ಜೀವರಾಸಾಯನಶಾಸ್ತ್ರಜ್ಞರಾಗಿರುವ-ಶ್ರೀಕೃಷ್ಣ-ಎನ್-ಅವರ-ಫೋಟೋದೊಂದಿಗೆ-ಉದ್ಯೋಗಿಯ-ಮನಸ್ಸು-ಕುರಿತ -ಕನ್ನಡ-ವಾಕ್ಯವನ್ನು-ಒಳಗೊಂಡ-ಚಿತ್ರ

ಉದ್ಯೋಗಿಯ ಮನಸ್ಸು ಮತ್ತು ಯಶಸ್ಸಿನ ಸುತ್ತ । ಕೆಲವು ಪ್ರಶ್ನೆಗಳು – ಹಲವು ಉತ್ತರಗಳು!

ಉದ್ಯೋಗಿಯ ಮನಸ್ಸು ಮತ್ತು ಯಶಸ್ಸಿನ ಬಗ್ಗೆ ಯಾರೆಲ್ಲಾ ಯೋಚಿಸ್ತಾರೆ?

ವಿಧ್ಯಾರ್ಥಿಗಳು, ಸ್ವತಃ ಉದ್ಯೋಗಿಗಳು, ಉದ್ಯೋಗದಾತ ಅಥವಾ ಬಿಸಿನೆಸ್ ಮಾಲೀಕರು, ಸರಕಾರ, ಇತ್ಯಾದಿ ಎನ್ನೋಣ.

ಅವರುಗಳಲ್ಲಿ ನೀವೂ ಒಬ್ಬರಾಗಿದ್ದರೆ ಈ ಲೇಖನ ನಿಮಗೂ ಸಹಾಯಕ.

ಶ್ರೀಕೃಷ್ಣ ಎನ್ ಅವರೊಂದಿಗಿನ ಪ್ರಶ್ನೋತ್ತರಗಳು ಈ ಅಂಶಗಳನ್ನು ಒಳಗೊಂಡಿದೆ;

  • ಯಶಸ್ವಿ ಉದ್ಯೋಗಿಯಾಗಲು ಉತ್ತಮ ಸಲಹೆಗಳು.
  • ಆನ್‌ಲೈನ್ ಜಾಹೀರಾತುಗಳ ಬಗೆಗಿನ ಅರಿವು.
  • ಹೊಸ ಉದ್ಯೋಗಿಯ ಮೊದಲ ಹೆಜ್ಜೆಗಳು.

ವಿಷಯಗಳ ಅವಲೋಕನ:

ಉದ್ಯೋಗಿಯ ಮನಸ್ಸು ಮತ್ತು ಯಶಸ್ಸನ್ನು ಗಮನಿಸೋ ಮುನ್ನ

ಯಶಸ್ವಿ ಉದ್ಯೋಗಿ ಎಂದಾಕ್ಷಣ ಕರ್ನಾಟಕದ ಸರಿಸುಮಾರು 7 ಕೋಟಿ ಜನರ ಅಥವಾ ಪ್ರಪಂಚದ 811 ಕೋಟಿಗೂ ಹೆಚ್ಚಿನ ಮಾನವ ತಲೆಗಳಲ್ಲಿ ಬಹುತೇಕರಿಗೆ ಬರುವ ಮೊದಲ ವಿಚಾರಗಳೇ ಪಡೆವ ಸಂಬಳ, ಯಾವ ಕುರ್ಚಿ, ಎಷ್ಟು ಮೇಲೆ, ಇತ್ಯಾದಿ.

ಆದರೆ ಅವರ ಜವಾಬ್ಧಾರಿಗಳೇನು, ಹೊರೆಗಳೇನು, ಎಷ್ಟು ನೆಮ್ಮದಿಯ ಉಸಿರೆಳೆಯುತ್ತಾರೆ, ನೆಮ್ಮದಿಗಾಗಿ ಎಷ್ಟು ಧಮ್ ಎಳೆಯುತ್ತಾರೆ ಎಂದು ಕೇಳೋರ್ಯಾರು?

ಸದ್ಯಕ್ಕೆ ನಮಗೂ ಬೇಡ ಬಿಡಿ!

ಇಲ್ಲಿ ನಾವು ಅನವಶ್ಯಕ ಹೋಲಿಕೆಗಳಿಲ್ಲದ, ಸ್ವಲ್ಪ ನಿಧಾನವಾದರೂ ಸರಿ – ಪುಟ್ಟ ಪುಟ್ಟ ಪ್ರಗತಿಯ ಹೆಜ್ಜೆಗಳನ್ನು ಇಡುತ್ತಾ, ತಮ್ಮ ಜೀವನವನ್ನು ಸಾಗಿಸುವ ಉದ್ಯೋಗಿಗಳನ್ನು ಗಮನದಲ್ಲಿರಿಸಿದ್ದೇವೆ.

ಹಾಗಾಗಿ, ಜೀವರಸಾಯನಶಾಸ್ತ್ರದ ಮೂಲಕ ಪ್ರಯೋಗಾಲಯದಲ್ಲಿ ಜೀವಿಗಳ ಸೂಕ್ಷ್ಮ ರೂಪದೊಡನೆ ವ್ಯವಹರಿಸೋ ಉದ್ಯೋಗಿಯ ಅನುಭವದಿಂದ ನಾವು ಏನನ್ನೆಲ್ಲಾ ತಿಳಿಯಬಹುದು ಎಂಬ ಸಣ್ಣ ಪ್ರಯತ್ನ ಇದಾಗಿದೆ.

ರೆಡಿನಾ?

ಶ್ರೀಕೃಷ್ಣ-ಎನ್-ಎಂಬ-ಜೀವರಾಸಾಯನಶಾಸ್ತ್ರಜ್ಞರ-ಫೋಟೋ

ಶ್ರೀಕೃಷ್ಣ ಎನ್ (Shreekrishna N)

ಶ್ರೀಕೃಷ್ಣ ಅವರು ಸಂಶೋಧನಾ ಉದ್ಯಮದಲ್ಲಿ ಕೆಲಸ ಮಾಡಿದ ಇತಿಹಾಸವನ್ನು ಹೊಂದಿರುವ ಅನುಭವಿ ಸಹವರ್ತಿ (Associate) ಯಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಜೀವರಸಾಯನಶಾಸ್ತ್ರ ವಿಷಯದಲ್ಲಿ MSc (ಮಾಸ್ಟರ್ ಆಫ್ ಸೈನ್ಸ್‌) ಸ್ನಾತಕೋತ್ತರ ಪದವೀಧರರಾಗಿರುವ ಅವರು, ಬಯೋಟೆಕ್ನಾಲಜಿ, ಸ್ಟೆಮ್ ಸೆಲ್ ಸಂಶೋಧನೆ, ಜೀವ ವಿಜ್ಞಾನ, ಪ್ರಥಮ ಚಿಕಿತ್ಸಾ ತರಬೇತಿ ಮತ್ತು ವಿಟ್ರೋದಲ್ಲಿ ನುರಿತರಾಗಿದ್ದಾರೆ.

ಯಶಸ್ವಿ ಉದ್ಯೋಗಿಯಾಗಿ 7+ ವರ್ಷಗಳ ಅನುಭವವನ್ನು ಹೊಂದಿರುವ ಅವರು ಪ್ರಸ್ತುತ Syngene International Limitedನಲ್ಲಿ ಸಹಾಯಕ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಉದ್ಯೋಗಿಯ ಜೊತೆ ಮಾತುಕತೆ

ಪ್ರಶ್ನೆ 1: ಜೀವರಸಾಯನಶಾಸ್ತ್ರಜ್ಞನ ಮನಸ್ಸು ಪ್ರಯೋಗಾಲಯದ ಹೊರಗಿನ ಪ್ರಪಂಚವನ್ನು ಹೇಗೆ ಗಮನಿಸುತ್ತದೆ?

ಉತ್ತರ: ಮಾನವರು ಜಾಗತಿಕವಾಗಿ ಹೇಗೆ ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂದು ನಾನು ಆಶ್ಚರ್ಯ ಪಡುತ್ತೇನೆ. ಪ್ರಪಂಚದ ಎಲ್ಲಾ ಇತರ ಜೀವಿಗಳು ಈಗ ಮಾನವ ಮತ್ತು ಆಧುನಿಕ ತಂತ್ರಜ್ಞಾನದ ನಿಯಂತ್ರಣದಲ್ಲಿವೆ ಎಂಬಂತೆ ತೋರುತ್ತದೆ.

ಪ್ರ 2: ಉದ್ಯೋಗಿಯ ವೃತ್ತಿ ಜೀವನ ಬೆಳೆಯಲು ಸಹಾಯಕವಾಗುವ ಪ್ರಮುಖ ಅಂಶಗಳು ಯಾವುವು?

ಜೀವರಸಾಯನಶಾಸ್ತ್ರಜ್ಞ-ಶ್ರೀಕೃಷ್ಣ-ಎನ್-ಅವರ-ಸಲಹೆ-ಒಳಗೊಂಡ-ಚಿತ್ರ-ಯಶಸ್ಸು-ಬಯಸುವ-ಉದ್ಯೋಗಿಯ-ಮನಸ್ಸು-ಹೇಗಿರಬೇಕೆಂದು-ಸೂಚಿಸುತ್ತಿದೆ.

ಉ: ಇದು ಒಳ್ಳೆಯ ಪ್ರಶ್ನೆ. ನನ್ನ ಅನುಭವದ ಆಧಾರದ ಮೇಲೆ ಕೆಲವು ವಿಷಯಗಳನ್ನು ಹಂಚಿಕೊಳ್ಳಬಹುದು;

  • ಉದ್ಯೋಗಿಗಳ ಭವಿಷ್ಯದ ಕುರಿತ ನಿರ್ಧಾರಗಳಿಗೆ ಸ್ಪಷ್ಟತೆಯನ್ನು ತರಲು ಹೊಸ ತಂತ್ರಜ್ಞಾನ ಮತ್ತು ಸೇವೆಗಳ ಪ್ರಗತಿಯನ್ನು ಗಮನಿಸುವುದು ಮುಖ್ಯ.
  • ನಿರ್ವಹಿಸಬೇಕಾದ ಹೆಚ್ಚಿನ ಕೆಲಸ-ಕಾರ್ಯಗಳಲ್ಲಿ ಆಸಕ್ತಿಯನ್ನು ಹೊಂದಿರುವುದು ಮತ್ತು ಸ್ವಯಂ-ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು ಯಾವಾಗಲೂ ಉದ್ಯೋಗಿಗಳಿಗೆ ಪ್ಲಸ್ ಪಾಯಿಂಟ್ ಎಂದು ನಾನು ಭಾವಿಸುತ್ತೇನೆ.
  • ಪರಿಣಿತರಿಂದ ಅಗತ್ಯ ವಿಷಯಗಳ ಕುರಿತ ಮಾರ್ಗದರ್ಶನ ಪಡೆಯುವುದು ಕೌಶಲ್ಯಗಳ ಉನ್ನತೀಕರಣಕ್ಕೆ ಉತ್ತಮ ಮಾರ್ಗವಾಗಿದೆ.
  • ಉದ್ಯೋಗಿಗಳ ಬೆಳವಣಿಗೆಗೆ ಸರಿಯಾದ ಸಮಯದಲ್ಲಿ ಅವರನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಅಗತ್ಯವಿದೆ.
  • ತಂಡ/ಕಂಪನಿಯು ತನ್ನ ಯಶಸ್ಸನ್ನು ಉದ್ಯೋಗಿಗಳೊಂದಿಗೆ ಆಚರಿಸಿದಾಗ ಮತ್ತು ಅವರ ಪ್ರಯತ್ನಗಳನ್ನು ಗುರುತಿಸಿದಾಗ, ಉದ್ಯೋಗಿಗಳು ಸಂತೋಷದ ಜೊತೆಗೆ ಪ್ರೇರಣೆಯನ್ನು ಪಡೆಯುತ್ತಾರೆ.

ಪ್ರ 3: ಜೀವರಸಾಯನಶಾಸ್ತ್ರಜ್ಞರು ಸಾಮಾಜಿಕ ಮಾಧ್ಯಮವನ್ನು (Social Media) ಹೇಗೆ ಬಳಸುತ್ತೀರಿ?

: ಹ ಹ ಹಾ… ಅದರಲ್ಲಿ ವಿಶೇಷವೇನೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಬಳಸುವಂತೆ ನಾವೂ ಸಾಮಾಜಿಕ ಮಾಧ್ಯಮವನ್ನು ಬಳಸುತ್ತೇವೆ.

ಪ್ರ 4: ಆನ್‌ಲೈನ್ ಪ್ಲಾಟ್‌ಫಾರ್ಮ್ ಬಳಕೆದಾರರಾಗಿರುವುದರಿಂದ, ನೀವು ಆನ್‌ಲೈನ್ ಜಾಹೀರಾತುಗಳ ಬಗ್ಗೆ ಏನಾದರೂ ಹೇಳಲು ಬಯಸುವಿರಾ?

ವಿಡಿಯೋ-ಮಾರ್ಕೆಟಿಂಗ್-ಒಳಗೊಂಡಂತೆ-ಎಲ್ಲೆಲ್ಲೂ ಮಾರ್ಕೆಟಿಂಗ್-ಎಂಬ-ಮಾತಿಗೆ-ಅನ್ವಯಿಸುವ-ಚಿತ್ರ

ಉ: ಖಂಡಿತಾ.

ನಾವು ಆನ್‌ಲೈನ್ ಜಾಹೀರಾತು ಯುಗದಲ್ಲಿರುವುದರಿಂದ, ನಮ್ಮ ಪೀಳಿಗೆಯು ಈ ವಿಷಯದ ಕುರಿತು ಆಗಾಗ್ಗೆ ಆರೋಗ್ಯಕರ ಸಂಭಾಷಣೆಗಳನ್ನು ನಡೆಸಬೇಕು ಎಂದು ನಾನು ಭಾವಿಸುತ್ತೇನೆ.

ಇದು ಬಳಕೆದಾರರಿಗೆ ಮತ್ತು ವ್ಯವಹಾರಗಳಿಗೆ (ಉದ್ಯಮಗಳಿಗೆ) ವಿವಿಧ ಬಗೆಯಲ್ಲಿ ಉತ್ತಮ ಸಾಧನವಾಗಿರುವುದರಲ್ಲಿ ಸಂದೇಹವಿಲ್ಲ.

ಆದರೆ, ದುರದೃಷ್ಟವಶಾತ್, ವಿವಿಧ ಇಂಡಸ್ಟ್ರಿ ಗಳಲ್ಲಿ ಹಾನಿಕಾರಕ ಉತ್ಪನ್ನಗಳ ಪ್ರಚಾರಕ್ಕಾಗಿ ಸುಧಾರಿತ ತಂತ್ರಜ್ಞಾನದ ತಪ್ಪು ಬಳಕೆಯನ್ನು ನಾವು ನೋಡುತ್ತಿದ್ದೇವೆ.

ಪ್ರ 5: ಹೊಸ ಉದ್ಯೋಗಿಗಳಿಗಾಗಿ ಏನಾದರು ಸಲಹೆಗಳಿವೆಯೇ?

ಉ: ವಿಷಯ ಜ್ಞಾನ ಮತ್ತು ಕೌಶಲ್ಯಗಳ ಜೊತೆಗೆ, ಯಾರನ್ನು ಸಂಪರ್ಕಿಸಬೇಕು, ಹೇಗೆ ಸಂಪರ್ಕಿಸಬೇಕು ಮತ್ತು ಯಾವುದಕ್ಕಾಗಿ ಸಂಪರ್ಕಿಸಬೇಕು ಎಂಬುದರ ಕುರಿತು ಮೂಲಭೂತ ತಿಳುವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯ.

ಉದ್ಯಮದ ಬಗ್ಗೆ ಜಾಗೃತರಾಗಿರುವುದು ಒಳ್ಳೆಯದು.

ಉದಾಹರಣೆಗೆ,ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್” ಪ್ರಕಾರ, 2021 ಮತ್ತು 2031 ರ ನಡುವೆ ಜೀವರಸಾಯನಶಾಸ್ತ್ರಜ್ಞರಿಗೆ 15.3% ಉದ್ಯೋಗದ ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಈ ದಶಕದಲ್ಲಿ ಪ್ರತೀ ವರ್ಷ ಜೀವರಸಾಯನಶಾಸ್ತ್ರ ಮತ್ತು ಜೈವಿಕ ಭೌತಶಾಸ್ತ್ರ ವಲಯದಲ್ಲಿ ಸುಮಾರು 2,800 ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ ಎಂದು ಯೋಜಿಸಲಾಗಿದೆ”.

ಎಲ್ಲಾ ಹೊಸ ಉದ್ಯೋಗಿಗಳ ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸುತ್ತೇನೆ.


ನನ್ನ ಪ್ರತಿಕ್ರಿಯೆ

ಮೊದಲನೆಯದಾಗಿ, ತಮ್ಮ ಅನುಭವಗಳನ್ನು ನೇರವಾಗಿ ಮತ್ತು ಸರಳವಾಗಿ ಹಂಚಿಕೊಂಡಿದ್ದಕ್ಕಾಗಿ ನಾನು ಶ್ರೀಕೃಷ್ಣ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ಅವರಿಂದ ಉತ್ತರಗಳನ್ನು ಪಡೆದ ನಂತರ, ಅಂತಹಾ ಮೌಲ್ಯಭರಿತ ಉತ್ತರಗಳನ್ನು ಪಡೆಯಲು ನಾನು ಇನ್ನೂ ಐದು ಪ್ರಶ್ನೆಗಳನ್ನು ಕೇಳಬಹುದಿತ್ತು ಎಂದು ಅನಿಸಿದ್ದು ಸುಳ್ಳಲ್ಲ.

ಆದರೂ ಆ ಉತ್ತರಗಳಿಂದ ನಾವು ಈಗಾಗಲೇ ಕೆಲವು ಒಳನೋಟಗಳನ್ನು ಪಡೆದುಕೊಂಡಿದ್ದೇವೆ.

ತಂತ್ರಜ್ಞಾನ ಮತ್ತು ಜೀವಿಗಳು

ಆಧುನಿಕ ತಂತ್ರಜ್ಞಾನದ ತ್ವರಿತ ಪ್ರಗತಿಯ ಪ್ರಭಾವವನ್ನು ಎದುರಿಸುತ್ತಿರುವ ಜೀವಿಗಳ ಕಡೆಗೆ ಕಾಳಜಿ ಮತ್ತು ಸಂವೇದನಾಶೀಲತೆಯನ್ನು ಹೊಂದಿರಬೇಕಾದ ಅಗತ್ಯತೆ ಇದೆ ಎಂದು ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು ಹಾಗೂ ಪಡೆಯೆದವರೂ ಅರಿಯಬೇಕಾದ ಸಂಗತಿ.

ಉತ್ತಮ ಉದ್ಯೋಗಿಯ ಹಾದಿ

ಕಂಪ್ಯೂಟರ್-ಬಳಸಿ-ಕೆಲಸ-ಮಾಡುತ್ತಿರುವ-ಉದ್ಯೋಗಿಗೆ-ಸಲಹೆ-ನೀಡುವ-ಇಬ್ಬರು-ಸಹೋದ್ಯೋಗಿಗಳನ್ನು-ಒಳಗೊಂಡ-ಕಾರ್ಟೂನ್-ಚಿತ್ರ

ಉದ್ಯೋಗಿಗಳ ಯಶಸ್ಸಿಗೆ ಸಂಬಂಧಿಸಿದ ಶ್ರೀಕೃಷ್ಣ ಅವರ ಮಾತುಗಳನ್ನು ನಾನು ಒಪ್ಪುತ್ತೇನೆ. ಏಕೆಂದರೆ ನಾನು ಕೂಡ ಈ ಹಿಂದೆ ಪೂರ್ಣ ಸಮಯದ (Full-Time) ಉದ್ಯೋಗಿಯಾಗಿದ್ದೆ.

ಜೀವರಸಾಯನಶಾಸ್ತ್ರಜ್ಞರಾಗಿರುವ ಅವರು ತಂತ್ರಜ್ಞಾನದ ಬೆಳವಣಿಗೆಯನ್ನು ಗಮನಿಸುವ ಪ್ರಾಮುಖ್ಯತೆಯನ್ನು ಸೂಚಿಸುತ್ತಿದ್ದಾರೆ, ಅಂದರೆ ಪ್ರತೀ ಉದ್ಯಮದಲ್ಲಿನ ಜನರು ಆಧುನಿಕ ತಂತ್ರಜ್ಞಾನ ಮತ್ತು ಉದ್ಯೋಗದ ಮೇಲೆ ಅವುಗಳ ಪ್ರಭಾವಗಳನ್ನು ಗಮನಿಸಬೇಕು ಅಂದಂತಾಯಿತು.

ಒಂದು ವೇಳೆ ನೀವೂ ನನ್ನಂತೆ ಮಾರ್ಕೆಟಿಂಗ್ ಸಂಬಂಧಿತ ಉದ್ಯಮದಲ್ಲಿದ್ದರೆ, ನಾವು ಏನು ಮಾತನಾಡುತ್ತಿದ್ದೇವೆಂದು ನಿಮಗೆ ತಿಳಿದಿದೆ.

ಅಲ್ಲವೇ?

ಸ್ವಯಂ ಕಲಿಕೆಯ ಸಾಮರ್ಥ್ಯಗಳನ್ನು ಸುಧಾರಿಸುವುದು, ಮುಖ್ಯ ವಿಷಯಗಳ ಆಳವಾದ ತಿಳುವಳಿಕೆಯನ್ನು ಹೊಂದಲು ಮಾರ್ಗದರ್ಶನ ಪಡೆಯುವುದು ಮತ್ತು ಪರಸ್ಪರ ಪ್ರಯೋಜನಕಾರಿ ಸವಾಲುಗಳನ್ನು ಸ್ವೀಕರಿಸುವ ಕುರಿತು ಅವರ ಮಾತುಗಳು ಯಶಸ್ಸಿನ ಏಣಿಯನ್ನು ಏರಲು ಮುಖ್ಯವಾಗಿದೆ.

ನಾನು ಸೇರಿಸಲು ಇಷ್ಟಪಡುವ ಇನ್ನೂ ಕೆಲವು ಪ್ರಮುಖ ಅಂಶಗಳೆಂದರೆ – ಸಂವಹನ, ಆಂತರಿಕ ರಾಜಕೀಯದೊಂದಿಗೆ ವ್ಯವಹರಿಸುವುದು, ಇತರರ ಮೇಲೆ ಪ್ರಾಬಲ್ಯ ಸಾಧಿಸಬೇಕೆ ಅಥವಾ ಬೇಡವೇ ಎಂಬ ಕೌಶಲ್ಯಗಳು ನಿತ್ಯ ಸಹಕಾರಿ.

ಪ್ರತೀ ಕ್ಷಣ ತಲೆಯ ತುಂಬಾ “ಧನಾತ್ಮಕ ಚಿಂತನೆಗಳನ್ನೇ” (Positive thinking) ತುಂಬಿರಬೇಕು ಎಂದು (ಸಂತೆಯಲ್ಲಿ ಗ್ರಾಹಕರನ್ನು ಕರೆದಂತೆ) ನೀಡಲಾಗುವ ಸಲಹೆಯಿಂದ ಹೆಚ್ಚೇನೂ ಪ್ರಯೋಜನವಿಲ್ಲ.

ವಾಸ್ತವವಾಗಿ ಉದ್ಯೋಗಿಯ ಮನಸ್ಸು ಹಾಗಿರಲು ಸಾಧ್ಯವೇ?

ನೀವೇ ಹೇಳಿ.

ಕಾಮೆಂಟ್ ಮೂಲಕ.

ಆನ್‌ಲೈನ್ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳ ಬಗ್ಗೆ

ನೀವು ಈ ಪೋಸ್ಟ್ ಅನ್ನು ಓದುತ್ತಿದ್ದೀರಿ ಎಂದರೆ ನೀವು ಸಕ್ರಿಯ ಆನ್‌ಲೈನ್ ಪ್ಲಾಟ್‌ಫಾರ್ಮ್ ಬಳಕೆದಾರರಾಗಿದ್ದೀರಿ, ಅಲ್ಲವೇ?

ನಾನಾಗಲಿ, ಶ್ರೀಕೃಷ್ಣ ಆವರಾಗಲಿ ಇದಕ್ಕೆ ಹೊರತಾಗಿಲ್ಲ.

ಆನ್‌ಲೈನ್ ಮಾರ್ಕೆಟಿಂಗ್ ನನ್ನ ವೃತ್ತಿಯ ಭಾಗವಾಗಿರುವ ಕಾರಣ ನಾನು ಅವರಲ್ಲಿ ಜಾಹೀರಾತಿಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದೆ.

ಹೌದು! ಆನ್‌ಲೈನ್ ಮಾರ್ಕೆಟಿಂಗ್ ಜಗತ್ತಿನಲ್ಲಿ ಉದ್ದೇಶಪೂರ್ವಕ ಮೋಸಗಳು, ಕಳ್ಳಾಟಗಳು ನಡೆಯುತ್ತಿವೆ. ಶ್ರೀಕೃಷ್ಣರವರು ಹೇಳಿದಂತೆ, ಈ ವಿಷಯಗಳ ಬಗ್ಗೆ ನಿರಂತರವಾಗಿ ಮಾತನಾಡುವ ಅವಶ್ಯಕತೆಯಿದೆ ಎಂಬ ಅಂಶವನ್ನು ನಾನೂ ಒಪ್ಪಿಕೊಳ್ಳುತ್ತೇನೆ.

ಇದು ಉದ್ಯೋಗಿಯ ಮನಸ್ಸನ್ನು ಒಳಗೊಂಡಂತೆ ಎಲ್ಲರ ತಲೆಗೂ ‘ಅಪಾಯಕಾರಿ ಹುಳ ಬಿಟ್ಟಂತೆ’.

ಅದಕ್ಕಾಗಿಯೇ SharingShree ಕನ್ನಡ, ಕಲಿಕೆ ಮತ್ತು ಹಂಚಿಕೆ ವಿಭಾಗದಲ್ಲಿ ಮಾರ್ಕೆಟಿಂಗ್ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತದೆ.

ಆನ್‌ಲೈನ್ ಮಾರ್ಕೆಟಿಂಗ್‌ನ ಮೋಸದ ಜಾಲದಿಂದ ತಪ್ಪಿಸಲು ನೀವು ಈ ಅಂಶಗಳನ್ನು ಪರಿಗಣಿಸಬಹುದು;

ವ್ಯಾಪಾರ-ಗ್ರಾಹಕರು ಮತ್ತು-ಉದ್ಯೋಗಿಗಳಿಗೆ-ಮಾರ್ಕೆಟಿಂಗ್-ಜ್ಞಾನ ಮತ್ತು ತಿಳುವಳಿಕೆಯಾ-ಮಹತ್ವವನ್ನು-ಸೂಚಿಸುವ-ತ್ರಿಕೋನ-ಆಕಾರವನ್ನು-ಹಂಚಿಕೊಳ್ಳುವ-SharingShree-ಕನ್ನಡದ-ಚಿತ್ರ
  • ನಿಮ್ಮ ನಿಜವಾದ ಅಗತ್ಯಗಳು ಮತ್ತು ಆಸೆಗಳನ್ನು ಪ್ರತ್ಯೇಕಿಸಲು ಪ್ರಯತ್ನಿಸಿ. ಹೆಚ್ಚಿನ ಕುಶಲತೆಗಳು (ಅದೇ, ಮೋಸದಾಟಗಳು), ಆಸೆಗಳನ್ನು ಅಗತ್ಯಗಳು ಎಂದು ತಪ್ಪಾಗಿ ಬಿಂಬಿಸುವ ಮೂಲಕ ಉತ್ಪನ್ನ ಹಾಗೂ ಸೇವೆಗಳನ್ನು ಖರೀದಿಸುವಂತೆ ಮಾಡುವುದಾಗಿದೆ.
  • ನಿಮ್ಮ ಆದ್ಯತೆಗಳಿಗೆ ಅನುಗುಣವಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ – ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು-ಸಂಬಂಧಿತ ಸೆಟ್ಟಿಂಗ್‌ಗಳನ್ನು ನೀವು ಆಯ್ಕೆ ಮಾಡಬಹುದು
  • ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ಸಲುವಾಗಿ, ಉದ್ಯೋಗಾವಕಾಶಗಳಿಗಾಗಿ, ಆರೋಗ್ಯ ಅಥವಾ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಉತ್ಪನ್ನಗಳು ಅಥವಾ ಸೇವೆಗಳನ್ನು ಖರೀದಿಸುವಂತಹಾ ನಿರ್ಧಾರಗಳನ್ನು ತೆಗೆದುಕೊಳ್ಳೋ ಮುನ್ನ – ಜಾಹೀರಾತು ಪ್ರಸಾರ ಮಾಡಲಾದ ಖಾತೆಗಳು, ಬಿಸಿನೆಸ್ ಅಥವಾ ಬ್ರಾಂಡ್ ಗಳ ಮರುಪರಿಶೀಲನೆ ಮಾಡಲು ಮರೆಯದಿರಿ.
  • ಮಾರ್ಕೆಟಿಂಗ್ ತಿಳುವಳಿಕೆಯು, ಉದ್ಯೋಗಿಗಳನ್ನೇ ಗುರಿಯಿಟ್ಟು ವಂಚಿಸಲು ಹೊರಟ ಜಾಹೀರಾತುಗಳಿಗೆ ಬಲಿಯಾಗದಿರಲು ಸಹಾಯಕ.

ಗ್ರಾಹಕರಾಗಿ, ಆನ್ಲೈನ್ ಮಾರ್ಕೆಟಿಂಗ್ ವಿಚಾರಗಳನ್ನು ನಿಮ್ಮ ಉಪಯೋಗಕ್ಕಾಗಿ ಬಳಸಲು ಮೇಲಿನ ಮಾಹಿತಿಗಳು ಸಹಾಯ ಮಾಡಲಿವೆ ಎಂದು ನಾನು ಭಾವಿಸುತ್ತೇನೆ.

ಆನ್‌ಲೈನ್ ಮಾರ್ಕೆಟಿಂಗ್ ಅಥವಾ ಜಾಹೀರಾತುಗಳ ಮೂಲಕ ನಡೆದ ಘಟನೆಗಳು ಅಥವಾ ವಿಶೇಷ ಅನುಭವಗಳಿದ್ದರೆ ಮರೆಯದೆ ಕಾಮೆಂಟ್ ಮಾಡಿ.

ಸರಿನಾ?

ಹೊಸಬರು ಮತ್ತು ಹೊಸ ಅವಕಾಶಗಳು

“ಯಾರನ್ನು ಸಂಪರ್ಕಿಸಬೇಕು, ಹೇಗೆ ಸಂಪರ್ಕಿಸಬೇಕು ಮತ್ತು ಯಾವುದಕ್ಕಾಗಿ ಸಂಪರ್ಕಿಸಬೇಕು ಎಂಬುದರ ಕುರಿತು ಮೂಲಭೂತ ತಿಳುವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯ” ಎಂಬ ನೇರವಾದ ಸಲಹೆಯನ್ನು ನಾನು ಇಷ್ಟಪಟ್ಟಿದ್ದೇನೆ.

ಉದ್ಯೋಗ ಅಥವಾ ಹೊಸ ಅವಕಾಶಕ್ಕಾಗಿ ಯಾರನ್ನಾದರೂ ಸಂಪರ್ಕಿಸುವಾಗ ಇವುಗಳನ್ನು ಪರಿಗಣಿಸಿದರೆ ಹೆಚ್ಚು ಸೂಕ್ತ.

  • ಉದ್ಯೋಗ ನೀಡುತ್ತಿರುವವರ ನಿಜವಾದ ಅವಶ್ಯಕತೆಗಳೇನು?
  • ಅವರ ಅಗತ್ಯಗಳನ್ನು ತಿಳಿದ ನಂತರ ಉದ್ಯೋಗಿ ತನ್ನ ಅಗತ್ಯಗಳೂ ಪೂರೈಸುತ್ತವೆಯೇ ಎಂದು ಪರಿಶೀಲಿಸಬೇಕಾಗುತ್ತದೆ.
  • ನಿಮಗೆ ತಿಳಿದಿರುವುದನ್ನು ಲಬಲಂಬನೆ ಹೇಳುವುದಕ್ಕಿಂತ ನಿಮ್ಮ ಕೌಶಲ್ಯ ಮತ್ತು ಜ್ಞಾನವು ಅವರಿಗೆ ಹೇಗೆ ಉಪಯುಕ್ತ ಎಂಬುದನ್ನು ಪ್ರಸ್ತುತಪಡಿಸುವುದು ಹೆಚ್ಚು ಮುಖ್ಯವಾಗಿದೆ.
  • ಕಾರ್ಪೊರೇಟ್ ಅಥವಾ ವೃತ್ತಿಪರ ಸಂವಹನ ರೀತಿಗಳ (communication types and tones) ಮೂಲಭೂತ ತಿಳುವಳಿಕೆಯನ್ನು ಹೊಂದಿರುವುದು.

ಮತ್ತೊಂದು ಪ್ರಮುಖ ವಿಷಯವೆಂದರೆ, ಹೊಸಬರು ವಿಶೇಷವಾಗಿ ನಿರಾಕರಣೆಗಳನ್ನು ಮತ್ತು ವೈಫಲ್ಯ (“NO”) ಗಳನ್ನುಎದುರಿಸಲು ಸಿದ್ಧವಾಗಿರಬೇಕಾಗುತ್ತದೆ (ಉದ್ಯೋಗ ಅಥವಾ ಬಿಸಿನೆಸ್ ಗಳಲ್ಲಿ ಸ್ವಲ್ಪ ಕಾಲ ಕಳೆದಂತೆ ಬೇರೆ ಬೇರೆ ರೀತಿಯಲ್ಲಿ ‘NO’ ಅನ್ನು ಎದಿರಿಸುವುದು ಅಭ್ಯಾಸವಾಗಿರುತ್ತದೆ).

ಅವಕಾಶವು ನಿಮ್ಮದಾಗುವ ಸಾಧ್ಯತೆಯು 10 ಪ್ರಯತ್ನಗಳಲ್ಲಿ 1 ಆಗಿದ್ದರೆ, ನೀವು 10 ಪ್ರಯತ್ನಗಳಿಗೂ ಸಿದ್ಧರಾಗಿರಬೇಕು. (ಹಾಗಂತ ಇದು ಆರೋಗ್ಯ ಮತ್ತು ಜೀವವನ್ನೇ ಪಣಕ್ಕಿಡುವ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂಬಂಧಿತ ಉದ್ಯೋಗಗಳ ಪ್ರಯತ್ನಕ್ಕೆ ಸೂಕ್ತ ಸಲಹೆಯಲ್ಲ)

ತೀರ್ಮಾನ

ಕೆಲವೇ ಪದಗಳಲ್ಲಿ ಅಥವಾ ವಾಕ್ಯಗಳಲ್ಲಿ ಉದ್ಯೋಗಿಯ ಮನಸ್ಸು ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ ಎಂಬುದು ನನಗೂ ತಿಳಿದಿದೆ, ಬಹುಷಃ ನಿಮಗೂ ಗೊತ್ತಿದೆ.

ಆದರೆ ಶ್ರೀಕೃಷ್ಣ ಅವರೊಂದಿಗಿನ ಈ ತರ – ಪ್ರಶ್ನೋತ್ತರ ಕಾರ್ಯಕ್ರಮವು ನಿಮಗೆ ಒಳನೋಟವುಳ್ಳ (insightful) ಮೌಲ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ನಾನು ಭಾವಿಸುತ್ತೇನೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಉದ್ಯಮದ ವಿಧಗಳ ಹೊರತಾಗಿಯೂ, ತಂತ್ರಜ್ಞಾನದ ಅಭಿವೃದ್ಧಿಯ ಪ್ರಭಾವಕ್ಕೆ ಗಮನ ಕೊಡುವುದು ಮುಖ್ಯವಾಗಿದೆ.

ಉದ್ಯೋಗಿಯ ಯಶಸ್ಸು – ಸ್ವಯಂ ಪ್ರಯತ್ನ, ಗುಂಪು ಸಮನ್ವಯ ಮತ್ತು ಉದ್ಯೋಗದಾತರ ಬೆಂಬಲವನ್ನು ಅವಲಂಬಿಸಿರುತ್ತದೆ.

ಮುನ್ನೆಚ್ಚರಿಕೆಗಳ ಮೂಲಕ, ನಿಮ್ಮ ಪ್ರಯೋಜನಕ್ಕಾಗಿ ಆನ್‌ಲೈನ್ ಮಾರ್ಕೆಟಿಂಗ್ ಅಥವಾ ಜಾಹೀರಾತುಗಳನ್ನು ಬಳಸಬಹುದು ಮತ್ತು ಮೋಸದ ಜಾಲಗಳನ್ನು ತಪ್ಪಿಸಬಹುದು.

ನೀವು ಕೇಳಲು ಅಥವಾ ಹೇಳಲು ಬಯಸುವ ವಿಚಾರಗಳೇನಾದರೂ ಇವೆಯೇ?

ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ಮತ್ತು ಈ ಪ್ರಶ್ನೋತ್ತರಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Comment

Your email address will not be published. Required fields are marked *

Scroll to Top