ವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು ಎಂಬ ವಿಷಯಕ್ಕೆ ಹೋಲುವ ಕುಟುಂಬ ಮತ್ತು ಕನ್ನಡ ವಾಕ್ಯವನ್ನು ಹೊಂದಿರುವ ಚಿತ್ರ.

ವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು | 12 ಮುಖ್ಯ ಅಂಶಗಳೊಂದಿದೆ!

ಯುವಜನತೆ ಮಾತ್ರವಲ್ಲದೆ ವಯಸ್ಕರೂ ವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು ಎಂದು ಯೋಚಿಸತೊಡಗಿದ್ದಾರೆ.

ಕಾರಣ ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ.

ಪ್ರಾಚೀನ ಅವಿಭಕ್ತ ಕುಟುಂಬಗಳು ವಿಭಕ್ತ ಅಥವಾ ಚಿಕ್ಕ ಕುಟುಂಬಗಳಾಗಿ ಬದಲಾಗುತ್ತಿರುವುದರಿಂದ ಮಹಿಳೆಯರಿಗೆ ವೃತ್ತಿ, ಪ್ರವೃತ್ತಿ, ಆರ್ಥಿಕ, ಮತ್ತು ಸಾಮಾಜಿಕ ಎಂಬಂತೆ ಹಲವು ರೀತಿಯಲ್ಲಿ ಪ್ರಯೋಜನವಾಗಿದೆ ಎನ್ನುತ್ತದೆ “Changing Dynamics of Family Structure in India” ಎಂಬ ಇಂಗ್ಲೀಷ್ ಲೇಖನ.

ಹಾಗಾಗಿ ಈ ವಿಷಯದ ಕುರಿತು ಗಮನ ಹರಿಸುವುದು ಮುಖ್ಯವಾಗಿದೆ.

ಇಲ್ಲಿ ಒಂದು ಸೀಕ್ರೆಟ್ ಇದೆ. ಒಂದು ವೇಳೆ ನಿಮಗೆ ವಿಭಕ್ತ ಕುಟುಂಬದ ಲಕ್ಷಣಗಳು ತಿಳಿದಿದ್ದರೆ ಅನುಕೂಲ ಮತ್ತು ಅನಾನುಕೂಲಗಳು ಸುಲಭವಾಗಿ ತಿಳಿಯುತ್ತವೆ.

ವಿಭಕ್ತ ಕುಟುಂಬದ ಅನುಕೂಲಗಳು

1. ಇಚ್ಛೆಗೆ ತಕ್ಕಂತೆ ಇರಬಹುದು

ಹಿರಿಯರ ಅಸಮಾನತೆಯ ಆಳ್ವಿಕೆಯಿಂದ ಸ್ವಾತಂತ್ರದ ಕೊರತೆ ಉಂಟಾಗಿ ಸದಸ್ಯರು ತಮ್ಮ ಇಚ್ಛೆಗೆ ವಿರುದ್ಧವಾಗಿ ಬದುಕುವುದು ಬಹುತೇಕ ಅವಿಭಕ್ತ ಕುಟುಂಬಗಳ ಲಕ್ಷಣ.

ವಿಭಕ್ತ ಎಂಬ ಚಿಕ್ಕ ಸಂಸಾರಗಳಲ್ಲಿ ಪತಿ-ಪತ್ನಿ ಹಾಗೂ ಅವರ ಒಂದು ಮಗು ಅಥವಾ ಇಬ್ಬರು ಮಕ್ಕಳು ಮಾತ್ರ ಇರುವುದರಿಂದ ಎಲ್ಲದಕ್ಕೂ ಹಿರಿಯರ ಒಪ್ಪಿಗೆಗೆ ಕಾಯಬೇಕೆಂದಿಲ್ಲ.

  • ತಮಗೆ ಬೇಕಾದ ಅಡುಗೆಯನ್ನು ತಯಾರಿಸುವುದು
  • ಇಷ್ಟದ ವೃತ್ತಿ ಹಾಗೂ ಹವ್ಯಾಸಗಳ ಆಯ್ಕೆ ಮತ್ತು ಅವುಗಳಲ್ಲಿ ಮುಂದುವರಿಯುವ ಸ್ವಾತಂತ್ರ.
  • ಹೊರಗಿನ ತಿರುಗಾಟ ಅಥವಾ ಪ್ರವಾಸಗಳಿಗೆ ಹೆಚ್ಚು ಅವಕಾಶ.

ಹೀಗೆ ಇಚ್ಛೆಗೆ ಸಂಬಂಧಿಸಿದ ಹತ್ತು ಹಲವು ವಿಷಯಗಳಲ್ಲಿ ಚಿಕ್ಕ ಕುಟುಂಬವನ್ನು ಅನುಕೂಲಕರ ಎಂದು ಪರಿಗಣಿಸಲಾಗುತ್ತದೆ.

2. ಜವಾಬ್ಧಾರಿಗಳು ಸ್ವಲ್ಪ ಕಡಿಮೆ

ಕುಟುಂಬ ಮತ್ತು ಜವಾಬ್ದಾರಿಯನ್ನು ಬಿಂಬಿಸುವ ಕನ್ನಡ ವಾಕ್ಯ ಹಾಗೂ ಪುಟ್ಟ ಕುಟುಂಬದ ಚಿತ್ರ ವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು ಎಂಬ ಕನ್ನಡ ಬ್ಲಾಗ್ ಪೋಸ್ಟ್ ನಲ್ಲಿದೆ.

ಗಮನಿಸಿ – ಜವಾಬ್ಧಾರಿಗಳು ಸ್ವಲ್ಪ ಕಡಿಮೆ ಎನ್ನಲಾಗಿದೆ. ಅಂದರೆ ಯಾವದೇ ಜವಾಬ್ಧಾರಿಗಳು ಇಲ್ಲ ಎಂದರ್ಥವಲ್ಲ.

ದೊಡ್ಡ ಕುಟುಂಬಗಳಲ್ಲಾದರೆ ಅಜ್ಜ-ಅಜ್ಜಿ ಮತ್ತು ಅವರ ಮಕ್ಕಳ ಹಂತದ ತಲೆಮಾರಿನವರಿಗೆ ಹಲವು ಹೊಣೆಗಳನ್ನು ಹೊತ್ತೊಕೊಳ್ಳಬೇಕು ಎಂಬ ಪರಿಸ್ಥಿತಿ ಇರುತ್ತದೆ.

  • ಆಹಾರ
  • ಬಟ್ಟೆ
  • ವಸತಿ
  • ಅರೋಗ್ಯ
  • ಮಕ್ಕಳ ವಿದ್ಯಾಭ್ಯಾಸ

ಇಂತಹಾ ಒಟ್ಟು ಜವಾಬ್ಧಾರಿಗಳ ಸಂಖ್ಯೆ ಮತ್ತು ತೀವ್ರತೆ ಸಣ್ಣ ಕುಟುಂಬಗಳಲ್ಲಿ ಕಡಿಮೆ ಇರುವುದರಿಂದ ಸದಸ್ಯರಿಗೆ ಒತ್ತಡದ ಸನ್ನಿವೇಶಗಳು ಕೊಂಚ ವಿರಳ ಎನ್ನಬಹುದು.

ಹಾಗಾಗಿ ಇದು ಮುಂದಿನ ಅನುಕೂಲಕ್ಕೆ ದಾರಿಮಾಡಿ ಕೊಡುತ್ತದೆ.

3. ಕಡಿಮೆ ಪ್ರಮಾಣದ ಗಲಾಟೆ ಗದ್ದಲಗಳು

ಮನೆಯ ಹೊರಗಿನ ಸಮಾಜದಲ್ಲಾಗಲೀ ಮನೆಯ ಒಳಗಿನ ಕುಟುಂಬದಲ್ಲಾಗಲೀ ಜಗಳಗಳೇ ಇಲ್ಲದ ಜೀವನವನ್ನು ಊಹಿಸುವುದೇ ಸ್ವಲ್ಪ ಕಷ್ಟ.

ಹೌದು ತಾನೇ?

ಪುಟ್ಟ ಕುಟುಂಬಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಗಲಾಟೆ ಗದ್ದಲಗಳ ಪ್ರಮಾಣವನ್ನೂ ಕಡಿಮೆ ಮಾಡಿಕೊಳ್ಳುವ ಅವಕಾಶಗಳಿವೆ. ಇಲ್ಲಿ ದಿನಕ್ಕೊಂದರಂತೆ ದೊಡ್ಡ ದೊಡ್ಡ ಸಮಸ್ಯೆ ಎದುರಿಸುವ ದೊಡ್ಡವರ ಗೋಳು ಮತ್ತು ಕ್ಷಣಕ್ಕೊಂದರಂತೆ ಚಿಕ್ಕ-ಪುಟ್ಟ ಸಮಸ್ಯೆ ಹೊತ್ತು ತರುವ ಮಕ್ಕಳ ಹಿಂಡು ಇಲ್ಲ ಎಂಬುದನ್ನು ಮುಖ್ಯ ಅನುಕೂಲವಾಗಿ ಪರಿಗಣಿಸಲಾಗುತ್ತದೆ.

ಇನ್ನು ಸಣ್ಣ ಸಂಸಾರದಲ್ಲಿ ನಿರ್ದಿಷ್ಟ ವಯಸ್ಸಿಗೆ ಬಂದ ಮಕ್ಕಳನ್ನು ಪೋಷಕರು ಮದುವೆಯಾಗುವಂತೆ ಒತ್ತಾಯಿಸಿದರೆ, ಮನೆಯ ಸದಸ್ಯರು ಕಡಿಮೆ ಇರುವುದರಿಂದ ಈ ವಿಷಯದಲ್ಲೂ ದೊಡ್ಡ ಮಟ್ಟದ ಗದ್ದಲ, ಅಶಾಂತಿ ಉಂಟಾಗುವ ಸಂಭವಗಳು ಕಡಿಮೆ ಎನ್ನುತ್ತಾರೆ ಯುವಜನ.

4. ಹಣಕಾಸಿನ ನಿರ್ವಹಣೆ ಸುಲಭ

ಹಣಕಾಸಿನ ನಿರ್ವಹಣೆ ಎಂಬುದು ವೈಯಕ್ತಿಕ, ಕುಟುಂಬ, ದೇಶ ಮತ್ತು ಜಾಗತಿಕ ಎಂಬ ಎಲ್ಲಾ ಹಂತದಲ್ಲೂ ಮುಖ್ಯ ಪಾತ್ರ ವಹಿಸುವ ಮಾನವ ಜೀವನದ ಅವಿಭಾಜ್ಯ ಅಂಗ ಎನ್ನಬಹುದು. ಹಣಕಾಸಿನ ನಿರ್ವಹಣೆಯು ಸುಲಭ ಅಥವಾ ಕಷ್ಟ ಎಂಬುದು ವೈಯಕ್ತಿಕದಿಂದ ಜಾಗತಿಕದವರೆಗೆ ಪ್ರತಿಯೊಂದು ಹಾಂತದಲ್ಲೂ ವೆತ್ಯಾಸವಾಗುತ್ತಾ ಹೋಗುತ್ತದೆ.

ಕುಟುಂಬ ವಿಚಾರಕ್ಕೆ ಬಂದರೆ, ಇಲ್ಲಿ ಹಣಕಾಸಿನ ವಿಚಾರವನ್ನು ಪ್ರಭಾವಿಸುವ ಅನೇಕ ಅಂಶಗಳಿವೆ.

  • ಕುಟುಂಬದ ಆದಾಯ ಮೂಲ
  • ಎಷ್ಟು ಜನ ದುಡಿಯುತ್ತಾರೆ
  • ಸದಸ್ಯರ ತಲಾದಾಯ
  • ಖರ್ಚು
  • ಆರೋಗ್ಯ ಮತ್ತು ಇತರ ವಿಮೆಗಳು
  • ಉಳಿತಾಯ ಮತ್ತು ಹೂಡಿಕೆ
  • ಸಂಪತ್ತಿನ ಹಕ್ಕು ಮತ್ತು ಹಂಚಿಕೆ

ದೊಡ್ಡ ಕುಟುಂಬಗಳಿಗೆ ಹೋಲಿಸಿದರೆ ಚಿಕ್ಕ ಕುಟುಂಬಗಳಲ್ಲಿ ಇಂತಹಾ ಹಲವು ಕ್ಲಿಷ್ಟಕರ ಹಣಕಾಸಿನ ವಿಷಯಗಳನ್ನು ನಿಭಾಯಿಸುವುದು ಸುಲಭ ಎನ್ನಬಹುದು.

ಅಷ್ಟೇ ಅಲ್ಲದೆ, The Economic Times ನಲ್ಲಿ ಪ್ರಕಟಿಸಲಾದ ಒಂದು ಸಮೀಕ್ಷೆಯ ಪ್ರಕಾರ “ವಿಭಕ್ತ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವಿದೆ”.

5. ಮನೆಯ ನಿರ್ವಹಣೆ ಸರಳ

ಕಸ ಗುಡಿಸುತ್ತಿರುವ ಹುಡುಗಿ ಮತ್ತು ಕನ್ನಡ ವಾಕ್ಯವನ್ನು ಒಳಗೊಂಡ ಚಿತ್ರ ಮನೆಯ ನಿರ್ವಹಣೆಯನ್ನು ಸೂಚಿಸುತ್ತಿದೆ.

ಮನುಷ್ಯರ ನಡುವಿನ ಸಂಬಂಧಗಳಂತೆ ಮನುಷ್ಯರು ಮತ್ತು ವಾಸಿಸುವ ಮನೆಯ ನಡುವಿನ ಸಂಬಂಧವೂ ಆರೋಗ್ಯವಾಗಿರುವುದು ಮುಖ್ಯವಲ್ಲವೇ?

  • ಅವಶ್ಯಕತೆ, ಬಯಕೆ, ತೋರ್ಪಡಿಕೆ – ಹೀಗೆ ಕುಟುಂಬ ಸದಸ್ಯರ ನಿರ್ಧಾರಕ್ಕೆ ತಕ್ಕಂತಹಾ ಮನೆಯಲ್ಲಿ ವಾಸಿಸುವುದು.
  • ಮನೆಯ ಶುಚಿತ್ವ.
  • ಮನೆಯ ಅಥವಾ ವಾಸಸ್ಥಳದ ಬದಲಾವಣೆ

ಹೀಗೆ ಮನೆಗೆ ಸಂಬಂಧಿಸಿದ ನಾನಾ ವಿಷಯಗಳನ್ನು ವಿಭಕ್ತ ಕುಟುಂಬಗಳಲ್ಲಿ ಸರಳವಾಗಿ ನಿಭಾಯಿಸುವ ಅನುಕೂಲವಿದೆ.

6. ಸ್ನೇಹ-ಸಂಬಂಧಗಳ ಸಮತೋಲನ ಕಾಪಾಡಲು ಸಾಧ್ಯ

ನಿತ್ಯ ಜೀವನದಲ್ಲಿ ಒಬ್ಬ ವ್ಯಕ್ತಿಗೆ ತನ್ನ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು, ಪಕ್ಕದ ಮನೆಯವರು – ಹೀಗೆ ಅನೇಕ ರೀತಿಯ ಒಡನಾಟವನ್ನು ನಿಭಾಯಿಸಬೇಕಾಗುತ್ತದೆ.

ಒಂದು ವೇಳೆ ಆ ವ್ಯಕ್ತಿ ಅವಿಭಕ್ತದಂತಹಾ ದೊಡ್ಡ ಕುಟುಂಬದ ಸದಸ್ಯನಾಗಿದ್ದರೆ, ದೊಡ್ಡ ಸಂಖ್ಯೆಯ ಕುಟುಂಬದ ಇತರ ಸದಸ್ಯರೊಂದಿಗೆ ಮಾತ್ರವಲ್ಲದೆ ಅವರ ನೆಂಟರು, ಸ್ನೇಹಿತರು, ಸಹೋದ್ಯೋಗಿಗಳು ಎಂದು ನೂರಾರು ಜನರನ್ನು ನಿಭಾಯಿಸುವ ಪ್ರಮೇಯ ಎದುರಾಗುತ್ತದೆ.

ಆದರೆ ಚಿಕ್ಕ ಕುಟುಂಬದಲ್ಲಿ ಆ ಸಮಸ್ಯೆ ಕಡಿಮೆ ಎನ್ನಬಹುದು.

  • ಸರಿಯಾದ ಆದ್ಯತೆಯನ್ನು ನಿರ್ಣಯಿಸುವುದು
  • ಗುಣಮಟ್ಟದ ಸಮಯ ನೀಡುವುದು
  • ನಂಬಿಕೆ, ವಿಶ್ವಾಸಗಳನ್ನು ಉಳಿಸಿಕೊಳ್ಳುವುದು

ಸ್ನೇಹ-ಸಂಬಂಧಗಳಿಗೆ ಅನ್ವಯಿಸುವ ಇಂತಹಾ ಸೂಕ್ಷ್ಮ ಅಂಶಗಳನ್ನು ಸಮರ್ಥವಾಗಿ ನಿರ್ವಹಿಸಲು ವಿಭಕ್ತ ಕುಟುಂಬಗಳು ಅನುಕೂಲಕರ.

ಜೊತೆಗೆ ಸಂಬಂಧಗಳ ಸಮಸ್ಯೆಗಳನ್ನು ನಿವಾರಿಸಲು ಈ ಅನುಕೂಲಗಳು ಸಹಕರಿಸುತ್ತವೆ.

ಇವಿಷ್ಟು ಚಿಕ್ಕ ಕುಟುಂಬಗಳಲ್ಲಿ ವಾಸಿಸುವ ಮುಖ್ಯ ಪ್ರಯೋಜನಗಳು.

ಅನಾನುಕೂಲಗಳು

ಇನ್ನು ವಿಭಕ್ತ ಕುಟುಂಬದ ಅನಾನುಕೂಲಗಳ ಕಡೆಗೆ ಗಮನ ಹರಿಸೋಣ.

1. ಎಲ್ಲಾ ವಿಧದ ಸಂಬಂಧಗಳು ಲಭ್ಯವಿಲ್ಲ

ಈಗಷ್ಟೇ ಕಡಿಮೆ ಸಂಬಂಧಗಳಿಂದಾಗಿ ಚಿಕ್ಕ ಸಂಸಾರಗಳಿಗೆ ಆಗುವ ಪ್ರಯೋಜನಗಳನ್ನು ನೋಡಿದೆವು.

ಆದರೆ ಒಂದೇ ನಾಣ್ಯದ 2 ಮುಖಗಳಂತೆ ಅದರಿಂದ ಅನಾನುಕೂಲಗಳೂ ಇವೆ.

ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಭಾವ, ಮೈದುನ, ಅತ್ತಿಗೆ, ನಾದಿನಿ – ಹೀಗೆ ಅನೇಕ ವಿಧದ ಸಂಬಂಧಗಳು ಒಂದೇ ಮನೆಯಲ್ಲಿ ಇರದ ಕಾರಣ ಆ ಸಂಪರ್ಕಗಳ ಗುಣಮಟ್ಟ ಕೆಡಿಮೆಯಾಗುತ್ತದೆ.

ಇದರಿಂದಾಗಿ ಕೆಲವೊಮ್ಮೆ ವಿಭಕ್ತ ಕುಟುಂಬದ ಸದಸ್ಯರಿಗೆ ತಮ್ಮ ಮನೆಯವರನ್ನು ಹೊರತುಪಡಿಸಿ ಇತರ ಹತ್ತಿರದ ಸಂಬಂಧ ಹಾಗು ಸ್ನೇಹವನ್ನು ನಿಭಾಯಿಸಲು ಕಷ್ಟವಾಗುತ್ತದೆ.

“ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದು ಅಥವಾ ಪರಿಸ್ಥಿತಿಗಳನ್ನು ಬದಲಾಯಿಸುವುದು” ಎಂಬ ಕೌಶಲ್ಯವನ್ನು ಬೆಳೆಸಿಕೊಳ್ಳಲು ಚಿಕ್ಕ ಕುಟುಂಬಗಳಲ್ಲಿ ಅವಕಾಶಗಳೂ ಚಿಕ್ಕದಾಗಿರುತ್ತವೆ.

2. ಭಾವನಾತ್ಮಕ ಬೆಂಬಲದ ಕೊರತೆ

ಭಾವನೆಗಳ ನಿರ್ವಹಣೆ ಕುರಿತ ಕನ್ನಡ ವಾಕ್ಯದೊಂದಿಗೆ ಭಾವುಕಳಾಗಿರುವ ಹುಡುಗಿಯ ಚಿತ್ರ.

ಧನಾತ್ಮಕ ಚಿಂತನೆ ಮತ್ತು ಭಾವುಕತೆಯನ್ನು ಬಯಸಿದರೂ, ಬಹುತೇಕ ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲಿ ಪ್ರೀತಿಯ ಭಾವನೆಗಳ ಏರು-ಪೆರು ಮತ್ತು ಭಾವುಕತೆಯ ಚಲನೆಯ ಪರಿಣಾಮಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.

3 ಅಥವಾ 4 ಸದಸ್ಯರುಳ್ಳ ಚಿಕ್ಕ ಕುಟುಂಬದಲ್ಲಿ ವಾಸಿಸುವವರು ಈ ವಿಷಯದಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

  • ವೃತ್ತಿ ಅಥವಾ ಇನ್ನಿತರ ಕಾರಣಗಳಿಂದ ಪರಸ್ಪರ ಭಾವನಾತ್ಮಕ ಅಗತ್ಯಗಳಿಗೆ ಸದಸ್ಯರು ಲಭ್ಯವಿಲ್ಲದಿರುವುದು.
  • ಕುಟುಂಬದ ಹಿರಿಯರಾದ ಒಬ್ಬ ಅಥವಾ ಇಬ್ಬರೂ ಭಾವನಾತ್ಮಕವಾಗಿ ದುರ್ಬಲರಾದರೆ, ಅಂತಹಾ ಕುಟುಂಬಗಳನ್ನು ಮೂರನೇ ವ್ಯಕ್ತಿ ಅಥವಾ ಸಮಾಜ ತನ್ನಿಚ್ಛೆಗೆ ತಕ್ಕಂತೆ ಬಳಸಿಕೊಳ್ಳುವ ಅಪಾಯವಿದೆ.
  • ಮನಸ್ಸಿಲ್ಲದಿದ್ದರೂ ಹಲವು ಬಾರಿ ವೈಯಕ್ತಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅನಿವಾರ್ಯತೆ ಬರಬಹುದು.

ಹೀಗೆ ಭಾವನೆಗಳಿಗೆ ಸಂಬಂಧಿಸಿದ ಅನೇಕ ಸೂಕ್ಷ್ಮ ವಿಚಾರಗಳಲ್ಲಿ ವಿಭಕ್ತ ಕುಟುಂಬ ಅನಾನುಕೂಲವಾಗಿ ಕಂಡುಬರುತ್ತದೆ.

ಇದು ದೊಡ್ಡವರ ಭಾವನೆಗಳ ಮಾತಾಯಿತು.

ಹಾಗಾದರೆ ಬೆಳೆವ ಮಕ್ಕಳ ಕತೆಯೇನು?

3. ಮಕ್ಕಳ ಬೆಳವಣಿಗೆಯಲ್ಲಿ ಕೊರತೆಗಳು

ವಿಭಕ್ತ ಕುಟುಂಬ ಮತ್ತು ಮಕ್ಕಳ ಬೆಳವಣಿಗೆ ಕುರಿತ ಒಂದು ಅಧ್ಯಯನದಲ್ಲಿ ಮಕ್ಕಳಿಗಾಗಬಹುದಾದ ಅನುಕೂಲಗಳ ಜೊತೆಗೆ ಕೆಲವು ಮುಖ್ಯ ಅನಾನುಕೂಲಗಳನ್ನೂ ತಿಳಿಸಿದೆ.

ಮಕ್ಕಳ ಸ್ವಾವಲಂಬನೆ ಮತ್ತು ಸಹೋದರ ಸಹೋದರಿಯರ ಬಾಂಧವ್ಯ ಬಲಿಷ್ಠವಾಗಿರುತ್ತದೆ ಎಂಬ ಅನುಕೂಲಗಳ ಜೊತೆಗೆ ಪ್ರಸ್ತುತ ಜೀವನವನ್ನು ಬಿಂಬಿಸುವ ದುಷ್ಪರಿಣಾಮಗಳನ್ನೂ ತಿಳಿಸಿದೆ.

ಉದಾಹರಣೆಗೆ – ಆರ್ಥಿಕ ಭದ್ರತೆ ಅಥವಾ ಸ್ವಾತಂತ್ರ್ಯಕ್ಕಾಗಿ ಚಿಕ್ಕ ಕುಟುಂಬಗಳಲ್ಲಿ ಪೋಷಕರು ದುಡಿಮೆಯಲ್ಲಿ ನಿರತರಾಗುವುದರಿಂದ ಮಕ್ಕಳ ಕಡೆಗೆ ಗಮನ ಕಡಿಮೆಯಾಗುತ್ತದೆ. ಅಲ್ಲದೆ ತಮ್ಮ ಅನುಪಸ್ಥಿತಿಯನ್ನು ಸರಿದೂಗಿಸಲು ಮಕ್ಕಳಿಗೆ ಮೊಬೈಲ್ ನೀಡುತ್ತಿರುವುದು ಮತ್ತಷ್ಟು ಗಂಭೀರ ಸಮಸ್ಯೆಯಾಗಿದೆ ಎನ್ನುತ್ತದೆ ಆ ಅಧ್ಯಯನ.

ದೊಡ್ಡ ಕುಟುಂಬಗಳಲ್ಲಾದರೆ ಮಕ್ಕಳಿಗೆ ವಸ್ತುಗಳ ಜೊತೆಗೆ ಮನುಷ್ಯರ ಒಡನಾಟವೂ ಇರುತ್ತದೆ. ಅಜ್ಜ-ಅಜ್ಜಿ ಮತ್ತು ತಂದೆ-ತಾಯಿ ಎಂಬ ಎರಡು ತಲೆಮಾರಿನ ವಿಭಿನ್ನ ಅನುಭವಗಳ ವ್ಯಕ್ತಿಗಳೊಡನೆ ಬದುಕುವ ಅವಕಾಶವೂ ಇರುತ್ತದೆ.

ಆದರೆ ಇಂತಹಾ ಅವಕಾಶ ಚಿಕ್ಕ ಕುಟುಂಬಗಳಲ್ಲಿಲ್ಲ.

4. ಮಧ್ಯ ಪ್ರವೇಶಿಸಲು ಸೂಕ್ತ ಸದಸ್ಯರಿಲ್ಲ

ಸ್ನೇಹ-ಸಂಬಂಧಗಳ ಸಮತೋಲನ ಸಾಧ್ಯ ಎಂಬ ಅನುಕೂಲವನ್ನೇನೋ ನೋಡಿದ್ದೇವೆ. ಅದರರ್ಥ ಚಿಕ್ಕ ಕುಟುಂಬಗಳಲ್ಲಿ ಜಗಳ, ಮನಸ್ತಾಪಗಳು ಬರುವುದೇ ಇಲ್ಲ ಎಂದಲ್ಲವಲ್ಲಾ.

ಒಂದು ವೇಳೆ ಗಂಭೀರ ಜಗಳಗಳ ಸಂದರ್ಭಗಳು ಎದುರಾದರೆ, ಮಧ್ಯ ಪ್ರವೇಶಿಸಿ ಸೂಕ್ತ ಪರಿಹಾರ ಮತ್ತು ಸಂಸಾರದ ಶಾಂತಿಯನ್ನು ಕಾಪಾಡಲು ಸಮರ್ಥರಾದ ಸದಸ್ಯರ ಕೊರತೆ ವಿಭಕ್ತ ಕುಟುಂಬಗಳಲ್ಲಿ ಕಂಡುಬರುತ್ತದೆ.

ಆದ್ದರಿಂದ ಸಮಸ್ಯೆಗಳನ್ನು ಎಲ್ಲಾ ದೃಷ್ಟಿಕೋನಗಳಿಂದ ಗಮನಿಸಿ ಸರಿಯಾದ ಹೆಜ್ಜೆ ಇಡುವುದೂ ಈ ಕುಟುಂಬಗಳಿಗೆ ಒಂದು ಸವಾಲಿನ ಸಂಗತಿ.

5. ಸಂಸ್ಕೃತಿ ಸಂಪ್ರದಾಯಗಳ ಅಳಿವಿನ ಸಾಧ್ಯತೆ

ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುವ ದಂಪತಿಗಳು ಮತ್ತು ಸೂಕ್ತ ಕನ್ನಡ ವಾಕ್ಯವನ್ನು ಒಳಗೊಂಡ ಚಿತ್ರ.

ಬಹುತೇಕ ವಿಭಕ್ತ ಕುಟುಂಬಗಳಲ್ಲಿ ಹಳೆಯ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳ ಪಾಲನೆ ಕಂಡುಬರದಿರಲು ಹಲವಾರು ಕಾರಣಗಳಿವೆ.

  • ಅಜ್ಜ-ಅಜ್ಜಿ ಮತ್ತು ಸಮಾನ ತಲೆಮಾರಿನ ಸದಸ್ಯರ ಅನುಪಸ್ಥಿತಿ.
  • ವೃತ್ತಯ ರೀತಿ ನೀತಿಗಳು.
  • ಆಧುನಿಕತೆಗೆ ಅವುಗಳು ಸರಿ ಹೊಂದುವುದಿಲ್ಲ ಎಂಬ ಭಾವನೆ.
  • ಅರಿತು ಪಾಲಿಸುವ ಮನಸ್ಸಿದ್ದರೂ ಸರಿಯಾದ ಮೂಲದಿಂದ ವಾಸ್ತವ ಆಧಾರಿತ ಮತ್ತು ವೈಜ್ಞಾನಿಕ ವಿವರಣೆಗಳ ಕೊರತೆ.
  • ಮನೆ, ಪ್ರದೇಶ ಅಥವಾ ಇನ್ನಿತರ ಸೂಕ್ತ ಸೌಲಭ್ಯಗಳ ಕೊರತೆ.

ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ಎಲ್ಲಾ ಅನಾನುಕೂಲಗಳನ್ನು ಮೀರಿ ಉಪಯುಕ್ತ ಆಚಾರ-ವಿಚಾರಗಳನ್ನು ತಮ್ಮಿಂದ ಸಾಧ್ಯವಾದಷ್ಟು ಅರಿತು ಪಾಲಿಸುವ ವಿಭಕ್ತ ಕುಟುಂಬಗಳೂ ಇವೆ.

ಏನಂತೀರಿ?

6. ಹಳೆಯ ಜ್ಞಾನ – ಕೌಶಲ್ಯಗಳ ಕಲಿಕೆಗೆ ಅವಕಾಶ ಕಡಿಮೆ

ಅವಿಭಕ್ತ ಕುಟುಂಬಗಳಲ್ಲಿ ಅನುಕೂಲವಾಗಿ ದೊರೆಯುವ ಕಲಿಕೆಯ ಅವಕಾಶಗಳು ವಿಭಕ್ತ ಕುಟುಮಬಗಳಲ್ಲಿ ಬಹಳ ವಿರಳ ಎನ್ನಬಹುದು.

  • ಸಮಾಜ ಮತ್ತು ಕುಟುಂಬದ ನಡುವಿನ ಸಮತೋಲನದ ಕಲೆ.
  • ಪರಿಸ್ಥಿತಿಗೆ ತಕ್ಕಂತೆ ಆಸೆ – ಅಗತ್ಯಗಳ ಆದ್ಯತೆ ಮತ್ತು ನಿರ್ವಹಣೆ.
  • ನಾಜೂಕಾದ ಸಂವಹನ, ಒಡನಾಟ, ಮತ್ತು ಅಗತ್ಯಕ್ಕೆ ತಕ್ಕಂತೆ ಇತರರೊಂದಿಗಿನ ಹೊಂದಾಣಿಕೆಯ ಕಲಿಕೆ.
  • ಸರಿಯಾದ ರೀತಿಯಲ್ಲಿ ವಸ್ತು, ಜಾಗ, ಆಹಾರ – ಹೀಗೆ ಪರಸ್ಪರ ಹಂಚಿಕೆಯ ಉಪಯೋಗ ಮತ್ತು ದುರುಪಯೋಗಗಳ ಕಲಿಕೆ.
  • ಅಡುಗೆಗೆ ಸಂಬಂಧಿಸಿದ ಹಿಂದಿನ ಕಾಲದ ಸೀಕ್ರೆಟ್ ಗಳು.
  • ಸರಳ ಮತ್ತು ಮಾನ್ಯವಾದ ಮನೆಮದ್ದುಗಳು.

ಹೀಗೆ ಅನೇಕ ವಿಚಾರಗಳಲ್ಲಿ ಸಣ್ಣ ಸಂಸಾರ ಅನಾನುಕೂಲಗಳನ್ನು ಅನುಭವಿಸುತ್ತವೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ತೀರ್ಮಾನ

ಅಂತೂ ಇಂತೂ ಇಂದಿನ ಕಾಲಕ್ಕೆ ತಕ್ಕಂತೆ ವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಎಂಬುದನ್ನು ವಿವರವಾಗಿ ನೋಡಿದ್ದಾಯಿತು.

ಇಚ್ಛೆಗೆ ತಕ್ಕಂತೆ ಇರುವುದು, ಕಡಿಮೆ ಜವಾಬ್ದಾರಿ ಮತ್ತು ಕುಟುಂಬ ಗದ್ದಲ, ಸುಲಭ ಆರ್ಥಿಕ ನಿರ್ವಹಣೆಗಳಂತಹಾ ಅನುಕೂಲಗಳ ಜೊತೆಗೆ ಎಲ್ಲಾ ವಿಧದ ಸಂಬಂಧಗಳು ಲಭ್ಯವಿಲ್ಲದಿರುವುದು, ಭಾವನಾತ್ಮಕ ಬೆಂಬಲದ ಕೊರತೆ, ಕಲಿಕಾ ಅವಕಾಶಗಳ ಅಲಭ್ಯತೆ ಸೇರಿದಂತೆ ಹಲವು ಅನಾನುಕೂಲಗಳು ಮತ್ತು ಅವುಗಳ ಪರಿಣಾಮಗಳನ್ನೂ ಈ ಪೋಸ್ಟ್ ನಲ್ಲಿ ಗಮನಿಸಿದ್ದೇವೆ.

ಈ ಪೋಸ್ಟ್ ನಲ್ಲಿ ಹೇಳಲಾದ ಎಲ್ಲಾ ವಿಷಯಗಳು ಎಲ್ಲಾ ವಿಭಕ್ತ ಕುಟುಂಬಗಳಿಗೂ ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹ ಅಂಶ.

ಇದಕ್ಕೆ ಸಂಬಂಧಿಸಿದಂತೆ ನಿಮ್ಮ ಗಮನಕ್ಕೆ ಬರುವ ಇತರ ವಿಷಯಗಳಿವೆಯೇ?

ಮರೆಯದೆ ಕಾಮೆಂಟ್ ಮಾಡಿ.

ನಿಮ್ಮ ಪ್ರಕಾರ ವಿಭಕ್ತ ಕುಟುಂಬದಿಂದ ಅನುಕೂಲವೋ ಅಥವಾ ಅನಾನುಕೂಲವೋ?

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Comment

Your email address will not be published. Required fields are marked *

Scroll to Top