“ರೋಗ ನೀ ಹೋಗ” ಎಂದು ರೋಗಿಗಳು ಗುಣಮುಖರಾಗಲು ಕಾರಣವಾಗುವುದರ ಜೊತೆಗೆ, ಡಾ। ಬಿ. ವಿನಯಚಂದ್ರ ಶೆಟ್ಟಿ ಆವರಂತಹಾ ತಜ್ಞ ವೈದ್ಯರು ನಮಗೆ ಹೇಗೆ ಸಹಾಯ ಮಾಡುತ್ತಾರೆ?
ಅದು ಅವರ ಅನುಭವ, ಜ್ಞಾನ ಮತ್ತು ಪರಿಣತಿಯನ್ನು ಹಂಚಿಕೊಳ್ಳುವ ಸಮಾಜಮುಖೀ ಶಿಕ್ಷಕರಾಗುವ ಮೂಲಕ ಎಂದರೆ ತಪ್ಪಲ್ಲ.
ಇಲ್ಲಪ್ಪಾ. “ರೋಗಿ ಬಯಸಿದ್ದೂ ಹಾಲು, ವೈದ್ಯರು ನೀಡಿದ್ದೂ ಹಾಲು” ಎಂಬುದು ಎಲ್ಲಾ ಸಂಧರ್ಭಗಳಲ್ಲಿ ಸರಿಯಾದೀತೇ!
ಹಲವು ಬಾರಿ ವೈದ್ಯರು ನೀಡುವ ಕಹಿಯನ್ನು ಸೇವಿಸಲೇಬೇಕಾಗುತ್ತದೆ. ಅದು ಔಷಧಿಯ ಮೂಲಕವಾಗಿರಬಹುದು ಅಥವಾ ಸಲಹೆಯ ರೂಪದಲ್ಲಿರಬಹುದು.
ನೀವು ಸೂಕ್ಷ್ಮವಾಗಿ ಗಮನಿಸಿದರೆ, ವೈದ್ಯರೊಂದಿಗೆ ಮಾತನಾಡುವಾಗ ಅನೇಕ ಪೂರಕ ಕಲಿಕೆಗಳನ್ನು ಸೆರೆಹಿಡಿಯಬಹುದು.
ಕಲಿಕೆಗಾಗಿ ವೈದ್ಯರನ್ನು ಹಿಂಬಾಲಿಸುವ ಪ್ರಯೋಜನಗಳನ್ನು ವಿವರಿಸುವ ಪೋಸ್ಟ್‌ನಲ್ಲಿ, pharmashot.com ವೆಬ್‌ಸೈಟ್ ಆಸಕ್ತಿದಾಯಕ ವಿಷಯವನ್ನು ಉಲ್ಲೇಖಿಸಿದೆ.
“ವೈದ್ಯರನ್ನು ಹಿಂಬಾಲಿಸಿದರೆ, ಅವರು ತಾಂತ್ರಿಕ ವ್ಯಕ್ತಿಯಿಂದ ಸಾಂತ್ವನ ನೀಡುವ ಮಾನವನಾಗಿ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ನೀವು ನೋಡುತ್ತೀರಿ”.
ದಯವಿಟ್ಟು ಗಮನಿಸಿ:
ಈ ಪೋಸ್ಟ್ ವೈಯಕ್ತಿಕಗೊಳಿಸಿದ ಮಾರ್ಗದರ್ಶಿ, ವೈದ್ಯಕೀಯ ಸಲಹೆ ಅಥವಾ ನಿರ್ದಿಷ್ಟ ರೋಗಗಳಿಗೆ ಪರಿಹಾರವಲ್ಲ. ಬದಲಿಗೆ, ಇದು ಆಯುರ್ವೇದ ತಜ್ಞರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಿದೆ.
ಇದು ಆಯುರ್ವೇದ ಎಂಬ ವಿಷಯದ ಜೊತೆಗೆ ಒಬ್ಬ ವೈದ್ಯರಿಂದ ಪಡೆಯಬಹುದಾದ ಸಹಾಯಕ ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡಿದೆ. ಇನ್ನಷ್ಟು ತಿಳಿಯಲು SharingShree ಕನ್ನಡದ ಹಕ್ಕು ನಿರಾಕರಣೆ (Disclaimer) ಓದಿ.
ಇದು SharingShree ಇಂಗ್ಲಿಷ್ ವೆಬ್ಸೈಟ್ ನಲ್ಲಿ ಪ್ರಕಟಗೊಂಡ ಲೇಖನದ ಕನ್ನಡ ಭಾಷಾಂತರವಾಗಿದೆ.
ಸರಿ. ಪ್ರಶ್ನೋತ್ತರಗಳನ್ನು ಪ್ರಾರಂಭಿಸೋಣ
ಆದರೆ ಅದಕ್ಕೂ ಮೊದಲು, ಈ ಪೋಸ್ಟ್‌ನ ಅತಿಥಿಯ ಬಗ್ಗೆ ನಾನು ನಿಮಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ.
ಡಾ। ಬಿ. ವಿನಯಚಂದ್ರ ಶೆಟ್ಟಿ
MD. (Ayu), PhD
ಆಯುರ್ವೇದ ಸಲಹೆಗಾರರು ಹಾಗೂ ಶಿಕ್ಷಣತಜ್ಞರು
ಡಾ। ಬುದುನಾರ್ ವಿನಯಚಂದ್ರ ಶೆಟ್ಟಿಯವರು ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ‘ರಸಶಾಸ್ತ್ರ’ ವಿಷಯದಲ್ಲಿ MD ಮತ್ತು ಜೈಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದದಿಂದ ಅದೇ ವಿಷಯದಲ್ಲಿ PhD ಸಹಿತ ಬಲವಾದ ಶೈಕ್ಷಣಿಕ ಅಡಿಪಾಯವನ್ನು ಹೊಂದಿದ್ದಾರೆ. ಅವರು ಭಾರತದ RGUHS ನಿಂದ ಗುರುತಿಸಲ್ಪಟ್ಟ PG ಮತ್ತು PhD ಮಾರ್ಗದರ್ಶಿಯೂ ಆಗಿದ್ದಾರೆ.
ಡಾ। ವಿನಯಚಂದ್ರ ಸರ್ ಅವರು ಆಯುರ್ವೇದ ವಲಯದಲ್ಲಿ ಹೆಲ್ತ್‌ಕೇರ್ ಪ್ರೊಫೆಷನಲ್ ಆಗಿದ್ದು, ಅಭ್ಯಾಸಕಾರರಾಗಿ, ಶಿಕ್ಷಣತಜ್ಞರಾಗಿ ಮತ್ತು ಸಂಶೋಧಕರಾಗಿ 2 ದಶಕಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.
ವೃತ್ತಿ ಅವಲೋಕನ:
- ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 2013 ರಿಂದ 2019 ರವರೆಗೆ ಸಿಎಂಒ (CMO).
- 2019 ರಿಂದ ಕ್ಷೇಮಧಾಮ ಆಯುರ್ವೇದ ಆಸ್ಪತ್ರೆ ಬ್ರಹ್ಮಾವರ, ಉಡುಪಿಯ ವೈದ್ಯಕೀಯ ನಿರ್ದೇಶಕರಾಗಿದ್ದಾರೆ.
- 2020 ರಿಂದ ಕುಂದಾಪುರದ ಆಯುಷ್ಧಾಮ ಆರ್ಥೋ ನ್ಯೂರೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
- ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು, ಮೂಡುಬಿದಿರೆ, ಕರ್ನಾಟಕ ಇಲ್ಲಿ ರಸಶಾಸ್ತ್ರಮತ್ತು ಭೈಶಜ್ಯ ಕಲ್ಪನಾ ವಿಭಾಗದಲ್ಲಿ ಡಾಕ್ಟರೇಟ್ (PhD) ಹಾಗೂ ಸ್ನಾತಕೋತ್ತರ ಶಿಕ್ಷಕ/ಮಾರ್ಗದರ್ಶಿಯಾಗಿದ್ದಾರೆ.
- RGUHS ಬೆಂಗಳೂರು, KLE ವಿಶ್ವವಿದ್ಯಾಲಯ NIA ಜೈಪುರ್, ಅಮೃತ ವಿಶ್ವವಿದ್ಯಾಲಯ ಕೊಲ್ಲಂ ಮತ್ತು ಮಹಾರಾಷ್ಟ್ರ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ KUHS ತ್ರಿಸೂರ್, NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹೈದರಾಬಾದ್‌ನಲ್ಲಿ ಪದವಿಪೂರ್ವ, ಸ್ನಾತಕೋತ್ತರ ಮತ್ತು ಪಿಎಚ್‌ಡಿಗೆ ಪರೀಕ್ಷಕರೂ ಆಗಿದ್ದಾರೆ.
- ಪ್ರಸ್ತುತ, Doctors’ APCC Spcietyಯ ಅಧ್ಯಕ್ಷರಾಗಿದ್ದಾರೆ. ಇದು ಭಾರತದ ಮೊದಲ ಆರೋಗ್ಯ ಆರ್ಥಿಕ ಸೇವೆ (Healthcare Financial Services) ಒದಗಿಸುವ ಸಹಕಾರಿ ಸಂಸ್ಥೆಯಾಗಿದೆ.
ಪ್ರಶ್ನೆ 1: “ಹೇಗಿದ್ದೀರಿ” ಎಂದು ಎಷ್ಟು ರೋಗಿಗಳು ನಿಮ್ಮನ್ನು ಕೇಳಿದ್ದಾರೆ? ನೀವು ಅದನ್ನು % ನಲ್ಲಿ ಹೇಳಬಹುದಾದರೆ, ಸರಿಸುಮಾರು ಎಷ್ಟು ಶೇಖಡಾ ಜನರಿರಬಹುದು??
ಉತ್ತರ: ಬಹಳ ಕಡಿಮೆ. ಬಹುಷಃ ಇದು ಸಾಮಾಜಿಕ ಸಭ್ಯತೆ ಅಲ್ಲ ಎಂದು ಅವರು ಭಾವಿಸಿರಬಹುದು.
ಸುಮಾರು 5% ರೋಗಿಗಳು “ನೀವು ಹೇಗಿದ್ದೀರಿ” ಎಂದು ಕೇಳುತ್ತಾರೆ.
ಪ್ರ2: ವೈದ್ಯಕೀಯ ವೃತ್ತಿಗೆ ನೀವು ಆಯುರ್ವೇದವನ್ನು ಆಯ್ಕೆ ಮಾಡಲು ಕಾರಣವೇನು?
ಉ: ನಾನು 1993 ರಲ್ಲಿ ಆಯುರ್ವೇದ ಕೋರ್ಸ್ ಅನ್ನು ಆರಿಸಿಕೊಂಡೆ. ಆ ಸಮಯದಲ್ಲಿ ಈ ವಲಯವು ಸ್ಯಾಚುರೇಟೆಡ್ ಆಗಿರಲಿಲ್ಲ ಮತ್ತು ಅರ್ಹ ವೈದ್ಯರ ಸಂಖ್ಯೆಯು ಸಮಾಜದ ಅಗತ್ಯಗಳನ್ನು ಪೂರೈಸುವಷ್ಟು ಇರಲಿಲ್ಲ.
ಪ್ರ3: ಆಯುರ್ವೇದ ಮತ್ತು ಉಳಿದ ಚಿಕಿತ್ಸಾ ವಿಧಾನಗಳ ನಡುವಿನ ಪ್ರಮುಖ ವ್ಯತ್ಯಾಸಗಳು ಯಾವುವು?
ಉ: ಆಯುರ್ವೇದದ ಮೂಲಭೂತ ವಿಧಾನವು ವಿಶಿಷ್ಟವಾಗಿದೆ.
ಆಯುರ್ವೇದವು ಪ್ರಕೃತಿ ಮತ್ತು ಮನುಷ್ಯರ ಅನ್ಯೋನ್ಯವಾದ ಅವಿನಾಭಾವ ಸಂಬಂಧವನ್ನು ನಂಬುತ್ತದೆ. ಪ್ರಕೃತಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮತ್ತು ಅನಾರೋಗ್ಯಕ್ಕೆ ಈ ಸಂಬಂಧ ನೇರವಾಗಿ ಕಾರಣವಾಗಿದೆ.
ಮುಖ್ಯವಾಗಿ ರೋಗಗಳ ಚಿಕಿತ್ಸೆಯ ಸಂಪೂರ್ಣ ತತ್ವಗಳು ಕಾರಣ ಮತ್ತು ಪರಿಣಾಮದ ಸಿದ್ಧಾಂತವನ್ನು ಅವಲಂಬಿಸಿರುತ್ತದೆ. ಆಯುರ್ವೇದವು ರೋಗಗಳನ್ನು ನಿರ್ವಹಿಸುವಾಗ ದೇಹದ ಜೊತೆಗೆ, ಮನಸ್ಸು, ಮತ್ತು ಆತ್ಮವನ್ನು ಒಟ್ಟಾಗಿ ಪರಿಗಣಿಸುತ್ತದೆ.
ಪ್ರ4: ಆಯುರ್ವೇದ ಚಿಕಿತ್ಸೆಗಳ ಯಶಸ್ಸಿಗೆ ಸಂಬಂಧಿಸಿದ ಕೆಲವು ಅಂಕಿಅಂಶಗಳನ್ನು ನೀಡಲು ನೀವು ಬಯಸುವಿರಾ?
ಉ: 90% ಕ್ಕಿಂತ ಹೆಚ್ಚು ನರವೈಜ್ಞಾನಿಕ ಪ್ರಕರಣಗಳನ್ನು ಆಯುರ್ವೇದದಿಂದ ಗುಣಪಡಿಸಲಾಗಿದೆ. 80 ರಿಂದ 90% ಬಂಜೆತನ ನಿವಾರಣಾ ಪ್ರಕರಣಗಳು ಉತ್ತಮ ಫಲಿತಾಂಶಗಳನ್ನು ಕಂಡಿವೆ. ಕ್ಷೀಣಗೊಳ್ಳುವ ಕಾಯಿಲೆಗಳಿಗೆ 70 ರಿಂದ 80% ರಷ್ಟು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿವೆ
ಪ್ರ5: ಆಯುರ್ವೇದದ ಬಗ್ಗೆ ಜನರು ಹೊಂದಿರುವ ಪ್ರಮುಖ ತಪ್ಪು ಕಲ್ಪನೆಗಳ ಮೇಲೆ ದಯವಿಟ್ಟು ಸ್ವಲ್ಪ ಬೆಳಕು ಚೆಲ್ಲಬಹುದೇ?
ಉತ್ತರ:
- ಆಯುರ್ವೇದದಲ್ಲಿ ಯಾವುದೇ ಉತ್ತಮ ಪರಿಣಾಮಗಳಾಗಲಿ, ಅಡ್ಡ ಪರಿಣಾಮಗಳಾಗಲಿ ಇಲ್ಲ.
- ಆಯುರ್ವೇದದ ಕ್ಯೂರಿಂಗ್ ರೇಟ್ (ಗುಣಪಡಿಸುವ ವೇಗ) ತುಂಬಾ ನಿಧಾನ.
- ಕೇವಲ ಸರಳ ಮಸಾಜ್ ಆಯುರ್ವೇದ ಪಂಚಕರ್ಮವಾಗಿದೆ.
- ಈ ವ್ಯವಸ್ಥೆಯು ಸ್ಟ್ರೋಕ್ ಮತ್ತು ದೀರ್ಘಕಾಲದ ಅನಾರೋಗ್ಯ ಪರಿಸ್ಥಿತಿಗಳಿಗೆ ಮಾತ್ರ ಒಳ್ಳೆಯದು.
- ಇದು ಯಕೃತ್ತಿನ ಮೂತ್ರಪಿಂಡ ಮತ್ತು ಇತರ ಪ್ರಮುಖ ಅಂಗಗಳಿಗೆ ಹಾನಿ ಮಾಡುತ್ತದೆ.
- ವೈರಲ್, ಬ್ಯಾಕ್ಟೀರಿಯಾ ಮತ್ತು ಸಾಂಕ್ರಾಮಿಕ ರೋಗಗಳಿಗೆ ಯಾವುದೇ ಚಿಕಿತ್ಸೆಗಳಿಲ್ಲ.
ಇವುಗಳು ಆಯುರ್ವೇದದ ಕುರಿತು ಸಮಾಜದಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವು ತಪ್ಪು ಪರಿಕಲ್ಪನೆಗಳು.
ಪ್ರ6: ರೋಗಿಗಳು ಆಯುರ್ವೇದವನ್ನು ಸ್ವತಃ ಆಯ್ದುಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಸಾಧ್ಯವಿದೆಯೇ? ಈ ಕುರಿತ ಆಲೋಚನಾ ರೀತಿ ಹೇಗಿರಬೇಕು?
ಉ: ಪ್ರಾಥಮಿಕವಾಗಿ, ರೋಗಿಗಳು ಆಯುರ್ವೇದದ ಅಧಿಕೃತ ತತ್ವಗಳು ಮತ್ತು ಅಭ್ಯಾಸಗಳ ಬಗ್ಗೆ ನಿಖರವಾಗಿ ತಿಳಿದು ಅರ್ಥಮಾಡಿಕೊಳ್ಳಬೇಕು.
ಜೀವ ಉಳಿಸುವ ತ್ವರಿತ ಕ್ರಮಗಳ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುವ ತುರ್ತು ಪರಿಸ್ಥಿತಿಗಳನ್ನು ಹೊರತುಪಡಿಸಿ, ಇತರ ಎಲ್ಲಾ ಪರಿಸ್ಥಿತಿಗಳಲ್ಲಿ ಆಯುರ್ವೇದ ಬಳಸಿ ರೋಗಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು.
ಚಿಕಿತ್ಸಾ ವ್ಯವಸ್ಥೆ, ವೈದ್ಯರು ಮತ್ತು ಹಸ್ತಕ್ಷೇಪದ ಬಗ್ಗೆ ಅರಿವು ಅಗತ್ಯ. ವೈದ್ಯರ ಯಶೋಗಾಥೆಗಳೂ ಅಥವಾ ಯಶಸ್ವೀ ಚಿಕಿತ್ಸಾ ಇತಿಹಾಸವೂ ಇಲ್ಲಿ ಬಹಳ ಮುಖ್ಯ.
ಮುಖ್ಯವಾಗಿ, ರೋಗಿಯು ಔಷಧಿಗಳನ್ನು ಮತ್ತು ಕಟ್ಟುನಿಟ್ಟಾದ ಆಹಾರದ ಮಾದರಿಗಳನ್ನು ಅನುಸರಿಸಲು ಸಿದ್ಧರಾಗಿರಬೇಕು. ಅವರು ತಾಳ್ಮೆ ಮತ್ತು ವೈದ್ಯರಲ್ಲಿ ನಂಬಿಕೆಯನ್ನು ಹೊಂದಿರಬೇಕು. ಏಕೆಂದರೆ ಆಯುರ್ವೇದವು ರೋಗಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಹೆಚ್ಚಾಗಿ ಅವರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ.
ಪ್ರ7: ಆಯುರ್ವೇದದ ಬಗ್ಗೆ ತಿಳಿದುಕೊಳ್ಳಲು ಕೆಲವು ಒಳ್ಳೆಯ ಮತ್ತು ಸರಿಯಾದ ಮೂಲಗಳು ಯಾವುವು?
ಉ: ಇಲ್ಲಿ ಜ್ಞಾನ ಮತ್ತು ಮಾಹಿತಿಯ ನಡುವಿನ ಮೂಲಭೂತ ವ್ಯತ್ಯಾಸಗಳನ್ನು ನಾವು ತಿಳಿದಿರಬೇಕು. ಆದ್ದರಿಂದ, ಅನುಮೋದಿತ ಮತ್ತು ಪ್ರತಿಷ್ಠಿತ ಸಂಸ್ಥೆಗಳಲ್ಲಿ ನಿಗದಿತ ಕೋರ್ಸ್‌ಗಳ ಮೂಲಕ ವಿಜ್ಞಾನವನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಬೇಕು.
ಸೈದ್ಧಾಂತಿಕ ಹಾಗೂ ವ್ಯಾಪಕವಾದ ಪ್ರಾಯೋಗಿಕ ಜ್ಞಾನವು ವ್ಯಕ್ತಿಯನ್ನು ಸಮರ್ಥನನ್ನಾಗಿ ಮಾಡುತ್ತದೆ. ಕ್ರಮೇಣ ಕ್ಲಿನಿಕಲ್ ಅನುಭವವು ಅವರನ್ನು ಪರಿಪೂರ್ಣಗೊಳಿಸುತ್ತದೆ.
NCISM-ಅನುಮೋದಿತ ಶಾಸ್ತ್ರೀಯ ಪಠ್ಯಗಳು ಮತ್ತು ಆಯುರ್ವೇದದ ಮೂಲ ಪುಸ್ತಕಗಳ ಪ್ರಕಟಣೆಯು ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇತ್ತೀಚಿನ ಲೇಖಕರ ಯಾವುದೇ ಕುಶಲ ಆವೃತ್ತಿಗಳನ್ನು ಹೊರತುಪಡಿಸಿ (ಮೂಲಾರ್ಥವನ್ನು ತಿರುಚಿದ), ಆಯುರ್ವೇದ ತತ್ವಗಳು ಮತ್ತು ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಕೃತ ಭಾಷೆಯ ಉತ್ತಮ ಜ್ಞಾನವು ಬಹಳ ಸಹಕಾರಿ.
ಪ್ರ8: ನಾವು ಆಯುರ್ವೇದದ ಹೆಸರಿನಲ್ಲಿ ತಪ್ಪು ಉತ್ಪನ್ನಗಳು ಮತ್ತು ಸೇವೆಗಳನ್ನು ಕುಶಲತೆಯ ಬಳಸಿ ಮಾರಾಟ ಮಾಡುವುದನ್ನು ನೋಡುತ್ತಿದ್ದೇವೆ.
ಉ: ಹೌದು.
ನಿಯಂತ್ರಕ ಅಧಿಕಾರಿಗಳು, ಬೋಧನಾ ಸಂಸ್ಥೆಗಳು ಮತ್ತು ವೈದ್ಯರ ಆತ್ಮಾವಲೋಕನವು ಇದಕ್ಕೆ ಸಮಾಧಾನಕರ ಪರಿಹಾರಗಳನ್ನು ನೀಡಬಹುದು.
ಪ್ರ9: ಅರ್ಹ ವೈದ್ಯರಾಗಿರುವ ನೀವು, “ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ” (“prevention is better than cure”) ಎಂಬ ಹೇಳಿಕೆಯು ಆಧುನಿಕ ಮಾನವ ಜೀವನಶೈಲಿಗೆ ಎಷ್ಟು ಸೂಕ್ತ ಎಂಬ ಕುರಿತು ದಯವಿಟ್ಟು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.
ಉ: ಆಯುರ್ವೇದದ ಮೊದಲ ಮತ್ತು ಪ್ರಮುಖ ಗುರಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು.
ಕಾರಣ ಸ್ವತಃ ಇಲ್ಲದಿದ್ದರೆ, ನಂತರ ಪರಿಣಾಮವಾಗಿ ರೋಗಗಳ ಪ್ರಶ್ನೆಯೇ ಏಳುವುದಿಲ್ಲ.
ಆಧುನಿಕ ಜೀವನಶೈಲಿಯು ಆಯುರ್ವೇದದಲ್ಲಿ ವಿವರಿಸಿದ ತತ್ವಗಳನ್ನು ಯಾರೂ ಅಳವಡಿಸಿಕೊಳ್ಳಲಾಗದ ಕರುಣಾಜನಕ ಸ್ಥಿತಿಯಾಗಿ ಮಾರ್ಪಟ್ಟಿದೆ.
ಆರೋಗ್ಯಕರ ವೀರ್ಯ ಮತ್ತು ಅಂಡಾಣು ಉತ್ಪತ್ತಿಯಾಗುವ ಹಂತದಿಂದಲೇ ಆರೋಗ್ಯದ ಸ್ಥಿತಿಯನ್ನು ಹೊಂದಲು ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ಮದುವೆಯಾದ ತಕ್ಷಣ ಆರೋಗ್ಯಕರ ಮಗುವನ್ನು ಹೊಂದಲು ಮತ್ತು ಮುಂಬರುವ ಪೀಳಿಗೆಯು ಆರೋಗ್ಯವಂತರಾಗಬೇಕಾದ ದೃಷ್ಟಿಯಿಂದ ಆಯುರ್ವೇದ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.
ಸರಿಯಾದ ಮಾಹಿತಿಯ ಸಹಾಯದಿಂದ ವಿವಿಧ ಕಾಯಿಲೆಗಳ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಅಂತಹ ಕಾರಣಗಳನ್ನು ತಡೆಗಟ್ಟಲು ಆಯುರ್ವೇದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.
ಪ್ರ10: ಈ ಪ್ರಶ್ನೋತ್ತರದ ಕೊನೆಯದಾಗಿ, ವರ್ತಮಾನ ಹಾಗೂ ಭವಿಷ್ಯದ ಯೋಗಕ್ಷೇಮಕ್ಕೆ ಸಹಾಯಾಕವಾದ ಮನಸ್ಥಿತಯನ್ನು ಹೊಂದುವ ಬಗ್ಗೆ ನಿಮ್ಮ ಮಾತುಗಳನ್ನು ಕೇಳಬಯಸುತ್ತೇನೆ.
ಉ: ಆಹಾರ, ನಿದ್ರೆ ಮತ್ತು ಲೈಂಗಿಕ ಅಭ್ಯಾಸಗಳು ಆರೋಗ್ಯಕ್ಕೆ ತ್ರಿಕೋನ ಆಧಾರ ಸ್ತಂಭಗಳಾಗಿವೆ.
ಈ ಮೂರು ಪ್ರಮುಖ ಆಯಾಮಗಳ ಬಗ್ಗೆ ಬಹಳ ಉತ್ಸುಕರಾಗಿರಬೇಕು.
ಮೂತ್ರ ವಿಸರ್ಜನೆ, ವಾಯು, ಸೀನುವಿಕೆ ಮುಂತಾದ ಕೆಲವು ನೈಸರ್ಗಿಕ ಪ್ರಚೋದನೆಗಳನ್ನು ತಡೆಹಿಡಿಯುವುದು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಆದ್ದರಿಂದ, ಆ ರೀತಿ ಮಾಡಬಾರದು.
ನನ್ನ ಪ್ರತಿಕ್ರಿಯೆ
ದೈನಂದಿನ ಜೀವನದಲ್ಲಿ, ವೈದ್ಯರೊಂದಿಗಿನ ಸಂಭಾಷಣೆಗಳು ಸಾಮಾನ್ಯವಾಗಿ ಒಬ್ಬರ ಕಾಯಿಲೆಗಳು ಮತ್ತು ನೋವುಗಳನ್ನು ಮೀರಿ ಹೋಗುವುದಿಲ್ಲ.
ಇದಕ್ಕೆ ಹಲವು ಕಾರಣಗಳಿರಬಹುದು.
ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ, ಉತ್ತಮ ಚಿಕಿತ್ಸಾ ವಿಧಾನಗಳು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುವುದಿಲ್ಲ. ವೈದ್ಯರು ಕೂಡ ಆ ಸಮಯದಲ್ಲಿ ನಿಮ್ಮ ನೋವು, ಸಂಕಟ, ಮತ್ತು ನರಳಾಟಗಳನ್ನು ನಿವಾರಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.
ನಿಮಗೆ ಯಾವುದೇ ಕಾಯಿಲೆಗಳಿಲ್ಲದಿದ್ದರೆ, ಬಹುಶಃ ನೀವು ವೈದ್ಯರನ್ನು ನೆನಪಿಸಿಕೊಳ್ಳುವುದಿಲ್ಲ (ಅವರೊಂದಿಗೆ ವೈಯಕ್ತಿಕ ಅಥವಾ ವೃತ್ತಿಪರ ಸಂಬಂಧವನ್ನು ಹೊಂದಿಲ್ಲದಿದ್ದರೆ, ವೈದ್ಯರ ದಿನವನ್ನು ಹೊರತುಪಡಿಸಿ – ಬಹುಷಃ ನಾನೂ ನೆನಪಿಸಿಕೊಳ್ಳುವುದಿಲ್ಲವೇನೋ).
ಮತ್ತೊಂದೆಡೆ, ವೈದ್ಯರು ಸಲಹೆಗಾರರಾಗಿ, ಶಿಕ್ಷಣ ತಜ್ಞರಾಗಿ ಅಥವಾ ಆ ವಿಷಯಕ್ಕೆ ಸಂಬಂಧಿಸಿದ ಯಾವುದೇ ಇತರ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ.
ಏಕೆಂದರೆ ಅವರು “ಅಭ್ಯಾಸಗಾರರು” (practitioners) ಅಲ್ಲವೇ!
ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ತಾಳ್ಮೆಯಿಂದ ಪ್ರಶ್ನೆಗಳಿಗೆ ಉತ್ತರಿಸಿದ್ದಕ್ಕಾಗಿ ಡಾ। ಬಿ. ವಿನಯಚಂದ್ರ ಶೆಟ್ಟಿ ಸರ್ – ನಿಮಗೆ ತುಂಬಾ ಧನ್ಯವಾದಗಳು.
ಇದು ದೈನಂದಿನ ಜೀವನದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಬಳಸಬಹುದಾದ ಅಮೂಲ್ಯ ಮಾಹಿತಿ ಮತ್ತು ಜ್ಞಾನವನ್ನು ಒಳಗೊಂಡಿದೆ.
ಅದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.
ವಿಷಯದ ಬಗ್ಗೆ:
ಆಯುರ್ವೇದವು 3,000 ರಿಂದ 5,000 ವರ್ಷಗಳ ಇತಿಹಾಸವನ್ನು ಹೊಂದಿರುವ ಆಳವಾದ ವಿಷಯ ಮತ್ತು ಭಾರತದ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯಾಗಿದೆ.
ಅನಾರೋಗ್ಯ ಮತ್ತು ಗಾಯಗಳನ್ನು ಗುಣಪಡಿಸಲು ಹಲವಾರು ಬಾರಿ ಆಯುರ್ವೇದ ವ್ಯವಸ್ಥೆಗಳಿಗೆ ಒಳಗಾಗುವ ಅನುಭವವನ್ನು ಹೊಂದಿರುವ ನಾನು, ಇದು ಕೇವಲ ಮಾತ್ರೆಗಳನ್ನು ತೆಗೆದುಕೊಂಡು ತಕ್ಷಣಕ್ಕೆ ಆರಾಮ ಸ್ಥಿತಿ ಅನುಭವಿಸುವ ಪ್ರಯತನವಲ್ಲ ಎಂದು ಹೇಳಬಲ್ಲೆ.
ಬದಲಿಗೆ, ಇದು ಆರೋಗ್ಯದ ಜೊತೆಗೆ ಜೀವನದ ಸಮಗ್ರ ಯೋಗಕ್ಷೇಮದ ಕಡೆಗೆ ಗಮನ ನೀಡುವ ವಿಧಾನವಾಗಿದೆ.
ಸದ್ಯಕ್ಕೆ, ಈ ಕುರಿತು ಹೆಚ್ಚು ವಿಸ್ತರಿಸಲು ನನಗೆ ಸಾಧ್ಯವಿಲ್ಲ.
ಕಾರಣ, ಮುಂದೆ ಹೇಳಲಿರುವ ವಿಚಾರಗಳು.
ಮಾಹಿತಿ ಮತ್ತು ಜ್ಞಾನಕ್ಕಿರುವ ವ್ಯತ್ಯಾಸ:
ಸರ್ ಸೂಚಿಸಿದಂತೆ, “ನಾವು ಜ್ಞಾನ ಮತ್ತು ಮಾಹಿತಿಯ ನಡುವಿನ ಮೂಲಭೂತ ವ್ಯತ್ಯಾಸಗಳನ್ನು ತಿಳಿದಿರಬೇಕು”.
ವಿಶೇಷವಾಗಿ ಆರೋಗ್ಯ ಮತ್ತು ಹಣಕಾಸಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳನ್ನು ಸ್ವೀಕರಿಸುವ ಸಮಯದಲ್ಲಿ ಹೆಚ್ಚಿನ ಗಮನ ಅಗತ್ಯ. ಈ AI ಯುಗದಲ್ಲಿ, ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮತ್ತು ಅದರ ಮೇಲೆ ಕಾರ್ಯನಿರ್ವಹಿಸುವ ಮೊದಲು ಮಾಹಿತಿಯನ್ನು ಕ್ರಾಸ್-ವೆರಿಫೈ (ಮರು ಪರಿಶೀಲನೆ) ಮಾಡುವುದು ಇನ್ನಷ್ಟು ಮುಖ್ಯವಾಗಿದೆ.
ಆಧುನಿಕ ವಿಷಯ ರಚನೆಯ (content creation) ಯುಗದಲ್ಲಿ “ಆಯುರ್ವೇದ”, “ಸಾವಯವ” ಮತ್ತು “ನೈಸರ್ಗಿಕ” ದಂತಹಾ ಪದಗಳ ಬಳಕೆಯು ತೀರಾ ಸಾಮಾನ್ಯವಾಗಿದೆ ಎಂದು ನೀವು ಗಮನಿಸಿರಬಹುದು.
ಏಕೆ?
ಮಾರ್ಕೆಟಿಂಗ್ ಮಸಾಲಾ:
ಬರಹಗಾರ, ವಿಷಯ ರಚನೆಕಾರ ಮತ್ತು ಆನ್‌ಲೈನ್ ಮರ್ಕೇಟರ್ ಆಗಿರುವುದರಿಂದ, ನಾನು ಈ ಕುರಿತು ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.
SharingShree ಕನ್ನಡದಲ್ಲಿ ಪ್ರಕಟಿಸಲಾದ ಶ್ರೀಕೃಷ್ಣ ಎನ್ ಮತ್ತು ಡಾ| ಅನಿಲ್ ರೈ ಜೊತೆಗಿನ ಪ್ರಶ್ನೋತ್ತರಗಳಲ್ಲೂ ಈ ವಿಷಯದ ಕುರಿತು ಚರ್ಚಿಸಲಾಗಿದ್ದು ಅವರ ಅಭಿಪ್ರಾಯಗಳನ್ನೂ ಕೇಳಲಾಗಿತ್ತು.
ಆಯುರ್ವೇದ, ಸಾವಯವ ಮತ್ತು ನೈಸರ್ಗಿಕ ಪದಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಅವು ತಕ್ಷಣವೇ ನಿಮ್ಮನ್ನು ನಂಬುವಂತೆ ಮಾಡುತ್ತದೆ. ದುರದೃಷ್ಟವಶಾತ್, ಜನರು ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಖರೀದಿಸುವಂತೆ ಮಾಡಲು ಕುಶಲತೆಯಿಂದ ಇವುಗಳನ್ನು ಬಳಸಲಾಗುತ್ತದೆ.
ಹಾಗಂತ ನಾವು ಎಲ್ಲಾ ಕಂಟೆಂಟ್ ಕ್ರಿಯೇಟರ್ಸ್ ಮತ್ತು ಮರ್ಕೇಟರ್ ಗಳ ಸಮೂಹವನ್ನೇ ದೂಷಿಸಲು ಸಾಧ್ಯವಿಲ್ಲ.
ಸರಿಯಾದ ಅನುಭವ, ಪರಿಣತಿ, ಜ್ಞಾನ ಮತ್ತು ಮಾಹಿತಿಯನ್ನು ಸರಿಯಾದ ಪ್ರೇಕ್ಷಕರಿಗೆ ತಲುಪಿಸುವುದು ಕ್ರಿಯೇಟರ್ಸ್ ಮತ್ತು ಮಾರ್ಕೆಟರ್ ಗಳ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. ಅನೇಕರು ಇದನ್ನು ಪ್ರಾಮಾಣಿಕವಾಗಿ ಮತ್ತು “ನ್ಯಾಯಯುತ ಮೌಲ್ಯ ವಿನಿಮಯ”ವನ್ನು ಮನದಲ್ಲಿಟ್ಟುಕೊಂಡು ಮಾಡುತ್ತಿದ್ದಾರೆ.
ಮಾರ್ಕೆಟಿಂಗ್‌ನ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ನಿತ್ಯ ಜೀವನದಲ್ಲಿ ಸಮಬಂಧಗಳ ನಿರ್ವಹಣೆ, ಉತ್ಪನ್ನ ಮತ್ತು ಸೇವೆಗಳ ಖರೀದಿಯಲ್ಲಿ ಬಲು ಸಹಕಾರಿ. ಅದಕ್ಕಾಗಿಯೇ ನಾನು ಪರಸ್ಪರ ಕಲಿಕೆ ಮತ್ತು ಹಂಚಿಕೆಯ ಭಾಗವಾಗಿ ಮಾರ್ಕೆಟಿಂಗ್ ಬಗ್ಗೆ ಹೆಚ್ಚಾಗಿ ಮಾತನಾಡುತ್ತೇನೆ.
ಡಾ। ವಿನಯಚಂದ್ರ ಶೆಟ್ಟಿ ಅವರು ಉತ್ತರಿಸುತ್ತಾ ಹೀಗೆಂದಾಗ ಅವರ ಮಾರ್ಕೆಟಿಂಗ್ ತಿಳುವಳಿಕೆಯನ್ನು ಗಮನಿಸಿದ್ದೀರಾ;
ನಾನು 1993 ರಲ್ಲಿ ಆಯುರ್ವೇದ ಕೋರ್ಸ್ ಅನ್ನು ಆರಿಸಿಕೊಂಡೆ. ಆ ಸಮಯದಲ್ಲಿ ಈ ವಲಯವು ಸ್ಯಾಚುರೇಟೆಡ್ ಆಗಿರಲಿಲ್ಲ ಮತ್ತು ಅರ್ಹ ವೈದ್ಯರ ಸಂಖ್ಯೆಯು ಸಮಾಜದ ಅಗತ್ಯಗಳನ್ನು ಪೂರೈಸುವಷ್ಟು ಇರಲಿಲ್ಲ.
ಇಲ್ಲೇ ಇದೆ ನೋಡಿ ಉದಾಹರಣೆ. ಇದು ತುಂಬಾ ಸರಳ ಮತ್ತು ಉತ್ತಮ ರೀತಿಯ ಪ್ರಭಾವಶಾಲಿಯಾಗಿದೆ.
ಬೇರಿನ ಹಂತಕ್ಕೆ ಇಳಿಯೋದು:
ಯಾವುದೇ ಕ್ಷೇತ್ರದಲ್ಲಿ ಸಮಸ್ಯೆಗಳ ಮೂಲಕ್ಕೆ ಹೋಗುವುದು ತಜ್ಞರ ಸ್ವಭಾವ.
ಡಾಕ್ಟರ್ ವಿನಯ ಸರ್ ಅವರ ಬಯೋ (ವೃತ್ತಿಪರ ಅನುಭವ) ಮಾತ್ರವಲ್ಲದೆ ಅವರು ನೀಡಿದ ಉತ್ತರಗಳೂ ಅವರ ಪರಿಣತಿಯ ಆಳವನ್ನು ಬಿಂಬಿಸುತ್ತಿದೆ..
ಅವರು ಆಯುರ್ವೇದದ ಬಗ್ಗೆ ಜನರಲ್ಲಿರುವ ಸಾಮಾನ್ಯ ತಪ್ಪು ಕಲ್ಪನೆಗಳನ್ನು ಪಟ್ಟಿ ಮಾಡುವುದರ ಜೊತೆಗೆ ಅದರ ಮಿತಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ.
ಆಯುರ್ವೇದವು ಮೂಲ ಮಟ್ಟದಲ್ಲಿ ಕೆಲಸ ಮಾಡುವುದು ಎಂದು ಹೇಳುವುದಲ್ಲದೆ, ಆರೋಗ್ಯಕರ ಸಂತಾನೋತ್ಪತ್ತಿ ಪ್ರಕ್ರಿಯೆ ಮತ್ತು ಭವಿಷ್ಯದ ಪೀಳಿಗೆಯ ಬಗೆಗಿನ ಸಮಗ್ರ ಚಿಂತನೆಯ ಅಗತ್ಯವನ್ನು ನೇರವಾಗಿ ಸೂಚಿಸಿದರು.
ಅಲ್ಲದೆ, ಮೂಲ ಮಟ್ಟಕ್ಕೆ ಹೋಗುವ ಮನಸ್ಥಿತಿಯು ಸಂಪತ್ತಿನ ಸೃಷ್ಟಿ, ಹಾಗೂ ನಿರ್ವಹಣೆಯ ಜೊತೆಗೆ, ದೈನಂದಿನ ಜೀವನದ ಸಂಬಂಧಗಳ ನಿರ್ವಹಣೆಯ ವಿಚಾರದಲ್ಲಿ ಬಲು ಸಹಕಾರಿ.
ಇಲ್ಲಿ “ವೈದ್ಯರು ಸಮಾಜದ ಸಂಪತ್ತು” ಎಂಬುದನ್ನು ಮರೆಯಲು ಸಾಧ್ಯವೇ!
ಅಷ್ಟೇ ಅಲ್ಲ. “ವೈದ್ಯೋ ನಾರಾಯಣೋ ಹರಿಃ”, ಎಂಬ ಸಂಸ್ಕೃತ ಭಾಷೆಯ ಮಾತು ನಿಮಗೆ ತಿಳಿದಿರಬಹುದು. ಇದರರ್ಥ “ವೈದ್ಯರು ದೇವರಿಗೆ ಸಮಾನರು” ಅಥವಾ “ವೈದ್ಯರು ದೇವರೇ”.
ಡಾ। ವಿನಯಚಂದ್ರ ಶೆಟ್ಟಿಯವರು ಹೇಳಿದ್ದು ನೆನಪಿದೆಯಾ?;
ಇತ್ತೀಚಿನ ಲೇಖಕರ ಯಾವುದೇ ಕುಶಲ ಆವೃತ್ತಿಗಳನ್ನು ಹೊರತುಪಡಿಸಿ (ಮೂಲಾರ್ಥವನ್ನು ತಿರುಚಿದ), ಆಯುರ್ವೇದ ತತ್ವಗಳು ಮತ್ತು ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಕೃತ ಭಾಷೆಯ ಉತ್ತಮ ಜ್ಞಾನವು ಬಹಳ ಸಹಕಾರಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
ತೀರ್ಮಾನ:
ಸಂಕ್ಷಿಪ್ತವಾಗಿ ಹೇಳುವುದಾದರೆ, ಡಾ। ಬಿ. ವಿನಯಚಂದ್ರ ಶೆಟ್ಟಿ ಅವರೊಂದಿಗಿನ ಈ ಪ್ರಶ್ನೋತ್ತರವು ಆಯುರ್ವೇದದಲ್ಲಿ ನೀವು ಆಸಕ್ತಿ ಹೊಂದಿದ್ದರೆ ಅದರ ಕುರಿತ ಹೆಚ್ಚಿನ ಕಲಿಕೆಗೆ ಇದು ಉತ್ತಮ ಆರಂಭಿಕ ಹಂತವಾಗಿದೆ.
ಸಾಮಾನ್ಯ ತಪ್ಪು ಕಲ್ಪನೆಗಳು, ಚಿಕಿತ್ಸಾ ವಿಧಾನಗಳು ಮತ್ತು ಯಶಸ್ಸಿನ ದರಗಳನ್ನು ನಮೂದಿಸುವ ಮೂಲಕ ಆಯುರ್ವೇದ ವ್ಯವಸ್ಥೆಗಳನ್ನು ಕಲಿಯಲು, ಕೈಗೊಳ್ಳಲು ಮತ್ತು ಅಳವಡಿಸಿಕೊಳ್ಳಲು ಅಗತ್ಯವಿರುವ ಮೂಲಭೂತ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಈ ಪ್ರಶ್ನೋತ್ತರದ ಅತಿಥಿಯಾದ ವೈದ್ಯರು ಸಹಕರಿಸಿದರು.
ನಾವು ಪ್ರಶ್ನೋತ್ತರಗಳಲ್ಲಿ ಸ್ವಲ್ಪ ಆಳವಾಗಿ ಇಳಿದಂತೆ, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ವಿಚಾರಗಳು ದೊರಕಿದವು.
ಅವುಗಳಲ್ಲಿ ಕೆಲವು – ಮಾಹಿತಿ ಮತ್ತು ಜ್ಞಾನಡಾ ವ್ಯತ್ಯಾಸವನ್ನು ತಿಳಿಯುವುದು, ಆಧುನಿಕ ಮಾರ್ಕೆಟಿಂಗ್ ಅನ್ನು ಅರ್ಥಮಾಡಿಕೊಳ್ಳುವುದರ ಲಾಭ ಮತ್ತು ಅಗತ್ಯವಿರುವಲ್ಲೆಲ್ಲಾ ಸಮಸ್ಯೆಗಳ ಮೂಲಕ್ಕೆ ಇಳಿಯುವ ಅಭ್ಯಾಸವನ್ನು ನಿರ್ಮಿಸುವುದು.
ತಾಂತ್ರಿಕ ವ್ಯಕ್ತಿಯಿಂದ ಕಾಳಜಿಯುಳ್ಳ ಮಾನವರಾಗುವ ಮೂಲಕ ನಿರಂತರವಾಗಿ ಬದಲಾಗುವುದು ವೈದ್ಯರಿಂದ ಕಲಿಯಲು ಯೋಗ್ಯವಾದ ಮತ್ತೊಂದು ಕಲೆಯಾಗಿದೆ.
ಹಾಗಾಗಿ “ಹೇಗಿದ್ದೀರಾ” ಅಥವಾ “ಆರಾಮಾನಾ”? ಎಂದು ಯೋಗಕ್ಷೇಮ
ವಿಚಾರಿಸೋದು ಸ್ವಾಭಾವಿಕವಾಗಿ ವೈದ್ಯರನ್ನು ಹೆಚ್ಚು ಸಂತೋಷಪಡಿಸುತ್ತದೆ ಎಂದು ನಾನು ಊಹಿಸುತ್ತೇನೆ.
ಏನಾದರೂ ಪ್ರಶ್ನೆಗಳಿವೆಯೇ?
ಈ ಪ್ರಶ್ನೋತ್ತರ ಪೋಸ್ಟ್ ನಿಮಗೆಷ್ಟು ಸಹಾಯಕವಾಯಿತು?
ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.
ಈ ಪೋಸ್ಟ್ ಅನ್ನು ನಿಮ್ಮ ಆತ್ಮೀಯರೊಂದಿಗೆ ಶೇರ್ ಮಾಡಲು ಮರೆಯದಿರಿ.
Share ಮಾಡಿ!
ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.
ಲೇಖಕರು ಹಾಗೂ ಪ್ರಕಾಶಕರು
ಶ್ರೀನಿಧಿ. ಕೆ (Shreenidhi K)
ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.