ಎರಡೂ-ಕೈಗಳಲ್ಲಿ-ಬಲ್ಬ್ ಗಳನ್ನು-ಹಿಡಿದ-ಹುಡುಗಿಯ-ಕಾರ್ಟೂನ್-ಫೋಟೋ-ಶೇರ್-ಚಿನ್ಹೆ-ಮತ್ತು-ಕನ್ನಡ-ಪದಗಳನ್ನು-ಒಳಗೊಂಡ-ಚಿತ್ರ-ಕಲಿಕೆ-ಮತ್ತು-ಹಂಚಿಕೆಯನ್ನು-ಸೂಚಿಸುತ್ತಿದೆ.

ಕಲಿಕೆ ಮತ್ತು ಹಂಚಿಕೆ, ಜೀವನ ಬಂಡಿಯ ಸುಗಮ ಪಯಣಕೆ!
Learning and Sharing in Kannada!

ನಮಸ್ಕಾರ ಕಣ್ರೀ.

ಮೊದಲನೆಯದಾಗಿ ಜೀವನ ಬಂಡಿಯ ಸುಗಮ ಪಯಣ, ಬೆಳವಣಿಗೆ, ಕಲಿಕೆ ಮತ್ತು ಹಂಚಿಕೆಯಂತಹಾ ಪರಿಕಲ್ಪನೆಗಳನ್ನು ನಾವು ಏಕೆ ಪರಿಗಣಿಸಬೇಕು?

“ಬೆಳವಣಿಗೆ” ಅಥವಾ “ಅಭಿವೃದ್ಧಿ” ಎನ್ನುವುದು ವೈಯಕ್ತಿಕ ಬೆಳವಣಿಗೆ ಅಥವಾ ಜೀವನದ ಅಭಿವೃದ್ದಿಗಾಗಿ ಬಳಸಬಹುದಾದ ಶಕ್ತಿಯುತ ಪದಗಳಾಗಿದ್ದು ಅವು ನಮ್ಮನ್ನು ಸರಿಯಾದ ಗುರಿಗಳನ್ನು ನಿರ್ಧರಿಸಲು ಮತ್ತು ಅವುಗಳನ್ನು ಸಾಧಿಸಲು ಪ್ರೇರೇಪಿಸುತ್ತವೆ.

2022 ರಲ್ಲಿ USD 44.11 ಶತಕೋಟಿಯಷ್ಟಿದ್ದ ಜಾಗತಿಕ ವೈಯಕ್ತಿಕ ಅಭಿವೃದ್ಧಿ ಮಾರುಕಟ್ಟೆಯ ಗಾತ್ರವು, 5.5% ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (CAGR) 2030 ರ ವೇಳೆಗೆ USD 71.42 ಶತಕೋಟಿ ಮೌಲ್ಯವನ್ನು ತಲುಪುತ್ತದೆ ಎನ್ನುತ್ತಿವೆ ಅಂಕಿಅಂಶಗಳು.

ಹಾಗಂತ “ಬೆಳವಣಿಗೆ” ಅಥವಾ “ಅಂಭಿವೃದ್ದಿ” ಎಂದು (ಧನಾತ್ಮಕವಾಗಿ) ಯೋಚಿಸಿದೊಡನೆ ಅದು ಸಾಧ್ಯವಾದೀತೇ!

ಇಲ್ಲಿ ಕೆಲವು ಪ್ರಮುಖ ಸಮಸ್ಯೆಗಳೂ ಸೇರಿಕೊಂಡಿವೆ.

ಕಲಿಕೆ ಮತ್ತು ಹಂಚಿಕೆಯ ಕುರಿತು ಓದೋ ಮುನ್ನ ಪರಿಗಣಿಸಿ ಇದನ್ನ!

ಈ ಲೇಖನ – ಬರಹಗಾರನನ್ನು ಎಲ್ಲಾ ತಿಳಿದವನೆಂದೂ, ಓದುತ್ತಿರುವವರನ್ನು ಏನೂ ತಿಳಿಯದವರೆಂದು ಭಾವಿಸಿ, ಟಿಪ್ಪರ್ ಮಣ್ಣು ಸುರಿವಂತೆ ಓದುಗರ ತಲೆಗೆ ವಿಷಯಗಳನ್ನು ಸುರಿಯುವ ಪ್ರಯತ್ನವಲ್ಲ.

ಈ ಲೇಖನದಲ್ಲಿ ಬರುವ ವಿಷಯಗಳಿಗಿಂತ ಹೆಚ್ಚಿನ ತಿಳುವಳಿಕೆ ನಿಮಗೆ ಇರಲೂಬಹುದು, ಇಲ್ಲದಿರಲೂಬಹುದು. ಹಾಗಾಗಿ, ಇದನ್ನು ಓದಲು ಮುಕ್ತ ಮನಸ್ಸಿನ ಅವಶ್ಯಕತೆ ಇದೆ.

ಇಲ್ಲಿ ಸವಾಲುಗಳಿವೆ, ಓಕೆ!

  • ಪ್ರಪಂಚದಲ್ಲಿ ಲಭ್ಯವಿರುವ ವಿಷಯಗಳ ಅಥವಾ ಮಾಹಿತಿಯ ಬೃಹತ್ ಪ್ರಮಾಣವು ಯಾವುದನ್ನೆಲ್ಲಾ ಸ್ವೀಕರಿಸಬೇಕು, ಎಲ್ಲಿಂದ ಪ್ರಾರಂಭಿಸಬೇಕು ಮತ್ತು ಎಲ್ಲಿ ನಿಲ್ಲಿಸಬೇಕು ಎಂಬ ಗೊಂದಲಗಳನ್ನು ಸೃಷ್ಟಿಸುತ್ತದೆ. ಇದು ಸ್ಪಷ್ಟತೆಯ ಕೊರತೆಗೆ ಕಾರಣವಾಗುತ್ತದೆ.
  • ವರ್ಷಾನುಗಟ್ಟಲೆ ಶೈಕ್ಷಣಿಕ ಶಿಕ್ಷಣ ಪಡೆದು ಶಿಕ್ಷಣ ಸಂಸ್ಥೆಗಳಿಂದ ಹೊರ ಬರುವಾಗ ವಿಕಾಸಗೊಳ್ಳಬೇಕಾದ ಮನಸ್ಸು ಸಂಕುಚಿತವಾಗೇ ಇರುತ್ತದೆ. ಇದು ಕಲಿಕೆ ಎಂದಾಕ್ಷಣ ಶಾಲಾ ಕಾಲೇಜುಗಳ ಹೊರೆಯನ್ನೇ ನೆನೆದು ಮಲಗೇ ಬಿಡುತ್ತದೆ.
  • ಬೆಳವಣಿಗೆ ಮತ್ತು ಅಭಿವೃದ್ಧಿ ಎಂದಾಗ ಕೆಲವೇ ಕೆಲವು ಆಯ್ದ ಸನ್ನಿವೇಶಗಳನ್ನೋ ಅಥವಾ ಉದಾಹರಣೆಗಳನ್ನೋ ಆಧಾರವಾಗಿಟ್ಟು ಎಲ್ಲರನ್ನೂ ಅದರಿಂದಲೇ ಅಳೆಯಲಾಗುತ್ತದೆ.
  • ವಿಷಯಗಳ ಜೊತೆಗೆ ಕಲಿಕೆಯ ಮೂಲಗಳ ಆಯ್ಕೆಯಲ್ಲಿ ಎಡವಟ್ಟು.
  • ವಿಶೇಷವಾಗಿ ತಂತ್ರಜ್ಞಾನಗಳಲ್ಲಿನ ತ್ವರಿತ ಬದಲಾವಣೆಗಳು ಮತ್ತು ದೈನಂದಿನ ಜೀವನದ ಮೇಲೆ ಅವುಗಳ ಪ್ರಭಾವದಿಂದಾಗಿ ಕಲಿಕೆಯು ಅತ್ಯಂತ ಸಂಕೀರ್ಣ(complex )ವಾಗಿದೆ.

ವಾಸ್ತವವಾಗಿ, “ಕಲಿಕೆಯು, ಆರಂಭಿಕ ಶಾಲಾ ಶಿಕ್ಷಣವನ್ನು ಮೀರಿ, ಕಲಿಕೆ ಮತ್ತು ಸಾಮಾಜಿಕ ಅಭ್ಯಾಸದ ಪರಿಸರವನ್ನು ಬದಲಾಯಿಸುವಲ್ಲಿ ಹೊಸ ವಿಧಾನಗಳನ್ನು ಬಯಸುತ್ತದೆ” ಎಂದು ಸೈನ್ಸ್‌ಡೈರೆಕ್ಟ್‌ನಲ್ಲಿನ ವರದಿಯು ಹೇಳುತ್ತದೆ.

ಅದಕ್ಕಾಗಿಯೇ SharingShree ಕನ್ನಡದ “ಕಲಿಕೆ ಮತ್ತು ಹಂಚಿಕೆ” ಪರಿಕಲ್ಪನೆಯು ಈ ಸಮಸ್ಯೆಗಳನ್ನು ಸರಳಗೊಳಿಸಲು ಮತ್ತು ಸಂಬಂಧಿತ ವಿಷಯಗಳನ್ನು ಸುಲಭವಾಗಿ ಸಂವಹನ ಮಾಡುವ ಮೂಲಕ ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತದೆ.

ಸರಿ! ವಿಷಯಕ್ಕೆ ಬರೋಣ.

ಬೆಳವಣಿಗೆಯ ವಿಚಾರ – ಇರಲಿ ಎಚ್ಚರ!

ಬೆಳವಣಿಗೆಯ-ವಿಧಗಳನ್ನು-ಸೂಚಿಸುವ-ಎರಡು-ಪ್ರತ್ಯೇಕ-ಗೆರೆಗಳು-ಕೆಂಪು-ಮತ್ತು-ಹಸಿರು-ಹಿನ್ನಲೆಯೊಂದಿಗೆ-ಕನ್ನಡ-ವಾಕ್ಕಾಯಗಳನ್ನು-ಹೊಂದಿರುವ-SharingShree-ಕನ್ನಡದ-ಚಿತ್ರ.

ಪರಿಸ್ಥಿತಿ ಅಥವಾ ಗುರಿಗಳನ್ನು ಅವಲಂಬಿಸಿ, ನೀವೂ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯು ಜೀವನದ ಬೆಳವಣಿಗೆಯ ಬಗ್ಗೆ ವಿಭಿನ್ನ ವ್ಯಾಖ್ಯಾನಗಳು ಮತ್ತು ಅಭಿಪ್ರಾಯಗಳನ್ನು ಹೊಂದಿರಬಹುದು.

ಸಾಮಾನ್ಯವಾಗಿ 90% ಕ್ಕಿಂತಲೂ ಹೆಚ್ಚಿನ ಜನರು ಬೆಳವಣಿಗೆಯನ್ನು ಒಂದು ಅಂತ್ಯ ಮತ್ತು ಸ್ಥಿರ ಬಿಂದು ಎಂದು ಪರಿಗಣಿಸುತ್ತಾರೆ. ಆದ್ದರಿಂದ ನಿಮಗೂ ಬೆಳವಣಿಗೆಯ ಪದವನ್ನು ಕೇಳಿದಾಗ, ಬಹುಶಃ ಮನಸ್ಸಿನಲ್ಲಿ ಮೇಲ್ಮುಖವಾದ ಗ್ರಾಫ್ ಲೈನ್ ಕಾಣಿಸಿಕೊಳ್ಳುತ್ತಿರಬಹುದು.

ಹೌದೇ?

ಇಲ್ಲಿ ನಾವು ಬೆಳವಣಿಗೆ ಎಂಬ ಪದವನ್ನು ಏರಿಳಿತಗಳು, ಯಶಸ್ಸು, ವೈಫಲ್ಯಗಳು, ಧನಾತ್ಮಕ ಮತ್ತು ಋಣಾತ್ಮಕ ಎಂಬ ಎಲ್ಲಾ ಅಂಶಗಳನ್ನು ಒಳಗೊಂಡ ಜೀವನ ಪ್ರಯಾಣ ಎಂಬ ಅರ್ಥದಲ್ಲಿ ಬಳಸುತ್ತಿದ್ದೇವೆ.

ಉಪಯುಕ್ತ ಹಾಗೂ ನಮಗೆ ಸಂಬಂಧಿತ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಇದು ಹೊಸ ಅನನ್ಯ ಅವಕಾಶಗಳು ಮತ್ತು ಮೂಲಗಳನ್ನು ಸೃಷ್ಟಿಸುತ್ತದೆ. ಅಂತಹ ಕಲಿಕೆಗಳನ್ನು ಹಂಚಿಕೊಂಡಾಗ, ಉಪಯುಕ್ತ ಮಾನವ ಸಂಪರ್ಕಗಳನ್ನು ಹೊಂದುವ ಸಾಧ್ಯತೆಯು ಹೆಚ್ಚಾಗುತ್ತದೆ.

ಸಂಪರ್ಕಗಳು ಮತ್ತು ಸಂವಹನ – ಬೇಕು ಗ’ಮನ’!

ಮನುಷ್ಯ-ಆಕಾರಗಳನ್ನೊಳಗೊಂಡ-ಅರ್ಥಪೂರ್ಣ-ಮಾನವ-ಸಂಪರ್ಕಗಳನ್ನು-ಸೂಚಿಸುವ-ಚಿತ್ರವು-SharingShree-ಕನ್ನಡದ-ಕನ್ನಡ-ಉಲ್ಲೇಖವನ್ನೂ-ಒಳಗೊಂಡಿದೆ

ಬಿಲೋಂಗಿಂಗ್: ದಿ ಸೈನ್ಸ್ ಆಫ್ ಕ್ರಿಯೇಟಿಂಗ್ ಕನೆಕ್ಷನ್ ಆಂಡ್ ಬ್ರಿಡ್ಜಿಂಗ್ ಡಿವೈಡ್ಸ್” ಪುಸ್ತಕದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಾಗ, ಸ್ಟ್ಯಾಂಡ್‌ಫೋರ್ಡ್ ನ ಪೋಸ್ಟ್ ಕೆಲವು ಆಸಕ್ತಿದಾಯಕ ಒಳನೋಟಗಳನ್ನು ಒದಗಿಸಿದೆ, ಅದೇನೆಂದರೆ;

ಐದು ಅಮೆರಿಕನ್ನರಲ್ಲಿ ಒಬ್ಬರು ದೀರ್ಘಕಾಲದ ಒಂಟಿತನದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಹದಿಹರೆಯದವರು ಮತ್ತು ವಯಸ್ಕರು ಅಪಾಯವನ್ನು ಹೆಚ್ಚಿಸುತ್ತಿದ್ದಾರೆ. ಕೆಲಸದಲ್ಲಿ, ಶಾಲೆಯಲ್ಲಿ ಮತ್ತು ನಮ್ಮ ಸಮುದಾಯಗಳಲ್ಲಿ ಸಾಮಾಜಿಕ ಸಂಬಂಧಗಳು ಹಳಸಿವೆ.

ಇದು ಕೇವಲ ಒಂದು ನಿರ್ದಿಷ್ಟ ದೇಶಕ್ಕೆ ಸೀಮಿತವಾಗಿಲ್ಲ, ಬದಲಾಗಿ ಪ್ರಪಂಚದಾದ್ಯಂತ ಹರಡಿದೆ ಎಂದು ಸುತ್ತಮುತ್ತಲಿನ ಸೂಕ್ಷ್ಮ ಅವಲೋಕನದಿಂದ ನಮಗೆ ತೋರುತ್ತದೆ.

ನಿಮ್ಗೂ ಹಾಗೆ ಅನಿಸ್ತಿದೆಯೇ?

ಪರಸ್ಪರ ಪ್ರಯೋಜನಕಾರಿ ರೀತಿಯಲ್ಲಿ ಜನರನ್ನು ಸಂಪರ್ಕಿಸಲು ಮತ್ತು ಸಂವಹನ ನಡೆಸಲು ನಮಗೆ ಅನುವು ಮಾಡಿಕೊಡುವ ಸಾಮಾಜಿಕ ಜಾಲತಾಣಗಳಂತಹಾ ತಂತ್ರಜ್ಞಾನಗಳಲ್ಲಿ ಏನೇನೋ ಪ್ರಗತಿಗಳನ್ನು ವೀಕ್ಷಿಸುತ್ತಿರುವಾಗ, ಇಂತಹಾ ಸಮಸ್ಯೆಗಳನ್ನು ಎದುರಿಸುವುದು ದುರದೃಷ್ಟಕರವಾಗಿದೆ.

ಯಾಕಪ್ಪಾ ಹೀಗೆ?

ಸಂಭವನೀಯ ಕಾರಣಗಳು

  • ಸಂಬಂಧಗಳು ಮತ್ತು ನಿಜವಾದ ಸ್ನೇಹದ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸುವುದು.
  • ನಿಕಟ ಸಂಬಂಧಿಕರೊಂದಿಗೂ ಮಾತುಕತೆ ಕೇವಲ ಆನ್ಲೈನ್ ಗಷ್ಟೇ ಸೀಮಿತವಾಗಿದೆ. ನೇರ ಭೇಟಿ, ಸಂತಸದ ಕಾಲಾಹರಣ, ಹಾಸ್ಯ ಎಲ್ಲವೂ ಮಾಯವಾಗುತ್ತಿದೆ.
  • ಸಂವಹನ ಕೌಶಲ್ಯಗಳನ್ನು ಸುಧಾರಿಸಲು ಆಸಕ್ತಿಯ ಕೊರತೆ.
  • ಮೌಲ್ಯಗಳ ನ್ಯಾಯಯುತ ವಿನಿಮಯವಿಲ್ಲದೆ, ಮಾನವ ಸಂಪರ್ಕಗಳ ತಪ್ಪಾದ ಬಳಕೆ,
  • ಅವಾಸ್ತವಿಕ ನಿರೀಕ್ಷೆಗಳು, ಇತ್ಯಾದಿ.

ಪರಿಹಾರ ಆಧಾರಿತ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು, ದೈನಂದಿನ ಜೀವನದಲ್ಲಿ ಸಂಬಂಧಗಳ ನಿರ್ವಹಣೆಯನ್ನು ಚರ್ಚಿಸುವ ಮೂಲಕ SharingShree ಕನ್ನಡ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ.

ನಮ್ಮ ಪ್ರಯಾಣ ಮುಂದುವರಿದಂತೆ ಇತರ ಅಗತ್ಯ ಹಾಗೂ ಉಪಯುಕ್ತ ವಿಷಯಗಳನ್ನೂ ಪರಿಗಣಿಸಲಾಗುವುದು.

ವಿಭಿನ್ನ ಹಿನ್ನೆಲೆಗಳನ್ನು ಹೊಂದಿರುವ ಜನರೊಂದಿಗೆ ಸಂಭಾಷಣೆಗಳು

ಸಂವಹನ, ಪ್ರಶ್ನಿಸುವ ಕಲೆ, ಮಾನವರ ಮನಸ್ಥಿತಿ, ಅಗತ್ಯಗಳು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಂತಹಾ ಸಹಾಯಕ ಕೌಶಲ್ಯಗಳನ್ನು ಕಲಿಯಲು ಇದು ಸುಲಭವಾದ ಮಾರ್ಗವಾಗಿದೆ.

ಹೆಚ್ಚಿನ ವಿಷಯಗಳಿಗಾಗಿ:

ಅನುಭವ ಹಾಗೂ ಪರಿಣತಿಯಿಂದ ಪ್ರಗತಿ

ಕಾರ್ಟೂನ್-ತರಹದ-ಇಬ್ಬರು-ವ್ಯಕ್ತಿಗಳು-ಪರಸ್ಪರ-ಮಾತನಾಡುತ್ತಿರುವ-ಚಿತ್ರ-ಬಣ್ಣ-ಬಣ್ಣದ-ಹಿನ್ನಲೆಯನ್ನು-ಒಂದು-ದೀಪ-ಮತ್ತು-ಗಿಡದ-ಗೆಲ್ಲನ್ನು-ಒಳಗೊಂಡಿದೆ.

ಈ ರೀತಿಯ ಜನರನ್ನು ನೀವು ಗಮನಿಸಿದ್ದೀರಾ?

  • ಕಲಿಕೆಯ ಬಗ್ಗೆ ತಲೆಕೆಡಿಸಿಕೊಳ್ಳದವರು,
  • ಸ್ವಂತ ಅನುಭವದಿಂದ ಕಲಿಯುವ ಇಚ್ಛೆಯುಳ್ಳವರು,
  • ಸ್ವ ಅನುಭವದೊಂದಿಗೆ ಇತರರ ಅನುಭವ ಹಾಗೂ ಪರಿಣತಿಗಳಿಂದಲೂ ನಿರಂತರ ಕಲಿಯುವವರು.

ನೀವು ಕಲಿಕೆ ಮತ್ತು ಹಂಚಿಕೆಗೆ ಸಂಬಂಧಿಸಿದ ಈ ಪುಟವನ್ನು ಓದುತ್ತಿದ್ದೀರಿ, ಎಂದರೆ ನೀವು ಮೇಲಿನ ಪಟ್ಟಿಯಲ್ಲಿರುವ ಮೊದಲ ಪ್ರಕಾರದ ಜನರ ಗುಂಪಿಗೆ ಸೇರಿಲ್ಲ ಎಂದು ಇದು ಸೂಚಿಸುತ್ತದೆ.

ಅದೇ ಬೆಳವಣಿಗೆಯ ದೊಡ್ಡ ಸಂಕೇತ.

ಏನಂತೀರಾ?

ತಾತ್ತ್ವಿಕವಾಗಿ, ಮೂರನೇ ವಿಧವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಸಂಭವನೀಯ ತಪ್ಪುಗಳನ್ನು ತಡೆಯಲು ಮತ್ತು ಅಮೂಲ್ಯ ಸಂಪನ್ಮೂಲಗಳಾದ ಸಮಯ, ಹಣ, ಶಕ್ತಿ ಇತ್ಯಾದಿಗಳ ಅನವಶ್ಯಕ ಬಳಕೆಯನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ.

SharingShree ಕನ್ನಡವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ನನ್ನ ಅನುಭವ ಮತ್ತು ಜ್ಞಾನವನ್ನು (ಮಿತಿಯ ಅರಿವಿನೊಂದಿಗೆ) ಹಂಚಿಕೊಳ್ಳುವ ಮತ್ತು ಇತರರ ಅನುಭವಗಳು ಹಾಗೂ ಪರಿಣತಿಯಿಂದ ಕಲಿಯುವ ದೃಷ್ಟಿಯಿಂದ ಇದನ್ನು ರಚಿಸಲಾಗಿದೆ.

ಆನ್‌ಲೈನ್ ಟೂಲ್ಸ್ ಬಳಕೆಗೆ ಟಿಪ್ಸ್

ಆನ್ಲೈನ್-ವಿಡಿಯೋ-ಮೂಲಕ-ವಿಷಯವನ್ನು-ವಿವರಿಸುತ್ತಿರುವ-ವ್ಯಕ್ತಿಯನ್ನು-ಸ್ಟಡಿ-ರೂಮ್ನಲ್ಲಿ-ಲ್ಯಾಪ್ಟಾಪ್-ಮೂಲಕ-ವೀಕ್ಷಿಸುತ್ತಿರುವ-ವ್ಯಕ್ತಿಯನ್ನೂ-ಒಳಗೊಂಡ-ಕಾರ್ಟೂನ್-ಚಿತ್ರ

ನಿಮ್ಮ ಆನ್ಲೈನ್ ಕುರಿತ ಕಿತಾಪತಿಗಳು ಯಾವುವು?

ಅಂದ್ರೆ, ಇಂಟರ್ನೆಟ್ ಸೌಲಭ್ಯವನ್ನು ನೀವು ಯಾವ ರೀತಿ ಬಳಸುತ್ತೀರಿ ಅಂತ…!

ಇತ್ತೀಚಿನ ವರ್ಷಗಳಲ್ಲಿಆನ್‌ಲೈನ್ ಟೂಲ್ಸ್ ಗಳು – ಬೆಳವಣಿಗೆ, ಕಲಿಕೆ ಮತ್ತು ಹಂಚಿಕೆಯ ವ್ಯಾಖ್ಯಾನ ಹಾಗೂ ವಿಧಾನಗಳನ್ನು ತಲೆಕೆಳಗಾಗಿಸಿವೆ.

ಆಧುನಿಕ ತಂತ್ರಜ್ಞಾನಗಳು ಸ್ನೇಹಿತರನ್ನು ಸಂಪರ್ಕಿಸಲು, ಸಂಬಂಧಗಳನ್ನು ಬೆಸೆಯಲು ಸಾಧ್ಯವಾಗುವುದರ ಜೊತೆಗೆ ಕುಳಿತಲ್ಲೇ ಪ್ರಪಂಚದ ವಿವಿಧ ಭಾಗಗಳಿಂದ ಮಾಹಿತಿಗಳನ್ನು ಪಡೆದು, ಹೊಸ ವಿಷಯಗಳನ್ನು ಮತ್ತು ಕೌಶಲ್ಯಗಳನ್ನು ಕಲಿಯಲು ಸುಲಭವಾದ ದಾರಿಗಳನ್ನು ಮಾಡಿಕೊಟ್ಟಿವೆ.

ಶಿಕ್ಷಣ, ಉದ್ಯೋಗ, ವ್ಯಾಪಾರ, ವೈದ್ಯಕೀಯ – ಹೀಗೆ ಎಲ್ಲಾ ಕ್ಷೇತ್ರಗಳ ಬಹುತೇಕ ಎಲ್ಲಾ ಕೆಲಸಗಳಿಗೂ ತಂತ್ರಜ್ಞಾನವು ಕೆಲವೇ ಕ್ಲಿಕ್ ಗಳಲ್ಲಿ ಹೇಗೆ ಸಹಾಯವಾಗಬಹುದು ಎಂಬುದರ ಅನ್ವೇಷಣೆಗಳು ಹಗಲು-ರಾತ್ರಿಯಂತೆ ನಿರಂತರವಾಗಿದೆ.

ಹಾಗಾಗಿ ಆನ್‌ಲೈನ್ ಟೂಲ್ಸ್ ಗಳ ಬಗ್ಗೆ ತಿಳಿದಿರುವುದು ಮತ್ತು ಅವುಗಳ ತ್ವರಿತ ಅಪ್‌ಗ್ರೇಡ್ ಗಳನ್ನು ಗುರುತಿಸಿ, ನಿತ್ಯ ಜೀವನದ ಮೇಲೆ ಅವುಗಳ ಪ್ರಭಾವಗಳನ್ನು ಗಮನಿಸುವುದು ಅನಿವಾರ್ಯವಾಗಿದೆ.

ಸರ್ಚ್ ಇಂಜಿನ್ ಗಳು

ಸರ್ಚ್-ಇಂಜಿನ್ ನ-ಮಾದರಿ-ಹಾಗೂ-ಸರ್ಚ್-ಚಿನ್ಹೆ-ಹಿಡಿದ-ಕಾರ್ಟೂನ್-ವ್ಯಕ್ತಿಯನ್ನು-ಹಿನ್ನಲೆಯಲ್ಲಿ-ಮತ್ತು-ಮುಂಬಾಗದಲ್ಲಿ-ಕನ್ನಡ-ವಾಕ್ಯಗಳನ್ನು-ಹೊಂದಿರುವ-SharingShree-ಕನ್ನಡದ-ಚಿತ್ರ

ನೀವು Google, YouTube ಮತ್ತು Bing ನಂತಹಾ ಯಾವುದಾದರೊಂದು ಅಥವಾ ಅನೇಕ ಉನ್ನತ ಸರ್ಚ್ ಇಂಜಿನ್‌ಗಳನ್ನು ಬಳಸುತ್ತಿರುವಿರಿ ಎಂದು ನಾನು ಭಾವಿಸುತ್ತೇನೆ.

ಅವುಗಳು ಪ್ರತಿದಿನ ಕೋಟ್ಯಾನು ಕೋಟಿ ಮಾಹಿತಿಗಳ ಅಥವಾ ವಿಷಯಗಳ ಹುಡುಕಾಟಗಳಿಗೆ ಫಲಿತಾಂಶಗಳನ್ನು ಒದಗಿಸುತ್ತವೆ. ಇವು ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಹಕಾರಿಯಾಗಿವೆ ಎಂದು ನಿಮಗೆ ತಿಳಿದೇ ಇದೆ.

ಅಲ್ಲವೇ?

ಸ್ವತಃ ನಾನು ಸರ್ಚ್ ಇಂಜಿನ್‌ಗಳನ್ನು- ಮಾಹಿತಿಗಳಿಗಾಗಿ, ವಿಷಯಗಳ ಕಲಿಕೆ ಮತ್ತು ಹಂಚಿಕೆಗಾಗಿ, ಹಾಗೂ ವೃತ್ತಿಪರವಾಗಿ ಬಳಸುತ್ತಿರುವುದರಿಂದ ಒಂದೆರಡು ವಿಷಯಗಳನ್ನು ಪರಿಗಣಿಸುವುದು ಮುಖ್ಯ ಎಂದು ನನಗನಿಸುತ್ತಿದೆ.

AI ಪರಿಕರಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಬಳಕೆ:

AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ಹೊಸದೇನಲ್ಲ. ಸರಳವಾಗಿ ಹೇಳುವುದಾದರೆ, ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳು- ನಿಮ್ಮ ಆಸಕ್ತಿ, ಆನ್‌ಲೈನ್ ನಡವಳಿಕೆ, ಮುಂತಾದ ಅಂಶಗಳ ಆಧಾರದ ಮೇಲೆ ನಿಮಗೆ ವಿಷಯವನ್ನು ಶಿಫಾರಸು ಮಾಡುತ್ತಿವೆ. ಆ ಎಲ್ಲಾ ಪ್ರಕ್ರಿಯೆಗಳಲ್ಲಿ AI ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಆದರೆ ಇಂದು ಕಂಟೆಂಟ್ ಕ್ರಿಯೇಟರ್ ಗಳು ಹಾಗೂ ಬ್ಯುಸಿನೆಸ್ ಗಳು ವಿಷಯವನ್ನು ರಚಿಸಲು ಅಥವಾ ಮಾಹಿತಿಯನ್ನು ಹಂಚಿಕೊಳ್ಳವ ವಿಧಾನಗಳಲ್ಲಿ AI ಅನ್ನು ಬಳಸುತ್ತಿರುವಾಗ, ನೀವು ಕನಿಷ್ಟ ಕೆಲವು ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮ.

ಉದಾಹರಣೆಗೆ – ಆನ್ಲೈನ್ ನಲ್ಲಿ ಕ್ರೀಡೇಗಳ ಮಾಹಿತಿಗಳನ್ನು ಅಥವಾ ಸ್ಕೋರ್ ಗಳನ್ನು ಒದಗಿಸಲು ಹಾಗೂ ಹವಾಮಾನ ವರದಿಗಳ ನಿರಂತರ ಅಪ್ಡೇಟ್ ಗಳಿಗಾಗಿ AI ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅಂತಹಾ ಮಾಹಿತಿಗಳನ್ನು ಪಡೆಯುವುದರಲ್ಲಿ ಅಪಾಯ ಬಹುತೇಕ ಕಡಿಮೆ. ಒಂದುವೇಳೆ ನೀವು ಅರೋಗ್ಯ ಸಂಬಂಧಿತ ಅಥವಾ ಹಣಕಾಸಿನ ಕುರಿತ ಮಾಹಿತಿ ಹಾಗೂ ವಿಷಯಗಳನ್ನು ಪಡೆದು, ಅವುಗಳ ಆಧಾರದಲ್ಲಿ ಮಹತ್ವದ ಹೆಜ್ಜೆ ಇಡುವವರಾದರೆ, ಹೆಚ್ಚಿನ ಗಮನ ಹಾಗೂ ಜಾಗರೂಕತೆ ಅಗತ್ಯ.

ಟಿಪ್ಸ್:

ಸರ್ಚ್ ಇಂಜಿನ್ ಗಳಿಂದ ಯಾವುದೇ ರೀತಿಯ ಸಂಭವನೀಯ ನಷ್ಟಗಳನ್ನು ಹೊಂದಬಹುದಾದ ಮಾಹಿತಿಗಳನ್ನು ಪಡೆಯುವ ಸಂದರ್ಭಗಳಲ್ಲಿ, ನೀವು GoogleE.E.A.T. ಎಂಬ ಗುಣಮಟ್ಟ ಮತ್ತು ಸತ್ಯಾಸತ್ಯತೆಯನ್ನು ಅಳೆಯುವ ಸೂತ್ರವನ್ನು ಬಳಸಬಹುದು.

ಇ.ಇ.ಎ.ಟಿ. (E.E.A.T = experience, expertise, authority, and Trustworthiness) ಎಂಬ ಸೂತ್ರವು ಮಾಹಿತಿ ಒದಗಿಸುವವರ ಅನುಭವ, ಪರಿಣತಿ, ಅಧಿಕೃತತೆ ಮತ್ತು ವಿಶ್ವಾಸಾರ್ಹತೆಯನ್ನು ಸೂಚಿಸುತ್ತದೆ.

ಮಾಹಿತಿಯ ಮೂಲ ಮತ್ತು ಪ್ರಾಮಾಣಿಕತೆಯನ್ನು ಪರಿಶೀಲಿಸಲು ಈ ಸೂತ್ರವನ್ನು ಸರಳ ಮತ್ತು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ಉದಾಹರಣೆಗೆ– ಸಂಶೋಧನೆ, ಆಳವಾದ ಕಲಿಕೆ, ಇತರರೊಂದಿಗೆ ಹಂಚಿಕೊಳ್ಳಲು, ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ವೆಬ್‌ಸೈಟ್‌ನಿಂದ (ನಾವು ಮೇಲೆ ಚರ್ಚಿಸಿದಂತೆ) ಉನ್ನತ-ಉದ್ದೇಶದ ಅಥವಾ ಸೂಕ್ಷ್ಮ ಮಾಹಿತಿಯನ್ನು ನೀವು ಪಡೆಯುವಾಗಲೆಲ್ಲಾ, ಅವರ ಕುರಿತ ಮಾಹಿತಿಯ ಪುಟದ (About Page) ಮೂಲಕ ಪರಿಶೀಲಿಸುವುದು ಸೂಕ್ತ. ಹಕ್ಕು ನಿರಾಕರಣೆ (Disclaimer) ಅಥವಾ ಬಳಕೆಯ ನಿಯಮಗಳು (Terms of Use), ಗೌಪ್ಯತೆ ನೀತಿಗಳು (Privacy Policy), ಸಂಪರ್ಕಿಸಲು ಸೂಕ್ತ ಮಾಹಿತಿ (Contact Information) ಮತ್ತು ಅವುಗಳ ಬಳಕೆ ಸುರಕ್ಷಿತವಾಗಿದೆಯೇ ಎಂದು ಮರು ಪರಿಶೀಲಿಸುವುದು ಮುಖ್ಯ.

ಮೊದಲೆಲ್ಲಾ ಇದೊಂದು ಹೇಳಿಕೊಳ್ಳುವ ದೊಡ್ಡ ವಿಷಯವಾಗಿರಲಿಲ್ಲ. ಆದರೆ ಇಂದು ಹೇಳಲೇಬೇಕಾಗಿದೆ.

ಒಳ್ಳೆಯ ಸುದ್ದಿ ಏನಂದ್ರೆ, ಸರ್ಚ್ ಇಂಜಿನ್‌ಗಳು ಸಂಬಂಧಿತ ಹಾಗೂ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ಜೊತೆಗೆ ಸ್ಪ್ಯಾಮ್ (ಮೋಸದ ಹಗರಣ) ಅನ್ನು ತಪ್ಪಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

ಸಾಮಾಜಿಕ ಮಾಧ್ಯಮ, ಇರಲಿ ಮಧ್ಯಮ

ಸೋಶಿಯಲ್-ಮಾಧ್ಯಮಗಳ-ಬಳಕೆಗೆ-ಪ್ರಮುಖ-ಕಾರಣಗಳೊಂದಿಗೆ-ಸೋಶಿಯಲ್-ಮಾಧ್ಯಮಗಳ-ಚಿಹ್ನೆಗಳನ್ನು-ಒಳಗೊಂಡ-ಚಿತ್ರ

ಅಯ್ಯಯ್ಯೋ ಸೋಷಿಯಲ್ ಮೀಡಿಯಾಗಳ ಬಳಕೆ ತುಂಬಾ ಕೆಟ್ಟದ್ದು, ದಯವಿಟ್ಟು ಬಳಸಬೇಡಿ – ಅಂತ ಹೇಳಹೊರಟಿರುವೆ ಅಂದ್ಕೊಂಡ್ರಾ?

ಖಂಡಿತಾ ಇಲ್ಲ ಕಣ್ರೀ.

ಅಂಕಿಅಂಶಗಳು ಹೇಳುತ್ತವೆ;

ಪ್ರಪಂಚದಾದ್ಯಂತ 4.8 ಬಿಲಿಯನ್ ಸಾಮಾಜಿಕ ಮಾಧ್ಯಮ ಬಳಕೆದಾರರಿದ್ದಾರೆ, ಇದು ಜಾಗತಿಕ ಜನಸಂಖ್ಯೆಯ 59.9% ಮತ್ತು ಎಲ್ಲಾ ಇಂಟರ್ನೆಟ್ ಬಳಕೆದಾರರಲ್ಲಿ 92.7% ರಷ್ಟನ್ನು ಪ್ರತಿನಿಧಿಸುತ್ತದೆ.

ಮುಂದಿನ 5 ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ 6 ಬಿಲಿಯನ್ (6೦೦ ಕೋಟೆ) ಬಳಕೆದಾರರಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ.

ಕುತೂಹಲಕಾರಿಯಾಗಿ, ಭಾರತವು 326.6M+ (32.66 ಕೋಟೆ) ನೊಂದಿಗೆ 1 ನೇ ಸ್ಥಾನದಲ್ಲಿದೆ ಮತ್ತು 168.6M+ (16.86 ಕೋಟೆ) ಸಕ್ರಿಯ ಬಳಕೆದಾರರೊಂದಿಗೆ ಅಮೆರಿಕಾ 2 ನೇ ಸ್ಥಾನದಲ್ಲಿದೆ.

ಅಂಕಿ-ಅಂಶಗಳ ಮೂಲ 1, ಮೂಲ 2.

ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆಯಲ್ಲಿನ ಈ ಬೃಹತ್ ಬೆಳವಣಿಗೆಯು ನಾವು ಮಾತನಾಡುತ್ತಿರುವ ಜೀವನದ ಬೆಳವಣಿಗೆ, ಕಲಿಕೆ ಮತ್ತು ಹಂಚಿಕೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದೆ.

ನನ್ನ ವೈಯಕ್ತಿಕ, ವೃತ್ತಿಪರ ಬಳಕೆ, ಸ್ನೇಹಿತರು, ಸಂಬಂಧಿಗಳಿಂದ ಸಂಗ್ರಹಿಸಿದ ಮಾಹಿತಿಗಳು ಹಾಗೂ ಕ್ಲೈಂಟ್ ಗಳ ಅನುಭವಗಳ ಆಧಾರದ ಮೇಲೆ ಕೆಲವು ಮುಖ್ಯ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೇನೆ.

  • ಸಾಮಾಜಿಕ ಮಾಧ್ಯಮಗಳ ಬಳಕೆ ಸಂಪೂರ್ಣ ಸರಿ ಅಥವಾ ಸಂಪೂರ್ಣ ತಪ್ಪು ಎಂಬ ಅತಿರೇಕದ ಆಲೋಚನಾ ರೀತಿ ಬೆಳವಣಿಗೆ ಅಥವಾ ಅಭಿವೃದ್ಧಿಗೆ ಮಾರಕ.
  • ಬಳಕೆಯಲ್ಲಿ ಸಮತೋಲನ ಇರಬೇಕೆಂದು ಎಲ್ಲರೂ ಹೇಳುವವರೇ. ಆದರೆ ಇದು ಸಿನಿಮಾ ಪ್ರಾರಂಭದ ಮೊದಲು ಬರುವ ಧೂಮಪಾನ ಹಾಗೂ ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಪ್ರಕಟಣೆಯಂತೆ. (ಮುಂದೆ ನೀವೇ ಯೋಚಿಸಿ.)
  • ಕೇವಲ ಸಾಮಾಜಿಕ ಜಾಲತಾಣಗಳು ಶಿಫಾರಸು (suggested content) ಮಾಡುವ ವಿಷಯಗಳನ್ನು ಸ್ವೀಕರಿಸುತ್ತಾ ಹೋದರೆ ಸ್ವಂತ ಆಲೋಚನಾ ಶಕ್ತಿ ಅಂತರ್ಜಲದ ಮಟ್ಟದಂತೆ ತಗ್ಗುತ್ತಲೇ ಹೋಗುತ್ತದೆ.
  • ಕೇವಲ ತೋರಿಕೆ ಮತ್ತು ನಿಜವಾದ ಯಶಸ್ಸಿಸ್ಸು, ಅಗತ್ಯ ಮತ್ತು ಅನಗತ್ಯ ಹೋಲಿಕೆಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವುದು.
  • ವಿಷಯಗಳನ್ನು ಸಂಗ್ರಹಿಸುವುದು ಹಾಗೂ ಅವುಗಳ ಅನುಷ್ಠಾನದ ನಡುವಿನ ಸಮತೋಲನವನ್ನು ನಿರಂತರವಾಗಿ ಗಮನಿಸುವುದು ಬೆಳವಣಿಗೆಗೆ ತಡೆಗೋಡೆಯಾಗಿರುವ ಒಣ ಸೈದ್ಧಾಂತಿಕ ಜಾಲದಿಂದ ದೂರವಿರಲು ಸಹಾಯ ಮಾಡುತ್ತದೆ.
  • ಅನ್ಯಾಯದ ಮಾರ್ಕೆಟಿಂಗ್ ಅಭ್ಯಾಸಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದ ಮೂಲಕ ಮಾರಾಟವಾಗುವ ತಪ್ಪು ಅಥವಾ ಅನಗತ್ಯ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸದಿರಲು ಪ್ರಯತ್ನಿಸುವುದು.

ಜೀವನದ ಬೆಳವಣಿಗೆಯ ಪ್ರಯಾಣದಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸಲು ಈ ರೀತಿಯ ಆಲೋಚನಾ ಪ್ರಕ್ರಿಯೆಯು ಹೆಚ್ಚು ಉಪಯುಕ್ತವಾಗಿದೆ.

ಏನಂತೀರಿ?

ಆಧುನಿಕ ಮಾರ್ಕೆಟಿಂಗ್, ಅರಿತವನೇ ಕಿಂಗ್!

ಮಾರ್ಕೆಟಿಂಗ್-ಕುರಿತ-ವಿಡಿಯೋಗಳು-ಗುರಿಯ-ತೀರ್ಮಾನ-ಹಾಗೂ-ಜಾಹೀರಾತಿನ-ಚಿಹ್ನೆಗಳ-ಜೊತೆಗೆ-ಎಲ್ಲೆಲ್ಲೂ-ಮಾರ್ಕೆಟಿಂಗ್-ಎಂಬ-ವಾಕ್ಯವನ್ನು-ಒಳಗೊಂಡ-ಚಿತ್ರ-ಕಲಿಕೆ-ಮತ್ತು-ಹಂಚಿಕೆಯ-ಅಗತ್ಯವನ್ನು-ತಿಳಿಸುತ್ತಿದೆ

ಮಾರ್ಕೆಟಿಂಗ್ ವಿಷಯ ಇಲ್ಲೇಕೆ ಮೂಗು ತೂರಿಸ್ತಿದೆ ಅನ್ಕೋತಿದೀರಾ?

ಬಹುಷಃ “ಮಾರ್ಕೆಟಿಂಗ್” ಪದವು ಸೂಟು-ಬೂಟು ಧರಿಸಿದ ತಲೆ ತಿನ್ನೋ ನೇರ ಮಾರಾಟಗಾರನ ಚಿತ್ರವನ್ನೋ, ಚತುರ ಜಾಹೀರಾತುಗಳನ್ನೋ, ಅಥವಾ ಕಾಲ್ ಸೆಂಟರ್ ನಿಂದ ಬರುವ ಕರೆಗಳನ್ನೋ ನಿಮಗೆ ನೆನಪಿಸುತ್ತಿರಬಹುದು.

ಹೌದೇ?

ತಪ್ಪೆನ್ನಿಲ್ಲ ಬಿಡಿ. ಏಕೆಂದರೆ ಅದು ಇಂದಿನ ವಾಸ್ತವ ಸಂಗತಿ.

ಹಾಗಂತ “ಮಾರ್ಕೆಟಿಂಗ್” ಎಂಬುದು ಕೇವಲ ಅಂತಹಾ ವ್ಯಾಪಾರ-ಆಧಾರಿತ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ.

ಯಾಕೆಂದು ಚಿಕ್ಕದಾಗಿ, ಚೊಕ್ಕದಾಗಿ ನೋಡೋಣ ಬನ್ನಿ.

ವ್ಯಾಪಾರದ ದೃಷ್ಟಿಕೋನದಿಂದ, ಮಾರ್ಕೆಟಿಂಗ್ ಎಂಬ ಪ್ರಕ್ರಿಯೆಯು – ಗ್ರಾಹಕರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಗುರುತಿಸುವುದು, ಸೂಕ್ತ ಉತ್ಪನ್ನ ಹಾಗೂ ಸೇವೆಗಳ ಮೂಲಕ ಪರಿಹಾರಗಳನ್ನು ಅನ್ವೇಷಿಸುವುದು, ಜಾಹೀರಾತುಗಳು ಅಥವಾ ಇತರ ಸಂಬಂಧಿತ ಮಾರ್ಕೆಟಿಂಗ್ ವಿಧಾನಗಳ ಮೂಲಕ ಅವರಿಗೆ ತಿಳಿಸುವುದು, ಪಡೆದ ಮೌಲ್ಯಗಳನ್ನು ಗ್ರಾಹಕರು ಮರೆಯದಂತೆ ಅಥವಾ ಮರೆತರೆ ನೆನಪಿಸಲು ಬ್ರಾಂಡ್ ಅನ್ನು ಬೆಳೆಸುವುದು, ಗ್ರಾಹಕರ ಜೊತೆಗೆ ಆರೋಗ್ಯಕರ ಸಂಬಂಧವನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವುದು – ಹೀಗೆ ಅನೇಕ ಅಂಶಗಳನ್ನು ಒಳಗೊಂಡಿದೆ.

ಈ ಪ್ರಕ್ರಿಯೆಯ ಮೂಲ ಸಾರವನ್ನು ನೀವು ಗ್ರಹಿಸಬಹುದಾದರೆ, “ಮಾರ್ಕೆಟಿಂಗ್ ಎಲ್ಲೆಡೆ ಇದೆ” ಎಂಬ ಪ್ರಸಿದ್ಧ ಮಾತಿನ ಅರ್ಥವನ್ನು ನೀವು ಸುಲಭವಾಗಿ ಗಮನಿಸಬಹುದು. ನಂತರ ಜೀವನದ ಬಹುತೇಕ ಎಲ್ಲಾ ಆಯಾಮಗಳಲ್ಲೂ ಮಾರ್ಕೆಟಿಂಗ್ ನ ಇರುವಿಕೆಯನ್ನು ಗುರುತಿಸಬಹುದಾಗಿದೆ.

ಹಲ್ಟ್ ಇಂಟರ್ನ್ಯಾಷನಲ್ ಬಿಸಿನೆಸ್ ಸ್ಕೂಲ್ಲೇಖನವೊಂದರಲ್ಲಿ ಪಟ್ಟಿ ಮಾಡಿರುವಂತೆ, ನಾವು ಏನನ್ನು ಧರಿಸುತ್ತೇವೆ, ಏನನ್ನು ತಿನ್ನುತ್ತೇವೆ, ಶಾಲೆಯ ಆಯ್ಕೆ ಸೇರಿದಂತೆ ನಮ್ಮ ನಡೆ ನುಡಿಗಳಲ್ಲಾಗುವ ಬದಲಾವಣೆಗಳಲ್ಲೂ ಮಾರ್ಕೆಟಿಂಗ್ ನ ಪಾತ್ರ ದೊಡ್ಡದೇ.

ನನ್ನ ನೆಚ್ಚಿನ ವ್ಯಾಪಾರೋದ್ಯಮಿಗಳಲ್ಲಿ ಒಬ್ಬರಾದ, ಅರ್ಥಶಾಸ್ತ್ರಜ್ಞರು ಮತ್ತು “ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್” ಪುಸ್ತಕದ ಲೇಖಕರೂ ಆಗಿರುವ – ಫಿಲಿಪ್ ಕೋಟ್ಲರ್ ಹೀಗೆ ಹೇಳಿದ್ದಾರೆ;

“ಹಣಕಾಸಿನ ಯಶಸ್ಸು ಹೆಚ್ಚಾಗಿ ಮಾರ್ಕೆಟಿಂಗ್ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ”.

ಆ ಒಂದೇ ವಾಕ್ಯವು ಜೀವನ ಬೆಳವಣಿಗೆಯಲ್ಲಿ ಮಾರ್ಕೆಟಿಂಗ್ ಜ್ಞಾನ, ತಿಳುವಳಿಕೆಯ ಪ್ರಾಮುಖ್ಯತೆ ಮತ್ತು ಅನ್ವಯಿಸುವಿಕೆಯನ್ನು ನೇರವಾಗಿ ಹೇಳುತ್ತಿದೆ.

ಜೀವನದಲ್ಲಿ ಮಾರ್ಕೆಟಿಂಗ್ ನ ಮೂಲಭೂತ ಅಂಶಗಳ ಇರುವಿಕೆ ಮತ್ತು ಪ್ರಭಾವಗಳನ್ನು ನೀವು ಇನ್ನೂ ಗುರುತಿಸಲು ಬಯಸುವಿರಾ?

ಸರಿ. ಆಫ್‌ಲೈನ್ ಮತ್ತು ಆನ್‌ಲೈನ್ ಮಾರ್ಕೆಟಿಂಗ್ ಎರಡರ ನನ್ನ ಅನುಭವಗಳನ್ನೂ ಒಗ್ಗೂಡಿಸಿ , ನಿಮಗೆ ಸಹಾಯವಾಗಬಹುದಾದ ರೀತಿಯಲ್ಲಿ ಏನೋ ಹೇಳಲು ಪ್ರಯತ್ನಿಸುವೆ.

ಪ್ರಯೋಜನ ಆಯಿತೇ, ಇಲ್ಲವೇ ಎಂಬುದನ್ನು ಕಾಮೆಂಟ್ ಮಾಡಿ.

ಓಕೆ ನಾ?

ವ್ಯಾಪಾರಕ್ಕೆ-ಗ್ರಾಹಕರಿಕೆ-ಮತ್ತು-ನೌಕರರಿಗೆ--ಮಾರ್ಕೆಟಿಂಗ್-ಜ್ಞಾನ-ಹಾಗೂ-ತಿಳುವಳಿಕೆಯ-ಉಪಯೋಗವನ್ನು-ಸೂಚಿಸುವ-ತ್ರಿಕೋನ-ಆಕೃತಿಯನ್ನು-ಒಳಗೊಂಡ-SharingShree-ಕನ್ನಡದ-ಚಿತ್ರ
  • ಮಾರ್ಕೆಟಿಂಗ್ ಪರಿಕಲ್ಪನೆಗಳ ಮೂಲಭೂತ ತಿಳುವಳಿಕೆಯು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಉದ್ಯಮ ಅಥವಾ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲ್ಯಗಳು, ಬೇಡಿಕೆ ಮತ್ತು ಪೂರೈಕೆಯನ್ನು ಪರಿಗಣಿಸುವ ಮೂಲಕ ಉತ್ತಮ ವೃತ್ತಿಯನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.
  • ಮಾರಾಟ ಕೌಶಲ್ಯವು ಮಾರ್ಕೆಟಿಂಗ್‌ನ ಪ್ರಮುಖ ಭಾಗವಾಗಿದೆ. ಇದು ಉತ್ತಮ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ಹೆಚ್ಚು ಅರ್ಹರನ್ನಾಗಿಸುತ್ತದೆ.
  • ಅಗತ್ಯ ಕೌಶಲ್ಯಗಳಾದ ಉತ್ತಮ ಮಾನವ ಸಂಪರ್ಕಗಳನ್ನು ಬೆಳೆಸುವುದು, ಸಂವಹನ, ‘ಉಗುರು ಬಳಸಬೇಕಾದಲ್ಲಿ ಕೊಡಲಿ ತರುವ ಪ್ರಮೇಯಗಳನ್ನು‘ ತಪ್ಪಿಸಲು ಮಾರ್ಕೆಟಿಂಗ್ ತಿಳುವಳಿಕೆ ಸಹಾಯಕ.
  • ನೀವು ನಿಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಬಹುದೇ ಹಾಗೂ ನಡೆಸಬಹುದೇ ಎಂಬುದನ್ನು ಅಳೆಯಲು ಇರುವ ಮುಖ್ಯ ಮಾನದಂಡಗಳಲ್ಲಿ ಮಾರ್ಕೆಟಿಂಗ್ ನ ಜ್ಞಾನ ಹಾಗೂ ತಿಳುವಳಿಕೆ ಪ್ರಮುಖವಾದದ್ದು
  • .ಈ ಬಹು-ಫಲಾನುಭವಿ ಜ್ಞಾನವು ಅಗತ್ಯಗಳನ್ನು ಮತ್ತು ಆಸೆಗಳನ್ನು ಪ್ರತ್ಯೇಕಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ಜೀವನದ ಪ್ರತೀ ಹಂತದಲ್ಲಿ ಬದಲಾಗುವ “ಅಗತ್ಯ” ಮತ್ತು “ಆಸೆಗಳ” ವ್ಯಾಖ್ಯಾನವನ್ನು ಅರಿತು ನಿರ್ಧಾರಗಳನ್ನು ಕೈಗೊಳ್ಳಲ್ಲು ಬಹು ಉಪಕಾರಿ.
  • ಜಾಹೀರಾತುಗಳನ್ನು ಹಾಗೂ ಮಾರ್ಕೆಟಿಂಗ್ ಸಂದೇಶಗಳನ್ನು ವಿಶ್ಲೇಷಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ನಾವು ಆಧುನಿಕ ಆನ್‌ಲೈನ್ ಮಾರ್ಕೆಟಿಂಗ್ ಕಾಲದಲ್ಲಿ ವಾಸಿಸುತ್ತಿರುವ ಕಾರಣ ಇದು ಪ್ರಮುಖ ಅಂಶವಾಗಿದೆ.
  • ಮಾರ್ಕೆಟಿಂಗ್ ನ ಸರಳ ತಿಳುವಳಿಕೆಯಿಂದ ಬೆಲೆ ಹಾಗೂ ಮೌಲ್ಯಕ್ಕಿರುವ ವ್ಯತ್ಯಾಸ ತಿಳಿಯಬಹುದು. ಇದರಿಂದ ಸಮಯ ಹಾಗೂ ಹಣದಂತಹಾ ಮುಖ್ಯ ಸಂಪನ್ಮೂಲಗಳನ್ನು ಜಾಗರೂಕತೆಯಿಂದ ಬಳಸಿ – ಬೆಳೆಸಬಹುದು.
  • ಮಾರ್ಕೆಟಿಂಗ್ ಮನಸ್ಥಿತಿಯನ್ನು ಹೊಂದಿರುವುದು ಬದಲಾವಣೆಗಳಿಗೆ ಹೊಂದಿಕೊಳ್ಳಲು ಅಥವಾ ಅಗತ್ಯವಿದ್ದರೆ ಪ್ರಸ್ತುತ ಜೀವನ ಸನ್ನಿವೇಶಗಳಿಗೆ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ.

ಇನ್ನೂ ಪಟ್ಟಿ ಮಾಡ್ತಾ ಹೋದ್ರೆ, ಮುಗಿಯಲ್ವೇನೋ ಅನಿಸೋ ರೈಲಿನ ಭೋಗಿಯಂತೆ ಉದ್ದುದ್ದ ಹೋಗುತ್ತಷ್ಟೆ.

ಹಾಗಾಗಿ ಸಧ್ಯಕ್ಕೆ ನಿಲ್ಲಿಸೋಣ.

ಒಂದುವೇಳೆ ನೀವು ವ್ಯಾಪಾರ-ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಳ್ಳದವರಾದರೆ, ಆರಂಭದಲ್ಲೇ ಮಾರ್ಕೆಟಿಂಗ್ ವಿಷಯದ ಆಳಕ್ಕೆ ಧುಮುಕುವುದು ಸೂಕ್ತವಲ್ಲ. ಏಕೆಂದರೆ ಅದು ಸಾಕಷ್ಟು ಗೊಂದಲಗಳನ್ನು ಉಂಟುಮಾಡುವುದರ ಜೊತೆಗೆ ನಿಮ್ಮ ಪ್ರಸ್ತುತ ನಿರ್ಧಾರಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಹಾಗಾಗಿ ಮೇಲಿನ ಪಟ್ಟಿಯಲ್ಲಿ ನಿಮಗೆ ಸಂಬಂಧಿತ ಅಂಶಗಳು ಎಷ್ಟಿವೆ ಎಂಬುದನ್ನು ಪರೀಕ್ಷಿಸಿ. ನಂತರ ದೈನಂದಿನ ಜೀವನದಲ್ಲಿ ಅವುಗಳ ಇರುವಿಕೆಯನ್ನು ಮತ್ತು ಪ್ರಭಾವಗಳನ್ನು ವೀಕ್ಷಿಸಲು ಪ್ರಾರಂಭಿಸಿ. ಮಾರ್ಕೆಟಿಂಗ್ ವಿಷಯಗಳಲ್ಲಿ ನಿಮ್ಮ ಆಸಕ್ತಿಯ ಮಟ್ಟವನ್ನು ಅಳೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ಮುಂದಿನ ಹಂತವಾಗಿ, ನಿಮ್ಮ ಆಸಕ್ತಿಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಮಾರ್ಕೆಟಿಂಗ್ ನ ಕುರಿತ ಪುಸ್ತಕಗಳು, ಬ್ಲಾಗ್‌ಗಳು ಅಥವಾ ವೀಡಿಯೊಗಳ ಮೂಲಕ ನಿಮ್ಮ ಕಲಿಕೆಯನ್ನು ಮುಂದುವರಿಸಬಹುದು.

ಆದರೆ ದೊರೆಯುವ ಮಾಹಿತಿಗಳಲ್ಲಿ 99.99% ಕೇವಲ ಬಿಸಿನೆಸ್ ದೃಷ್ಟಿಕೋನದ್ದೇ ಆಗಿರುತ್ತದೆ. ಅದಕ್ಕಾಗಿಯೇ ನಾನು ಬೆಳವಣಿಗೆಯ ಪ್ರಯಾಣದಲ್ಲಿ ವ್ಯಾಪಾರೇತರ ವ್ಯಕ್ತಿಗಳಿಗೆ ಉಪಯುಕ್ತ ರೀತಿಯಲ್ಲಿ ಮಾರ್ಕೆಟಿಂಗ್ ಕುರಿತ ವಿಷಯಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ.

ಈಗ ಕೆಲವು FAQ (Frequently Asked Questions) ಗಳನ್ನು ನೋಡೋಣ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ತೀರ್ಮಾನ

ಶಾಲಾ-ಕಾಲೇಜುಗಳ ಶೈಕ್ಷಣಿಕ ಶಿಕ್ಷಣದ ನಂತರವೂ ನಿತ್ಯ ಜೀವನದಲ್ಲಿ ಕಲಿಕೆ ಮತ್ತು ಹಂಚಿಕೆಯ ಮಹತ್ವವನ್ನು ನಾವು ನೋಡಿದೆವು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಜೀವನದಲ್ಲಿ ಬೆಳವಣಿಗೆ ಏನೆಂದು ವ್ಯಾಖ್ಯಾನಿಸುವುದು ಮೊದಲ ಮತ್ತು ಪ್ರಮುಖ ಹಂತವಾಗಿದೆ.

ನಂತರ, ಪರಸ್ಪರ ಅರ್ಥಪೂರ್ಣ ಹಾಗೂ ಲಾಭದಾಯಕ ಮಾನವ ಸಂಪರ್ಕಗಳನ್ನು ಬೆಳೆಸುವುದು, ಸಂವಹನ ಕೌಶಲ್ಯಗಳು, ಆನ್‌ಲೈನ್ ಪರಿಕರಗಳ ಅಥವಾ ಪ್ಲಾಟ್‌ಫಾರ್ಮ್‌ಗಳ ಸಮತೋಲನದ ಬಳಕೆ ಮತ್ತು (ಆಧುನಿಕ) ಮಾರ್ಕೆಟಿಂಗ್‌ನ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಇದು ನಿತ್ಯ ಜೀವನಕ್ಕೆ ಸಂಬಂಧಿತ ವಿಷಯಗಳನ್ನು ಕಲಿಯಲು ಹೊಸ ಮತ್ತು ಅನನ್ಯ ಮಾರ್ಗಗಳನ್ನು ಕಂಡುಹಿಡಿಯುವುದರ ಜೊತೆಗೆ, ಪ್ರಸ್ತುತ ಮತ್ತು ಭವಿಷ್ಯದ ಬೆಳವಣಿಗೆಗೆ ಹೆಚ್ಚು ಉಪಯುಕ್ತವಾಗಿದೆ.

ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳೇನು?

ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿ. ಅದರಿಂದ ಇತರರ ಕಲಿಕೆ ಮತ್ತು ಹಂಚಿಕೆಯ ಕಾರ್ಯಕ್ಕೂ ಸಹಾಯವಾಗುತ್ತದೆ.

ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯದಿರಿ.

SharingShree-ಕನ್ನಡದ-ಸಂಸ್ಥಾಪಕರಾದ-ಶ್ರೀನಿಧಿ-ಕೆ-ಯವರ-ಫೋಟೋ.

ಲೇಖಕರು ಹಾಗೂ ಪ್ರಕಾಶಕರು

ಶ್ರೀನಿಧಿ. ಕೆ (Shreenidhi K)

ನಮಸ್ತೆ. ನಾನು ಶ್ರೀನಿಧಿ. ವೃತ್ತಿಯ ಭಾಗವಾದ ಆನ್ಲೈನ್ ಮಾರ್ಕೆಟಿಂಗ್ ಒಳಗೊಂಡಂತೆ, ಕಲಿಕೆ, ಅನುಭವಗಳು, ಹಾಗೂ ಉಪಯುಕ್ತ ವಿಷಯಗಳನ್ನು ಪರಸ್ಪರ ಹಂಚುವುದಕ್ಕಾಗಿ SharingShree ಕನ್ನಡವನ್ನು ರಚಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ.

Scroll to Top