ಡಾ| ಅನಿಲ್ ರೈ ಅವರ ಫೋಟೋ ಮತ್ತು ಮನಸ್ಸಿನ ಕುರಿತ ಕನ್ನಡ ವಾಕ್ಯವನ್ನು ಒಳಗೊಂಡ ಚಿತ್ರ.

ಬೇಕೇ ಸದೃಢ ಮನಸ್ಸು? । ಕಲಿಯೋಣ ಡಾ| ಅನಿಲ್ ರೈ ಅವರಿಂದ | QnA #3

ಬಾಲ್ಯದಲ್ಲಿ ಮನಸ್ಸು ಎಂದರೇನು ಎಂದು ಪ್ರಶ್ನಿಸಿದವನ (ಅದು ನಾನೇ ಕಣ್ರೀ) ಮತ್ತು ಆರನೇ ತರಗತಿಯಲ್ಲೇ ಆಕಾಶದ ಉದ್ದಗಲವನ್ನು ಕುರಿತು ಯೋಚಿಸಿದ ಡಾ| ಅನಿಲ್ ರೈ ನಡುವಿನ ಸ್ವಾರಸ್ಯಕರ ಪ್ರಶ್ನೋತ್ತರಗಳು ಇಲ್ಲಿವೆ.

ಉನ್ನತ ಉದ್ಯೋಗ, ಸಾಕಷ್ಟು ಹಣ, ಎಲ್ಲಾ ವಿಧದ ಸಂಬಂಧಗಳ ಸರಮಾಲೆ, ಅಲ್ಪಸ್ವಲ್ಪ ದೈಹಿಕ ಆರೋಗ್ಯ – ಹೀಗೆ ಏನೇ ಇದ್ದರೂ ಮನಸ್ಸು ಸರಿ ಇಲ್ಲ ಎಂದರೆ ಮನುಷ್ಯನ ಕತೆ ಮುಗೀತು ತಾನೇ!

ಮನುಷ್ಯನ ಮನಸ್ಸನ್ನು ಅರಿಯುವ ಪ್ರಾಮುಖ್ಯತೆಯ ಕುರಿತ ಇಂಗ್ಲಿಷ್ ಲೇಖನವೊಂದರಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ;

“ನಮ್ಮ ಜೀವನದ ಗುಣಮಟ್ಟವು ನಮ್ಮಲ್ಲಿ ಘರ್ಷಣೆಗಳಿವೆಯೇ ಅಥವಾ ಇಲ್ಲವೇ ಎಂಬುದಕ್ಕಿಂತ ನಾವು ಅವುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.” – ಥಾಮಸ್ ಕ್ರಂಬ್

ಹಾಗಾಗಿ ಮನೋತಜ್ಞರು ಮತ್ತು ವೈದ್ಯರಾಗಿರುವ ಡಾ| ಅನಿಲ್ ರೈ ಜೊತೆಗಿನ ಈ ಪ್ರಶ್ನೋತ್ತರಗಳು ನಿತ್ಯ ಜೀವನವನ್ನು ಮತ್ತಷ್ಟು ಸುಧಾರಿಸುವಲ್ಲಿ ಸಹಾಯಕ ಎನ್ನಬಹುದು.

ವಿಷಯಗಳ ಅವಲೋಕನ:

ಪ್ರಶ್ನೋತ್ತರಗಳು

ಮುಂದುವರಿಸುವ ಮುನ್ನ ದಯವಿಟ್ಟು ಗಮನಿಸಿ. ಈ ಪ್ರಶ್ನೋತ್ತರಗಳು ಸಾಮಾನ್ಯ ಮನಸ್ಥಿತಿಯವರಿಗಾಗಿದ್ದು ಯಾವುದೇ ರೀತಿಯ ವೈದ್ಯಕೀಯ ಸಲಹೆ ಮತ್ತು ಸಹಾಯಗಳ ಅಗತ್ಯವಿರುವ ಮನೋ ರೋಗಿಗಳಿಗಲ್ಲ ಎಂದು ಸ್ಪಷ್ಟ ಪಡಿಸುತ್ತಿದ್ದೇನೆ.

ಹೆಚ್ಚು ಸಮಯ ಕಳೆಯದೆ ಅವರ ಕಿರು ಪರಿಚಯದೊಂದಿಗೆ ಮುಖ್ಯ ವಿಷಯವನ್ನು ಪ್ರಾರಂಭಿಸೋಣ.

ಮನೋ ತಜ್ಞರು ಮತ್ತು ವೈದ್ಯರಾದ ಡಾ । ಅನಿಲ್ ರೈ ಅವರ ಫೋಟೋ.

ಡಾ| ಅನಿಲ್ ರೈ, MD. (Ayu)

ಡಾ| ಅನಿಲ್ ರೈ ಅವರು ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್‌ನಿಂದ BAMS ಮತ್ತು MD (Ayu) ಪದವಿಯನ್ನು ಹೊಂದಿದ್ದಾರೆ. ಭಾರತದಲ್ಲಿ ಆಯುರ್ವೇದ ಮನೋವೈದ್ಯರಾಗಿ ಸಂಪೂರ್ಣವಾಗಿ ತರಬೇತಿ ಪಡೆದು, ಮಾನ್ಯತೆ ಪಡೆದ ಆಯುರ್ವೇದಿಕ್ ವೈದ್ಯರ ಬ್ರಿಟಿಷ್ ಅಸೋಸಿಯೇಷನ್‌ನ ವೃತ್ತಿಪರ ಸದಸ್ಯರೂ ಆಗಿದ್ದಾರೆ.

ಕರ್ನಾಟಕದ ಮೂಡಬಿದಿರೆಯಲ್ಲಿರುವ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜ್ ನಲ್ಲಿ ಮಾನಸ ರೋಗ ವಿಭಾಗದಲ್ಲಿ ಆಯುರ್ವೇದ ಮನೋವೈದ್ಯ ಪ್ರೊಫೆಸರ್ ಮತ್ತು ಎಚ್‌ಒಡಿ ಆಗಿದ್ದಾರೆ.

ಜೊತೆಗೆ ಕಳೆದ 24 ವರ್ಷಗಳಿಂದ ಕಷ್ಟದಲ್ಲಿರುವ ಜನರ ಮನಸ್ಸಿನ ಅಶಾಂತಿಯನ್ನು ಹೋಗಲಾಡಿಸಲು ಮತ್ತು ತಡೆಯುವಲ್ಲಿ ಅವರು ಉತ್ಸಾಹದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

1. ನಮಸ್ತೆ, ಡಾ| ಅನಿಲ್ ರೈ ಸರ್. ಆರಾಮ ತಾನೇ?
ಒಬ್ಬ ಮನೋವೈದ್ಯರಾಗಿ ಹೇಳುವುದಾದರೆ, ಈ ಯೋಗ-ಕ್ಷೇಮ ವಿಚಾರಣೆಯ ಮಹತ್ವವೇನು?

ನಮಸ್ತೆ ಶ್ರೀನಿಧಿ. ನಾನು ಆರಾಮವಾಗಿದ್ದೇನೆ. ನೀವೂ ಸೌಖ್ಯವಾಗಿರುವಿರಿ ಎಂದು ಭಾವಿಸುತ್ತೇನೆ.

ಮೊದಲನೆಯದಾಗಿ, ಈ ರೀತಿಯ ವಿಚಾರಣೆಯಿಂದ ಒಂದು ಸಕರಾತ್ಮಕ ಭಾವನೆ ಉಂಟಾಗುತ್ತದೆ. ಎರಡನೆಯದಾಗಿ ಇದು ಪರಸ್ಪರ ವ್ಯಕ್ತಿಗಳ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಅಡಿಪಾಯವಾಗುತ್ತದೆ.

2. ನಿಮಗೆ ಮನೋತಜ್ಞರಾಗಬೇಕೆಂಬ ಮನಸ್ಸಾಯಿತೇಕೆ?
ಅದಕ್ಕಾಗಿ ಆಯುರ್ವೇದವನ್ನೇ ಏಕೆ ಆಯ್ದುಕೊಂಡಿರಿ?

ಆಕಾಶದ ಉದ್ದಗಲವನ್ನು ಕುರಿತು ಮನಸ್ಸಿನಲ್ಲೇ ಯೋಚಿಸುತ್ತಿರುವ ಯುವಕನ ಚಿತ್ರ.

ಸಣ್ಣ ವಯಸ್ಸಿನಿಂದಲೇ ಈ ಜಗತ್ತನ್ನು ಅರಿಯಬೇಕೆಂದು ಬಿಜ್ಞಾಸೆ ಉಂಟಾಗಿತ್ತು.

6ನೇ ತರಗತಿಯಲ್ಲಿ ಇರಬೇಕಾದರೆ, ಒಂದು ದಿಕ್ಕಿನಲ್ಲಿ ಹೊರಟರೆ ಎಷ್ಟು ದೂರ ತಲುಪಬಹುದು ಎಂಬ ಪ್ರಶ್ನೆ ಬರುತ್ತಿತ್ತು ಅಂದರೆ ಒಂದು ದಿಕ್ಕಿನಲ್ಲಿ ಹೊರಟು ನಮ್ಮ ದೇಶವನ್ನು ದಾಟಿ, ಭೂಮಿಯನ್ನು ದಾಟಿ, ಸೂರ್ಯನನ್ನೂ ದಾಟಿ ಮುಂದೆ ಹೋಗುತ್ತಿದ್ದರೆ ಅದೆಷ್ಟು ದೂರ ಹೋಗಬಹುದು ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತಿತ್ತು.

ಹಾಗೆ ಯೋಚಿಸುವಾಗ ಈ ಪ್ರಶ್ನೆ ಮನಸ್ಸಿನ ಮೂಲಕ ಬರುವುದು ಎಂದು ತಿಳಿಯಿತು. ಹಾಗಾಗಿ ಮನಸ್ಸಿನ ಆಳವನ್ನು ತಿಳಿಯುವ ಯೋಚನೆ ಉಂಟಾಯಿತು.

ಮನಸ್ಸನ್ನು ಅರ್ಥ ಮಾಡುವುದು ಅಷ್ಟು ಸುಲಭವಾದ ಕೆಲಸವಲ್ಲ. ಆದರೆ ಆಯುರ್ವೇದದಲ್ಲಿ ಮನಸ್ಸಿನ ಬಗ್ಗೆ ಅತ್ಯಂತ ಆಳವಾದ ಮತ್ತು ನಿಖರವಾದ ಜ್ಞಾನ ದೊರೆಯುತ್ತದೆ.

3. ಒಳ್ಳೆಯ ಮನಸ್ಸು – ಕೆಟ್ಟ ಮನಸ್ಸು, ಬೆಣ್ಣೆಯಂತಾ ಮನಸ್ಸು – ಕಲ್ಲಿನಂತಾ ಮನಸ್ಸು ಎಂದು ನಾನಾ ರೀತಿಯಲ್ಲಿ ಮನಸ್ಸಿನ ಕುರಿತ ಮಾತುಕತೆಗಳು ಕೇಳುತ್ತವೆ.
ವಾಸ್ತವದಲ್ಲಿ ಮನಸ್ಸು ಎಂದರೇನು?
ಅದನ್ನು ಅರಿವ ಅಗತ್ಯವಿದೆಯೇ?
ಎಲ್ಲರಿಗೂ ಅದು ಸಾಧ್ಯವೇ?

ಮನಸ್ಸೆಂದರೆ ಆಲೋಚನೆ ಮತ್ತು ಭಾವನೆಗಳ ಸಮೂಹ. ಮನಸ್ಸೆಂದರೆ ನಮಗೆ ಆಲೋಚಿಸಲು, ಯೋಜನೆಗಳನ್ನು ರೂಪಿಸಲು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಹಕರಿಸುತ್ತದೆ..

ಮನಸ್ಸನ್ನು ಅರಿಯಲು ಯತ್ನಿಸಿದರೆ ನಿತ್ಯಜೀವನವನ್ನು ಮತ್ತಷ್ಟು ಸುಗಮ ಹಾಗೂ ಸರಳಗೊಳಿಸಲು ಸಾಧ್ಯ.

ಎಲ್ಲರಿಗೂ ಮನಸ್ಸನ್ನು ಅರಿಯುವುದು ಸುಲಭವಲ್ಲ, ಆದರೆ ಪ್ರತಿನಿತ್ಯ ಅಭ್ಯಾಸದಿಂದ ಮನಸ್ಸನ್ನು ಸ್ವಲ್ಪಮಟ್ಟಿಗೆ ಅರಿಯಬಹುದು.

4. ನೀವು ಗಮನಿಸಿದಂತೆ ಪ್ರಸ್ತುತ ಮಾನವರ ಮನಸ್ಥಿತಿ ಹೇಗಿದೆ?
ಅದರ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳಾವುವು?

ಪ್ರಸ್ತುತ ಮಾನವರ ಮನಸ್ಸು ಅತ್ಯಂತ ಚಂಚಲವಾಗಿದೆ. ಅದಕ್ಕೆ ಕಾರಣ ಆಧುನಿಕ ಜೀವನ ಶೈಲಿ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವ.

5. ಹೆಚ್ಚಿನ ಜನರು ಒತ್ತಡದಿಂದ ಹೊರಬರಬೇಕೆಂಬ ಒತ್ತಡದಲ್ಲಿದ್ದಾರಲ್ಲ! ನೆಮ್ಮದಿಯ ನಿದ್ದೆಗೂ ಒದ್ದಾಡೋರ ಸಂಖ್ಯೆ ಹೆಚ್ಚಿದೆಯಂತೆ! ಏನಂತೀರಿ?

ನಿಜ, ಇಂದು ಎಲ್ಲರ ಜೀವನದಲ್ಲಿ ಒತ್ತಡವೆಂಬುದು ಸರ್ವೇಸಾಮಾನ್ಯವಾಗಿದೆ.

ಒತ್ತಡದಿಂದ ಹೊರ ಬರಬೇಕೆಂದು ಅನೇಕ ಪ್ರಯತ್ನಗಳಾದ ಧ್ಯಾನ, ಯೋಗ, ಅಥವಾ ಸ್ವಾರ್ಥಕ್ಕಾಗಿ ತಪ್ಪಾಗಿ ನಡೆಸುವ ಇತರ ಧಾರ್ಮಿಕ ಕಾರ್ಯಗಳು, ಜೊತೆಗೆ ವಿವಿಧ ಸ್ಥಳಗಳಿಗೆ ಪ್ರವಾಸ ಹೋಗುತ್ತಾರೆ.

ಇದಕ್ಕೆ ಮುಖ್ಯ ಕಾರಣಗಳೆಂದರೆ, ನಿದ್ದೆಯ ಸಮಸ್ಯೆ, ಜೀವನದಲ್ಲಿ ಜಿಗುಪ್ಸೆ, ಒತ್ತಡದ ಬದುಕು ಮತ್ತು ಅತಿಯಾದ ಆಕಾಂಕ್ಷೆಗಳಾಗಿವೆ.

6. ಗುರಿಯ ಸಾಧನೆಗೆ, ಭಯ ಹಾಗೂ ದುಃಖದಿಂದ ಹೊರಬರಲು, ಅಥವಾ ಇಂತಹಾ ಇನ್ನಿತರ ಸಂದರ್ಭಗಳಲ್ಲಿ “ಧನಾತ್ಮಕವಾಗಿ ಯೋಚಿಸು” (Think positively) ಎಂಬ ಸಲಹೆ ಎಲ್ಲರಿಂದಲೂ ಹರಿದುಬರುತ್ತದೆ.
ಅದರ ನಿಜಾರ್ಥವೇನು?
ಅದು ಎಲ್ಲರಿಗೂ, ಎಲ್ಲಾ ಸಂದರ್ಭಗಳಿಗೂ ಅನ್ವಯಿಸುತ್ತದೆಯೇ? 

ಧನಾತ್ಮಕ ಯೋಚನೆಯ ಕುರಿತ ಕನ್ನಡ ಮಾತಿನ ಜೊತೆಗೆ ಅದರ ಕುರಿತು ಯೋಚಿಸುತ್ತಿರುವ ಯುವಕನ ಚಿತ್ರ.

ಎಲ್ಲಾ ಸಂದರ್ಭಗಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಹೊಂದುವುದು ಅತ್ಯಂತ ಮುಖ್ಯವಾಗಿರುತ್ತದೆ.

ಆದರೂ, ಸಂದರ್ಭಕ್ಕೆ ಅನುಗುಣವಾಗಿ ವಿಚಾರಗಳು ಮತ್ತು ಭಾವನೆಗಳು ವ್ಯತ್ಯಾಸವಾಗುತ್ತದೆ. ಅವುಗಳನ್ನೆಲ್ಲ ನಿಖರವಾಗಿ ಪರೀಕ್ಷಿಸುವ ಮೂಲಕ ಯೋಜನೆಗಳನ್ನು ರೂಪಿಸಬೇಕು.

7. SharingShree ಕನ್ನಡದಲ್ಲಿ ಸಂಬಂಧಗಳ ಕುರಿತು ಮಾತುಕತೆ ನಡೆಯುತ್ತಿರುತ್ತದೆ. ಹಾಗಾಗಿ ಈ ಪ್ರಶ್ನೆ;
ಹಲವರು – “ಸಂಬಂಧಗಳು ಚೆನ್ನಾಗಿದ್ದರೆ ತಾನೇ ಮನಸ್ಸು ಸರಿ ಇರೋದು” ಎಂದರೆ, ಇನ್ನು ಕೆಲವರು “ಮನಸ್ಸು ಸರಿ ಇದ್ದರೆ ತಾನೇ ಸಂಬಂಧಗಳು ನೆಟ್ಟಗಿರೋದು” ಎನ್ನುತ್ತಾರೆ.
ಇದಕ್ಕೇನು ಪರಿಹಾರ?

ಮನಸ್ಸು ಸರಿ ಇದ್ದರೆ ಸಂಬಂಧಗಳು ನೆಟ್ಟಗಿರುತ್ತದೆ. ಆದರೆ ಯಾರ ಮನಸ್ಸು ಸರಿ ಇರಬೇಕೆಂಬುದು ಇಲ್ಲಿನ ಪ್ರಶ್ನೆ.

ಇದಕ್ಕೆ ಉತ್ತರ ಮೊದಲನೆಯದಾಗಿ ನಮ್ಮ ಮನಸ್ಸು ಸರಿಯಾಗಿರಬೇಕು. ಎರಡನೆಯದಾಗಿ ತಂದೆ-ತಾಯಿಗಳಲ್ಲಿ ಗೌರವ, ಸಂಬಂಧಿಕರಲ್ಲಿ ಪ್ರೀತಿ, ನಂಬಿಕೆ ಮತ್ತು ತಾಳ್ಮೆ ಇರಬೇಕು.

8. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?’ ಎಂಬ ಮಾತು ಹೆಚ್ಚಿನ ಮನಸ್ಸುಗಳಿಗೇಕೆ ಅರ್ಥವಾಗಲ್ಲ?
ಬಾಲ್ಯದ ಮನಸ್ಸಿನ ಕುರಿತು ನಾವು ತಿಳಿದಿರಬೇಕಾದ ವಿಷಯಗಳೇನು?
ಇದರಲ್ಲಿ ಪೋಷಕರ ಪಾತ್ರವೇನು? 

ಬಾಲ್ಯದ ಏಳು ಎಂಟು ವರ್ಷಗಳು ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇದರಲ್ಲಿ ಪೋಷಕರ ಪಾತ್ರವೂ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಯಾಕೆಂದರೆ ಈ ವಯಸ್ಸಿನಲ್ಲಿ ಮನಸ್ಸು ಹೆಚ್ಚಾಗಿ ವಿಷಯಗಳನ್ನು ಸಂಗ್ರಹ ಮಾಡುತ್ತಿರುತ್ತದೆ ಮತ್ತು ನಂಬಿಕೆಗಳನ್ನು ಗಟ್ಟಿ ಮಾಡುತ್ತಿರುತ್ತದೆ.

ಆ ವಯಸ್ಸಿನ ಸೂಕ್ಷ್ಮ ಮನಸ್ಸಿಗೆ ಅತಿಯಾಗಿ ದುಃಖ, ವೇದನೆ, ಅಪನಂಬಿಕೆ, ದುರಭ್ಯಾಸಗಳನ್ನು ನೋಡುವ ಹಾಗೂ ಪ್ರಚೋದಿಸುವ ವಿಷಯಗಳಿಂದ ದೂರವಿರಿಸಬೇಕು.

9. ಆಚಾರ-ವಿಚಾರ, ಸಂಪ್ರದಾಯಗಳು ಸೇರಿದಂತೆ ಸಮಾಜದಲ್ಲಿರುವ ಇಂತಹಾ ಅನೇಕ ವಿಚಾರಗಳಿಗೂ ಮನಸ್ಸಿನ ಆರೋಗ್ಯಕ್ಕೂ ಇರುವ ನಂಟೇನು?

ವಿವೇಕಯುಕ್ತ ಮತ್ತು ಪ್ರಜ್ಞಾವಂತ ಮನಸ್ಸುಗಳು ನಡೆಸುವ ಎಲ್ಲಾ ಆಚಾರ-ವಿಚಾರ, ಸಂಪ್ರದಾಯಗಳು ಅನೇಕ ಸಂದರ್ಭಗಳಲ್ಲಿ ಸಮಾಜದಲ್ಲಿ ಉಲ್ಲಾಸಭರಿತ ಜೀವನೋತ್ಸವವನ್ನು ತರುತ್ತದೆ.

ಇಲ್ಲಿ ನಾವು ಸ್ವಚ್ಛ ಮನಸ್ಸನ್ನು ಕಾಣಬಹುದು.

10. ಮನುಷ್ಯನ ಮೆದುಳು ಹಾಗೂ ಮನಸ್ಸಿನ ಆಳ ಅಧ್ಯಯನದಿಂದ ನಡೆಯುತ್ತಿರುವ ಸೋಶಿಯಲ್ ಮೀಡಿಯಾ, ಆಧುನಿಕ ಮಾರ್ಕೆಟಿಂಗ್ ಮತ್ತು ಜನಸಾಮಾನ್ಯರ ಮೇಲೆ ಅವುಗಳ ಪ್ರಭಾವವನ್ನು ಕುರಿತು ನೀವು ಏನು ಹೇಳಬಯಸುವಿರಿ? 

ಸೋಶಿಯಲ್ ಮೀಡಿಯಾ ಜಾಹಿರಾತು ಮತ್ತು ಅದರ ಕುರಿತ ಕನ್ನಡ ಮಾತನ್ನು ಒಳಗೊಂಡಿರುವ SharingShree ಕನ್ನಡದ ಚಿತ್ರ.

ಮನಸ್ಸಿನ ಆಳವಾದ ಅಧ್ಯಯನದ ಅಗತ್ಯವಿದೆ. ಆದರೆ ಅದು ಕೇವಲ ಮಾರ್ಕೆಟಿಂಗ್ ಗೆ ಸೀಮಿತವಾಗಿರದೆ ಜನಸಾಮಾನ್ಯರ ಪ್ರಗತಿಗೆ ಸಹಕಾರಿಯಾಗಬೇಕು .

ವ್ಯವಹಾರಾತ್ಮಕವಾಗಿ ನಡೆಯುವ ಅಧ್ಯಾಯಗಳು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗಬಹುದು.

11. ಮಾನಸಿಕ ಎಂಬ ಪದ ಕೇಳಿದೊಡನೆ ಬಹುತೇಕರಿಗೆ “ಹುಚ್ಚು” ಅಥವಾ “ಡಿಪ್ರೆಶನ್” ಎಂಬ ಗಂಭೀರ ಮನಸ್ಥಿತಿಯೇ ನೆನಪಾಗುತ್ತದೆ.
ಇದಲ್ಲದೆ, ವೈದ್ಯರ ಅಥವಾ ವೃತ್ತಿಪರ ಮನೋತಜ್ಞರ ನೇರ ಸಹಾಯದ ಅವಶ್ಯಕತೆ ಕೋರುವ ಮಾನಸಿಕ ಅಸ್ವಸ್ಥ ಸ್ಥಿತಿಗಳಾವುವು?
ಯಾವ ಹಂತದಲ್ಲಿ ವೈದ್ಯರನ್ನು ಭೇಟಿಯಾಗಬೇಕು ಎಂದು ಒಬ್ಬ ವ್ಯಕ್ತಿಗೆ ಹೇಗೆ ತಿಳಿಯಬಹುದು? 

ಯಾವ ವ್ಯಕ್ತಿಗೆ ತನ್ನ ಮನಸ್ಸಿನ ಆಲೋಚನೆಗಳಿಂದಾಗಿ ತನ್ನ ದಿನನಿತ್ಯದ ಕಾರ್ಯಗಳನ್ನು ಮಾಡಲು ತೊಂದರೆಯಾಗುತ್ತದೋ ಅಂತಹ ವ್ಯಕ್ತಿಗಳು ಮನೋವೈದ್ಯರ ಸಲಹೆಯನ್ನು ಪಡೆಯಬಹುದು.

ಇಂತಹ ಕಾಯಿಲೆಗಳಲ್ಲಿ ನಿದ್ರಾಹೀನತೆ, ಕೋಪ, ಅತಿಯಾದ ದುಃಖ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಮುಂದುವರಿದು ತದನಂತರ ತನ್ನಷ್ಟಕ್ಕೆ ತಾನು ಮಾತನಾಡುವುದು, ಯಾರೋ ಮಾತಾಡಿದಂತೆ ಅನಿಸುವುದು ಇತ್ಯಾದಿ.

12. ಆರೋಗ್ಯಕರ ಮನಸ್ಸನ್ನು ಬಯಸುವವರಿಗೆ ನಿಮ್ಮ ಟಿಪ್ಸ್?

ಸರಿಯಾಗಿ ದಿನಚರಿಯನ್ನು ಪಾಲಿಸುವುದು. ಆಹಾರ ನಿದ್ರಾ ಬ್ರಹ್ಮಚರ್ಯಗಳಲ್ಲಿ ಹತೋಟಿಯಲ್ಲಿರುವುದು.

13. ಕೊನೆಯ ಪ್ರಶ್ನೆ: ತಜ್ಞರಾಗಿ ಮತ್ತು ವೈದ್ಯರಾಗಿ ಹಲವಾರು ವರ್ಷಗಳ ಕಾಲ ಬೇರೆ ಬೇರೆ ರೀತಿಯ ಮನಸ್ಥಿತಿಗಳ ಜೊತೆ ವ್ಯವಹರಿಸಿ, ಸ್ವಾಸ್ತ್ಯವನ್ನು ತರಲು ಯತ್ನಿಸುವ ಕಾರ್ಯದಿಂದ ನಿಮ್ಮಂತಹಾ ವೃತ್ತಿಪರರ ಮನಸ್ಸಿನ ಮೇಲಾಗುವ ಪ್ರಭಾವವೇನು? 

ಹೆಚ್ಚಾಗಿ ಅನೇಕ ವೈದ್ಯರುಗಳಲ್ಲಿ ಮಾನಸಿಕ ಸಮಸ್ಯೆ ಉಂಟಾಗುತ್ತದೆ.

ನಾವು ಮಾಡುವ ಪ್ರತಿಯೊಂದು ಕಾರ್ಯಗಳನ್ನು ನಮ್ಮನ್ನೆಲ್ಲ ನಡೆಸುವ ಅಘಾದ ಶಕ್ತಿಗೆ ಅರ್ಪಿಸಬಹುದು ಅಥವಾ ಆ ಶಕ್ತಿಯ ಮೂಲಕ ಕೆಲಸಗಳು ನಡೆಯುತ್ತಿವೆ ಎಂದು ಅರಿಯಬಹುದು.

ನನ್ನ ಪ್ರತಿಕ್ರಿಯೆ

13 ಪ್ರಶ್ನೆಗಳಿಗೆ ತಾಳ್ಮೆಯಿಂದ, ನಿಖರವಾಗಿ ಉತ್ತರಿಸಿದ್ದಕ್ಕೆ ಡಾ| ಅನಿಲ್ ರೈ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಡಾ| ವಿನಯಚಂದ್ರ ಶೆಟ್ಟಿ ಹಾಗೂ ಶ್ರೀಕೃಷ್ಣ ಜೊತೆಗಿನ ಪ್ರಶ್ನೋತ್ತರಗಳಂತೆ ಇಲ್ಲಿಯೂ ನಿತ್ಯ ಜೀವನಕ್ಕೆ ಸಹಕಾರಿಯಾಗುವ ಹಲವಾರು ವಿಷಯಗಳನ್ನು ಕಲಿಯಲು ಸಾಧ್ಯವಾಯಿತು.

ಈ ನನ್ನ ಪ್ರತಿಕ್ರಿಯೆಯಲ್ಲಿ ಕೇವಲ ಮೇಲಿನ ಪ್ರಶ್ನೋತ್ತರ ಮಾತ್ರವಲ್ಲದೆ, ಅನಿಲ್ ಜೊತೆಗಿನ ನೇರ ಮಾತುಕತೆಯ ಅಂಶಗಳೂ ಒಳಗೊಂಡಿದೆ.

ಮನಸ್ಸನ್ನು ಅರಿಯೋದು ಅನಿವಾರ್ಯವೇ?

ಕಣ್ಣಿಗೆ ಕಾಣದ, ಕೈಯಲ್ಲಿ ಮುಟ್ಟಲು ಸಾಧ್ಯವಿಲ್ಲದ, ಆದರೂ ನಿತ್ಯ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮನಸ್ಸನ್ನು ಅರಿಯುವುದು ಅನಿವಾರ್ಯವೇ ಎಂದು ಕೇಳಿದರೆ ಅದಕ್ಕೆ ಹೌದು ಅಥವಾ ಇಲ್ಲ ಎಂಬ ನೇರ ಉತ್ತರವಿಲ್ಲ.

ಏಕೆಂದರೆ ಅದಕ್ಕಾಗಿ ಎಲ್ಲರೂ ಬಲವಾದ ಕಾರಣಗಳನ್ನು ಹೊಂದಿರುವುದಿಲ್ಲ.

ಉದಾಹರಣೆಗೆ – ವೈಯಕ್ತಿಕವಾಗಿ ಸಮಾಜದಲ್ಲಿ ಅಸಾಮಾನ್ಯ ಎಂಬ ದೇಹ ಸ್ಥಿತಿಗಳು, ಬಾಲ್ಯದಿಂದಲೇ ನಾನಾ ರೀತಿಯ ದುಃಖಗಳನ್ನು ಎದುರಿಸಿ ಶಾಶ್ವತ ಪರಿಹಾರಕ್ಕಾಗಿ ದಾರಿ ಹುಡುಕುವುದು, ಅಥವಾ ಡಾ| ಅನಿಲ್ ರೈ ಅವರಂತೆ ವೃತ್ತಿಪರರಾಗಿಲ್ಲದಿರುವುದು – ಹೀಗೆ ಏನೂ ಕಾರಣವಿಲ್ಲದೆ ಮನಸ್ಸನ್ನು ಅರಿವ ಅನಿವಾರ್ಯತೆ ಎಲ್ಲರಿಗೂ ಬರದು ಎಂಬುದು ನಾನು ಗಮನಿಸಿದ ಅಂಶ.

ಒಳಿತು ಮತ್ತು ಕೆಡುಕುಗಳು:

ಎಲ್ಲಾ ಒಳಿತು ಕೆಡುಕುಗಳ ಮೂಲ ಮನಸ್ಸು ಎಂಬ ಕನ್ನಡ ವಾಕ್ಯದೊಡನೆ ಒಬ್ಬ ಧ್ಯಾನ ನಿರತ ಹುಡುಗನನ್ನು ಒಳಗೊಂಡ ಚಿತ್ರ.

ಮನವನ್ನು ಅರಿಯಲು ಯತ್ನಿಸುವುದರಿಂದ ಈ ಕೆಳಗಿನ ಉಪಯೋಗಗಳನ್ನು ಪಡೆಯಬಹುದು.

  • ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಇತರರನ್ನೂ ಅರಿಯಲು ಸುಲಭವಾಗುತ್ತದೆ.
  • ಸೂಕ್ತವಾದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರವನ್ನು ಆಯ್ದುಕೊಳ್ಳಲು ಸಹಕಾರಿ.
  • ಪ್ರಪಂಚದ 8 ದಿಕ್ಕುಗಳಿಂದಲೂ ನಡೆಸಲಾಗುವ ಮಾರ್ಕೆಟಿಂಗ್ ಮತ್ತು ಅದರ ದುಷ್ಪರಿಣಾಮಗಳಿಂದ ಪಾರಾಗಲು ಸಾಧ್ಯ.
  • ಉತ್ತಮ ಸಂವಹನ, ಸ್ವಯಂ ಪ್ರೇರಣೆಯಂತಹಾ ಉಪಯೋಗಿ ಕೌಶಲ್ಯಗಳನ್ನೂ ಬೆಳೆಸಿಕೊಳ್ಳಲು ಇದು ನೇರ ದಾರಿ.

ಇಂತಹಾ ಉಪಯೋಗಗಳ ಹೊರತಾಗಿಯೂ ಮನವನ್ನು ಅರಿಯಲು ಹೊರಟರೆ ಕೆಲವು ಸವಾಲುಗಳ ಜೊತೆಗೆ ಸಮಾಜ ಅಂತಹವರನ್ನು ‘ಬೇರೆ ಅರ್ಥದಲ್ಲಿ’ ಪರಿಗಣಿಸುತ್ತದೆ.

ಆಸಕ್ತಿ, ಅಪಾರ ತಾಳ್ಮೆಯನ್ನು ಬಯಸುವ ಈ ಪ್ರಕ್ರಿಯೆ ಈಗಾಗಲೇ ಹೊಂದಿರುವ ಕೆಲವು ನಂಬಿಕೆಗಳನ್ನೂ ಪ್ರಶ್ನಿಸುವಂತೆ ಮಾಡಬಹುದು. ಅಲ್ಲದೆ, ಪ್ರಾರಂಭದಲ್ಲಿ ಇದೊಂದು ಹಿಂಸೆಯಾಗಿ ತೋರಬಹುದು.

ಕಲಿಯುವ ಮೂಲ

ಇನ್ನು ಮನಸ್ಸನ್ನು ಅರಿಯಲು ಆಸಕ್ತಿಯುಳ್ಳವರಿಗೆ ಸರಿಯಾದ ಮೂಲವನ್ನು ಆಯ್ದುಕೊಳ್ಳುವುದು ಕಷ್ಟದ ಕೆಲಸವೇ.

ಏಕೆಂದರೆ ಈ ಕುರಿತ ಸಾವಿರಗಟ್ಟಲೆ ಪುಸ್ತಕಗಳಿರಬಹುದು ಮತ್ತು ನಾ ಮುಂದು ತಾ ಮುಂದು ಎಂಬಂತೆ ಸೋಶಿಯಲ್ ಮೀಡಿಯಾಗಳಲ್ಲಿ ಮನಸ್ಸಿನ ಬಗ್ಗೆ ಕಲಿಸುವ ಜಾಹಿರಾತುಗಳು ಬರುತ್ತಿರುತ್ತವೆ.

ಇದರ ಬಗ್ಗೆ ಎಚ್ಚರ ಅಗತ್ಯ. ಏಕೆಂದರೆ ಇದು ಇತರ ವಿಷಯಗಳನ್ನು ಕಲಿತಂತಲ್ಲ. ಕೇವಲ ಸೈದ್ದಂತಿಕವಾಗಿ (theory) ಕಲಿತರೆ ಹತ್ತು ಜನರೆದುರು ಶಭಾಷ್ ಅನಿಸಿಕೊಳ್ಳಬಹುದೇ ಹೊರತು ನಿತ್ಯ ಜೀವನದಲ್ಲಿ ಬದಲಾವಣೆ ಆಗದು.

ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಇದು ಬಲವಂತವಾಗಿ ತಮಗೆ ತಾವೇ ಅಥವಾ ಇನ್ನೊಬ್ಬರಿಂದ ಹೇರಿಸಿಕೊಳ್ಳುವ ವಿಷಯವಲ್ಲ.

ಇಂತಹಾ ಪ್ರಶ್ನೋತ್ತರಗಳನ್ನು ಗಮನಿಸಿದಾಗ, ಇಂದಿಗೂ ಸರಿಯಾದ ರೀತಿಯಲ್ಲಿ ವಿಷಯಗಳ ಪರಸ್ಪರ ಕಲಿಕೆ ಮತ್ತು ಹಂಚಿಕೆಯ ಅಗತ್ಯ ಅರಿವಾಗುತ್ತದೆ.

ಅಲ್ಲವೇ?

ತೀರ್ಮಾನ

ಇಂದು ಡಾ| ಅನಿಲ್ ರೈ ಸರ್ ಅವರೊಂದಿಗಿನ ಈ ಪ್ರಶ್ನೋತ್ತರಗಳಿಂದ ಮನಸ್ಸಿನ ಕುರಿತ ಹಲವಾರು ವಿಷಯಗಳನ್ನು ತಿಳಿದೆವು.

ಮನಸ್ಸು ಎಂದರೇನು ಎಂಬ ಮೂಲಭೂತ ಪ್ರಶ್ನೆಯಿಂದ ತೊಡಗಿ, ಅದನ್ನು ಅರಿವ ಅಗತ್ಯ, ಸಾಧ್ಯತೆ, ಬೆಳೆವ ಮಕ್ಕಳ ಮನಸ್ಸು, – ಹೀಗೆ ನಿತ್ಯ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಮನಸ್ಸಿನ ವಿಚಾರಗಳನ್ನು ಮನೋತಜ್ಞರಿಂದಲೇ ಉತ್ತರ ರೂಪದಲ್ಲಿ ಪಡೆದೆವು.

ನೀವು ಕೇಳಬಯಸುವ ಪ್ರಶ್ನೆಗಳಿವಿಯೇ?

ಕಾಮೆಂಟ್ ಮೂಲಕ ತಿಳಿಸಿ.

Share ಮಾಡಿ!

ಈ ಬ್ಲಾಗ್ ಪೋಸ್ಟ್ ನ ವಿಷಯ ಹಾಗೂ ಉಪಯೋಗವನ್ನು ನಿಮ್ಮ ಸ್ನೇಹಿತರು ಮತ್ತು ಆತ್ಮೀಯರಿಗೂ ಶೇರ್ ಮಾಡಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

4 thoughts on “ಬೇಕೇ ಸದೃಢ ಮನಸ್ಸು? । ಕಲಿಯೋಣ ಡಾ| ಅನಿಲ್ ರೈ ಅವರಿಂದ | QnA #3”

  1. You have explained very well about the different types of awareness of the mind. Information on the importance of mastery of the mind and the benefits of discipline in life and its effects on our body is very useful.

    1. ನಿಮ್ಮ ಕಾಮೆಂಟ್ ಗಾಗಿ ಧನ್ಯವಾದಗಳು.

      ಈ ಬ್ಲಾಗ್ ಪೋಸ್ಟ್ ನಿಮಗೆ ಉಪಯೋಗವಾಗಿದೆ ಎಂದು ತಿಳಿಯಲು ಸಂತೋಷವಾಯಿತು.

      ನಿಮ್ಮ ಮಾತು ಇತರರಿಗೂ ಪ್ರೇರಣಾದಾಯಕವಾಗಿದೆ.

      SharingShree ಕನ್ನಡದ ಇತರ ಬ್ಲಾಗ್ ಪೋಸ್ಟ್ ಗಳನ್ನೂ ಓದಿ ಇದೇ ರೀತಿ ಪ್ರತಿಕ್ರಿಯಿಸಬೇಕಾಗಿ ವಿನಂತಿ. ಇದರಿಂದ ಇತರರಿಗೂ ಸಹಾಯವಾಗುತ್ತದೆ.

Leave a Comment

Your email address will not be published. Required fields are marked *

Scroll to Top