ಪರಸ್ಪರ-ಸಂಬಂಧಿತ-ರಿಂಗ್ ಗಳು-ಒಂದೆಡೆ-ಮತ್ತು-ಪೂರ್ಣಗೊಳಿಸಿದ-ಪಝಲ್-ಹಿಡಿದ-ಹುಡುಗ-ಮತ್ತೊಂದೆಡೆ-ಹಾಗೂ-ಸಂಬಂಧಗಳ-ನಿರ್ವಹಣೆಯ-ಕುರಿತ-ಕನ್ನಡ-ಸಾಲುಗಳನ್ನು-ಒಳಗೊಂಡ-ಚಿತ್ರ.

ಎಂತಹಾ ಹೊಣೆ ಈ ಸಂಬಂಧಗಳ ನಿರ್ವಹಣೆ!
About Managing Relationships in Kannada!

ಓ ನನ್ನ ಸಂಬಂಧಿ, ನಮಸ್ತೆ. ಆರಾಮ ತಾನೇ?

ಅರೆ, ನನಗೂ ನಿಮಗೂ ಏನ್ ಸಂಬಂಧ? ನೀನ್ ಯಾವ್ ಸೀಮೆ ಸಂಬಂಧಿ ಎಂದು ಯೋಚಿಸತೊಡಗಿದಿರಾ?

ಓದುಗ-ಬರಹಗಾರ” ಎಂಬ ಸಂಬಂಧದ ಸಲುವಾಗಿ ನಾನು ನಿಮ್ಮನ್ನು ಸಂಬಂಧಿ ಎಂದು ಕರೆದೆ.

ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಸಂಬಂಧ (Relationship) ಎಂಬ ಪದವನ್ನು ಬಹಳ ಸಂಕುಚಿತ ಅರ್ಥದಲ್ಲಿ ಬಳಸುವುದನ್ನು ನೀವು ಗಮನಿಸಿರಬಹುದು. ಅದು ಕೇವಲ ಗಂಡು-ಹೆಣ್ಣಿನ ಅಥವಾ ದಂಪತಿಗಳ ನಡುವಿನ ಸಂಬಂಧವನ್ನೇ ಹೆಚ್ಚಾಗಿ ಸೂಚಿಸುತ್ತಿದೆ. ಇದರ ಪ್ರಭಾವ ಕನ್ನಡದಲ್ಲೂ ಹಬ್ಬುವುದರಲ್ಲಿ ಆಶ್ಚರ್ಯವಿಲ್ಲ.

ನಿತ್ಯ ಜೀವನದಲ್ಲಿ ವಿವಿಧ ಸಂಬಂಧಗಳು ಉತ್ತಮ ನಿರ್ವಹಣಾ ಕೌಶಲ್ಯಗಳನ್ನು ಬಯಸುತ್ತವೆ. ಆದರೆ ಇಂಗ್ಲಿಷ್ ಭಾಷೆಯ “Relationship Management” (“ಸಂಬಂಧ ನಿರ್ವಹಣೆ”) ಎಂಬ ಪದಗಳನ್ನು ಪಠ್ಯಪುಸ್ತಕಗಳಲ್ಲಿ, ಬಿಸಿನೆಸ್, ಹಾಗೂ ಕಂಪೆನಿಗಳಲ್ಲಿ ಕೇವಲ ವೃತ್ತಿಪರವಾಗಿ ಬಳಸಲಾಗುತ್ತದೆ.

ಹಾಗಾದರೆ ಸಾಮಾನ್ಯ ಮನುಷ್ಯನ ಕತೆಯೇನು? ಸಂಬಂಧದ ಎಲ್ಲಾ ಪ್ರಮುಖ ವಿಧಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳನ್ನು ನಿರ್ವಹಿಸುವುದು ದೈನಂದಿನ ಜೀವನದಲ್ಲಿ ಅಗತ್ಯವಲ್ಲವೇ?

ಹಾರ್ವರ್ಡ್ ವಿಶ್ವವಿದ್ಯಾನಿಲಯವು 80 ವರ್ಷಗಳ ಕಾಲ ನಡೆಸಿದ ಅತಿದೊಡ್ಡ ಅಧ್ಯಯನವುಹಣ ಅಥವಾ ಖ್ಯಾತಿಗಿಂತ ಹೆಚ್ಚು ನಿಕಟ ಸಂಬಂಧಗಳು ಜನರನ್ನು ಅವರ ಜೀವನದುದ್ದಕ್ಕೂ ಸಂತೋಷವಾಗಿರಿಸುತ್ತದೆ” ಎಂದು ತಿಳಿಸಿದೆ.

ಇದನ್ನು ಅರಿತುಕೊಳ್ಳಲು ನಮಗೆ ಹಲವಾರು ಅಧ್ಯಯನಗಳ ಅಗತ್ಯವಿಲ್ಲ. ಸುತ್ತಮುತ್ತಲಿನ ಸರಳ ಅವಲೋಕನವು ಅದೇ ಕತೆಯನ್ನೇ ತೋರಿಸುತ್ತದೆ. ಅದನ್ನೇ ನಾವು ಇಂದು ಈ ಮೂಲಕ ನೋಡಲಿದ್ದೇವೆ.

ವಿಷಯಗಳ ಅವಲೋಕನ:
  1. ನಿಮಗೂ ಇದಕ್ಕೂ ಸಂಬಂಧವಿದೆಯೇ?
  2. ಸಂಬಂಧಗಳ ನಿರ್ವಹಣೆ ಕಠಿಣವೇ?
  3. ಸಂಬಂಧ ಎಂದರೇನು?
  4. ಸಂಬಂಧದ ವಿಧಗಳು:
  5. ಭಾಗ ಅ – ವೈಯಕ್ತಿಕ ಸಂಬಂಧ:
  6. ಭಾಗ ಆ – ವೃತ್ತಿಪರ ಸಂಬಂಧಗಳು
  7. ಭಾಗ ಇ – ಇತರ ಸಂಬಂಧಗಳು:
  8. ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):
  9. ತೀರ್ಮಾನ:

ನಿಮಗೂ ಇದಕ್ಕೂ ಸಂಬಂಧವಿದೆಯೇ?

ಪ್ರತಿಯೊಬ್ಬರೂ ನೇರವಾಗಿ ಎಲ್ಲಾ ರೀತಿಯ ಸಂಬಂಧಗಳನ್ನು ಹೊಂದಿರಲು ಸಾಧ್ಯವಿಲ್ಲ. ಇದರಿಂದಾಗಿ ಈ ಏಳು-ಬೀಳಿನ ಜೀವನ ಬಂಡಿಯ ಸಂಬಂಧಗಳ ಕೊಂಡಿಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅಲ್ಲದೆ, ನಮ್ಮ ಸುತ್ತು-ಮುತ್ತ ಇದರ ಕುರಿತಾದ ಮಾತುಕತೆಗಳೂ ಬಹಳ ವಿರಳ.

ಆದ್ದರಿಂದ, ಇಂತಹಾ ವಿಚಾರಗಳನ್ನು ಹಂಚಿಕೊಳ್ಳಲು ಬಯಸುವ ವ್ಯಕ್ತಿಗೆ ಈ ಲೇಖನವು ಸಹಾಯಕವಾಗಿದೆ.

ಒಂದು ವೇಳೆ ನೀವು ಮ್ಯಾಜಿಕ್ ಮಂತ್ರವನ್ನೋ, ಸಂಬಂಧಗಳ ಎಲ್ಲಾ ಸಮಸ್ಯೆಗಳಿಂದ ಪಾರಾಗುವ ತ್ವರಿತ ತಂತ್ರವನ್ನೋ, ಅಥವಾ ಅವಾಸ್ತವಿಕ ಪವಾಡಗಳನ್ನು ಬಯಸುತ್ತಿದ್ದರೆ ಈ ಲೇಖನ ಖಂಡಿತವಾಗಿಯೂ ನಿಮಗೆ ಸೂಕ್ತವಲ್ಲ.

ಹಾಗಿದ್ದರೆ ಮುಖ್ಯ ಹಾಗೂ ಮೂಲ ಪ್ರಶ್ನೆಯೊಂದಿಗೆ ನಮ್ಮ ಸಂವಹನದ ಪಯಣವನ್ನು ಪ್ರಾರಂಭಿಸೋಣ.

ಏನಂತೀರಿ?

ಸಂಬಂಧಗಳ ನಿರ್ವಹಣೆ ಕಠಿಣವೇ?

ಸರಪಳಿಯ-ಚಿಹ್ನೆಯ-ಜೊತೆಗೆ-ಸಂಬಂಧಗಳ-ನಿರ್ವಹಣೆಯ-ಕುರಿತ-SharingShree-ಕನ್ನಡದ-ಉಲ್ಲೇಖವನ್ನು-ಒಳಗೊಂಡ-ಚಿತ್ರ.

ನಾವು ಜೊತೆಗೆ ಜೀವಿಸುವ ಜನರನ್ನು ಅರ್ಥಮಾಡಿಕೊಳ್ಳುವುದು ಒಂದು ನಿರ್ದಿಷ್ಟ ಹಂತದವರೆಗೆ ಸುಲಭವಾಗಬಹುದು.

ಆದರೆ…

ಓಹ್..!

ಸಂಬಂಧಗಳ ಯಾವುದೋ ಮೂಲೆಯಲ್ಲಿ ಸಮಸ್ಯೆಗಳು ಹುಟ್ಟಿಕೊಂಡರೆ, ಅವುಗಳು ಅಷ್ಟಕ್ಕೇ ನಿಲ್ಲುತ್ತವೆಯೇ! ಇಲ್ಲ. ಅವು ಸಾಂಕ್ರಾಮಿಕ ರೋಗದಂತೆ ಹರಡಲು ಪ್ರಾರಂಭಿಸುತ್ತವೆ.

ಹಾಗಾದರೆ ಅವೆಲ್ಲವನ್ನೂ ಹೇಗೆ ನಿಭಾಯಿಸುವುದು?

ಅದಕ್ಕಾಗಿ ಈ 3 ಮುಖ್ಯ ಹಂತಗಳನ್ನು ನೋಡೋಣ;

1. ಸಂಬಂಧಗಳ ಪಾತ್ರವನ್ನು ಗುರುತಿಸುವುದು:

ಪಾತ್ರವನ್ನು ಗುರುತಿಸುವುದು ಸಂಬಂಧಗಳಿಗೆ ಸ್ಪಷ್ಟತೆಯನ್ನು ತರಲು ಸಹಾಯ ಮಾಡುತ್ತದೆ. ದೈನಂದಿನ ಜೀವನದಲ್ಲಿ ಸಂಬಂಧಗಳಿಗೆ ಸರಿಯಾದ ಸ್ಥಾನವನ್ನು ಒದಗಿಸುವ ಪ್ರಕ್ರಿಯೆ ಎಂದೂ ನೀವು ಇದನ್ನು ಕರೆಯಬಹುದು.

ಸಂಘರ್ಷ-ಮುಕ್ತ ಸಂಬಂಧಗಳ ಪ್ರಾಮುಖ್ಯತೆಯ ಬಗ್ಗೆ ಎಂದಿಗೂ ಯೋಚಿಸದ ವ್ಯಕ್ತಿಗೆ, ಸಂಬಂಧಗಳ ನಿರ್ವಹಣೆ ಕಠಿಣವೇ ಸರಿ.

ಉದಾಹರಣೆ– ನೆಮ್ಮದಿಯಿಂದಿರಲು ಅಗತ್ಯವಿರುವಷ್ಟು ಸಂಪತ್ತನ್ನು ಗಳಿಸುವುದು ಮಾನವ ಜೀವನದ ಮುಖ್ಯ ಅಂಶ. ಈ ಕಾರಣಕ್ಕಾಗಿ ಕೆಲವೊಮ್ಮೆ ನಿಖಟ ಸಂಬಂಧಿಗಳೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಾಧ್ಯವಾಗದಿರಬಹುದು.

ಇದು ಪರಸ್ಪರ ಪ್ರಾಮಾಣಿಕ ಸಂವಹನದಿಂದ ನಿರ್ವಹಿಸಬಹುದಾದ ಸಂಬಂಧದ ಸವಾಲಾಗಿದೆ.

ಒಂದು ವೇಳೆ ಉದ್ಯೋಗದ ಹೆಸರಲ್ಲಿ ಉದ್ದೇಶಪೂರ್ವಕವಾಗಿ ನಿಖಾಟ ಸಂಬಂಧಿಗಳನ್ನು ದೂರವಿಟ್ಟರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ.

ಅನಾರೋಗ್ಯದ ಸಮಯದಲ್ಲಿ ಸಾಮಾನ್ಯವಾಗಿ ನಿಖಾಟ ಸಂಬಂಧಿಗಳ ಇರುವಿಕೆಯ ಮಹತ್ವವನ್ನು ಹಲವರು ನೆನೆಯುವುದೂ ಒಂಥರಾ ಸಂಪ್ರದಾಯದಂತೆ ತೋರುತ್ತದೆ.

2. “ಸರಿಯಾದ ಸಂಬಂಧಗಳ” ವ್ಯಾಖ್ಯಾನಗಳನ್ನು ಪ್ರಶ್ನಿಸುವುದು:

ಜೀವನ-ಬಂಡಿಯಲ್ಲಿ-ಸ್ನೇಹ-ಸಂಬಂಧಗಳನ್ನು-ಸೂಚಿಸುವ-ಆಕಾರಗಳನ್ನು-ಒಳಗೊಂಡ-ಚಿತ್ರ.

ನಮ್ಮ ಮನಸ್ಸು ಸರಿ ತಪ್ಪುಗಳ ಬೇರೆ ಬೇರೆ ರೀತಿಯ ಪರಿಕಲ್ಪನೆಗಳಿಂದ ತುಂಬಿರುತ್ತದೆ. ಸಂಬಂಧಗಳ ಕುರಿತ ವಿಚಾರಗಳು ಇದಕ್ಕೆ ಹೊರತಾಗಿಲ್ಲ.

ಅಂತಹಾ ಪರಿಕಲ್ಪನೆಗಳು ನಮ್ಮ ಸುತ್ತುಮುತ್ತಲಿನ ವಿಷಯಗಳ ಮೊತ್ತವೇ ಆಗಿದೆ. ಈ ವಿಚಾರಕ್ಕಾಗಿ ಮೊದಲೆಲ್ಲಾ ಕೇವಲ ಸಿನಿಮಾ, ಧಾರವಾಹಿ, ಕತೆ, ಕಾದಂಬರಿ ಎಂದು ದೂರುತ್ತಿದ್ದಾರೆ, ಇಂದು ಸೋಶಿಯಲ್ ಮೀಡಿಯಾಗಳೂ ಸೇರಿಕೊಂಡಿವೆ. ಆದರೆ ಅವುಗಳ ಬಗ್ಗೆ ಹೆಚ್ಚಿನ ಮಾತುಕತೆ ನಡೆಯುತ್ತಿಲ್ಲ ಅಷ್ಟೇ.

ಯಾವುದೇ ವಿಧದ ಇತರರ ಸಂಬಂಧಗಳನ್ನು ಶ್ರೇಷ್ಠ ಅಥವಾ ಕನಿಷ್ಠ ಎಂದು ಪರಿಗಣಿಸುವ ಮುನ್ನ ಅವರ ಬಗ್ಗೆ ನಮಗೆ ತಿಳಿದಿರುವ ಮಾಹಿತಿಗಳ ಪ್ರಮಾಣವನ್ನೂ ಗಣನೆಗೆ ತೆಗೆದುಕೊಳ್ಳುವುದು ಅತೀ ಅಗತ್ಯ.

ಪರಿಪೂರ್ಣ ಸಂಬಂಧಗಳ ವ್ಯಾಖ್ಯಾನವು ಕೇವಲ ಕಾಲ್ಪನಿಕವಾಗಿದ್ದರೆ ಅಥವಾ ಪರಿಪೂರ್ಣ ಸಂಬಂಧವು ಎಂಬುದೇ ಇಲ್ಲ ಎಂದು ಭಾವಿಸಿದರೆ, ಆ ಎರಡೂ ಆಲೋಚನಾ ಕ್ರಮಗಳು ಉತ್ತಮ ಸಂಬಂಧ ನಿರ್ವಹಣೆಗೆ ಅಡ್ಡಿಯಾಗುತ್ತವೆ. ಏಕೆಂದರೆ ನಮ್ಮ ಕ್ರಿಯೆಗಳು ನಾವು ಯೋಚಿಸುವುದನ್ನು ಅಥವಾ ನಂಬುವುದನ್ನು ಅನುಸರಿಸುತ್ತವೆ.

ಆದ್ದರಿಂದ, ಸಾಧ್ಯವಾದಷ್ಟು ಅಂಶಗಳನ್ನು ಪರಿಗಣಿಸಿ, ನಿಮ್ಮ ಜೀವನದಲ್ಲಿ ಯಶಸ್ವಿ ಸಂಬಂಧ ಎಂದರೇನು ಎಂಬುದನ್ನು ವ್ಯಾಖ್ಯಾನಿಸುವುದು ನಿಮ್ಮ ಕೆಲಸ.

ಸಾಧಕ-ಬಾಧಕ ಎರಡನ್ನೂ ಹಂಚಿಕೊಳ್ಳುವ ಮತ್ತು ಅತಿರೇಕವಾಗಿ ಯೋಚಿಸದವರಿಂದ ಕಲಿಯುವುದು ಸರಿಯಾದ ದಿಕ್ಕಿನಲ್ಲಿ ಚಲಿಸಲು ನಮಗೆ ಸಹಾಯ ಮಾಡುತ್ತದೆ.

3. ಪ್ರಾಮುಖ್ಯತೆಯ ಆಧಾರದಲ್ಲಿ ಸಂಬಂಧಗಳಿಗೆ ಆದ್ಯತೆ ನೀಡುವುದು:

ಆದ್ಯತೆಯ ಸ್ಪಷ್ಟತೆ ಹೊಂದಿರುವ ಸಂಬಂಧಗಳನ್ನು ನಿರ್ವಹಿಸಲು ತುಲನಾತ್ಮಕವಾಗಿ ಸುಲಭ ಎನ್ನಲಾಗುತ್ತದೆ.

ಉದಾಹರಣೆ- ಕುಟುಂಬದೊಳಗೆ ಯಾವುದೇ ಆದ್ಯತೆ ಇಲ್ಲದಿದ್ದರೆ, ಸದಸ್ಯರು ಮೂರನೇ ವ್ಯಕ್ತಿಯ ಮುಂದೆ ತಮ್ಮವರನ್ನೇ ಅಪಹಾಸ್ಯ ಮಾಡುತ್ತಾರೆ. ಒಂದೋ ಮೂರನೇ ವ್ಯಕ್ತಿ ‘ಅಂತಹಾ’ ಪ್ರದರ್ಶನವನ್ನು ಆನಂದಿಸುತ್ತಾರೆ, ಅಥವಾ ಅವರು ಆ ಕುಟುಂಬದಿಂದ ಸಿಗಬಹುದಾದ ಲಾಭಗಳಿದ್ದರೆ ಅದಕ್ಕಾಗಿ ಇಂತಹಾ ಒಡಕು ಪರಿಸ್ಥಿತಿಯನ್ನು ಬಳಸುತ್ತಾರೆ.

ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳನ್ನು ಸಮತೋಲನದಿಂದ ನಿರ್ವಹಿಸುವುದೂ ಒಂದು ಸವಾಲಿನ ಕೆಲಸವಾಗಿದೆ. ಇದು ಉದ್ಯೋಗ, ವೃತ್ತಿ ಅಥವಾ ಸ್ವಭಾವಕ್ಕೆ ಒಳಪಟ್ಟಿರುತ್ತದೆ.

ಸಂಬಂಧಗಳ ನಿರ್ವಹಣೆ ತುಂಬಾ ಕಠಿಣವಪ್ಪಾ ಎಂದು ಈಗಲೂ ಅನಿಸುತ್ತಿದೆಯಾ?

ಕಠಿಣತೆಯ ತೀವ್ರತೆ ಕಡಿಮೆಯಾಗಲು ಪ್ರಾರಂಭಿಸಿದೆ, ಎಂದು ನಾನು ಭಾವಿಸುತ್ತೇನೆ,

ಅಲ್ಲವೇ?

ಗಮನಿಸಿ: ಮೇಲಿನ 3 ಮುಖ್ಯ ಹಾಗೂ ಸರಳ ಹಂತಗಳು ಸಂಬಂಧಗಳ ಸಮರ್ಪಕ ನಿರ್ವಹಣೆಗೆಯ ಪ್ರಾರಂಭವಷ್ಟೆ.

ಅವುಗಳಲ್ಲೇ ನಿಮಗೆ ಸೂಕ್ತವಾದ ವಿಚಾರಗಳು ಮತ್ತು ಸಮರ್ಪಕವಾದ ಉತ್ತರಗಳು ದೊರಕಿದ್ದಲ್ಲಿ ಮುಂದೆ ಈ ಲೇಖನವನ್ನು ಓದದಿದ್ದರೂ ಪರವಾಗಿಲ್ಲ.

ಒಂದು ವೇಳೆ ನೀವು ಸಂಬಂಧದ ನಿಜವಾದ ಅರ್ಥ, ವಿಧಗಳು, ಅವುಗಳ ಪ್ರಾಮುಖ್ಯತೆ, ಸೇರಿದಂತೆ ಸಂಬಂಧಗಳ ನಿರ್ವಹಣೆಯ ಕುರಿತು ಇನ್ನೂ ಸ್ವಲ್ಪ ಆಳಕ್ಕೆ ಇಳಿಯ ಬಯಸಿದರೆ, ಲೇಖನದ ಮುಂದಿನ ಭಾಗವನ್ನು ಖಂಡಿತವಾಗಿಯೂ ಓಡಬಹುದು.

ಸಂಬಂಧ ಎಂದರೇನು?

ಸಂಬಂಧಗಳ-ನಿರ್ವಹಣೆಯ-ಸಂಕೇತವಾಗಿ-ಸರಪಳಿ-ಚಿನ್ಹೆ-ಮತ್ತು-ಸಂಬಂಧಿತ-ಕನ್ನಡ-ಪದಗಳನ್ನು-ಒಳಗೊಂಡ-ಚಿತ್ರ.

ಸಂಬಂಧವು ಒಂದಕ್ಕಿಂತ ಹೆಚ್ಚು ವಸ್ತುಗಳು ಅಥವಾ ಜೀವಿಗಳ ನಡುವಿನ ಸಂಪರ್ಕವನ್ನು ಸೂಚಿಸುವ ಸೇತುವೆಯಾಗಿದೆ. ಇದನ್ನು ನೀವು ಕಾರಣ ಮತ್ತು ಪರಿಣಾಮದ ನಡುವೆ ಲಿಂಕ್ ಮಾಡುವ ಅಂಶವೆಂದೂ ಪರಿಗಣಿಸಬಹುದು.

“ಎರಡು ಅಥವಾ ಹೆಚ್ಚಿನ ಜನರು ಅಥವಾ ವಸ್ತುಗಳನ್ನು ಸಂಪರ್ಕಿಸುವ ವಿಧಾನ ಅಥವಾ ಸಂಪರ್ಕದ ಸ್ಥಿತಿ”.

-ಆಕ್ಸ್‌ಫರ್ಡ್ ಭಾಷೆಗಳಿಂದ ವ್ಯಾಖ್ಯಾನ.

ಸಂಬಂಧದ ವಿಧಗಳು:

ಮುಖ್ಯ-ಸಂಬಂಧದ-ವಿಧಗಳನ್ನು-ಚಾರ್ಟ್-ಮೂಲಕ-ಕನ್ನಡದಲ್ಲಿ-ತೋರಿಸುತ್ತಿರುವ-SharingShree- ಕನ್ನಡದ-ಚಿತ್ರ.

ಹಲವಾರು ಅಂಶಗಳು ಸಂಬಂಧಗಳ ಸ್ವರೂಪವನ್ನು ಪ್ರಭಾವಿಸುತ್ತವೆ. ನಾವು ವಾಸಿಸುವ ದೇಶ, ನಾವು ಬೆಳೆವ ಸಂಸ್ಕೃತಿ, ಇತ್ಯಾದಿ.

ಅದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯೋಣ.

ಭಾಗ ಅ – ವೈಯಕ್ತಿಕ ಸಂಬಂಧ:

ಇದು ಹಲವಾರು ವಿಧಗಳಲ್ಲಿನ ಮುಖ್ಯ ಭಾಗವಾಗಿದೆ. ನೇರವಾದ ಜೈವಿಕ ಸಂಪರ್ಕವಿದ್ದಾಗ ಅಥವಾ ಆಳವಾದ ಅನ್ಯೋನ್ಯತೆಯಿಂದಾಗಿ ಸಂಬಂಧವು ವೈಯಕ್ತಿಕವಾಗುತ್ತದೆ.

ಈ ನಂಟನ್ನು ಜೀವನದ ಭದ್ರ ಅಡಿಪಾಯವೆಂದು ಪರಿಗಣಿಸಬಹುದು. ಏಕೆಂದರೆ ಒಬ್ಬ ವ್ಯಕ್ತಿಯು ಬೆಳೆದಂತೆ ಅವು ಹೆಚ್ಚಿನ ಪರಿಣಾಮ ಬೀರುತ್ತವೆ.

1. ಅಜ್ಜ ಅಜ್ಜಿ ಹಾಗೂ ಮೊಮ್ಮಕ್ಕಳ ನಂಟು:

ಅಜ್ಜ-ಅಜ್ಜಿ-ಮೊಮ್ಮಕ್ಕಳ-ಫೋಟೋಗಳನ್ನು-ಕಣ್ಣುಗಳಲ್ಲಿ-ಒಳಗೊಂಡಿರುವ-ಒಂದು-ನಗು-ಮುಖದ-ಎಮೋಜಿ-ಚಿತ್ರ.

ಇದು ಆಸಕ್ತಿದಾಯಕ ನಂಟಾಗಿದೆ. ಒಂದೆಡೆ , ಜೀವನದಲ್ಲಿ ಸಾಕಷ್ಟು ಅನುಭವಗಳನ್ನು ಹೊಂದಿರುವ ಅಜ್ಜ-ಅಜ್ಜಿ. ಮತ್ತೊಂದೆಡೆ, ಇನ್ನೂ ಸಂಪೂರ್ಣ ಜೀವನವನ್ನು ನೋಡದ ಮೊಮ್ಮಕ್ಕಳು.

ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳೊಂದಿಗೆ ಅಥವಾ ಮಕ್ಕಳೊಂದಿಗೆ ಹೇಗೆ ವರ್ತಿಸುತ್ತಾರೆ ಎನ್ನುವುದು ಅವರು ಜೀವನವನ್ನು ಹೇಗೆ ಅರ್ಥೈಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಅವರು ಬಡತನವನ್ನೇ ನೋಡಿದ್ದರೆ ಮತ್ತು ಅದರಲ್ಲಿ ದೀರ್ಘಕಾಲ ಜೀವಿಸಿದ್ದರೆ, ಅವರು ಹಣವನ್ನು ಉಳಿಸುವ ಬಗ್ಗೆ ಮತ್ತು ಸಂಪತ್ತಿನ ಗಳಿಕೆಯ ಬಗ್ಗೆ ಹೆಚ್ಚಾಗಿ ಮಾತನಾಡುತ್ತಾರೆ.

ಅವರು ಸಾಮಾನ್ಯವಾಗಿ ತಮ್ಮ ಕಲಿಕೆಯನ್ನು ಯುವ ಪೀಳಿಗೆಗೆ ರವಾನಿಸಲು ಬಯಸುತ್ತಾರೆ. ಅದಕ್ಕಾಗಿಯೇ ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳು ಇಂದಿಗೂ ಜೀವಂತವಾಗಿವೆ.

ಅಜ್ಜ ಅಜ್ಜಿಯಂದಿರಿಗೆ ಮೊಮ್ಮಕ್ಕಳ ಪ್ರಯೋಜನಗಳು:

  • ಅವರಿಗೆ ಮೊಮ್ಮಕ್ಕಳು ಜೀವನದಲ್ಲಿ ತಾಜಾತನದ ಉತ್ತಮ ಮೂಲವಾಗಿದೆ. ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ.
  • ಅಜ್ಜ ಅಜ್ಜಿ ಮೊಮ್ಮಕ್ಕಳಿಂದ ಮೊಬೈಲ್ ಬಳಸುವಂತಹ ಹೊಸ ವಿಷಯಗಳನ್ನು ಕಲಿಯುತ್ತಾರೆ.
  • ಅಜ್ಜ-ಅಜ್ಜಿಯರನ್ನು ಉಳಿದವರು ನಿರ್ಲಕ್ಷಿಸಿದರೆ ಮೊಮ್ಮಕ್ಕಳು ಅವರಿಗೆ ಸಂತೋಷದ ಆಸರೆಯಾಗುತ್ತಾರೆ..

ಮೊಮ್ಮಕ್ಕಳಿಗೆ ಅಜ್ಜ ಅಜ್ಜಿಯರು ಏಕೆ ಮುಖ್ಯ?

  • ಮೊಮ್ಮಕ್ಕಳಿಗೆ ಉತ್ತಮ ಕಲಿಕೆಯ ಮೂಲ.
  • ಪೋಷಕರು ಅನಗತ್ಯವಾಗಿ ಮೊಮ್ಮಕ್ಕಳನ್ನು ಗದರಿಸಿದಾಗ ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನು ರಕ್ಷಿಸುತ್ತಾರೆ.
  • ತಮಾಷೆಯ ಆಟಗಳನ್ನು ಆಡುವುದರಿಂದ ಇಬ್ಬರಿಗೂ ಸಂತೋಷವಾಗುತ್ತದೆ.

ಅನೇಕ ಕುಟುಂಬಗಳಲ್ಲಿ ಇವು ತದ್ವಿರುದ್ಧವಾಗಿರಬಹುದು. ಕೆಲವರಿಗೆ – ಅಜ್ಜ ಅಜ್ಜಿಯರು ಹೊರೆಯಾಗುತ್ತಾರೆ. ಇನ್ನೂ ಕೆಲವರಿಗೆ – ಅವರು ದೇವರಿಗೆ ಸಮಾನ.

2. ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧ:

ಒಂದರ್ಥದಲ್ಲಿ, ಪೋಷಕ-ಮಕ್ಕಳ ಸಂಬಂಧವು ಇತರ ಸಂಬಂಧಗಳ ಆಧಾರವಾಗಿದೆ. ಮಗುವು ಪೋಷಕರ ಮೂಲಕ ಪ್ರಪಂಚದ ಬಗ್ಗೆ ಕಲಿಯಲು ಪ್ರಾರಂಭಿಸಿದರೆ, ಪೋಷಕರಿಗೆ ಮಗುವೇ ಒಂದು ಹೊಸ ಪ್ರಪಂಚ.

ಈ ಸಂಬಂಧವು ಮಗುವಿನ ನಡವಳಿಕೆ, ವ್ಯಕ್ತಿತ್ವ, ಮತ್ತು ಒಟ್ಟಾರೆ ಬೆಳವಣಿಗೆಗೆ ಅಡಿಪಾಯವನ್ನು ಹಾಕುತ್ತದೆ.

ಪೋಷಕರು ಸಾಮಾನ್ಯವಾಗಿ ಕಟ್ಟುನಿಟ್ಟಾಗಿ ಜವಾಬ್ದಾರರಾಗಿರಲು ಬಯಸುತ್ತಾರೆ ಮತ್ತು ಅಗತ್ಯವಿದ್ದರೆ ಮಾತ್ರ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ (ಹಾಗಂತ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ).

ಈ ಗೊಂದಲಮಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಗುವನ್ನು ಬೆಳೆಸುವುದು ಸುಲಭದ ಕೆಲಸವಲ್ಲ ತಾನೇ.

ನಾನು ಹೀಗೆಯೇ ಮುಂದುವರಿದರೆ ಅದು ಒಣ ವಿವರಣೆಯಂತೆ ಧ್ವನಿಸುತ್ತದೆ. ಬದಲಿಗೆ, ನಾವು ಪ್ರತಿಯೊಂದು ಸಂಬಂಧವನ್ನು ಪ್ರತ್ಯೇಕವಾಗಿ ಪರಿಗಣಿಸೋಣ.

ಏನಂತೀರಿ?

ಅ. ತಂದೆ ಮತ್ತು ಮಗ:

ತಂದೆಯ ಕುತ್ತಿಗೆಯ ಮೇಲೆ ನೇತಾಡುತ್ತಿರುವ ಮಗನ-ವೆಕ್ಟರ್-ಚಿತ್ರ.

ಬಹುಷಃ ಹತ್ತರಲ್ಲಿ ಐದಕ್ಕಿಂತ ಹೆಚ್ಚು ಗಂಡು ಮಕ್ಕಳು ತಮ್ಮ ವೃತ್ತಿಪರ ಅಥವಾ ಜೀವನದ ಯಶಸ್ಸಿಗೆ ತಮ್ಮ ತಂದೆಯೇ ಮೊದಲ ಆದರ್ಶ ಎನ್ನುತ್ತಾರೆ.

ಹಾಗೆಯೇ ಮಗನು ವ್ಯಸನಗಳನ್ನು ಪ್ರಾರಂಭಿಸುವುದರಲ್ಲಿ ತಂದೆಯ ಪಾತ್ರ ಇರುವ ಉದಾಹರಣೆಗಳನ್ನೂ ಕಾಣುತ್ತೇವೆ.

ಬಹುತೇಕ 90% ರಷ್ಟು ತಂದೆ-ಮಗನ ಸಂಬಂಧಗಳಲ್ಲಿ ಪ್ರೀತಿಯ ಅಸ್ತಿತ್ವವನ್ನು ನೇರವಾಗಿ ಗುರುತಿಸುವುದು ಅಸಾಧ್ಯ.

ಯಾಕಿಂಗೆ?

ತಂದೆ-ಮಗನ ಸಂಬಂಧಗಳನ್ನು ಉತ್ತಮ ಗುಣಮಟ್ಟಕ್ಕೆ ಬದಲಾಯಿಸುವ ಕುರಿತ ಲೇಖನವೊಂದರಲ್ಲಿ, ಟೈಮ್ಸ್ ಆಫ್ ಇಂಡಿಯಾವು ವೈದ್ಯಕೀಯ ಮತ್ತು ಆರೋಗ್ಯ ಮನಶ್ಶಾಸ್ತ್ರಜ್ಞ ಡಾ. ಕಾನನ್ ಖಟೌ ಅವರು ತಂದೆಯಂದಿರಿಗೆ ನೀಡಿದ ಸ್ನೇಹಪರ ಸಲಹೆಯನ್ನು ಉಲ್ಲೇಖಿಸಿದೆ. ಅದರ ಸಾರಾಂಶ ಇಲ್ಲಿದೆ;

“ಚಿಕ್ಕ ವಯಸ್ಸಿನಲ್ಲಿಯೇ ನಿಮ್ಮ ಮಕ್ಕಳೊಂದಿಗೆ ಬಾಂಧವ್ಯ ಹೊಂದಿರುವುದು ಒಳ್ಳೆಯದು. ಇದು ನಿಮ್ಮ ಮಕ್ಕಳನ್ನು ಚೆನ್ನಾಗಿ ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ಅವರು ಯಾವುದೇ ಭಯವಿಲ್ಲದೆ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ಕಡೆಗೆ ತಿರುಗುವ ಸಾಧ್ಯತೆ ಹೆಚ್ಚು. ಇದು ಅವರಿಗೆ ಹಾನಿಯನ್ನುಂಟುಮಾಡುವ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

-ಡಾ. ಕಾನನ್ ಖಟೌ

ಹಾಗಂದ ಮಾತ್ರಕ್ಕೆ ಎಲ್ಲಾ ಜವಾಬ್ದಾರಿಯನ್ನೂ ತಂದೆಯ ಹೆಗಲ ಮೇಲೆ ಹೊರಿಸುವುದು ಸರಿಯಲ್ಲ. ಮಗನು ಜೀವನದ ಪರಿಚಯ ಆಳವಾಗುತ್ತಾ ಪ್ರಬುದ್ಧನಾಗುತ್ತಿದ್ದಂತೆ, ತಂದೆಯನ್ನು ಅರ್ಥಮಾಡಿಕೊಳ್ಳುವುದು ಅವನ ಜವಾಬ್ದಾರಿಯಾಗಿದೆ. ಇದರಿಂದ ತಂದೆಯ ಹಿನ್ನೆಲೆ, ವಿವಿಧ ಅನುಭವಗಳ ಮೊತ್ತವು ಅವರ ಪ್ರಸ್ತುತ ಜೀವನವನ್ನು ಹೇಗೆ ಪ್ರಭಾವಿಸುತ್ತಿದೆ ಎಂಬುದರ ಅರಿವಾಗುತ್ತದೆ.

ವಯಸ್ಸಿನ ಅಂತರವು ತಂದೆ ಹಾಗೂ ಮಗನ ನಡುವಿನ ಸಂಬಂಧದ ಗುಣಮಟ್ಟವನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ವಯಸ್ಸು ಎಂದರೆ ದೇಹಗಳು ಎಷ್ಟು ಹಳೆಯದು ಎಂಬುದರ ಜೊತೆಗೆ ಮನಸ್ಸು (ಆಲೋಚನಾ ರೀತಿ) ಎಷ್ಟು ಮುಕ್ತವಾಗಿದೆ ಎನ್ನುವುದೂ ಬಹಳ ಮುಖ್ಯ.

ಆ. ತಂದೆ-ಮಗಳು:

ಪ್ರಕೃತಿಯ-ಮಧ್ಯದಲ್ಲಿ-ತಂದೆ-ತನ್ನ-ಪುಟ್ಟ-ಮಗಳ-ಕೈ-ಹಿಡಿದು-ನಡೆಸುತ್ತಿರುವ-ಕಾರ್ಟೂನ್-ಚಿತ್ರ.

ಹೆಣ್ಣು ಮಕ್ಕಳಿಗೆ “ತಂದೆ-ಮಗಳ” ಸಂಬಂಧವು ಜೀವನದ ಇತರ ಪುರುಷ ಸಂಬಂಧಗಳಿಗೆ ಅಡಿಪಾಯದಂತೆ.

ಒಬ್ಬಾಕೆ ಹೆಣ್ಣುಮಗಳು ತನ್ನ ಸುತ್ತಲಿನ ಪುರುಷರನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ಸಾಮಾನ್ಯವಾಗಿ ಅವಳು ತನ್ನ ತಂದೆಯನ್ನು ಹೋಲಿಕೆಯ ಆಧಾರವಾಗಿರಿಸುತ್ತಾಳೆ. ಆ ಕ್ಷಣದಲ್ಲಿ ಅವನು ಅವಳ ಮುಂದೆ ಎಲ್ಲಾ ಪುರುಷರ ಪ್ರತಿನಿಧಿಯಾಗುತ್ತಾನೆ.

ಹೆಣ್ಣು ಮಗು ತನ್ನ ತಂದೆಯಿಂದ ಆನಂದಿಸುವ ಕೆಲವು ವಿಷಯಗಳು;

  • ಸುರಕ್ಷತೆ.
  • ಭಾವನಾತ್ಮಕ ಶಕ್ತಿ.
  • ‘ಕೆಲವು ಸಂದರ್ಭಗಳಲ್ಲಿ’ ಅವಳು ತನ್ನ ತಾಯಿ, ಸಹೋದರ ಅಥವಾ ಇತರ ಕುಟುಂಬ ಸದಸ್ಯರಿಂದ ತಪ್ಪಿಸಿಕೊಳ್ಳಬಯಸಿದಾಗ ಲಭ್ಯವಾಗುವ ಉತ್ತಮ ಸ್ನೇಹಿತ.

ಇದು ಕಾಳಜಿಯನ್ನು ಒಳಗೊಂಡ ನಂಟಿನ ಗಂಟಾಗಿದ್ದು, ತಂದೆ ತನ್ನ ಮಗಳ ಒಟ್ಟಾರೆ ಯೋಗಕ್ಷೇಮಕ್ಕಾಗಿ (ತನ್ನ ಸಾಮರ್ಥ್ಯಕ್ಕೆ ಒಳಪಟ್ಟು) ಏನು ಬೇಕಾದರೂ ಮಾಡಲು ಸಿದ್ಧನಾಗಿರುತ್ತಾನೆ.

ಇಲ್ಲಿ ಕೇಳಿ, ಹಲವರ ಪ್ರಕಾರ ಮಗನಿಗಿಂತ ಮಗಳ ಮೇಲೆ ಅಪ್ಪನ ವಾತ್ಸಲ್ಯ ಜಾಸ್ತಿ ಎಂಬ ವಾದವೂ ಇದೆ.

ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕಾಮೆಂಟ್ ಮಾಡಿ, ನಾನು ತಿಳಿದುಕೊಳ್ಳಲು ಬಯಸುತ್ತೇನೆ.

ಅಂತೆಯೇ, ತಂದೆ-ಮಗಳ ಸಂಬಂಧಗಳಲ್ಲಿ ಇಂದಿಗೂ ಪುರುಷ ಪ್ರಾಬಲ್ಯವನ್ನು ಕಾಣಬಹುದು ಎಂಬ ಅಂಶವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ.

ಇ. ತಾಯಿ-ಮಗ:

ಹಾಸ್ಯ-ಹಾಗೂ-ತುಂಟತನ-ಬಿಂಬಿಸುವ-ನಗುತ್ತಿರುವ-ಮಗ-ಮತ್ತು-ತಾಯಿಯ-ಕಾರ್ಟೂನ್-ಚಿತ್ರ.

ತಿಂಗಳಾನುಗಟ್ಟಲೆ ನೋವು ನಲಿವಿನೊಂದಿಗೆ ಹೊರೆಯನ್ನು ಹೊತ್ತು ನರಳುತ್ತಲೇ ಧರೆಗಿಳಿಸುವ ಆಕೆ, ಮೊದಲ ಪೋಷಕಿ, ಮೊದಲ ರಕ್ಷಕಿ, ಮೊದಲ ಶಿಕ್ಷಕಿ- ಅವಳೇ ನಮ್ಮ ತಾಯಿ.

ನೀವು ಒಂದು ವಿಚಾರ ಗಮನಿಸಿದ್ದೀರಾ?

ವಿವಿಧತೆಯಲ್ಲಿ ಏಕತೆ” ಎಂಬ ಘೋಷ ವಾಕ್ಯದ ಬಳಕೆಯನ್ನು ನೀವು ಕೇಳಿರುತ್ತೀರಿ ಹಾಗೂ ನೋಡಿರುತ್ತೀರಿ. ಆದರೆ ನಿತ್ಯ ಜೀವನದಲ್ಲಿ ಅದರ ಅರ್ಥಪೂರ್ಣವಾದ ಇರುವಿಕೆಯನ್ನು ಗುರುತಿಸಿ ಅರಿವಿಗೆ ತಂದುಕೊಳ್ಳಲು ಬಹುತೇಕ ಎಲ್ಲರೂ ಕಷ್ಟಪಡುತ್ತಾರೆ.

ಆದರೆ ಒಬ್ಬ ತಾಯಿಗೆ ಇದು ಸುಲಭವಾಗಿ ಅನುಭವಕ್ಕೆ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕರುಳ ಬಳ್ಳಿ ಕತ್ತರಿಸಿ ದೇಹಗಳು ಬೇರೆಯಾದರೂ ಭಾವನಾತ್ಮಕವಾಗಿ ತಾಯಿ ತನ್ನ ಮಗುವನ್ನು ತನ್ನದೇ ರೂಪವಾಗಿ ಅಥವಾ ತನ್ನ ಅವಿಭಾಜ್ಯ ಅಂಗದಂತೆಯೇ ಪರಿಗಣಿಸುತ್ತಾಳೆ.

ಓದುತ್ತಿರುವ ನೀವು ಒಬ್ಬ ತಾಯಿಯಾಗಿದ್ದರೆ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ಮೂಲಕ ತಿಳಿಸಿ, ಅರಿಯಲು ನಾನು ಉತ್ಸುಕನಾಗಿದ್ದೇನೆ.

ನಾವು ತಂದೆ-ಮಗಳ ಸಂಬಂಧ ಪ್ರಕಾರದಲ್ಲಿ ನೋಡಿದಂತೆ, ಈ ಸಂಬಂಧವು ಹೆಣ್ಣಿನ ಕಡೆಗೆ ಒಬ್ಬ ಗಂಡು ಮಗನ ದೃಷ್ಟಿಕೋನದ ಆರಂಭಿಕ ಹಂತವಾಗಿದೆ.

ತಂದೆಯಂದಿರಿಗೆ ಹೆಣ್ಣು ಮಕ್ಕಳಲ್ಲಿ ತುಸು ಪ್ರೀತಿ ಹೆಚ್ಚು ಎಂಬ ವಾದದ ಇನ್ನೊಂದು ಭಾಗ ತಾಯಂದಿರಿಗೆ ಗಂಡು ಮಕ್ಕಳಲ್ಲಿ ಪ್ರೀತಿ ಹೆಚ್ಚು ಎನ್ನುತ್ತದೆ.

ಪ್ರೀತಿ, ಸ್ನೇಹ, ಸಲುಗೆ, ಆರೋಗ್ಯಕರ ಜಗಳ, ಎಲ್ಲವೂ ಕೆಜಿಗಟ್ಟಲೆ ಈ ಸಂಬಂಧದಲ್ಲಿ ಲಭ್ಯ.

ಸಾಮಾನ್ಯವಾಗಿ ಒಬ್ಬ ಮಗನಿಗೆ ತಂದೆಯ ಬೈಗುಳದ ಸುರಿಮಳೆಗಿಂತ ತಾಯಿಯ ಮೌನ ಆಳವಾದ ಪ್ರಭಾವ ಬೀರುತ್ತದೆ. ಇದು ತಾಯಿ-ಮಗನ ಸಂಬಂಧದ ನಿರ್ವಹಣೆಗೆ ಸಹಾಯಕವೂ ಹೌದು, ಅತಿದೊಡ್ಡ ಸವಾಲೂ ಹೌದು.

ಈ. ತಾಯಿ-ಮಗಳು:

ಅಡುಗೆ-ರುಚಿಯನ್ನು-ಪರೀಕ್ಷಿಸುತ್ತಿರುವ-ಮಗಳನ್ನು-ನೋಡುವ-ತಾಯನ್ನು-ಒಳಗೊಂಡ-ಅಡುಗೆ-ಮನೆಯ-ದೃಶ್ಯ.

ತಾಯಿ-ಮಗಳ ಸಂಬಂಧದ ಮಹತ್ವದ ಬಗ್ಗೆ ನಾನು ನಿಮ್ಮ ಅನಿಸಿಕೆ ಕೇಳಿದರೆ ನೀವೇನು ಹೇಳುವಿರಿ?

ಒಂದರ್ಥದಲ್ಲಿ, ಇದು ತಾಯಿಯಿಂದ ಭವಿಷ್ಯದ ತಾಯಿಗೆ (ಮಗಳು) ಮಾತೃತ್ವವು ಹಾದುಹೋಗುವ ಕೊಂಡಿಯಾಗಿದೆ.

ಹಾಗಂತ ಇಷ್ಟೇನಾ?

ಲೇಖನವೊಂದರಲ್ಲಿ ತಾಯಿ-ಮಗಳ ಸಂಬಂಧದ ಮಹತ್ವದ ಬಗ್ಗೆ ಮಾತನಾಡುವಾಗ, motherjunction.com ಆಸಕ್ತಿದಾಯಕ ವಿಷಯವನ್ನು ಪ್ರಸ್ತಾಪಿಸಿದೆ. ಅದೇನೆಂದರೆ, “ಜರ್ನಲ್ ಆಫ್ ನ್ಯೂರೋಸೈನ್ಸ್ ನ ಪ್ರಕಾರ, ತಾಯಿ-ಮಗಳ ಸಂಬಂಧವು ಇತರ ಪೋಷಕ-ಸಂತಾನದ ಸಂಬಂಧಗಳಿಗಿಂತ ಬಲವಾಗಿರುತ್ತದೆ. ಮತ್ತು ಇದು ಮಹಿಳೆಯರಿಗೆ ಜೀವನದಲ್ಲಿ ಪ್ರತಿಯೊಂದು ಸಂಬಂಧವನ್ನು ರೂಪಿಸಲು ಸಹಾಯ ಮಾಡುವ ಒಂದು ಸಂಬಂಧವಾಗಿದೆ. ಆದ್ದರಿಂದ ಇದು ಪ್ರತಿ ಮಹಿಳೆಗೆ ಅಮೂಲ್ಯವಾದ ಸಂಬಂಧವಾಗಿದೆ”.

ತಾಯಿ-ಮಗಳ ಬಾಂಧವ್ಯದ ಸಂಕ್ಷಿಪ್ತ ಅವಲೋಕನ;

  • ಸ್ತ್ರೀಯರ ಸಮಸ್ಯೆಗಳನ್ನು” ಎದುರಿಸುವ ಸಂದರ್ಭದಲ್ಲಿ ತಾಯಿ ಮತ್ತು ಮಗಳು ಇಬ್ಬರಿಗೂ ಈ ಸಂಬಂಧವು ಆರಾಮದಾಯಕವಾಗಿದೆ. ಅಂತಹಾ ಸಮಯದಲ್ಲಿ ಸಾಮಾನ್ಯವಾಗಿ ಅವರು ಪರಸ್ಪರ ಸಹಕರಿಸುತ್ತಾರೆ.
  • ತಾಯಿ ತನ್ನ ಮಗಳಿಗೆ (ವಿಶೇಷವಾಗಿ ಭಾರತದಂತಹ ದೇಶದಲ್ಲಿ) ಬಹಳಷ್ಟು ಶಿಷ್ಟಾಚಾರದ ಪಾಠಗಳನ್ನು ಕಲಿಸಲು ಪ್ರಯತ್ನಿಸಿದಾಗ ಆರೋಗ್ಯಕರ (ಅಥವಾ ಅನಾರೋಗ್ಯಕರ) ಜಗಳಗಳನ್ನು ಕಾಣಬಹುದು.
  • ಇನ್ನು ಜ್ಞಾನದ ವಿನಿಮಯ ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಉದಾಹರಣೆಗೆ, ಮಗಳು ತಾಯಿಯಿಂದ ಅಡುಗೆಗೆ ಸಂಬಂಧಿಸಿದ ಕೆಲವು ಅಪರೂಪದ ತಂತ್ರಗಳನ್ನು ಕಲಿಯಬಹುದು. ಮತ್ತೊಂದೆಡೆ, ಮುಂದಿನ ಅತ್ಯುತ್ತಮ ಗೃಹೋಪಯೋಗಿ ಉತ್ಪನ್ನವನ್ನು ಖರೀದಿಸುವಾಗ ತಾಯಿಯು ತನ್ನ ಮಗಳ ಸಹಾಯ ಪಡೆಯಬಹುದು.

ನಾನು ಹೀಗೆ ವಿವರಿಸುತ್ತಾ ಹೋದರೆ, ಪಟ್ಟಿಯು ಬೆಳೆಯುತ್ತಲೇ ಹೋಗಬಹುದು.

ನೀವು ಮತ್ತು ನಾನು ಇತರ ಸಂಬಂಧಗಳ ಬಗ್ಗೆ ಇನ್ನೂ ಹೆಚ್ಚು ಆಸಕ್ತಿದಾಯಕ ವಿಷಯಗಳನ್ನು ಚರ್ಚಿಸಬೇಕಾಗಿದೆ. ಆದ್ದರಿಂದ, ಅಕ್ಷತಾ ಅವರು ತಮ್ಮ ತಾಯಿ ಸುಧಾ ಮೂರ್ತಿ (ಲೇಖಕರು, ಅಧ್ಯಕ್ಷರು – ಇನ್ಫೋಸಿಸ್ ಫೌಂಡೇಶನ್) ಅವರಿಗೆ ಕೇಳಿದ ಪ್ರಶ್ನೆಯನ್ನು ಹಂಚಿಕೊಳ್ಳುವ ಮೂಲಕ ನಾನು ಈ ತಾಯಿ-ಮಗಳ ನಂಟಿನ ಪುಟವನ್ನು ತಿರುಗಿಸುತ್ತೇನೆ.

(ಅವರು ಹೇಳಿದಂತೆ), ಇದು ಸುಧಾ ಮೂರ್ತಿಗೆ ಜೀವನದಲ್ಲಿ ಗುರಿಯನ್ನು ಕಂಡುಕೊಳ್ಳಲು ಸಹಾಯ ಮಾಡಿದ ಪ್ರಶ್ನೆಯಾಗಿತ್ತು.

“ಅಮ್ಮಾ, ನಿಮಗೆ ಈಗ 45 ವರ್ಷ. ಜೀವನದಲ್ಲಿ ನಿಮ್ಮ ಗುರಿ ನಿಖರವಾಗಿ ಏನು? ”

-ಅಕ್ಷತಾ, ಡಾ| ಸುಧಾಮೂರ್ತಿಯವರ ಮಗಳು.

ಇವು ಪೋಷಕ-ಮಕ್ಕಳ ಸಂಬಂಧಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳಾಗಿವೆ. ನನಗೆ ಎಲ್ಲಾ ಸಂಬಂಧಗಳನ್ನು ಮತ್ತು ವಿವಿಧ ವ್ಯಕ್ತಿನಿಷ್ಠ ಸನ್ನಿವೇಶಗಳನ್ನು ಬಿಡಿ ಬಿಡಿಯಾಗಿ ಪ್ರಸ್ತುತ ಪಡಿಸಲು ಸಾಧ್ಯವಾಗದಿದ್ದರೂ, ಸಂಬಂಧಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ನೋಡಲು ಇದು ನಿಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

3. ಒಡಹುಟ್ಟಿದವರು:

ಸುಮಾರು 80% ಮಕ್ಕಳು ಕನಿಷ್ಠ ಒಬ್ಬ ಸಹೋದರ ಅಥವಾ ಸಹೋದರಿಯೊಂದಿಗೆ ಬೆಳೆಯುತ್ತಾರೆ.

ಪೀಳಿಗೆ ಎನ್ನಲಾಗುವ ಒಂದೇ ಕಾಲಾವಧಿಯಲ್ಲಿ ಒಡಹುಟ್ಟಿದವರು ಬೆಳೆಯುವುದರಿಂದ ಪ್ರಸ್ತುತ ಸಮಾಜದೊಡನೆ ಬೆರೆಯಲು ಈ ಸಂಬಂಧಗಳು ಬಲು ಸಹಾಯಕ.

ಈಗ ಪ್ರತಿಯೊಂದು ಬಂಧವನ್ನು ಒಂದೊಂದಾಗಿ ನೋಡೋಣ.

ಅ. ಸಹೋದರ ಮತ್ತು ಸಹೋದರಿಯರು:

ಸಹೋದರಿ-ಮತ್ತು-ಸಹೋದರ-ಸಂತೋಷದಿಂದ-ಜೊತೆಯಾಗಿ-ನಡೆಯುತ್ತಿರುವ-ಕಾರ್ಟೂನ್-ಚಿತ್ರ

ಎಲ್ಲಾ ಕುಟುಂಬಗಳೂ ತಮ್ಮದೇ ಆದ ನಂಬಿಕೆ, ಅಭಿಪ್ರಾಯ, ಹಾಗೂ ಮಕ್ಕಳ ಬಗೆಗಿನ ಲೆಕ್ಕಾಚಾರಗಳನ್ನು ಹೊಂದಿರುತ್ತವೆ.

ಕುಟುಂಬ ಎಂದೊಡನೇ ತಂದೆ, ತಾಯಿ, ಒಬ್ಬ ಗಂಡುಮಗ, ಮತ್ತು ಒಬ್ಬ ಹೆಣ್ಣು ಮಗಳು ಎಂಬ ಚಿತ್ರ ಹೆಚ್ಚಿನವರ ತಲೆಯಲ್ಲಿ ಅಚ್ಚು ಒತ್ತಿದಂತೆ ಕೂತಿದೆ.

ಹಾಗಂತ “ಆರತಿಗೊಬ್ಬಳು, ಕೀರುತಿಗೊಬ್ಬ” ಎಂಬ ಮಾತೆಲ್ಲ ಪ್ರಸ್ತುತ ಶತಮಾನಕ್ಕೆ ಎಷ್ಟು ಸರಿ ಹೊಂದುತ್ತಿದೆ?

ತಿಳಿಯದು.

ಅದೇನೇ ಇರಲಿ, ನಾವು ಮುಖ್ಯ ವಿಷಯಕ್ಕೆ ಬರೋಣ.

ಅಣ್ಣ-ತಂಗಿಯ ಅಥವಾ ಅಕ್ಕ ತಮ್ಮಂದಿರ ಬಾಂಧವ್ಯ ಮುದ್ದಾಗಿ ಕಂಡರೂ ಅದು ನಿಜಕ್ಕೂ ಮುದ್ದಾಗಿದೆಯೇ?

ಬನ್ನಿ, ನೋಡೋಣ;

  • ನೀವು ಸಹೋದರ ಅಥವಾ ಸಹೋದರಿಯ ಕಾಳಜಿಯ ಸ್ವಭಾವವನ್ನು ನೋಡಿದಾಗ ಬಾಂಧವ್ಯ ಮುದ್ದಾಗಿ ಕಾಣುತ್ತದೆ.
  • ಜೊತೆಯಾಗಿ ಶಾಲೆಗೆ ಹೋಗುವುದರಿಂದ ತೊಡಗಿ ಜೀವನದುದ್ದಕ್ಕೂ ಅವರು ಸಾಧ್ಯವಿರುವಲ್ಲೆಲ್ಲಾ ಪರಸ್ಪರ ಬೆಂಬಲಿಸುತ್ತಾರೆ.
  • ಮೊಬೈಲ್ ಅಥವಾ ಕಂಪ್ಯೂಟರ್ ಗಳಲ್ಲಿರುವಂತೆ, ಸಹೋದರರು ಮತ್ತು ಸಹೋದರಿಯರು ಪರಸ್ಪರ ರಹಸ್ಯ ಫೋಲ್ಡರ್‌ಗಳಂತೆ. ಇತರರಿಗೆ ಪ್ರವೇಶಿಸಲು ಕಷ್ಟಕರವಾದ ಫೈಲ್‌ಗಳನ್ನು (ವಿಚಾರಗಳನ್ನು) ಅವು ಒಳಗೊಂಡಿರುತ್ತವೆ.
  • ಈ ಸಂಬಂಧವು, ಗಂಡು ಅಥವಾ ಹೆಣ್ಣಾಗಿ ಜೀವಿಸುವ ನಡುವಿನ ವ್ಯತ್ಯಾಸಗಳು ಮತ್ತು ಹೋಲಿಕೆಗಳನ್ನು ಅರ್ಥಮಾಡಿಕೊಳ್ಳಲು ಸಹೋದರ ಮತ್ತು ಸಹೋದರಿ ಇಬ್ಬರಿಗೂ ಸಹಾಯ ಮಾಡುತ್ತದೆ.

ಈ ಪರಸ್ಪರ ಪ್ರಯೋಜನಗಳ ಹೊರತಾಗಿ, ಮಕ್ಕಳು ಅನೇಕ ಬಾರಿ ತಾರತಮ್ಯವನ್ನೂ ಎದುರಿಸಬಹುದು. ಅನಗತ್ಯ ಹೋಲಿಕೆಗಳು ಪೋಷಕರ ಕಡೆಯಿಂದ ಉಂಟಾಗುವ ಒಂದು ದೊಡ್ಡ ತಪ್ಪು, ಇದು ಮಕ್ಕಳ ಗಂಭೀರ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

ಹಾಗೆಯೇ ಸ್ವಾತಂತ್ರ್ಯ, ಪ್ರೌಢಾವಸ್ಥೆ, ಅಥವಾ ಆಧುನೀಕರಣದ ತಪ್ಪು ಕಲ್ಪನೆಯ ಆಧಾರದ ಮೇಲೆ ಮಕ್ಕಳು ತಮ್ಮ ಹೆತ್ತವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರೆ, ಅದೊಂದು ದೊಡ್ಡ ಮೂರ್ಖತನದ ಪರಮಾವಧಿಯೇ ಸರಿ.

ಆ. ಪುತ್ರಿಯರು ಮಾತ್ರ, ಪುತ್ರರಿಲ್ಲ:

ಇಬ್ಬರು-ಸಹೋದರಿಯರು-ಅನ್ಯೂನ್ಯತೆಯಿಂದ-ತೋಳುಗಳನ್ನು-ಹಿಡಿದು-ನಡೆಯುತ್ತಿರುವ-ಕಾರ್ಟೂನ್-ಚಿತ್ರ

ಒಂದು ಕುಟುಂಬದಲ್ಲಿ ಕೇವಲ ಹೆಣ್ಣು ಮಕ್ಕಳಿದ್ದರೆ (ಪುತ್ರಿಯರು) ಸಮಸ್ಯೆಯೋ, ಸಾಮರಸ್ಯವೋ?

ಒಂದು ತಮಾಷೆಯ ಸಂಖ್ಯಾತ್ಮಕ ಅಸಮತೋಲನವನ್ನು (ತಂದೆ ಏಕೈಕ ಪುರುಷನಾಗಿರುವ ಕಾರಣ) ಇಲ್ಲಿ ಕಾಣಬಹುದು. ಶಾಪಿಂಗ್, ಅಡುಗೆ ಅಥವಾ ಸೌಂದರ್ಯದಂತಹಾ ಸ್ತ್ರೀ-ಸಂಬಂಧಿತ ವಿಷಯಗಳಿಗೆ ಬಂದಾಗ ತಾಯಿ ಮತ್ತು ಹೆಣ್ಣುಮಕ್ಕಳು ಅತ್ಯುತ್ತಮ ಒಗ್ಗಟ್ಟಿನಲ್ಲಿರುತ್ತಾರೆ. ಹಾಗಾಗಿ ‘ಪುರುಷ ಸಂಬಂಧಿತ’ ವಿಷಯಗಳನ್ನು ಚರ್ಚಿಸಲು ಯಾರೂ ಇಲ್ಲದ ಕಾರಣ ತಂದೆ ಒಂಟಿತನ ಅನುಭವಿಸುತ್ತಾರೆ.

ಇನ್ನು ಕೆಲವು ಕುಟುಂಬಗಳಲ್ಲಿ ಕುರುಡು ಸಂಪ್ರದಾಯದಿಂದ ಅಥವಾ ವರ್ತಮಾನಕ್ಕೆ ಸರಿಹೊಂದದ ತಪ್ಪು ವಿಚಾರಗಳ ಬಲವಂತದ ಆಚರಣೆಗಳಿಂದ ಉಂಟಾಗುವ ಲಿಂಗ ತಾರತಮ್ಯದಿಂದಾಗಿ ಪುತ್ರಿಯರು ಆತ್ಮವಿಶ್ವಾಸದಿಂದ ಬದುಕುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಾರೆ.

ಆದರೆ ಸಂತೋಷ ಮತ್ತು ಅಭಿವೃದ್ಧಿ ಮುಖ್ಯವೆಂದು ಜೀವಿಸುವ ಕುಟುಂಬಗಳಲ್ಲಿ, ಸದಸ್ಯರು ಪುರುಷ ಪಾತ್ರದ ಅಥವಾ ಪುತ್ರರ ಅನುಪಸ್ಥಿತಿಯ ಬಗ್ಗೆ ಕೊರಗುವುದಿಲ್ಲ.

ಇ. ಪುತ್ರರು ಮಾತ್ರ:

ಅಣ್ಣ-ತಮ್ಮನನ್ನು-ಹೆಗಲ-ಮೇಲೆ-ಕೂರಿಸಿಕೊಂಡು-ಹೋಗುತ್ತಿರುವ-ಚಿತ್ರ

ಜೊತೆಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು, ಆಟೋಮೊಬೈಲ್ ಕುರಿತ ಚರ್ಚೆಗಳು, ತಂತ್ರಜ್ಞಾನದ ಇತ್ತೀಚಿನ ನವೀಕರಣಗಳು, ಸಿನಿಮಾಗಳು, ಮತ್ತು ಆನ್‌ಲೈನ್ ಗೇಮಿಂಗ್ ನಂತಹಾ ವಿಚಾರಗಳ ಹರಿದಾಟ, ಚರ್ಚೆ, ಜಗಳಗಳು ಸಹೋದರರ ಸಂಬಂಧದ ಕೆಲವು ವೈಶಿಷ್ಟ್ಯಗಳಾಗಿವೆ.

ಹೌದಾ?

ನಿಕಟ ಸಂಪರ್ಕದಲ್ಲಿರುವ ಸಹೋದರರು ಅನೇಕ ವಿಧಗಳಲ್ಲಿ ಪರಸ್ಪರ ಸಹಾಯ ಮಾಡುತ್ತಾರೆ. ಇದು ಅಧ್ಯಯನಗಳಲ್ಲಿ ಇರಬಹುದು, ಆರ್ಥಿಕವಾಗಿ, ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ, ಇತ್ಯಾದಿ.

ನಾವು ಸಹೋದರರ ಬಗ್ಗೆ ಮಾತನಾಡುವಾಗ ಜಗಳಗಳನ್ನು ಮರೆಯಲು ಸಾಧ್ಯವೇ! ಬಾಲ್ಯದಲ್ಲಿ ಆಟಿಕೆಗಳಂತಹಾ ಸಣ್ಣ-ಪುಟ್ಟ ಕಾರಣಗಳಾದರೆ, ವಯಸ್ಕರಾದಾಗ ಆಸ್ತಿಯಂತಹಾ ದೊಡ್ಡ ಕಾರಣಗಳು ಬೇರೆ ಬೇರೆ ರೀತಿಯ ಪ್ರಭಾವಗಳನ್ನು ಬೀರುತ್ತವೆ.

ಒಂದು ಮನೆಯು ಮೇಲೆ ತಿಳಿಸಿದಂತೆ ಕೇವಲ ಪುರುಷ ಗುಣಲಕ್ಷಣಗಳಿಂದ ತುಂಬಿದ್ದರೆ, ಮನೆಯಲ್ಲಿ ಒಬ್ಬಳೇ ಹೆಣ್ಣಾಗಿರುವ ತಾಯಿಯು ಬಹುಷಃ ಮಗಳ ರೂಪದಲ್ಲಿ ಇನ್ನೊಬ್ಬ ಹೆಣ್ಣು ಇಲ್ಲದಿರುವುದನ್ನು ಗ್ರಹಿಸುತ್ತಾಳೆ.

ಈ. ಒಂದೇ ಮಗು:

ಒಬ್ಬಾಕೆ-ಹೆಣ್ಣು-ಮಗಳು-ಇಂಗ್ಲಿಷ್-ಅಂಕೆ-1ರಂತೆ-ಕಾಣುವ-ಮನೆಯ-ಕಿಟಕಿಯ-ಮೂಲಕ-ಹೊರಗಡೆ-ಸಂತೋಷದಿಂದ-ನಡೆಯುತ್ತಿರುವ-ಸಹೋದರ-ಸಹೋದರಿಯನ್ನು-ನೋಡುತ್ತಿರುವ-ಚಿತ್ರ

ನಿಮ್ಮ ಹೆತ್ತವರಿಗೆ ನೀವು ಒಬ್ಬರೇ ಮಗುವೇ?

(ಹೌದು ಎಂದಾದರೆ ಇಲ್ಲಿ ಕೇಳಿ. ಒಡಹುಟ್ಟಿದವರ ಬಗ್ಗೆ ಮಾತನಾಡುವಾಗ ನಾನು ನಿಮ್ಮನ್ನು ಮರೆತಿಲ್ಲ, ಸರಿನಾ.)

ಇದು ಪೋಷಕರು ಮತ್ತು ಮಗುವಿಗೆ ಒಂದು ವಿಶಿಷ್ಟ ಹಾಗೆಯೇ ಸ್ವಲ್ಪ ಕಷ್ಟಕರವಾದ ಪರಿಸ್ಥಿತಿಯಾಗಿದೆ.

ಏಕೆಂದರೆ;

  • ಪೋಷಕರಿಗೆ ಗಮನ ಹರಿಸಲು ಮತ್ತು ಕಾಳಜಿ ತೋರಲು ತುಲನಾತ್ಮಕವಾಗಿ ಸುಲಭ. ಮಗು ಅಂತಹ ಅವಿಭಜಿತ ಗಮನವನ್ನು ಪಡೆಯುತ್ತದೆ.
  • ತೀವ್ರ ಮುದ್ದು ಮತ್ತು ಸಂಪೂರ್ಣ ನಿರ್ಲಕ್ಷ್ಯದ ನಡುವಿನ ಸಮತೋಲನವನ್ನು ಕಾಪಾಡುವುದು ಪೋಷಕರಿಗೆ ದೊಡ್ಡ ಸವಾಲು.
  • ಒಂದೇ ಮಗುವಾಗಿರುವುದು ಯಶಸ್ವಿ ಜೀವನವನ್ನು ನಡೆಸಲು ಸಹಾಯಕ ಎನ್ನಬಹುದೇ? (ಅತಿಯಾದ ಆರೈಕೆ ಅಥವಾ ಸಂಪೂರ್ಣ ನಿರ್ಲಕ್ಷವನ್ನು ಹೊರತುಪಡಿಸಿದರೆ). ಸಾಮಾನ್ಯವಾಗಿ ಅವರು ಸವಾಲುಗಳನ್ನು ಎದುರಿಸುವ ಸ್ಫೂರ್ತಿ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.
  • ಒಬ್ಬನೇ ಮಗ ಅಥವಾ ಮಗಳು ಎಂದಾಗ, ಅವರು ಮುಖ್ಯವಾಗಿ ಪ್ರೌಢಾವಸ್ಥೆಯಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಕೇವಲ ಪೋಷಕರು ಅಥವಾ ಆಪ್ತ ಸ್ನೇಹಿತರನ್ನು ಅವಲಂಬಿಸಬೇಕಾಗುತ್ತದೆ.
  • ಕೆಲವರು ಒಂಟಿತನವನ್ನೂ ಅನುಭವಿಸಬಹುದು.

ಪೋಷಕರು ತಮ್ಮ ಏಕೈಕ ಮಗುವಿನೊಂದಿಗೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಸಾಧ್ಯವಾದರೆ, ಅವರು ತಮ್ಮ ಮಗುವಿಗೆ ಉತ್ತಮ ಸ್ನೇಹಿತರಾಗಬಹುದು, ಸಹೋದರ ಹಾಗೂ ಸಹೋದರಿಯ ಸ್ಥಾನವನ್ನೂ ತುಂಬಬಹುದು.

ಈಗ ನಾವು ಒಡಹುಟ್ಟಿದವರ ಸಂಬಂಧಗಳ ಸುತ್ತಲೂ ಸಾಗಿ ಬಂದಿದ್ದೇವೆ. ನೀವು ಇದನ್ನು ಅವಲೋಕನವಾಗಿ ಪರಿಗಣಿಸಬಹುದು. ಏಕೆಂದರೆ ಸಂಬಂಧಗಳ ಸಂಕೀರ್ಣತೆ, ಕಷ್ಟ, ಸುಖ-ದುಃಖಗಳು ಕುಟುಂಬದಲ್ಲಿನ ಒಡಹುಟ್ಟಿದವರ ಸಂಖ್ಯೆಯನ್ನೂ ಒಳಗೊಂಡಿದೆ.

4. ಸೋದರ ಸೊಸೆ, ಸೋದರಳಿಯ:

ಸೋದರಳಿಯ-ಹಾಗೂ-ಸೋದರ-ಸೊಸೆ-ಎಂಬ-ಸಂಬಂಧದ-ವಿಧಗಳನ್ನು-ಬಿಂಬಿಸುವ-ಮೂರು-ವ್ಯಕ್ತಿಗಳನ್ನು-ಒಳಗೊಂಡ-ಕಾರ್ಟೂನ್-ಚಿತ್ರ

ಇಲ್ಲಿ ನಾವು ಒಡಹುಟ್ಟಿದವರ ಮಕ್ಕಳೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡುತ್ತಿದ್ದೇವೆ.

ಬಹುಷಃ ನೀವು ತಿಳಿದಿರಬಹುದು, 40 ವರ್ಷಗಳ ನಂತರ, ಚೀನಾದಲ್ಲಿ ಒಂದೇ ಮಗುವನ್ನು ಹೊಂದಿರಬೇಕಾದ ನಿಯಮವನ್ನು ರದ್ದುಗೊಳಿಸಲಾಗಿದೆ.

ಏಕೆ?

ಏಕೆಂದರೆ ಒಡಹುಟ್ಟಿದವರು, ಚಿಕ್ಕಪ್ಪ ಚಿಕ್ಕಮ್ಮ ಎಂಬ ನಿಕಟ ಕುಟುಂಬ ಸಂಪರ್ಕವಿಲ್ಲದೆ ತಲೆಮಾರುಗಳೇ ಬೆಳೆದಿವೆ. ಅಲ್ಲದೆ, ಜನಸಂಖ್ಯೆ ಕಡಿಮೆಯಾಗುವ ಜೊತೆಗೆ ಗುಣಮಟ್ಟದ ಸಂಬಂಧಗಳ ಕೊರತೆಯೂ ಕಾರಣವಾಗಿರಬಹುದು.

ಆಗಾಗ್ಗೆ ಒಟ್ಟುಗೂಡುವುದು, ಸಾಧನೆಗಳು, ಕುಟುಂಬದ ಚಿಂತೆಗಳನ್ನು ಹಂಚಿಕೊಳ್ಳುವುದು, ಅನುಭವ – ಪರಿಣತಿಗಳ ಆಧಾರದಲ್ಲಿ ಮಾರ್ಗದರ್ಶನ ನೀಡುವುದು, ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವುದು ಈ ಸಂಬಂಧದ ಆಗುಹೋಗುಗಳಾಗಿವೆ.

5. ಸೋದರಸಂಬಂಧಿಗಳು:

ಮೂರು-ಮಕ್ಕಳು-ಲ್ಯಾಪ್ಟಾಪ್-ಬಳಸುತ್ತಿರುವ-ಕಾರ್ಟೂನ್-ಚಿತ್ರ-ಸೋದರ-ಸಂಬಂಧಿಗಳ-ಅನ್ಯೂನ್ಯತೆಯನ್ನು-ಬಿಂಬಿಸುತ್ತಿದೆ

ಇಲ್ಲಿ ನಾವು ಸೋದರಸಂಬಂಧಿಗಳು ಎನ್ನುತ್ತಿರುವುದು ಪೋಷಕರ ಒಡಹುಟ್ಟಿದವರ ಮಕ್ಕಳ ಜೊತೆಗಿನ ಬಾಂಧವ್ಯದ ಕುರಿತಾಗಿದೆ.

ಹಾಗಾದರೆ ನಿಮಗೂ ಸೋದರಸಂಬಂಧಿಗಳಿರುವರೇ? ನಿಮ್ಮ ಜೀವನದಲ್ಲಿ ಅವರು ಯಾವ ಪಾತ್ರವನ್ನು ವಹಿಸುತ್ತಾರೆ?

ಫೋಟೋ ಆಲ್ಬಮ್‌ನಲ್ಲಿ “ಹೇ… ಇವರೆಲ್ಲರೂ ನನ್ನ ಸೋದರಸಂಬಂಧಿಗಳು” ಎಂದು ತೋರಿಸಲು ಮಾತ್ರ ಅವರು ಸೀಮಿತರಾಗಿದ್ದಾರೆಯೇ?

ಖಂಡಿತಾ ಇಲ್ಲ. ಅವರು ವಿಶಾಲ ಕುಟುಂಬದ ವಿಶಿಷ್ಟ ಭಾಗವೇ ಆಗಿರುತ್ತಾರೆ.

ಬಾಲ್ಯದಲ್ಲಿ ಸೋದರಸಂಬಂಧಿಗಳು ಕುಟುಂಬದ ಸಮಾರಂಭಗಳಲ್ಲಿ ಆಟೋಟಗಳಲ್ಲಾಗುವ ಬಾಲಾಪರಾಧಗಳ ಪಾಲುದಾರರಾಗುತ್ತಾರೆ.. ನಂತರ, ಸೌಹಾರ್ದ ವೃತ್ತಿಪರ ಮಾರ್ಗದರ್ಶನ, ಮತ್ತು ಹೆಚ್ಚಾಗಿ ಬಾಧಿಸುವ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಪ್ರಯತ್ನಿಸುವ ಪ್ರಕ್ರಿಯೆಗಳನ್ನು ವಯಸ್ಕ ಸೋದರಸಂಬಂಧಿಗಳ ನಡುವೆ ನಾವು ಸಾಮಾನ್ಯವಾಗಿ ನೋಡುತ್ತೇವೆ.

ಪೋಷಕರ ಒಡಹುಟ್ಟಿದವರು, ಅಜ್ಜ-ಅಜ್ಜಿಯಂದಿರು, ಸೋದರಸಂಬಂಧಿಗಳು ಸೇರಿದಂತೆ ಒಂದಕ್ಕಿಂತ ಹೆಚ್ಚು ತಲೆಮಾರಿನವರು ಒಂದೇ ಮನೆಯಲ್ಲಿ ವಾಸಿಸುವ ಕೂಡು ಕುಟುಂಬದ ಸಂಬಂಧಗಳ ನಿರ್ವಹಣೆ ಹೆಚ್ಚಿನ ಸವಾಲುಗಳನ್ನು, ನೋವು-ನಲಿವುಗಳನ್ನು ಹೊಂದಿರುತ್ತದೆ.

ಇದನ್ನು ಗಂಭೀರವಾಗಿ ಪರಿಗಣಿಸುವ ಯುವ ಜನಾಂಗ ಅವಿಭಕ್ತ ಕುಟುಂಬದ ಅನುಕೂಲಗಳು ಮತ್ತು ಅನಾನುಕೂಲಗಳ ಲೆಕ್ಕಾಚಾರದಲ್ಲಿ ತೊಡಗುತ್ತಾರೆ.

6. ನಿಕಟ ಸ್ನೇಹ ಮತ್ತು ಸ್ನೇಹಿತರು:

ನಿಕಟ-ಸ್ನೇಹಿತರು-ಜಾಲಿಯಾಗಿ-ಕಾರಿನಲ್ಲಿ-ಹೋಗುತ್ತಿರುವ-ಕಾರ್ಟೂನ್-ಚಿತ್ರ

ಸಂಬಂಧಗಳ ಪ್ರಕಾರಗಳನ್ನು ಚರ್ಚಿಸುವಾಗ ನಾನು ಸ್ನೇಹವನ್ನು ಏಕೆ ತರುತ್ತಿದ್ದೇನೆ ಎಂದು ನೀವು ಯೋಚಿಸತೊಡಗಿದಿರೆ?

ಇಲ್ಲಿ ಕೇಳಿ. ನೀವು ಜೀವನದಲ್ಲಿ ಬಾಂಧವ್ಯವನ್ನು ಕಳೆದುಕೊಳ್ಳಲು ಇಷ್ಟಪಡದ ವ್ಯಕ್ತಿಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಯಾರ್ಯಾರು ಇರುತ್ತಾರೆ?

ಬಹುಷಃ ಆ ಪಟ್ಟಿಯಲ್ಲಿ ಒಬ್ಬ ಅಥವಾ ಒಂದಿಬ್ಬರು ಸ್ನೇಹಿತರು ಇದ್ದೇ ಇರುತ್ತಾರೆ. ಏಕೆಂದರೆ, ಪದವೇ ಸೂಚಿಸುವಂತೆ ನಿಜವಾದ ಸ್ನೇಹಿತ ಅಥವಾ ಸ್ನೇಹಿತರಲ್ಲಿಹಿತ’ವಿದೆ.

ಹೆಂಗೆ ನಮ್ ಕನ್ನಡ ಭಾಷೆ…!

ತಾಂತ್ರಿಕವಾಗಿ ಹೇಳುವುದಾದರೆ ಸ್ನೇಹವೂ ಒಂದು ವಿಧದ ಸಂಬಂಧವೇ ಆಗಿದೆ. ಪರಸ್ಪರರ ಇರುವಿಕೆಯನ್ನು ಆನಂದಿಸುವ, ಗೌರವಿಸುವ, ಸುಖ-ದುಃಖಗಳೆರಡರಲ್ಲೂ ಜೊತೆಗಿರುವುದೇ ಸ್ನೇಹ.

ಹೆಚ್ಚಿನ ಸ್ವಾತಂತ್ರ್ಯ, ಕಾಳಜಿ, ಹಿತದಾಯಕ ಮಾತುಕತೆ, ಸ್ವಲ್ಪ ಜಗಳ, ಜಾಸ್ತಿ ಮಸ್ತಿ, ಹೀಗೆ ಸಮಯದ ಪರಿವೆಯನ್ನೇ ಇಲ್ಲದಾಗಿಸುವ ಬಾಂಧವ್ಯವೇ ಸ್ನೇಹ. ಇದೇ ಕಾರಣಕ್ಕೆ ಆರೋಗ್ಯಕರ ಸಂಬಂಧಗಳ ಅಡಿಪಾಯ ಸ್ನೇಹವಾಗಿರಬೇಕು ಎಂದು ಹೇಳಲಾಗುತ್ತದೆ.

ದೀರ್ಘಾವಧಿಯ ಸ್ನೇಹಕ್ಕೆ ಅತಿರೇಕದ ಮನೋಭಾವ ಸಲ್ಲದು. ಉದಾಹರಣೆಗೆ, ಕೇವಲ ಸಹಾಯಕ್ಕಾಗಿ ವ್ಯಕ್ತಿಯನ್ನು ಬಳಸಿ ಅದಕ್ಕೆ ಸ್ನೇಹದ ಬಣ್ಣ ಬಳಿಯುವುದು ಅಥವಾ ಸ್ನೇಹ ಭಾವವೇ ಇಲ್ಲದ ಒಂಟಿ ಪಿಶಾಚಿಯಂತೆ ಬದುಕುವುದು ಅತಿರೇಕದ ಒಂದು ತುದಿಯಾದರೆ ಸ್ನೇಹದ ಹೆಸರಲ್ಲಿ ಹೆಚೆಚ್ಚು ಜನರನ್ನು ಅತಿಯಾಗಿ ಹಚ್ಚಿಕೊಳ್ಳುವುದು, ನಂತರ ಅದನ್ನು ನಿಭಾಯಿಸಲು ಒದ್ದಾಡುವುದು ಅತಿರೇಕದ ಮತ್ತೊಂದು ತುದಿ.

ಹೀಗಾದರೆ, ಸಂಬಂಧಗಳ ನಿರ್ವಹಣೆಗೆ ಸಹಾಯಕವಾಗಬೇಕಾದ ಸ್ನೇಹ ಮಾರಕವಾಗುತ್ತದೆ ಅಷ್ಟೇ!

ಹೃದಯದಲ್ಲಿ ಸ್ನೇಹಭಾವ ಸದಾ ಇರುವುದರ ಜೊತೆಗೆ ಅದು ಯಾರಿಗೆ, ಎಲ್ಲಿ, ಯಾವಾಗ, ಹೇಗೆ ಬಳಕೆಯಾಗುತ್ತಿದೆ ಎಂಬುದರ ಅರಿವೂ ಇರಬೇಕಾಗುತ್ತದೆ.

ನೀವು ನಮ್ಮ’ಈ’ ಸಂಭಾಷಣೆಯನ್ನು ಆನಂದಿಸುತ್ತಿದ್ದೀರಾ?

7. ಜೋಡಿ ಸಂಬಂಧಗಳು:

ಹಿಸಿದಿರಾ?

ಹೌದು!

ನಾವು ಹುಡುಗ-ಹುಡುಗಿ ಅಥವಾ ಗಂಡು-ಹೆಣ್ಣಿನ ಸಂಬಂಧದ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಈ ಉದ್ದನೆಯ ಲೇಖನದ ಆರಂಭದಲ್ಲಿ ನಾನು ಹೇಳಿದ್ದು ನಿಮಗೆ ನೆನಪಿರಬಹುದು. ಆಂಗ್ಲ ಭಾಷೆಯಲ್ಲಿ “ಸಂಬಂಧ” ಪದವು ಹೆಚ್ಚಾಗಿ ಬಳಕೆಯಾಗುವುದು ಇದೇ ವಿಚಾರಕ್ಕೆ.

ಹೀಗಿರುವಾಗ ಇದನ್ನು ಪ್ರತ್ಯೇಕವಾಗಿ ಹೇಳದೆ ಮುಂದುವರಿಯಲು ಹೇಗೆ ಸಾಧ್ಯ?

ಅ. ಹದಿಹರೆಯದ ಸಂಬಂಧಗಳು:

ಹದಿಹರೆಯದ-ಹುಡುಗಿ-ಹಾಗೂ-ಹುಡುಗ-ಹೋಟೆಲ್-ಟೇಬಲ್ ನಲ್ಲಿ-ಕುಳಿತಿರುವ-ಕಾರ್ಟೂನ್-ಚಿತ್ರ

ಪದವು ಸೂಚಿಸುವಂತೆ, ವಯಸ್ಸು ಇಲ್ಲಿ ಗುರುತಿಸಬಹುದಾದ ಅಂಶವಾಗಿದೆ.

ಹದಿಹರೆಯ ಎಂಬುದು ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವಲ್ಲಿ ಮತ್ತು ಭವಿಷ್ಯದ ಬಾಂಧವ್ಯಗಳ ಕುರಿತು ಸರಿಯಾಗಿ ಯೋಚಿಸುವ ಸಮಯವಾಗಿದೆ.

ಹಳೆಯ ಲೆಕ್ಕಾಚಾರದ ಪ್ರಕಾರ ಮಕ್ಕಳ 13 ರಿಂದ 19 ವಯೋಮಿತಿಯನ್ನು ಸೂಕ್ಷ್ಮ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ವೇಗವಾದ ತಂತ್ರಜ್ಞಾನ ಬೆಳವಣಿಗೆಯಿಂದ ಹಾಗೂ ಬದಲಾಗುತ್ತಿರುವ ಜೀವನ ಪದ್ಧತಿಯಿಂದಾಗಿ 6 ರಿಂದ 13 ವರ್ಷಗಳ ಸಮಯವನ್ನು ತೀರಾ ಸೂಕ್ಷ್ಮ ಎನ್ನಬಹುದು.

ಸಂಬಂಧದ ಭೌತಿಕ ಅಂಶಗಳನ್ನು ಮಾತ್ರ ಪರಿಗಣಿಸುವ ಮೂಲಕ, ಬ್ರೇಕ್-ಅಪ್ ಎಂಬ ಪದದ ನಿರಂತರ ಬಳಕೆಯನ್ನು ನಾವು ಪ್ರಸ್ತುತ ಹದಿಹರೆಯದವರಲ್ಲಿ ನೋಡುತ್ತೇವೆ.

ನಿಜವಾದ ಸಂಬಂಧಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಹದಿಹರೆಯವು ಉತ್ತಮ ಅವಧಿಯಾಗಿದೆ. ಏಕೆಂದರೆ ವಯಸ್ಸಾದಂತೆ, “ಸಂಬಂಧಗಳ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು?” ಎಂಬ ಮೂಲಭೂತ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವುದು ಬಹುತೇಕ ಅಸಾಧ್ಯ ಎನ್ನಬಹುದು.

ವರ್ತಮಾನವನ್ನು ಗಮಯಿಸಿ ಭವಿಷ್ಯದ ಬಗ್ಗೆ ಯೋಚಿಸಿದರೆ, ಹದಿಹರೆಯದಲ್ಲಿ ಸಂಬಂಧ – ಬಾಂಧವ್ಯಗಳ ಬಗೆಗೆ ಶೈಕ್ಷಣಿಕವಾಗಿ ಗಮನ ನೀಡುವುದು ಅತೀ ಅಗತ್ಯವಾಗಿದೆ. ಕನಿಷ್ಠ ಪಕ್ಷ, ಹಿರಿಯರ ಹಾಗೂ ಕಿರಿಯರ ನಡುವೆ ಮುಕ್ತ ಮಾತುಕತೆಗಳು ಆಗಿಂದಾಗ್ಗೆ ನಡೆಯುತ್ತಿರಬೇಕು.

ಇದು ಸಾಧ್ಯವಾಗಬೇಕಾದರೆ, ನಾವು ಈ ವರೆಗೆ ಗಮನಿಸಿದ ಹಾಗೂ ಮುಂದೆ ಪರಿಗಣಿಸಲಿರುವ ಸಂಬಂಧಗಳ ಸರಿಯಾದ ನಿರ್ವಹಣೆ ಅತ್ಯಗತ್ಯ.

ಆ. ಪ್ರಬುದ್ಧ ಸಂಬಂಧಗಳು:

ಪ್ರಬುದ್ಧ-ಹುಡುಗ-ಮತ್ತು-ಹುಡುಗಿ-ಪರಸ್ಪರ-ಭೇಟಿಯಾಗುತ್ತಿರುವ-ಕಾರ್ಟೂನ್-ಚಿತ್ರ

ಇನ್ನೂ ಮದುವೆಯಾಗದ ಆದರೆ ಪರಸ್ಪರ ಬಾಳ ಸಂಗಾತಿಗತಿಗಳಾಗಬೇಕೆಂದು ಬಯಸಿದ ಅಥವಾ ನಿರ್ಧರಿಸಿದ ಜೋಡಿಗಳ ಕುರಿತ ವಿಭಾಗ ಇದಾಗಿದೆ.

ಈ ಸಂಬಂಧಿಗಳು ತಮ್ಮ ಭವಿಷ್ಯದ ಎಲ್ಲಾ ಸಾಧ್ಯತೆಗಳನ್ನು ಲೆಕ್ಕಾಚಾರ ಮಾಡುತ್ತಾರೆ. ಅವರ ನಡುವಿನ ಸಂವಹನವು ಕೇವಲ ಒಣ ಮಾತುಕತೆಗಿಂತ ಆಳವಾದ ವಿಚಾರಗಳನ್ನು ಹೊಂದಿರುತ್ತವೆ.

ಸಂಬಂಧಗಳನ್ನು ಗಂಭೀರವಾಗಿ ಪರಿಗಣಿಸುವ ಈ ಹಂತದ ಸಂಬಂಧಿಗಳಲ್ಲಿ ಒಬ್ಬರು ಕೇವಲ ತಮ್ಮ ಸ್ವಾರ್ಥ ಅಗತ್ಯಗಳನ್ನು ಪೂರೈಸಲು ಈ ಅವಕಾಶವನ್ನು ಬಳಸುವುದಿಲ್ಲ. ಅವರ ನಿರ್ಧಾರಗಳು ಇಬ್ಬರ ಪ್ರಯೋಜನಗಳನ್ನು ಅಥವಾ ಆಗಬಹುದಾದ ಹಾನಿಗಳನ್ನು ಆಧರಿಸಿರುತ್ತವೆ.

ಇ. ದಂಪತಿಗಳು:

ವ್ಯಾನ್ ನಿಂದ-ಇಣುಕಿ-ಹೊರಗಡೆ-ನೋಡುತ್ತಿರುವ-ದಂಪತಿಗಳ-ಕಾರ್ಟೂನ್-ಚಿತ್ರ

ಯಶಸ್ವಿ ಗಂಡ-ಹೆಂಡತಿ ಸಂಬಂಧಗಳ ಬಗ್ಗೆ ಯಾರು ತಿಳಿಯ ಬಯಸುತ್ತಾರೆ?

ಒಂದೆಡೆ, ಮದುವೆಯ ನಂತರದ ಶೋಚನೀಯ ಜೀವನದಲ್ಲಿರುವ ದಂಪತಿಗಳು ಅದನ್ನು ಉತ್ತಮಗೊಳಿಸುವ ಸಾಧ್ಯತೆಗಳನ್ನು ಹುಡುಕಲು ಬಯಸುತ್ತಾರೆ. ಮತ್ತೊಂದೆಡೆ, ಮದುವೆಯಾಗಲಿರುವವರು ಮುಂಜಾಗ್ರತಾ ಕ್ರಮವಾಗಿ ಈ ಬಾಂಧವ್ಯದ ಕುರಿತು ತಿಳಿಯಬಯಸುತ್ತಾರೆ.

ಹೊರಗಿನಿಂದ ಒಬ್ಬ ಮೂರನೇ ವ್ಯಕ್ತಿಯಾಗಿ ದಾಂಪತ್ಯ ಜೀವನವನ್ನು ಗಮನಿಸುವುದಕ್ಕೂ, ಅದನ್ನು ಜೀವಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಕೇಳಿದ್ದೇನೆ.

ಹಾಗಾಗಿ, ಇನ್ನೂ ಬಿಡಿಸಿ ಹೇಳೋ ಅಗತ್ಯ ಇಲ್ಲ ತಾನೇ?

ಆನ್ಲೈನ್ ಮಾರ್ಕೆಟಿಂಗ್ ನನ್ನ ವೃತ್ತಿಯ ಭಾಗವಾಗಿರುವುದರಿಂದ ನನ್ನ ಗಮನಕ್ಕೆ ಬರುವ ಕೆಲವು ವಿಚಾರಗಳನ್ನು ಇಲ್ಲಿ ಹೇಳುವುದು ಸೂಕ್ತ ಎನಿಸುತ್ತದೆ.

ಮೊದಲೆಲ್ಲಾ ಸ್ವರ್ಗಮಾಯ ದಾಂಪತ್ಯ ಜೀವನದ ಕನಸಿಗೆ ಸಿನಿಮಾಗಳು, ಧಾರಾವಾಹಿಗಳು, ಅಥವಾ ಕತೆ-ಕಾದಂಬರಿಗಳು ಹೆಚ್ಚಿನ ಪ್ರಭಾವ ಬೀರುತ್ತಿದ್ದರೆ, ಇಂದು ಸೋಶಿಯಲ್ ಮೀಡಿಯಾಗಳೂ ಬಹುದೊಡ್ಡ ಪಾಲುದಾರರಾಗುತ್ತಿದ್ದಾರೆ.

ನಿಶ್ಚಿತಾರ್ಥದಿಂದ ತೊಡಗಿ, ಮದುವೆ, ಹನಿಮೂನ್, ಮೊದಲ ಮಗು ಹೊಟ್ಟೆಯೊಳಗೆ ಬೆಳೆಯುತ್ತಿರುವ ಸ್ಟೇಟಸ್, ಎರಡನೇ ಮಗು ಹೊರಗಡೆ ಆಡುತ್ತಿರುವ ಪೋಸ್ಟ್, ಹೀಗೆ ಎಲ್ಲರೂ ತಮ್ಮ ತಮ್ಮ ಬೆಸ್ಟ್ ಕ್ಷಣಗಳನ್ನು ಹಂಚಿಕೊಳ್ಳುವುವ ಸ್ಪರ್ಧೆಯಲ್ಲಿ ಬ್ಯುಸಿಯಾಗಿದ್ದಾರೆ.

ಅಯ್ಯೋ, ನಿನ್ಗೇನ್ ಗುರು ಹೊಟ್ಟೆಕಿಚ್ಚಾ, ಅಂತ ಬೈಕೋತಿದೀರಾ?

ಖಂಡಿತಾ ಇಲ್ಲ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಏನನ್ನು, ಯಾಕೆ, ಯಾವಾಗ, ಮತ್ತು ಹೇಗೆ ಹಂಚಿಕೊಳ್ಳಬೇಕು ಅಥವಾ ಹಂಚಿಕೊಳ್ಳಬಾರದು ಎಂಬುದು ಅವರವರ ನಿರ್ಧಾರಕ್ಕೆ ಬಿಟ್ಟಿದ್ದು. ಇದು ಸ್ವಲ್ಪ ಆಳ ಹಾಗೂ ಚರ್ಚಾದಾಯಕ ವಿಷಯವಾಗಿದ್ದು, ಒಂದೆರಡು ಮೇಲ್ನೋಟದ ವಿಚಾರಗಳನ್ನು ಹಿಡಿತು ಸರಿ-ತಪ್ಪು ಎಂದು ಕಿತ್ತಾಡುವುದರಲ್ಲಿ ಅರ್ಥವಿಲ್ಲ ಬಿಡಿ.

ಅದೂ ಅಲ್ಲದೆ, ನಾವೂ ಸೋಶಿಯಲ್ ಮೀಡಿಯಾ ಬಳಸುವವರೇ, ಪೋಸ್ಟ್, ಸ್ಟೋರಿ ಶೇರ್ ಮಾಡುವವರೇ ಅಲ್ಲವೇ!

ಆದರೆ ಇಲ್ಲಿ ಶೇರ್ ಮಾಡಲಾಗುವ ವಿಚಾರಗಳ ಗ್ರಹಿಕೆಯ ಬಗ್ಗೆ ಸ್ವಲ್ಪ ಎಚ್ಚರಿಕೆ ಅಗತ್ಯ ಎಂಬುದು ವೃತ್ತಿಪರವಾದ ನನ್ನ ನೇರ ಗಮನದಿಂದ ಹಾಗೂ ಮನಶ್ಶಾಸ್ತ್ರಜ್ಞರ ಜೊತೆಗಿನ ಸಮಾಲೋಚನೆಯಿಂದ ಕಂಡುಬಂದ ಅಂಶ.

ಉದಾಹರಣೆಗೆ, ಇನ್ನು ಮದುವೆಯಾಗಲಿರುವವರು ಅಥವಾ ಮದುವೆಯಾಗಿ ಸಮಸ್ಯೆಗಳನ್ನು ನಿಭಾಯಿಸಲು ಒದ್ದಾಡುತ್ತಿರುವವರು “ಪ್ರಪಂಚದ ಅತೀ ಸಂತೋಷದಾಯಕ ದಾಂಪತ್ಯ ಜೀವನ” ಎಂದು ಬಿಂಬಿಸುವ ರೀತಿಯ ಸಿನಿಮಾಗಳನ್ನೋ ಅಥವಾ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನೋ ಒಂದರ ಹಿಂದೊಂದರಂತೆ ವೀಕ್ಷಿಸಿ “ದಾಂಪತ್ಯ ಜೀವನ ಎಂದರೆ ಹೀಗಿರಬೇಕು” ಎಂಬ ತಮ್ಮದೇ ಕಲ್ಪನಾ ಲೋಕ ಕಟ್ಟಿ ಅದರ ವಾಸ್ತವ ಸ್ಥಿತಿಯನ್ನು ಗಮನಿಸಲು ಮರೆಯುತ್ತಾರೆ.

ಅಂತೆಯೇ, ಇದು ದುರಂತ ದಾಂಪತ್ಯ ಕತೆಗಳನ್ನು ನೈಜತೆಗೂ ಮೀರಿ, ಕೇವಲ ಸಮಸ್ಯೆಯ ಒಂದು ತುಣುಕನ್ನು ಬಿಂಬಿಸುವ ವಿಚಾರಗಳನ್ನೂ ಒಳಗೊಳ್ಳುತ್ತದೆ.

ಇದು ಸಂಬಂಧಗಳ ಕುರಿತ “ಸ್ವ-ನಿರ್ಧಾರಗಳನ್ನು” ತೆಗೆದುಕೊಳ್ಳುವಲ್ಲಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಇನ್ನು, ಇಂದಿನ ಕೆಲವು ಯುವಜನ ಹಾಗೂ ಹಿರಿಯರನ್ನು ಚಿಂತೆಗೀಡು ಮಾಡಿರಿವ ವಿಚಾರವೇ ವಿಚ್ಚೇದನ.

ಅಂಕಿಅಂಶಗಳು ಹೇಳುವಂತೆ, ಜಾಗತಿಕ ಮಟ್ಟದಲ್ಲಿ ಭಾರತವು ಕಡಿಮೆ (1.1%) ವಿಚ್ಚೇದನ ದರವನ್ನು ಹೊಂದಿದ ದೇಶ. ಆದರೆ, ಕಳೆದ ಕೆಲವು ವರ್ಷಗಳಲ್ಲಿ, ಭಾರತದ ವಿಚ್ಛೇದನ ದರ (ವಿಶೇಷವಾಗಿ ನಗರ ಪ್ರದೇಶಗಳಲ್ಲಿ) 50% ರಿಂದ 60% ರಷ್ಟು ಏರಿಕೆಯನ್ನು ಕಂಡಿದೆ.

ಮೊದಲೇ ಹೇಳಿದಂತೆ ಈ ವಿಚಾರದಲ್ಲಿ ಅನುಭವದ ಕೊರತೆಯಿಂದಾಗಿ ನಾನು ಹೆಚ್ಚೇನೂ ಹೇಳಲಾರೆ.

ನೀವು ದಾಂಪತ್ಯ ಜೀವನವನ್ನು ನಡೆಸುತ್ತಿದ್ದು, ಇತರರಿಗೆ ಅನುಕೂಲವಾಗಬಹುದಾದ ವಿಚಾರಗಳನ್ನು ಹೊಂದಿದ್ದಲ್ಲಿ ದಯವಿಟ್ಟು ಶೇರ್ ಮಾಡಿ.

8. ಅತ್ತೆ-ಮಾವ, ಅಳಿಯ, ಸೊಸೆ:

ಅತ್ತೆ-ಮಾವ-ಅಳಿಯ-ಸೊಸೆ-ಎಂಬ-ಸಂಬಂಧದ-ವಿಧಗಳನ್ನು-ಬಿಂಬಿಸುವ-ಒಂದು-ಕುಟುಂಬದ-ಕಾರ್ಟೂನ್-ಚಿತ್ರ

ನಿತ್ಯ ಜೀವನದಲ್ಲಿ ಸಂಬಂಧಗಳ ನಿರ್ವಹಣೆ ಲೇಖನ ಬರೆದಷ್ಟು ಅಥವಾ ಭಾಷಣ ಮಾಡಿದಷ್ಟು ಸರಳವೋ ಎಂದು ಕೇಳಿದರೆ, ಬಹುಶ “ಅಲ್ಲ” ಎನ್ನಬಹುದು.

ಆದರೆ ಸಾವಿರ ಸಮಸ್ಯೆಗಳ ಹೊರತಾಗಿಯೂ ಸರಳ ದಾರಿಗಳನ್ನು ಹುಡುಕುವುವ ಸಾಧ್ಯತೆಗಳಿವೆಯೇ!

ಅತ್ತೆ-ಮಾವ ಹಾಗೂ ಅಳಿಯ/ಸೊಸೆ ಎಂಬ ಬಾಂಧವ್ಯದ ಗುಣಮಟ್ಟ ಹಾಗೂ ನಿರ್ವಹಣೆಯು “ನಮ್ಮವರು” ಎಂಬ ವ್ಯಾಖ್ಯೆಯ ಗುಣಮಟ್ಟಕ್ಕೆ ಅನುಗುಣವಾಗಿರುತ್ತದೆ.

ಉದಾಹರಣೆಗೆ, ನೀವೊಂದು ಹೂದೋಟವನ್ನು ಬೆಳೆಸಿದ್ದೀರಿ ಎನ್ನೋಣ. ಅಲ್ಲಿ ಈಗಾಗಲೇ ಹಲವಾರು ಗಿಡಗಳಿದ್ದು, ಕೆಲವೊಂದರಲ್ಲಿ ಹೂಗಳಿವೆ, ಇನ್ನು ಕೆಲವು ಈ ಹಿಂದೆ ಹೂ ಬಿಟ್ಟಿದ್ದವು, ಉಳಿದ ಗಿಡಗಳಲ್ಲಿ ಮೊಗ್ಗುಗಳಿವೆ.

ಈಗ ನೀವು ಒಂದು ಹೊಸ ಗಿಡವನ್ನು ತರಲು ಬಯಸುತ್ತೀರಿ. ಹೊಸ ಗಿಡದ ಆಗಮನದಿಂದ ಆಗಬಹುದಾದ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳು- ಅದು ಯಾವ ಗಿಡ/ಹೂವು, ಯಾರಿಂದ ಪಡೆಯುತ್ತಿದ್ದೀರಿ, ಅದರ ಈವರೆಗಿನ ಬೆಳವಣಿಗೆ/ಬೆಳೆದ ರೀತಿ ಹಾಗೂ ಗುಣಮಟ್ಟದ ಜೊತೆಗೆ ಹೂದೋಟದ ಮಣ್ಣಿನ ಗುಣಮಟ್ಟ, ನೀರು, ಗಾಳಿ-ಬೆಳಕು, ಬೆಳೆವ ಅವಕಾಶ, ಸುತ್ತುಮುತ್ತಲಿನ ಗಿಡಗಳು ಹಾಗೂ ಹೂದೋಟ ಬೆಳೆವ ಕಲಾಕಾರರನ್ನೂ ಅವಲಂಬಿಸಿದೆ.

ಒಂದು ವೇಳೆ ನೀವು ಬೆಳೆಸಿದ ಗಿಡವನ್ನು ಬೇರೆಯವರಿಗೆ ಕೊಡುವುದಿದ್ದರೆ, ಮೇಲಿನ ಸನ್ನಿವೇಶವನ್ನು ತಿರುಚಿದರಾಯಿತು, ಅಷ್ಟೇ.

ಈ ಹಂತದ ಸಂಬಂಧಗಳ ನಿರ್ವಹಣೆಗೂ ಒಂದು ಸುಂದರ ಹೂದೋಟ ಬೆಳೆಸುವಿಕೆಗೂ ಹೋಲಿಕೆ ಇದೆ ಅಂತ ನಂಗೆ ಅನಿಸ್ತಿದೆ.

ನಿಮ್ಗೆ?

ಭಾಗ ಅ ದ ಸಾರಾಂಶ:

ಯಾಹೂ… ಇಲ್ಲಿವರೆಗೆ ವೈಯಕ್ತಿಕ ಸಂಬಂಧಗಳ ಕುರಿತ ನಮ್ಮ ಮಾತುಕತೆ ಸಾಗಿ ಬಂದಿದೆ.

ಅಜ್ಜ-ಅಜ್ಜಿಯರ – ಮೊಮ್ಮಕ್ಕಳ ಬಾಂಧವ್ಯದಿಂದ ತೊಡಗಿ ಅತ್ತೆ-ಮಾವ ಹಾಗೂ ಅಳಿಯ ಸೊಸೆ ಎಂಬ ಸಂಬಂಧಗಳ ನಿರ್ವಹಣೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳನ್ನು ಗಮನಿಸಿದ್ದೇವೆ.

‘ಈಗ ಮತ್ತೊಮ್ಮೆ ಮುಖ್ಯಾಂಶಗಳು’;

  • ವೈಯಕ್ತಿಕ ಸಂಬಂಧಗಳು ಮತ್ತು ಅವುಗಳ ಭಾಗವಾಗಿರುವ ವ್ಯಕ್ತಿಗಳನ್ನು ಸಮಾನವಾಗಿ ಪರಿಗಣಿಸುವುದರಿಂದ, ಅನಗತ್ಯವಾದ ಇತರರ ಮೇಲಿನ ಅವಲಂಬನೆಯನ್ನು ಅಥವಾ ಪ್ರಾಬಲ್ಯವನ್ನು ನಿಭಾಯಿಸುವುದಕ್ಕೆ ಸಹಾಯಕ.
  • ಸಂಬಂಧಗಳು ನೇರವಾಗಿ ಅಥವಾ ಪರೋಕ್ಷವಾಗಿ ಪರಸ್ಪರ ಅವಲಂಭಿಸಿದ್ದು, ಕಾರಣ-ಪರಿಣಾಮಗಳನ್ನು ಹಂಚಿಕೊಳ್ಳುತ್ತವೆ. ಯಾವ ಬೆಂಕಿ ಎಲ್ಲೆಲ್ಲಾ ಹೊಗೆಯಾಡಿಸುತ್ತದೆ ಎಂದೂ, ಯಾವ ಮೋಡ ಎಲ್ಲಿ ಮಳೆ ಸುರಿಸುತ್ತದೆ ಎಂಬುದು ಕೆಲವೊಮ್ಮೆ ನಿಗೂಢವಾಗಬಹುದು.
  • ವೈಯಕ್ತಿಕ ಸಂಬಂಧಗಳ ನಿರ್ವಣೆಗೆ ನಿಕಟ ಸ್ನೇಹ ಹಾಗೂ ಸ್ನೇಹಿತರನ್ನು ಹೊಂದಿರುವುದು ಪರಸ್ಪರ ಬಲು ಸಹಾಯಕ.
  • ಹಲವರಿಗೆ ತಮ್ಮ ವೃತ್ತಿ ಬದುಕಿನಿಂದಾಗಿ ಅಥವಾ ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ವೈಯಕ್ತಿಕ ಬಾಂಧವ್ಯಗಳಿಗೆ ಹೆಚ್ಚಿನ ಸಮಯ ಅಥವಾ ಗಮನ ನೀಡಲು ಸಾಧ್ಯವಾಗದಿರಬಹುದು.

ವೈಯಕ್ತಿಕ ಸಂಬಂಧಗಳ ನಿರ್ವಹಣೆಯು ಅವಿಭಕ್ತ ಹಾಗೂ ವಿಭಕ್ತ ಎಂಬ ಎರಡು ಮುಖ್ಯ ಕುಟುಂಬ ವಿಧಗಳ ಪ್ರಭಾವಕ್ಕೆ ಒಳಪಡುತ್ತದೆ. ವಿಚಾರಗಳನ್ನು ಸರಳವಾಗಿಡಲು ನಾನು ಅವುಗಳನ್ನು ಇಲ್ಲಿ ಪ್ರತ್ಯೇಕವಾಗಿ ಪರಿಗಣಿಸಿಲ್ಲ.

ಉಪಯುಕ್ತ ಪೋಸ್ಟ್: ಅವಿಭಕ್ತ ಕುಟುಂಬದ ಲಕ್ಷಣಗಳು ಬದಲಾಗುತ್ತಿವೆಯೇ? 10 ರಲ್ಲಿದೆ ಉತ್ತರ!

ನಿಕಟ ಬಾಂಧವ್ಯಗಳ ಕುರಿತ ಉತ್ತಮ ತಿಳುವಳಿಕೆಯು ವೃತ್ತಿಪರ ಸಂಬಂಧಗಳು ಮತ್ತು ಸಾಮಾಜಿಕ ಸಂಪರ್ಕಗಳಂತಹ ಇತರ ವಿಧಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ನೀವು ಈ ಲೇಖನದ ಮೂಲಕ ನಡೆಯುತ್ತಿರುವ ನಮ್ಮ ಮಾತುಕತೆಯನ್ನು ಇಷ್ಟಪಡುತ್ತಿರುವಿರೇ?

ಸರಿ, ಮುಂದೆ ಸಾಗೋಣ.

ಭಾಗ ಆ – ವೃತ್ತಿಪರ ಸಂಬಂಧಗಳು

ಶಿಕ್ಷಣ, ಉದ್ಯೋಗ, ವ್ಯಾಪಾರ-ವ್ಯವಹಾರಗಳ ಕಾರಣಕ್ಕೆ ರೂಪುಗೊಳ್ಳುವ ಸಂಬಂಧಗಳನ್ನು ವೃತ್ತಿಪರ ಅಥವಾ ವ್ಯಾವಹಾರಿಕ ಸಂಬಂಧಗಳು ಎನ್ನಬಹುದು.

ಸರಾಸರಿಯಾಗಿ, ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಮೂರನೇ ಒಂದು ಭಾಗದಷ್ಟು (1/3) ಸಮಯವನ್ನು ವೃತ್ತಿಪರವಾಗಿ ಕಳೆಯುತ್ತಾನೆ. ಆದ್ದರಿಂದ ವೃತ್ತಿಪರ ಸಂಬಂಧಗಳ ನಿರ್ವಹಣೆ ಮುಖ್ಯವಾಗುತ್ತದೆ.

1. ವಿದ್ಯಾರ್ಥಿ-ಶಿಕ್ಷಕರ ಸಂಬಂಧಗಳು:

ಟೀಚರ್-ಹಾಗೂ-ಮಕ್ಕಳನ್ನು-ಒಳಗೊಂಡ-ತರಗತಿಯ-ಕಾರ್ಟೂನ್-ಚಿತ್ರ

ಸಾಮಾನ್ಯವಾಗಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ಯೋಚಿಸಿದಾಗ ಮನಸ್ಸಿನಲ್ಲಿ ಮೂಡುವ ಚಿತ್ರಗಳೇ ಶಾಲೆಗಳು ಮತ್ತು ಕಾಲೇಜುಗಳು.

ಹೌದಾ…?

ಕೆಲವರಿಗೆ ಬಿದ್ದ ಏಟುಗಳು ನೆನಪಾದರೆ, ಇನ್ನು ಕೆಲವರಿಗೆ ಜೀವನ ಪಾಠಗಳೂ ನೆನಪಾಗಬಹುದು.

ಹೊಸ ತರಗತಿಯ ಪ್ರಾರಂಭದಲ್ಲಿ ಶಿಕ್ಷಕರು- “ತರಗತಿಯ ಕಲಿಕಾ ವಾತಾವರಣ ಹೇಗಿರಬೇಕು” ಎಂದು ಮಕ್ಕಳಿಂದ ಅನಿಸಿಕೆಗಳನ್ನು ಕೇಳುವ ವಾಡಿಕೆಯೂ ಇದೆ. ಆದರೆ ಕಾರಣಾಂತರಗಳಿಂದ ಅದರ ಅನುಷ್ಠಾನ ಬಹುಷಃ 10%.ನಷ್ಟೂ ಆಗುವುದಿಲ್ಲ.

ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಮಕ್ಕಳೊಂದಿಗೆ ಸ್ನೇಹದಿಂದ ಅಥವಾ ಸ್ವಲ್ಪ ಸಲುಗೆಯಿಂದಿರಲು ಹಿಂಜರಿಯುತ್ತಾರೆ. ಕಾರಣ, ಮಕ್ಕಳ ಗಮನ ಶೈಕ್ಷಣಿಕ ಕಲಿಕೆಯಿಂದ ಕದಲಬಾರದು ಎಂದಾಗಿರಬಹುದು ಅಥವಾ ತಮ್ಮ ಶಿಕ್ಷಕರ ಸ್ಥಾನದಿಂದಾಗಿ, ತಮೆಗೆ ಹೆಚ್ಚಿನ ಅನುಭವ ಮತ್ತು ತಿಳುವಳಿಕೆ ಇದೆ ಎಂಬ ಮನೋಭಾವವೂ ಆಗಿರಬಹುದು.

ಅದೂ ಅಲ್ಲದೆ, ಇಂದು ಶೈಕ್ಷಣಿಕವಾಗಿ ಬೋಧಿಸುವ ಶಿಕ್ಷಕರು ನಿಗದಿತ ಪಠ್ಯಗಳನ್ನು ಸೀಮಿತ ಸಮಯದಲ್ಲಿ ಮುಗಿಸುವ ಒತ್ತಡದ ಜೊತೆಗೆ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಬೇರೆ ಜವಬ್ಧಾರಿಗಳನ್ನೂ ನಿಭಾಯಿಸುವ ಸನ್ನಿವೇಶಗಳನ್ನು ಕಾಣುತ್ತೇವೆ.

ಇನ್ನು ಇಂದಿನ ಮಕ್ಕಳ ಬಗ್ಗೆ ಕೇಳಬೇಕೆ! ಕೆಲವರು ಅಂತರ್ಜಾಲದ ಸರಿಯಾದ ಬಳಕೆಯಿಂದ ಚುರುಕಾಗಿ, ಶಿಕ್ಷಕರ ಹೊರೆಯನ್ನು ಕಡಿಮೆಗೊಳಿಸಿದರೆ, ಇನ್ನು ಹಲವಾರು ವಿದ್ಯಾರ್ಥಿಗಳು ಮಾಹಿತಿ, ಅನುಭವ, ಜ್ಞಾನ, ಪರಿಣತಿಗಳಿಗೆ ವ್ಯತ್ಯಾಸ ತಿಳಿಯದೆ ಶಿಕ್ಷಕರನ್ನು ಸಂಪೂರ್ಣ ಕಡೆಗಣಿಸಿ ಕೀಳಾಗಿ ಕಾಣುವುದನ್ನೂ ನೀವು ಗಮನಿಸಿರಬಹುದು.

ಇಂತಹಾ “ಸಣ್ಣ-ಪುಟ್ಟ’ ಎಂದು ತೋರುವ ವಿಚಾರಗಳು ಶಿಕ್ಷಕ-ವಿದ್ಯಾರ್ಥಿಗಳ ಬಾಂಧವ್ಯದ ವ್ಯಾಖ್ಯೆಯನ್ನೇ ಬದಲಿಸುತ್ತದೆ.

ಮಾರ್ಗದರ್ಶಕ-ಮಾರ್ಗದರ್ಶಿ, ತರಬೇತುದಾರರು-ತರಬೇತಿ ಪಡೆವವರದ್ದೂ ಶಿಕ್ಷಕ-ವಿದ್ಯಾರ್ಥಿ ಸಂಬಂಧವಾಗಿದೆ. ಇದು ಹೆಚ್ಚು ವೃತ್ತಿಪರವಾಗಿ ಇರುವುದರ ಜೊತೆಗೆ ಆಳವಾದ ಜ್ಞಾನ ಮತ್ತು ಅನುಭವಗಳಿಂದ ಕೂಡಿದ ಕಲಿಕೆಯಾಗಿರುತ್ತದೆ.

ಈ ರೀತಿಯ ಕಲಿಕೆಯಲ್ಲಿ ವಿದ್ಯಾರ್ಥಿಗಳ ಅಥವಾ ಕಲಿಯುವವರ ಹಾಗೂ ಕಲಿಸುವವರ ಸಂಖ್ಯೆ ಸೀಮಿತವಾಗಿದೆ. ಇಂತಹಾ ಕಲಿಕಾ ವಿಧಾನಗಳಲ್ಲಿ ಕಲಿಸುವ ಮತ್ತು ಕಲಿಯುವ ಇಬ್ಬರಿಗೂ ಅಧ್ಯಯನದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಅಲ್ಲದೆ, ವೈಯಕ್ತಿಕವಾಗಿ ಹೆಚ್ಚಿನ ಗಮನ ದೊರೆಯುವುದರಿಂದ ಕಲಿಕಾ ಗುಣಮಟ್ಟ ಹೆಚ್ಚಾಗಿರುತ್ತದೆ.

2. ಉದ್ಯೋಗದಾತ-ಉದ್ಯೋಗಿ:

ಉದ್ಯೋಗದಾತ-ಮತ್ತು-ಉದ್ಯೋಗಿಯನ್ನು-ಒಳಗೊಂಡ-ಕಚೇರಿಯ-ಕಾರ್ಟೂನ್-ಚಿತ್ರ

ಇದೊಂದು ಅತ್ಯಂತ ಔಪಚಾರಿಕ ಸಂಬಂಧಗಳಲ್ಲಿ ಒಂದಾಗಿದೆ.

ನೈತಿಕ ಕನಸಿನ ಲೋಕದ ಪ್ರಕಾರ ಉದ್ಯೋಗದಾತರು ಹಾಗೂ ಉದ್ಯೋಗಿಗಳಿಬ್ಬರೂ ಮಾಡುವ ಕೆಲಸ ಮತ್ತು ದೊರೆಯುವ ಸಂಬಳವನ್ನು ಸರಿದೂಗಿಸಲು ಪ್ರಯತ್ನಿಸಬೇಕು. ಆದರೆ, ವಾಸ್ತವಲೋಕದಲ್ಲಿ ಇದನ್ನು ಸುಲಭವಾಗಿ ಕಾಣಲು ಸಾಧ್ಯವಿಲ್ಲ ಬಿಡಿ.

ಚೌಕಾಸಿಯ ಆಳವನ್ನು ಬಗೆಯುವ ಮಾಲೀಕರು ಒಂದೆಡೆಯಾದರೆ ಪುಸಲಾಯಿಸುವಿಕೆಯ ತುದಿಯನ್ನೇರಿ ಹೇಗೋ ಪರಿಸ್ಥಿತಿಗಳನ್ನು ಮ್ಯಾನೇಜ್ ಮಾಡೋ ಉದ್ಯೋಗಿಗಳು ಮತ್ತೊಂದೆಡೆ (ಇದು ಕಷ್ಟಪಟ್ಟು ಹುಡುಕಿದರೆ ಸಿಗಬಹುದಾದ ಆ ಕೆಲವು ಒಳ್ಳೆಯ ವ್ಯವಸ್ಥೆ,ಗಳು, ಸಂಸ್ಥೆಗಳು, ಉದ್ಯೋಗದಾತರು, ಮತ್ತು ಉದ್ಯೋಗಿಗಳನ್ನು ಹೊರತುಪಡಿಸಿ)

ಔಪಚಾರಿಕತೆಗಳು, ಪರಸ್ಪರ ಗೌರವ (ಕನಿಷ್ಠ ಎದುರಿಗಿದ್ದಾಗ), ಮತ್ತು ಆದೇಶಗಳ ರವಾನೆ-ಪಾಲನೆ ಈ ಸಂಬಂಧದ ಕೆಲವು ಗುಣಲಕ್ಷಣಗಳಾಗಿವೆ.

ಉದ್ಯೋಗದಾತರ ಕಡೆಯಿಂದ ಸಂವಹನವು ಸಾಮಾನ್ಯವಾಗಿ ಅಧಿಕೃತ ಸ್ವರೂಪದ್ದಾಗಿದ್ದು, ಕೆಳ ಸ್ಥಾನದಲ್ಲಿರುವುದರಿಂದ, ಉದ್ಯೋಗಿ ಇಷ್ಟ ಇದ್ದಾಗಲೀ ಕಷ್ಟ ಪಟ್ಟಾಗಲೀ ಮೇಲಿನ ಆದೇಶಗಳನ್ನು ಪಾಲಿಸಬೇಕಾಗುತ್ತದೆ.

ಮಾನವೀಯತೆ ಇಲ್ಲದೇ ನೌಕರರನ್ನು ದುಡಿಯುವಂತೆ ಮಾಡುವ ಹಲವಾರು ಮಾಲೀಕರು, ನೌಕರರ ಅಸಹಾಯಕತೆಯನ್ನು ಗುರುತಿಸಿ ಅವರನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.

ಉದ್ಯೋಗದಾತರ ಮತ್ತು ಉದ್ಯೋಗಿಗಳ ವೃತ್ತಿಪರ ಸಂಬಂಧದ ಗುಣಮಟ್ಟವು ಅವರ ನಡುವೆ ಪರಸ್ಪರ ವಿನಿಮಯಗೊಳ್ಳುವ ಮೌಲ್ಯವನ್ನು ಆಧರಿಸಿದೆ.

ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಗಮನಿಸಬೇಕಾದ ಆಸಕ್ತಿದಾಯಕ ಅಂಶವೆಂದರೆ, “ಸಂತೋಷದ ಕೆಲಸಗಾರರು 13% ಹೆಚ್ಚು ಉತ್ಪಾದಕತೆ ಹೊಂದಿರುತ್ತಾರೆ” ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನವು ಹೇಳಿದೆ.

3. ಸಹೋದ್ಯೋಗಿಗಳು:

ಕೋಟ್-ಧರಿಸಿ-ಕೈ-ಕಟ್ಟಿ-ನಿಂತ-ಮೂವರು-ಸಹೋದ್ಯೋಗಿಗಳ-ಕಾರ್ಟೂನ್-ಚಿತ್ರ

ವೃತ್ತಿಪರವಾಗಿ ಒಬ್ಬ ವ್ಯಕ್ತಿಯು ಸಹೋದ್ಯೋಗಿಗಳೊಡನೆ ಹೆಚ್ಚಿನ ಸಮಯ ಕಳೆಯುತ್ತಾರೆ. ಹಾಗಾಗಿ, ಈ ಬಾಂಧವ್ಯದ ಗುಣಮಟ್ಟ ತುಂಬಾ ಮುಖ್ಯವಾಗುತ್ತದೆ.

ಈ ಸಂಬಂಧದ ನಿರ್ವಹಣೆ ಕೆಲವು ಮುಖ್ಯ ಅಂಶಗಳನ್ನು ಒಳಗೊಂಡಿದೆ.

ಉದಾಹರಣೆಗೆ;

  • ಉದ್ಯೋಗದಿಂದ ಸ್ನೇಹ-ಸಮಬಂಧ ಇದೆಯೋ ಅಥವಾ ಮೊದಲೇ ಇದ್ದ ಸ್ನೇಹ/ಸಂಬಂಧದಿಂದಾಗಿ ಈಗ ಸಹೋದ್ಯೋಗಿಗಳೋ!
  • ವೈಯಕ್ತಿಕ ಜ್ಞಾನ ಕೌಶಲ್ಯಗಳ ಮಟ್ಟ ಹಾಗೂ ಗುರಿಗಳು.
  • ಕೆಲಸದ ಮೇಲಿನ ಆಸಕ್ತಿ ಹಾಗೂ ಪರಿಣತಿ.
  • ಸ್ಥಾನ-ಮಾನಗಳ ಪೈಪೋಟಿ.
  • ಕಂಪನಿ ಅಥವಾ ಸಂಸ್ಥೆಗಳು ಉದ್ಯೋಗಿಗಳನ್ನು ನೋಡಿಕೊಳ್ಳುವ ರೀತಿ.
  • ಸಹೋದ್ಯೋಗಿಗಳ ವೈಯಕ್ತಿಕ ಸಂಬಂಧಗಳ ಗುಣಮಟ್ಟ ಅಥವಾ ಅವುಗಳ ನಿರ್ವಹಣಾ ಕೌಶಲ್ಯ.

ಹೀಗೆ ಹತ್ತು ಹಲವು ಅಂಶಗಳಿರುವುದರಿಂದ, ಸಹೋದ್ಯೋಗಿಗಳ ಮದ್ಯೆ ಉತ್ತಮ ವೃತ್ತಿಪರ ಸಂಬಂಧಗಳನ್ನು ಕಾಣುವುದೇ ಅಪರೂಪ ಎನಿಸುತ್ತದೆ.

4. ಉತ್ಪಾದಕ, ಮಾರಾಟಗಾರ, ನಿರ್ಮಾಪಕ ಮತ್ತು ಗ್ರಾಹಕ:

ಯಶಸ್ವಿಯಾಗಿ-ಆನ್ಲೈನ್ ನಲ್ಲಿ-ಆಹಾರ-ಬುಕ್-ಮಾಡಿದ್ದನ್ನು-ಡೆಲಿವರಿ-ನೀಡಲು-ಡೆಲಿವರಿ-ಹುಡುಗ-ಸ್ಕೂಟರ್ ನಲ್ಲಿ-ವೇಗವಾಗಿ-ಬರುತ್ತಿರುವ-ಕಾರ್ಟೂನ್-ಚಿತ್ರ

ಇಂದು ಕಂಪನಿಗಳು ಅಥವಾ ಬ್ರ್ಯಾಂಡ್‌ಗಳು ತಮ್ಮ ಗ್ರಾಹಕರೊಂದಿಗೆ ಹಿಂದೆಂದಿಗಿಂತಲೂ ನಿಕಟ ಸ್ನೇಹಿತರಾಗಿವೆ.

ಏನು ಕಾರಣ? ಹೇಳಿ ನೋಡೋಣ!

ಬಹುಷಃ ನೀವು ಸರಿಯಾಗಿ ಊಹಿಸಿದ್ಧೀರಿ. ಅದುವೇ ಸಾಮಾಜಿಕ ಜಾಲತಾಣ.

ಮೊದಲೆಲ್ಲಾ ಕೇವಲ ಟಿವಿಯಲ್ಲಿ, ದೊಡ್ಡ ದೊಡ್ಡ ಬೋರ್ಡ್ ಗಳಲ್ಲಿ, ಕರಪತ್ರಗಳಲ್ಲಿ ಜಾಹೀರಾತುಗಳನ್ನು ನೋಡುವುದು ಅಥವಾ ಪತ್ರಿಕೆಗಳಲ್ಲಿ ಬ್ರ್ಯಾಂಡ್ ಉಪಸ್ಥಿತಿಯನ್ನು ಗುರುತಿಸುವುದು, ನಂತರ ಉತ್ಪನ್ನಗಳು ಅಥವಾ ಸೇವೆಗಳನ್ನು ಖರೀದಿಸುವುದು ವಾಡಿಕೆಯಂತಾಗಿತ್ತು.

ಆದರೆ ಇಂದು ಗ್ರಾಹಕರು ನೇರವಾಗಿ ಬ್ರಾಂಡ್‌ಗಳೊಂದಿಗೆ ಸಾಮಾಜಿಕ ಜಾಲತಾಣ ಅಥವಾ ಅವರ ವೆಬ್‌ಸೈಟ್‌ಗಳ ಮೂಲಕ ಸದಾ ಸಂಪರ್ಕದಲ್ಲಿದ್ದಾರೆ.

ರಿವ್ಯೂ ನೀಡುವುದು, ಲೈಕ್, ಶೇರ್, ಮತ್ತು ಕಾಮೆಂಟ್ ಮಾಡುವುದು ಗ್ರಾಹಕರ ಪ್ರತಿಕ್ರಿಯೆಯ ಪ್ರಮುಖ ಮಾರ್ಗವಾಗಿದೆ.

ಪ್ರತಿಯಾಗಿ, ಬ್ರ್ಯಾಂಡ್‌ಗಳು ಇಂತಹಾ ಆನ್ಲೈನ್ ಡಾಟಾಗಳ ಮೂಲಕ ತಮ್ಮ ಗ್ರಾಹಕರನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ, ಗ್ರಾಹಕರ ಬಯಕೆಗಳನ್ನು ಮೀರಿಸುವ ಹೊಸ ಉತ್ಪನ್ನ ಹಾಗೂ ಸೇವೆಯ ಆವಿಷ್ಕಾರ ಸಾಧ್ಯವಾಗುತ್ತದೆ. ಜೊತೆಗೆ ಹಳೆಯ ಪ್ರಕ್ರಿಯೆಗಳ ಕುರಿತ ಪ್ರಸ್ತುತ ಮತ್ತು ಭವಿಷ್ಯದ ಲೆಕ್ಕಾಚಾರಗಳನ್ನು ಸುಲಭವಾಗಿ ಮಾಡಲಾಗುತ್ತದೆ.

ಇನ್ನು, ಗ್ರಾಹಕರು ಹಿಂದೆಂದಿಗಿಂತಲೂ ತ್ವರಿತವಾಗಿ ತಮಗೆ ಬೇಕಾದ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಉತ್ಪನ್ನಗಳ ಅಥವಾ ಸೇವೆಗಳ ಕುರಿತ ತಮ್ಮ ಅನುಭವವನ್ನು ಬಹಿರಂಗವಾಗಿ ಹಂಚುವುದು ಇತರರಿಗೂ ಸಹಾಯಕವಾಗುವ ಮಹತ್ವದ ಬೆಳವಣಿಗೆಯಾಗಿದೆ.

ಅಗತ್ಯಕ್ಕಿಂತ ಹೆಚ್ಚಿನ ತೋರ್ಪಡಿಕೆ, ಸುಳ್ಳು ಆಮಿಷಗಳು, ದೊಡ್ಡ ಮಟ್ಟದ ಜಾಹೀರಾತಿನ ಮೂಲಕ ಬಯಕೆಯನ್ನು ಅಗತ್ಯವಾಗಿ ಬಿಂಬಿಸಿ ಉತ್ಪನ್ನ ಅಥವಾ ಸೇವೆಗಳನ್ನು ಖರೀದಿಸುವಂತೆ ಜಾಲ ರೂಪಿಸುವಂತಹಾ ಕೆಲಸಗಳೂ ನಡೆಯುತ್ತಿರುವುದು ಸುಳ್ಳಲ್ಲ.

ಹಾಗಾಗಿ, ಯಾವುದೇ ಜಾಹೀರಾತಿನ ಆಧಾರದ ಮೇಲೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಾದಲ್ಲಿ ನಿಮ್ಮ ನಿರ್ಧಾರಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಮರು ಪರಿಶೀಲಿಸುವುದು ಉತ್ತಮ.

ನೀವು ಇಲ್ಲಿಯವರೆಗೆ ತಾಳ್ಮೆಯಿಂದ ಓದುತ್ತಿದ್ದೀರಿ. ಅಂದರೆ ನಾವು ಉತ್ತಮ ಗ್ರಾಹಕ -ಸೇವಕ ಸಂಬಂಧವನ್ನು ಹೊಂದಿದ್ದೇವೆ, ಅಲ್ಲವೇ?

5. ಪಾಲುದಾರಿಕೆ:

ಸೂಟ್ಕೇಸ್-ಹಿಡಿದು-ಪರಸ್ಪರ-ಶೇಕ್-ಹ್ಯಾಂಡ್-ನೀಡುತ್ತಿರುವ-ವ್ಯಾಪಾರ-ಪಾಲುದಾರರ-ಕಾರ್ಟೂನ್-ಚಿತ್ರ

ನಿಸ್ಸಂದೇಹವಾಗಿ, ಇಲ್ಲಿ ನಾವು ವೃತ್ತಿಪರ ಅಥವಾ ವ್ಯಾಪಾರ ಪಾಲುದಾರರ ಬಗ್ಗೆ ಮಾತನಾಡುತ್ತಿದ್ದೇವೆ.

ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳಿರುತ್ತಾರೆ. ಕಷ್ಟಕರವಾದ ಅಥವಾ ವೈಯಕ್ತಿಕವಾಗಿ ಸಾಧ್ಯವಾಗದ ನಿರ್ದಿಷ್ಟ ವ್ಯಾಪಾರ ಗುರಿಯನ್ನು ಸಾಧಿಸಲು ಅವರು ಜೊತೆ ಸೇರುತ್ತಾರೆ.

ಪಾಲುದಾರಿಕೆಯ ಸ್ವರೂಪವು ವ್ಯಾಪಾರದ ಪ್ರಕಾರ ಅಥವಾ ಪಾಲುದಾರರ ಅಗತ್ಯತೆಗಳೊಂದಿಗೆ ಬದಲಾಗುತ್ತದೆ. ಒಬ್ಬರು ಸಂಪೂರ್ಣ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಇನ್ನೊಬ್ಬರು ಸಂಪೂರ್ಣ ಕೆಲಸವನ್ನು ನೋಡಿಕೊಳ್ಳಬಹುದು. ಇಲ್ಲವಾದರೆ, ಅವರು ಹಣ ಮತ್ತು ಶ್ರಮ ಎರಡನ್ನೂ ಸಮಾನವಾಗಿ ಹೂಡಿಕೆ ಮಾಡಬಹುದು.

ತಜ್ಞರು ಹೇಳುವಂತೆ, ಪೂರಕ ಸಂಬಂಧಗಳು ಇಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ– ಉತ್ತಮ ತಾಂತ್ರಿಕ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿ ಮತ್ತು ಇತರ ನಿರ್ವಹಣಾ ಕೌಶಲ್ಯಗಳನ್ನು ಹೊಂದಿದ ಸೃಜನಶೀಲ ಮರ್ಕೇಟರ್ ಉತ್ತಮ ಪಾಲುದಾರರಾಗಬಹುದು.

ಭಾಗ ಆ ದ- ಸಾರಾಂಶ:

ನಾವು ವೃತ್ತಿಪರ ಅಥವಾ ವೃತ್ತಿ ಆಧಾರಿತ ಸಂಬಂಧಗಳನ್ನು ತ್ವರಿತವಾಗಿ ಗಮನಿಸಿದ್ದೇವೆ

ಪ್ರಮುಖ ಅಂಶಗಳು;

  • ವೃತ್ತಿಪರ ಸಂಬಂಧಗಳ ಗುಣಮಟ್ಟವನ್ನು ನಿರ್ಲಕ್ಷಿಸಲಾಗುವುದಿಲ್ಲ. ಏಕೆಂದರೆ 1/3 ಕ್ಕಿಂತ ಹೆಚ್ಚು ಸಮಯವನ್ನು ವೃತ್ತಿಗಾಗಿ ನೀಡಲಾಗುತ್ತದೆ.
  • ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳ ಅನಗತ್ಯ ಮಿಶ್ರಣವು ಎರಡೂ ಕಡೆಯ ದುಃಖಕ್ಕೆ ಕಾರಣವಾಗಬಹುದು.
  • ಕಾನೂನು, ಔಪಚಾರಿಕತೆ ಮತ್ತು ಹಣದ ಒಳಗೊಳ್ಳುವಿಕೆ ಈ ಸಂಬಂಧದಲ್ಲಿ ಪ್ರಮುಖ ಪ್ರಭಾವಶಾಲಿ ಅಂಶಗಳಾಗಿವೆ.

ಈಗ ನಾವು ಕಾಳಜಿ ವಹಿಸಬೇಕಾದ ಸಂಬಂಧದ ಎರಡು ಪ್ರಮುಖ ಭಾಗಗಳನ್ನು ನೋಡಿದ್ದೇವೆ.

ಆದರೆ ನಮ್ಮ ದೈನಂದಿನ ಜೀವನದಲ್ಲಿ ಸಂಬಂಧಗಳು ಇವುಗಳಿಗೆ ಸೀಮಿತವಾಗಿದೆಯೇ?

ಬನ್ನಿ, ಇನ್ನು ಅಂತಿಮ ಭಾಗವನ್ನು ಅವಲೋಕಿಸೋಣ.

ಭಾಗ ಇ – ಇತರ ಸಂಬಂಧಗಳು:

ಸಂಬಂಧವು ಕೇವಲ ಮನುಷ್ಯರೊಂದಿಗಿನ ಸಂಪರ್ಕಕ್ಕೆ ಅಥವಾ ಬಾಂಧವ್ಯಕ್ಕೆ ಸೀಮಿತವಾಗಿಲ್ಲ. ಇದು ಪ್ರಾಣಿಗಳು ಮತ್ತು ನಿರ್ಜೀವ ವಸ್ತುಗಳನ್ನು ಒಳಗೊಂಡ ಪ್ರಕೃತಿಯ ನಂಟನ್ನೂ ಒಳಗೊಳ್ಳುತ್ತದೆ.

ಹಾಗಿದ್ದರೆ ಅವುಗಳ ಬಗ್ಗೆ ಬೇಗನೆ ಗಮನಹರಿಸೋಣ.

ರೆಡಿನಾ?

1. ಸಾಮಾಜಿಕ ಸಂಬಂಧಗಳು:

ತರಾತುರಿಯಲ್ಲಿ-ಓಡುತ್ತಿರುವ-ಜನರೊಂದಿಗೆ-ನಾಯಿಯು-ಓಡುತ್ತಿರುವ-ಸನ್ನಿವೇಶವನ್ನು-ಒಳಗೊಂಡ-ಕಾರ್ಟೂನ್-ಚಿತ್ರ-ಸಾಮಾಜಿಕ-ಸಂಬಂಧವನ್ನು-ಬಿಂಬಿಸುತ್ತಿದೆ

ಪರಸ್ಪರ ಅಕ್ಕ-ಪಕ್ಕದ ಮನೆಯವರ ಬಾಂಧವ್ಯದಿಂದ ತೊಡಗಿ, ವಿವಿಧ ಸಾಮಾಜಿಕ ಗುಂಪುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು, ವಿದ್ಯಾಭ್ಯಾಸ, ಉದ್ಯೋಗ, ಬಿಸಿನೆಸ್, ಧಾರ್ಮಿಕ, ರಾಜಕೀಯ, ಅಥವಾ ಇಂತಹಾ ಇನ್ನಾವುದೇ ಕಾರಣಗಳಿಂದ ಉಂಟಾಗಬಹುದಾದ ವಿದೇಶೀ ಸಂಬಂಧಗಳನ್ನೂ ಸಾಮಾಜಿಕ ಸಂಬಂಧಗಳು ಒಳಗೊಳ್ಳುತ್ತದೆ.

ಬೇರೆ ಎಲ್ಲಾ ಸಂಬಂಧಗಳಲ್ಲಿರುವಂತೆ ಇಲ್ಲಿಯೂ ವ್ಯತ್ಯಾಸಗಳಿವೆ, ಹಾಗೆಯೇ ಹೋಲಿಕೆಗಳೂ ಇವೆ.

ದೆಹಲಿ, ಬೆಂಗಳೂರಿಂತಂತಹಾ ಟಿಯರ್ ಒಂದರ ಶ್ರೇಣಿಯಲ್ಲಿ ಬರುವ ಪಟ್ಟಣಗಳಲ್ಲಿನ ಸಾಮಾಜಿಕ ಸಂಬಂಧಗಳಿಗೂ, ಹಳ್ಳಿಗಳಲ್ಲಿನ ಜನರ ಒಡನಾಟಕ್ಕೊ ವ್ಯತ್ಯಾಸಗಳಿವೆ.

ಇದಕ್ಕೆ ಕಾರಣಗಳೂ ನೂರಾರು ಇರಬಹುದು.

ಉದಾಹರಣೆಗೆ;

  • ಜೀವನ ಶೈಲಿ
  • ಉದ್ಯೋಗ, ವ್ಯಾಪಾರ-ವ್ಯವಹಾರಗಳಲ್ಲಿನ ವ್ಯತ್ಯಾಸ
  • ಜನಸಂಖ್ಯೆ
  • ಸ್ಥಳಾವಕಾಶ
  • ಸಂಸ್ಕೃತಿ, ಇತ್ಯಾದಿ.

ಸಮಾಜ ಎಂಬ ಪದವು – ಕುಟುಂಬ, ಸ್ನೇಹಿತರು, ಅಥವಾ ನೆಂಟರಿಷ್ಟರ ವ್ಯಾಪ್ತಿಯಿಂದ ಹೊರಗೆ ಎಂದು ಪರಿಗಣಿಸಲಾಗುವ ಜನರ ದೊಡ್ಡ ಗುಂಪನ್ನು ಸೂಚಿಸುವ ಕಾರಣ, ಸಾಮಾಜಿಕ ಸಂಬಂಧಗಳು ವಂಡರ್ಲಾ ಅಥವಾ ಅಂತಹಾ ಮೋಜಿನ ಕೇಂದ್ರಗಳಲ್ಲಿರುವ ಎತ್ತೆತ್ತಲೋ ತಿರುಗುವ ಆಟಗಳಂತೆ. ಕೆಲವೊಮ್ಮೆ ಒಂದಿಷ್ಟು ಜನ ಒಟ್ಟಿಗೆ ಒಂದೇ ಕಡೆ ಸಾಗಿದರೆ, ಇನ್ನೊಮ್ಮೆ ಒಬ್ಬೊಬ್ಬರು ಒಂದೊಂದು ಕಡೆ ಸಾಗುತ್ತಾರೆ.

ಶಾಲಾ ದಿನಗಳು ಸಾಮಾಜಿಕ ಸಂಪರ್ಕಗಳ ಬಗ್ಗೆ ಮುನ್ನುಡಿ ಬರೆಯಲು ಪ್ರಾರಂಭಿಸಿದರೂ “ಸಮಾಜ ವಿಜ್ಞಾನ” ಅಥವಾ “ನೈತಿಕ ವಿಜ್ಞಾನ” ಪುಸ್ತಕದಲ್ಲಿ ಕಲಿತದ್ದು ಸಮುದ್ರವನ್ನು ಫೋಟೋದಲ್ಲಿ ಕಂಡಂತೆ ಎಂದರೆ ಬಹುಷಃ ತಪ್ಪಲ್ಲವೇನೋ.

2. ವರ್ಚುವಲ್ (ಆನ್ಲೈನ್) ಸಂಬಂಧಗಳು:

ಆನ್ಲೈನ್ ನಲ್ಲಿ-ವಿಡಿಯೋ-ಚಾಟ್-ಮಾಡುತ್ತಿರುವ-ವ್ಯಕ್ತಿಗಳ-ಕಾರ್ಟೂನ್-ಚಿತ್ರ

ಇಂದು ಕಾಲ ಎಲ್ಲಿವರೆಗೆ ಬಂದಿದೆ ಅಂದರೆ ಆತ್ಮೀಯರು ನೇರವಾಗಿ ಭೇಟಿಯಾಗುವುದಕ್ಕಿಂತ ಹೆಚ್ಚಾಗಿ ವಿಡಿಯೋ ಕಾಲ್ನಲ್ಲೋ, ಮೆಸೇಜ್ನಲ್ಲೋ ಭೇಟಿಯಾಗೋದೇ ಹೆಚ್ಚು. (ಕೆಲವೊಮ್ಮೆ ಒಂದೇ ಮನೆಯಲ್ಲಿದ್ದರೂ)

ಇಲ್ಲಿ ಪರಿಗಣಿಸಬೇಕಾದ ವಿಷಯಗಳು;

  • ವ್ಯಕ್ತಿಗಳ ನಡುವೆ ಮೊದಲೇ ಪರಿಚಯವಿದ್ದು, ನಂತರ ಸಂಬಂಧವು ಆನ್ಲೈನ್ ನಲ್ಲಿ ಬೆಳೆದರೆ ನಿರ್ವಹಣೆ ಕೊಂಚ ಸುಲಭವೇನೋ. ಆದರೆ ಕೇವಲ ಆನ್ಲೈನ್ ನಿಂದ ಪರಿಚಯವಾಗಿ ನೇರವಾಗಿ ಭೇಟಿಯಾಗಿಲ್ಲದ ಸಂಧರ್ಭಗಳಲ್ಲಿ ವೈಯಕ್ತಿಕ ಮತ್ತು ಕೆಲವೊಂದು ವ್ಯಾವಹಾರಿಕ ಸಂಭಂಧಗಳ ಕುರಿತ ಮಹತ್ವದ ನಿರ್ಧಾರಗಳ ಮರು ಪರಿಶೀಲನೆ ಅಗತ್ಯ.
  • ವರ್ಚುವಲ್ ಸಂಬಂಧಗಳ ಪ್ರಾಮುಖ್ಯತೆ, ಉದ್ದೇಶ ಮತ್ತು ತೀವ್ರತೆಯು ಅವುಗಳು ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ನಿರ್ಧರಿಸುತ್ತದೆ.
  • ಕೇವಲ ಆನ್ಲೈನ್ ಪರಿಚಯದ ಆಧಾರದಲ್ಲಿ ಒಬ್ಬ ವ್ಯಕ್ತಿಯ ಅಥವಾ ಸಂಬಂಧಗಳ ಬಗ್ಗೆ ತ್ವರಿತ ನಿರ್ಣಯಗಳೂ ತಪ್ಪಾಗಬಹುದು.
  • ಇಂತಹಾ ಸಂಬಂಧಗಳಲ್ಲಿ ಅತಿಯಾಗಿ ತೊಡಗಿಸಿಕೊಳ್ಳುವುದು ಸಂವಹನದಂತಹಾ ಕೌಶಲ್ಯಗಳ ಜೊತೆಗೆ ಇತರ ಸಂಬಂಧಗಳ ಮೇಲೂ ಆಳವಾದ ಪರಿಣಾಮ ಬೀರಬಹುದು.

ಸಂಬಂಧಗಳ ಮೇಲೆ ಸಾಮಾಜಿಕ ಮಾಧ್ಯಮದ ಪರಿಣಾಮಗಳ ಕುರಿತಾದ ಲೇಖನದಲ್ಲಿ, mindbodygreen.com ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಉಲ್ಲೇಖಿಸಿದೆ. ಅದರ ಪ್ರಕಾರ;

ಒಂಟಿಯಾಗಿರುವವರಿಗೆ ಮತ್ತು ಹೊಸ ಸಂಬಂಧಗಳಿಗೆ ಕಾಲಿಡುವವರಿಗೆ ಸಾಮಾಜಿಕ ಮಾಧ್ಯಮಗಳು ಸಹಾಯಕವಾಗಿವೆ.

ಟಿಂಡರ್ ಸಮೀಕ್ಷೆಯ ಪ್ರಕಾರ, “ಆನ್‌ಲೈನ್ ಡೇಟಿಂಗ್ ವಿಶೇಷವಾಗಿ LGBTQ+ ಸಮುದಾಯಕ್ಕೆ ಸಹಾಯಕವಾಗಬಹುದು. ಸಮೀಕ್ಷೆಯನ್ನು ತೆಗೆದುಕೊಂಡ 1000 LGBTQ+ ವಯಸ್ಕರಲ್ಲಿ, 80% ಜನರು ಆನ್‌ಲೈನ್ ಡೇಟಿಂಗ್ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳು ತಮ್ಮ ಸಮುದಾಯಕ್ಕೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. 52% ಜನರು ಅವುಗಳು ಹೆಚ್ಚು ಆರಾಮದಾಯಕವೆಂದು ಭಾವಿಸುತ್ತಾರೆ ಮತ್ತು 42% ಜನರು ತಮ್ಮ ಗುರುತನ್ನು ಅನ್ವೇಷಿಸಲು ಸುಲಭ ಎಂದು ಹೇಳಿದ್ದಾರೆ.

ವರ್ತನೆಯ ಚಿಕಿತ್ಸಕ ಚಾಮಿನ್ ಅಜ್ಜನ್. M.S., LCSW. A-CBT ಹೇಳುವುದೇನೆಂದರೆ, “ನೀವು ಹೆಚ್ಚಾಗಿ ನೋಡುವುದು ಕ್ಯುರೇಟೆಡ್ ಮತ್ತು ಫಿಲ್ಟರ್ ಮಾಡಲಾದ ಪೋಸ್ಟ್‌ಗಳಾಗಿವೆ, ಅದು ಸಂಬಂಧ ಏನು ಎಂಬುದರ ಅವಾಸ್ತವಿಕ ಚಿತ್ರಗಳನ್ನು ಮಾತ್ರ ಎತ್ತಿ ತೋರಿಸುತ್ತದೆ“.

3. ಪ್ರಾಣಿಗಳೊಂದಿಗಿನ ಬಾಂಧವ್ಯ:

ನಾಯಿಯು-ತನ್ನ-ಯಜಮಾನನೊಡನೆ-ಯೋಗಾಸನ-ಮಾಡುತ್ತಿರುವ-ಕಾಟೂನ್-ಚಿತ್ರ

ನಿಮ್ಮ ಮನೆಯಲ್ಲಿ ಸಾಕುಪ್ರಾಣಿಗಳಿವೆಯೇ?

ಇದ್ದರೆ ಈ ವಿಷಯಗಳನ್ನು ಗಮನಿಸಿರುತ್ತೀರಿ.

‘ಇಲ್ಲದಿದ್ದರೆ’, ಪರವಾಗಿಲ್ಲ ಬಿಡಿ.

ಜನರು ಸಾಕುಪ್ರಾಣಿಗಳನ್ನು ಏಕೆ ಪ್ರೀತಿಸುತ್ತಾರೆ (ಕೆಲವೊಮ್ಮೆ ಮನುಷ್ಯರಿಗಿಂತ ಹೆಚ್ಚು) ಎಂದು ಯೋಚಿಸಿದ್ದೀರಾ?

ಪ್ರಾಣಿಗಳನ್ನು ತಮ್ಮ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳುವುದು ಮನುಷ್ಯರ ಸ್ವಭಾವ. ಉದಾಹರಣೆಗೆ, ಜನರು ಇಲಿಗಳನ್ನು ಹಿಡಿಯಲು ಬೆಕ್ಕುಗಳನ್ನು ಸಾಕುತ್ತಾರೆ ಮತ್ತು ಸಾಕುವವರನ್ನು ಎಚ್ಚರಿಸಲು ನಾಯಿಗಳನ್ನು ಸಾಕುತ್ತಾರೆ.

ಕೇವಲ ಇಷ್ಟೇ ಸೀಮಿತ ಆಲೋಚನೆಯುಳ್ಳ ಮನೆಗಳಲ್ಲಿ ಪ್ರಾಣಿಗಳು ಯಂತ್ರಗಳಂತಿರುತ್ತವೆ. ಒಂದರ್ಥದಲ್ಲಿ ಹೇಳುವುದಾದರೆ, ‘ಅಂಥಹಾ ಮನೆಗಳಲ್ಲಿ ಇರುವವರೆಲ್ಲಾ ಕೇವಲ ಪ್ರಾಣಿಗಳೇ’.

ಕೆಲವು ಮನೆಗಳಲ್ಲಿ ಪ್ರಾಣಿಗಳು ಶೋಕಿಗಿದ್ದರೆ, ಇನ್ನು ಹಲವಾರು ಮನೆಗಳಲ್ಲಿ ಮನೆ ಸದಸ್ಯರಂತಿರುತ್ತವೆ.

ಇದು ಸರಿ, ಅದು ತಪ್ಪು ಎಂದು ನಿರ್ಣಯಿಸಲು ಸುಲಭಕ್ಕೆ ಸಾಧ್ಯವಿಲ್ಲ ತಾನೇ.

ಆದರೆ “ಬೇರೆ ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲು ವಿಫಲರಾದ ಕೋಪ-ತಾಪಗಳನ್ನು ತೀರಿಸಿಕೊಳ್ಳುವ ಆಯ್ಕೆಗಾಗಿ ಸಾಕುಪ್ರಾಣಿಗಳು ಎಂದಾಗಬಾರದು”, ಎಂಬ ಮನೋಭಾವ ಅಷ್ಟೇ

4. ಪ್ರಕೃತಿಯೊಂದಿಗೆ ಸಂಬಂಧ:

ಶರಾವತಿ-ನದಿಯನ್ನು-ಒಳಗೊಂಡ-ಕರ್ನಾಟಕದ-ಮಲೆನಾಡ-ಬೆಟ್ಟಗಳ-ಫೋಟೋ-ಪ್ರಕೃತಿಯ-ಜೊತೆಗಿನ -ಸಂಬಂಧದ-ಮಹತ್ವವನ್ನು-ಸಾರುವಂತಿದೆ

ಪ್ರಕೃತಿಯೊಂದಿಗೆ ನಿಮ್ಮ ಸಂಬಂಧವೇನು?

ಇದು ತಾತ್ವಿಕವಾಗಿ ಅಥವಾ ಫಿಲೋಸಫಿಯಾಗಿ ಧ್ವನಿಸುತ್ತದೆ. ಆದರೆ ಆ ಅರ್ಥದಲ್ಲಿ ಪರಿಗಣಿಸಬೇಡಿ, ಏಕೆಂದರೆ ಆ ಪದವು ಅದರ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿದೆ.

ನಾವು ಉಸಿರಾಡುವ ಗಾಳಿ ಅಥವಾ ವಾಸಿಸುವ ಭೂಮಿ ಸೇರಿದಂತೆ ಪಂಚ ತತ್ವಗಳು ನಾವು ಈಗಾಗಲೇ ಪ್ರಕೃತಿಯ ಭಾಗವೆಂದು ಹೇಳುತ್ತಿವೆ. ಹಾಗಾಗಿ, ಹೊಸ ಸಂಬಂಧವನ್ನು ರಚಿಸುವ ಅಗತ್ಯವಿಲ್ಲ,

ಅತಿಯಾದ ಒತ್ತಡ ಅಥವಾ ಆತಂಕದ ಹಿಂದಿನ ಒಂದು ಕಾರಣವೆಂದರೆ ಪ್ರಕೃತಿಯೊಂದಿಗಿನ ನಮ್ಮ ಸಂಬಂಧದ ಅರಿವಿಲ್ಲದಿರುವುದು.

ನೀವು ಎಂದಾದರೂ ಗಿರಿಧಾಮಕ್ಕೆ ಹೋಗಿದ್ದರೆ, ನಾನು ಏನು ಮಾತನಾಡುತ್ತಿದ್ದೇನೆಂದು ನಿಮಗೆ ತಿಳಿದಿರಬಹುದು. ನಿಮ್ಮ ಉಸಿರು ಅಥವಾ ನಿಮ್ಮ ಸುತ್ತಲಿನ ಪರಿಸರಕ್ಕೆ ಗಮನ ಕೊಡುವ ಮೂಲಕ ನೀವು ಈಗಲೇ ಇದನ್ನು ಪರಿಶೀಲಿಸಬಹುದು.

ಪ್ರಕೃತಿಯಲ್ಲಿ ಸಮಯ ಕಳೆಯುವ ವ್ಯಕ್ತಿಯನ್ನು ಜನರು ಒಂಟಿತನ ಅಥವಾ ಅಭದ್ರತೆಯೊಂದಿಗೆ ಹೋಲಿಸುತ್ತಾರೆ. ಆದರೆ ಅದು ಯಾವಾಗಲೂ ನಿಜವಾಗದಿರಬಹುದು. ಬದಲಾಗಿ, ಅವನು/ಅವಳು “ಸಂಬಂಧದಲ್ಲಿ ಅಭದ್ರತೆಯನ್ನು ಹೇಗೆ ಜಯಿಸುವುದು” ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರಬಹುದು.

ದಿನನಿತ್ಯದ ಹಲವಾರು ಸವಾಲುಗಳು, ಗೋಳುಗಳಿಂದ ಟ್ರಾಫಿಕ್ ಜಾಮ್ ನಂತೆ ತಲೆಯಲ್ಲಿ ಆಲೋಚನೆಗಳು ಜಾಮ್ ಆಗುತ್ತವೆ. ಅಂತಹಾ ಸಂದರ್ಭದಲ್ಲಿ ಪರಿಸರದ ಜೊತೆಗಿನ ಸಂಬಂಧವನ್ನು ಗಮನಿಸುವುದು ಸ್ವಲ್ಪ ಸಮಯಕ್ಕಾದರೂ ಮನಸ್ಸಿನ ಶಾಂತಿಗೆ ಒಂದು ಸುಲಭ ದಾರಿಯಾಗಬಹುದು.

5. ವಸ್ತುಗಳೊಂದಿಗೆ ಭಾವನಾತ್ಮಕ ಸಂಬಂಧ:

ಒಬ್ಬ-ವ್ಯಕ್ತಿ-ಕಾರನ್ನು-ತೊಳೆದು-ಶುಚಿಗೊಳಿಸುವ-ಜೊತೆಗೆ-ಬಟ್ಟೆಯಿಂದ-ವರಸಿ-ಹೆಚ್ಚಿನ-ಕಾಳಜಿ-ವಹಿಸುವ-ಗುಣವನ್ನು-ತೋರಿಸುವ-ಕಾರ್ಟೂನ್-ಚಿತ್ರ

ಸಂಬಂಧಗಳ ಎಲ್ಲಾ ಮುಖ್ಯ ವಿಧಗಳನ್ನು ಗಮನಿಸಿ ಈ ಒಂದನ್ನು ಬಿಡಲು ಸಾಧ್ಯವೇ!

ಬಾಲ್ಯದಲ್ಲಿ, ನೆಚ್ಚಿನ ಪೆನ್ಸಿಲ್, ರಬ್ಬರ್, ಪೆನ್ ಅಥವಾ ಬಟ್ಟೆ, ಮಕ್ಕಳ ಮುಖದಲ್ಲಿ ನಗುವನ್ನು ತರುತ್ತವೆ. ನಂತರ ಬೆಳೆದು ದೊಡ್ಡವರಾಗುತ್ತಾ ಹೋದಂತೆ ವಾಹನಗಳು, ಕನಸಿನ ಮನೆ ಅಥವಾ ಆಸ್ತಿ, ಆಭರಣಗಳು, ಇತ್ಯಾದಿ.

ನಾವು ಈ ಅಂಶವನ್ನು “ಸಾಮಾನ್ಯವೆಂದು” ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ಅಭಿರುಚಿ, ಆದ್ಯತೆಗಳು, ಮತ್ತು ಅವಶ್ಯಕತೆಗಳನ್ನು ಹೊಂದಿದ್ದಾರೆ.

ಉದಾಹರಣೆಗೆ– ಕೆಲವರಿಗೆ ತಮ್ಮ ವಾಹನಗಳು ಕೇವಲ ಪ್ರಯಾಣದ ಅವಶ್ಯಕತೆಗಷ್ಟೇ ಸೀಮಿತವಾಗಿದ್ದು ಅದಕ್ಕೆ ಅತಿಯಾದ ಗಮನ ಅಗತ್ಯವಿಲ್ಲ ಎನ್ನುತ್ತಾರೆ. ಇನ್ನು ಕೆಲವರಿಗೆ ತಮ್ಮ ವಾಹನಕ್ಕೆ ಸಣ್ಣ ಸ್ಕ್ರಾಚ್ ಆದರೂ ಅವರ ಹೃದಯದಲ್ಲಿ ದೊಡ್ಡ ಬಿರುಕು ಬಿಟ್ಟಿರುತ್ತದೆ.

ಭಾಗ ಇ ಯ ಸಾರಾಂಶ:

ವೈಯಕ್ತಿಕ ಹಾಗೂ ವೃತ್ತಿಪರದಂತೆಯೇ ಮುಖ್ಯವಾದ ಇತರ ಸಂಬಂಧಗಳ ಕುರಿತು ಭಾಗ-ಇ ಯಲ್ಲಿ ಗಮನ ಹರಿಸಿದ್ದೇವೆ.

ಗಮನಿಸಬೇಕಾದ ಪ್ರಮುಖ ಅಂಶಗಳು;

  • ಸಾಮಾಜಿಕ ಸಂಪರ್ಕಗಳು ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಆನ್ಲೈನ್ ಮಾಧ್ಯಮಗಳ ಸರಿಯಾದ ಬಳಕೆ ಸಂಬಂಧಗಳ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿ.
  • ಪ್ರಾಣಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಅರಿತುಕೊಳ್ಳುವುದು ಸಂತೋಷ ಪಡಲು ಸುಲಭ ಉಪಾಯಗಳಾಗಬಹುದು.

ಇಲ್ಲಿಯವರೆಗೆ ನೀವು ಎಡೆಬಿಡದೇ ಓದಿದ್ದರೆ, ಅಬ್ಬಬ್ಬಾ ಎಂದನಿಸಿರಬಹುದು.

ಹೌದೇ?

ಸಂಬಂಧಗಳ ನಿರ್ವಹಣೆ ಎನ್ನುವಾಗ ಮುಖ್ಯವಾದ ವಿಧಗಳು, ಅವುಗಳ ಲಕ್ಷಣ, ದೃಷ್ಟಿಕೋನ ಬದಲಾದಂತೆ ಪರಿಸ್ಥಿತಿಗಳಲ್ಲಾಗುವ ಬದಲಾವಣೆ- ಹೀಗೆ ಹಲವಾರು ವಿಚಾರಗಳನ್ನು ಪರಿಗಣಿಸುವುದು ಮುಖ್ಯವಾಯಿತು.

ಎಲ್ಲಾ ಸಂಬಂಧಗಳ ಸ್ವರೂಪವನ್ನು ತಿಳಿದುಕೊಳ್ಳುವುದರ ಜೊತೆಗೆ, ಅವುಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಸಂಘರ್ಷಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸುವುದು ಸಹ ಮುಖ್ಯವಾಗಿದೆ.

ಆ ವಿಚಾರದಲ್ಲಿ ಈ ಲೇಖನದ ಮೂಲಕ ನಾವಿಬ್ಬರೂ ಸಾಧ್ಯವಾದಷ್ಟು ಮಟ್ಟಿಗೆ ಯಶಸ್ಸು ಕಂಡಿದ್ದೇವೆ ಅನಿಸುತ್ತದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):

ತೀರ್ಮಾನ:

ಇಂದು ನೀವು ಮತ್ತು ನಾನು ನಮ್ಮ ದೈನಂದಿನ ಜೀವನದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಪ್ರಭಾವ ಬೀರುವ ಬಹುತೇಕ ಎಲ್ಲಾ ಪ್ರಮುಖ ಸಂಬಂಧಗಳ ಬಗ್ಗೆ ಗಮನಹರಿಸಿದ್ದೇವೆ.

ಪ್ರತಿಯೊಬ್ಬರೂ ಪ್ರತಿಯೊಂದು ಸಂಬಂಧದಿಂದ ಸುತ್ತುವರೆದಿಲ್ಲ. ಆದರೆ ಇರುವ ಸಂಬಂಧಗಳ ಸಮರ್ಥ ನಿರ್ವಹಣೆಯನ್ನು ಕಡೆಗಣಿಸಿದರೆ ಸಂತೋಷದಿಂದ ಬದುಕಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಮಗ್ರ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಸಂಬಂಧಗಳನ್ನು ವೈಯಕ್ತಿಕ, ವೃತ್ತಿಪರ ಮತ್ತು ಸಾಮಾನ್ಯ ಸಂಬಂಧಗಳೆಂದು ವರ್ಗೀಕರಿಸುವುದು ಸ್ಪಷ್ಟತೆಯನ್ನು ತರಲು ಸುಲಭವಾದ ಮಾರ್ಗವಾಗಿದೆ. ಅಂತಹ ಸ್ಪಷ್ಟತೆಯು ಪ್ರತಿ ಸಂಬಂಧದ ಪ್ರಾಮುಖ್ಯತೆ ಮತ್ತು ಅದರ ಪರಸ್ಪರ ಅವಲಂಬನೆಗಳನ್ನು ಗುರುತಿಸಲು ಪ್ರಮುಖವಾಗಿ ಸಹಕರಿಸುತ್ತದೆ.

ಅಂತಿಮವಾಗಿ ಹೇಳುವುದಾದರೆ, ಇಲ್ಲಿಯವರೆಗೆ ಎಚ್ಚರಿಕೆಯಿಂದ ಓದಿದ ಮತ್ತು ಕಲಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗೆ (ನಿಮ್ಮಂತೆ) ಸಂಬಂಧಗಳನ್ನು ನಿರ್ವಹಿಸುವುದು ದೊಡ್ಡ ಕಲ್ಪನೆಗೂ ಮೀರಿದ ಸವಾಲೇನಲ್ಲ.

ಈ ಲೇಖನಕ್ಕೆ ಸಂಬಂಧಿಸಿದಂತೆ ನೀವು ಸೇರಿಸಲು ಬಯಸುವ ಅಂಶಗಳೇನಾದ್ರೂ ಇವೆಯೇ?

ಹೌದು ಎಂದಾದರೆ, ಕೆಳಗೆ ಕಾಮೆಂಟ್ ಮಾಡಿ ಇದರಿಂದ ನೀವು ಇತರ ಓದುಗರಿಗೂ ಸಹಾಯ ಮಾಡಿದಂತಾಗುತ್ತದೆ.

ಪ್ರೀತಿಪಾತ್ರರೊಂದಿಗೆ ಶೇರ್ ಮಾಡಲು ಮರೆಯದಿರಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Leave a Reply

Your email address will not be published. Required fields are marked *

Scroll to Top