ಕುಟುಂಬದಲ್ಲಿ ಜನಿಸಿದ ಮಕ್ಕಳು ವಿದ್ಯಾಭ್ಯಾಸ ಹಾಗೂ ಉದ್ಯೋಗದ ಕಾರಣಗಳಿಂದಾಗಿ ಮನೆಯಿಂದ ದೂರ ಉಳಿದು ನಂತರ ಮುಂದುವರಿಯುವ ಅವರ ಕುಟುಂಬಗಳೂ ಮೂಲ ಮನೆಯಿಂದ ಹೊರಗೆ ಉಳಿದುಬಿಡುತ್ತಿವೆ.

ತಂತ್ರಜ್ಞಾನ ಸೇರಿದಂತೆ ಪರಿಸರ, ಹವಾಮಾನ, ಆಹಾರ, ಬಟ್ಟೆ-ಬರೆ, ವೃತ್ತಿಯ ವಿಧಗಳು, ಹೀಗೆ ಎಲ್ಲಾ ವಿಷಯಗಳಲ್ಲಿ ಕಲ್ಪನೆಗೂ ಮೀರಿದ ಬದಲಾವಣೆಗಳಾಗುತ್ತಿವೆ.

ನಾವು ಈಗಷ್ಟೇ ನೋಡಿದ ಆಚರಣೆ ಮತ್ತು ಸಂಸ್ಕೃತಿಗಳ ಪಾಲನೆ, ಸಂಬಂಧಗಳ ನಿರ್ವಹಣೆಗಳಂತಹಾ ವಿಚಾರಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ “ಬದಲಾಗುತ್ತಿರುವ ಲಕ್ಷಣಗಳೇ” ಅವಿಭಕ್ತ ಕುಟುಂಬದ ಮಹತ್ವದ ಲಕ್ಷಣ ಎನ್ನಬಹುದು.

“ದೊರೆಯಿತಲ್ಲಾ 10ರಲ್ಲಿ ಉತ್ತರ!”. ಶೀರ್ಷಿಕೆಯಲ್ಲಿ ಹೇಳಿದ್ದು ಇದನ್ನೇ.

11. ಅನೇಕ ಕಲಿಕಾ ಅವಕಾಶಗಳ ಲಭ್ಯತೆ:

ಕುಟುಂಬ ಸದಸ್ಯರು ನಾಯಿಯನ್ನೂ ಒಳಗೊಂಡಂತೆ ಪರಸ್ಪರ ಅಪ್ಪಿಕೊಂಡಿರುವ ದೃಶ್ಯವನ್ನು ವೀಕ್ಷಿಸುತ್ತಿರುವ ವ್ಯಕ್ತಿಯ ಚಿತ್ರ ಗಮನಿಸುವಿಕೆಯಿಂದ ಕಲಿಯುವ ಮಹತ್ವವನ್ನು ಸೂಚಿಸುತ್ತಿದೆ.

ವೃತ್ತಿಗೆ ನೇರವಾಗಿ ಸಂಬಂಧಿಸಿದ ವಿಷಯಗಳ ಜೊತೆಗೆ ಇತರ ಸಹಾಯಕ ವಿಚಾರಗಳನ್ನು ನಿರಂತರವಾಗಿ ಕಲಿಯುವವರು ಸಮಸ್ಯೆಗಳನ್ನು ಎದುರಿಸಲು ಮತ್ತು ಪರಿಹಾರವನ್ನು ಕಂಡುಕೊಳ್ಳಲು ಇತರರಿಗಿಂತ ಹೆಚ್ಚು ಸಮರ್ಥರಾಗಿರುತ್ತಾರೆ.

ನಾವು ಈ ವರೆಗೆ ಗಮನಿಸಿದ ಎಲ್ಲಾ ಲಕ್ಷಣಗಳೂ ಒಂದೊಂದು ಸಹಾಯಕ ಕಲಿಕೆಯ ಅಧ್ಯಾಯಗಳಂತಿವೆ.

ಹಾಗಾಗಿ “ಕಲಿಕೆಯ ಅವಕಾಶಗಳು ಮತ್ತು ವಿಶೇಷ ಪರಿಸ್ಥಿತಿಗಳು” ಅವಿಭಕ್ತ ಕುಟುಂಬಗಳ ಅನುಕೂಲಗಳಲ್ಲಿ ಮಹತ್ವದ ಸ್ಥಾನ ಪಡೆಯುತ್ತವೆ.

ಇಂತಹಾ ಕಲಿಕೆಗಳು ಕೇವಲ ಪುಸ್ತಕದ ಬದನೆಕಾಯಿಗಳಂತಿರದೆ ಅರೋಗ್ಯ, ಸಂಪತ್ತು, ಹಾಗೂ ಸಂಬಂಧಗಳಂತಹಾ ನಿತ್ಯ ಜೀವನದ ಮುಖ್ಯ ವಿಭಾಗಗಳನ್ನು ಸಮರ್ಥವಾಗಿ ನಿಭಾಯಿಸಲು ಸಹಕರಿಸುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):

ತೀರ್ಮಾನ:

ಇಲ್ಲೀ ತನಕ ನಾವು ಗಮನಿಸಿದ ಅವಿಭಕ್ತ ಕುಟುಂಬದ ಲಕ್ಷಣಗಳು ನಿಮಗೆ ಸಾಕಷ್ಟು ಉಪಯುಕ್ತ ವಿಷಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸುತ್ತೇನೆ.

ಹೆಸರು ಮತ್ತು ಗಾತ್ರದಿಂದ ಪ್ರಾರಂಭಿಸಿ, ಸಂಬಂಧ ಹಾಗೂ ಸಂಪತ್ತಿನ ನಿರ್ವಹಣೆ, ಆಚಾರ-ವಿಚಾರಗಳು, ಕಲಿಕಾ ಅವಕಾಶಗಳನ್ನು ಒಳಗೊಂಡಂತೆ ಕೂಡು ಕುಟುಂಬದ ಅನೇಕ ಲಕ್ಷಣಗಳನ್ನು ಮತ್ತು ಬದಲಾವಣೆಯನ್ನು ಗುರುತಿಸಿದೆವು.

ಹಾಗಾಗಿ ಅವಿಭಕ್ತ ಕುಟುಂಬದ ಲಕ್ಷಣಗಳು ಬದಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ಹೌದು ಎಂದೇ ಉತ್ತರಿಸಬೇಕಾಗಿದೆ.

ನಿಮಗೆ ತಿಳಿದಿರುವ ಬೇರೆ ಲಕ್ಷಣಗಳಿವೆಯೇ ಅವಿಭಕ್ತ ಕುಟುಂಬಕ್ಕೆ?

ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಕಾಮೆಂಟ್ ಮಾಡಿ. ಅದರಿಂದ ಇತರ ಓದುಗರಿಗೂ ಸಹಾಯವಾಗುತ್ತದೆ.

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Comment

Your email address will not be published. Required fields are marked *

Scroll to Top